Good Morning, Happy Monday
2nd October 2023
@ TapOvanam, Hiremath, Tumkur


ಸೆಪ್ಟೆಂಬರ್ ಮಾಹೆಯಲ್ಲಿ
ಗೌರೀ ಗಣೇಶಜಿ.

ಅಕ್ಟೋಬರ್ ಮಾಹೆಯಲ್ಲಿ
ಗಾಂಧೀಜಿ, ಶಾಸ್ತ್ರೀಜಿ.

ಈ ವರುಷದ
ಸೆಪ್ಟೆಂಬರ್ ತಿಂಗಳಿನಲ್ಲಿ ಗೌರೀ ಗಣೇಶ ಹಬ್ಬ

ಅಕ್ಟೋಬರ್ ತಿಂಗಳಿನಲ್ಲಿ
ಗಾಂಧೀಜಿ, ಶಾಸ್ತ್ರೀಜಿ ಜಯಂತಿ, ಹುಟ್ಟುಹಬ್ಬ.

ಗೌರೀ, ಗಣೇಶ ಹಬ್ಬ ಧಾರ್ಮಿಕ,
ಸಾಮಾಜಿಕ, ಸಾಂಸ್ಕೃತಿಕ.

ಗಾಂಧೀಜಿ, ಶಾಸ್ತ್ರೀಜಿ ಜಯಂತಿ
ಸಾರ್ವಜನಿಕ ಹಾಗೂ ದೇಶಭಕ್ತಿ ಪ್ರೇರಕ.

ಗಣೇಶ ವಿನಾಯಕ, ಗಣನಾಯಕ,

ಗಾಂಧೀಜಿ, ಶಾಸ್ತ್ರೀಜಿ ನಾಯಕರು,
ರಾಷ್ಟ್ರನಾಯಕರು.

ಗಣೇಶ ವಿಘ್ನನಾಶಕ, ವಿಘ್ನವಿನಾಶಕ
ಮತ್ತು ಮುಕ್ತಿದಾಯಕ.

ಗಾಂಧೀಜಿ, ಶಾಸ್ತ್ರೀಜಿ ದಾಸ್ಯನಾಶಕರು
ಮತ್ತು ಸ್ವಾತಂತ್ರ್ಯದಾಯಕರು.

ಗೌರೀ, ಗಣೇಶರ ಆಗಮನದಿಂದ
ಲೋಕೋದ್ಧಾರ.

ಗಾಂಧೀಜಿ, ಶಾಸ್ತ್ರೀಜಿಯವರ ಆಗಮನದಿಂದ
ದೇಶೋದ್ಧಾರ.

ಗೌರೀ ಗಣೇಶರು ಕೈಲಾಸದಿಂದ
ಭೂಮಿಗೆ ಬಂದವರು.
ಗಾಂಧೀಜಿ, ಶಾಸ್ತ್ರೀಜಿಗಳು ತ್ಯಾಗ, ಬಲಿದಾನಗಳಿಂದ
ಭೂಮಿಯಿಂದ ಕೈಲಾಸದೆತ್ತರಕ್ಕೆ ಬೆಳೆದವರು.

ಗೌರೀ ಗಣೇಶ ಭಕ್ತವತ್ಸಲರು.
ಗಾಂಧೀಜಿ, ಶಾಸ್ತ್ರೀಜಿ ದೇಶವತ್ಸಲರು.

ಗೌರೀ ಗಣೇಶರದು ಅಮ್ಮ, ಮಗನ ಸಂಬಂಧ.
ಗಾಂಧೀಜಿ, ಶಾಸ್ತ್ರೀಜಿಗಳದು ತತ್ತ್ವ, ಸಿದ್ಧಾಂತದ ಸಂಬಂಧ.

ಗೌರೀ ಗಣೇಶರು ಜನಗಳಿಗೆ ಭಕ್ತಿಯ
ಪಾಠಮಾಡುತ್ತಾರೆ.

ಗಾಂಧೀಜಿ, ಶಾಸ್ತ್ರೀಜಿ ಜನಗಳಿಗೆ
ದೇಶಭಕ್ತಿಯ ಪಾಠಮಾಡುತ್ತಾರೆ.

ಗೌರೀ, ಗಣೇಶರ ಹಬ್ಬದಿಂದ
ಜನಗಳ ಮೈ, ಮನಸ್ಸುಗಳಲ್ಲಿ ಪುಳಕ

ಗಾಂಧೀಜಿ, ಶಾಸ್ತ್ರೀಜಿಯವರ ನೆನಹಿನಿಂದ
ಮೈ, ಮನಸ್ಸುಗಳು ಸಾರ್ಥಕ.

ಗೌರೀ ಗಣೇಶರ ಹಬ್ಬ ನಮ್ಮಗಳ
ಸಂಘಟನೆಯ ದ್ಯೋತಕ.

ಗಾಂಧೀಜಿ, ಶಾಸ್ತ್ರೀಜಿ ಜಯಂತಿ
ಸಾಮರಸ್ಯದ ದ್ಯೋತಕ.

ಗೌರೀ ಗಣೇಶರ ದೈವೀಶಕ್ತಿಯ
ಎದುರಿನಲ್ಲಿ ತಲೆಬಾಗುವಾ.

ಗಾಂಧೀಜಿ, ಶಾಸ್ತ್ರೀಜಿಯವರ
ದೇಶಭಕ್ತಿಯ ಎದುರಿನಲ್ಲಿ ತಲೆಬಾಗುವಾ.

ಗೌರೀ ಗಣೇಶ ಹಬ್ಬ ಬರೀ ಅಬ್ಬರ, ಆರ್ಭಟ,
ಸಾಂಪ್ರದಾಯಿಕವಾಗದಿರಲಿ.

ಗಾಂಧೀಜಿ, ಶಾಸ್ತ್ರೀಜಿ ಜಯಂತಿ
ಬರೀ ಔಪಚಾರಿಕ, ಕಾಟಾಚಾರ,
ಲೆಕ್ಕಾಚಾರವಾಗದಿರಲಿ.

ಇವತ್ತು ಅಕ್ಟೋಬರ್ 2.
ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ, ಹುಟ್ಟುಹಬ್ಬ.

ಈ ಈರ್ವರೂ ಮಹಾನುಭಾವರು
ಬರೀ ಸಮಾನತಿಂಗಳು, ಸಮಾನದಿನಾಂಕರಾಗಿ ಮಾತ್ರ
ಹುಟ್ಟಲಿಲ್ಲ, ಈ ಈರ್ವರೂ ಸಮಾನಮನಸ್ಕರಾಗಿ,
ಸಮಾನಶೀಲ, ಸಮಾನಗುಣರಾಗಿ ಹುಟ್ಟಿದರು.

ಈರ್ವರೂ ರಾಷ್ಟ್ರಾರ್ಪಿತಚೇತನರು
ಮತ್ತು ಈರ್ವರೂ ದೇಶಕ್ಕಾಗಿ
ಸಮರ್ಪಿತಚೇತನರು.

ಈ ಈರ್ವರೂ ಈಶಾವಾಸ್ಯ ಉಪನಿಷತ್ತಿನ

“ತೇನ ತ್ಯಕ್ತೇನ ಭುಂಜೀಥಾಃ”
ಅಂಬೋಣದ ಹಾಗೆ

ಅಪ್ಪಟ ತ್ಯಾಗಭೋಗಿಗಳು
ಮತ್ತು ಭೋಗತ್ಯಾಗಿಗಳು.

ಈರ್ವರೂ ದೇಶಕ್ಕಾಗಿ, ದೇಶೋದ್ಧಾರಕ್ಕಾಗಿ
ಭೋಗವನ್ನು ತ್ಯಾಗಮಾಡಿದರು
ಮತ್ತು ತ್ಯಾಗವನ್ನೇ ಅವರು
ಬದುಕಿನ ಭೋಗವಾಗಿಸಿಕೊಂಡರು.

ಇದು ಕಾರಣ, ಈ ಈರ್ವರೂ ಮಹಾನುಭಾವರು
ಆಪಾದಮಸ್ತಕ ತ್ಯಾಗಿಗಳು.

ಈರ್ವರೂ ಸ್ವಭಾವತಃ ಫಕೀರರು.

ಶಾಸ್ತ್ರೀಯ ಭಾಷೆಯಲ್ಲಿ
ಮತ್ತು ಆಧ್ಯಾತ್ಮಿಕ ಪರಿಭಾಷೆಯಲ್ಲಿ
ಈರ್ವರೂ ನೀರಿಗಂಟದ ನೀರಜಪತ್ರರು.

ಈರ್ವರೂ ಫಕೀರರಾಗಿ ಹುಟ್ಟದಿದ್ದರೂ,
ಫಕೀರರಂತೆ ಬದುಕಿದರು.

ಈರ್ವರೂ ಗೃಹಸ್ಥರಾಗಿದ್ದರೂ ಕೂಡ
ಫಕೀರರನ್ನು ಕೂಡ ಮೀರಿಸುವ ಹಾಗೆ
ಫಕೀರತನವನ್ನು ತಮ್ಮ ಬದುಕಿಗೆ
ಅಳವಡಿಸಿಕೊಂಡಿದ್ದರು.

ಗಾಂಧೀಜಿ, ಶಾಸ್ತ್ರೀಜಿ ಅಮರರು.
ಇವರುಗಳಿಗೆ ಸಾವೇ ಇಲ್ಲ.

ಇವರು ನಮ್ಮ ದೇಶದ ಚರಿತ್ರೆಯಲ್ಲಿ
ಮತ್ತು ಚರಿತ್ರೆಯ ಪುಟಗಳಲ್ಲಿ ಚಿರಂಜೀವಿಗಳು.

ಇವತ್ತಿನ ದಿನ ಗಾಂಧೀಜಿ,
ಶಾಸ್ತ್ರೀಜಿಯವರನ್ನು ಸ್ಮರಿಸಿಕೊಳ್ಳುತ್ತ
ದಿನವಿಡೀ ಅವರ ಸಾಧನೆ, ನಿವೇದನೆಗಳ
ಸಮಗ್ರ ಅವಲೋಕನಮಾಡಿಕೊಂಡಿರೋಣ.

ಇದುವೇ ಅವರಿಗೆ ಇಂದು ನಾವುಗಳು
ಸಲ್ಲಿಸುವ ಗೌರವ ಮತ್ತು ಗೌರವನಮನ.



ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog

21st September 2023