ಡಾ. ಶಿವಾನಂದ ಶಿವಾಚಾರ್ಯರು
ತುಮಕೂರು 15:
“ನಮ್ಮ ಭಾರತೀಯ ಸಂಸ್ಕತಿಯಲ್ಲಿ ನಮಗೆ ನಮ್ಮ ಹಿರಿಯರು ಪಂಚಋಣವನ್ನು ತೀರಿಸಬೇಕು ಎಂದು ಹೇಳುತ್ತಾರೆ.
1. ಮಾತೃಋಣ
2. ಪಿತೃಋಣ
3. ದೇವಋಣ
4. ಗುರುಋಣ
5. ಭೂತಋಣ.
ಸ್ವಾತಂತ್ರ್ಯೋತ್ಸವದ 75ನೇ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ
ಈ ಸಂದರ್ಭದಲ್ಲಿ ನಾವು ನಮ್ಮ ಜನಗಳಿಗೆ ನಾವು, ನೀವುಗಳು ಇನ್ನೊಂದು ಋಣವನ್ನು ತೀರಿಸಬೇಕಾಗಿದೆ ಎಂದು ಹೇಳುತ್ತಿದ್ದೇವೆ.
ಅಹುದು, ನಮ್ಮ, ನಿಮ್ಮಗಳ ಮೇಲೆ ಇನ್ನೊಂದು ಋಣಸಂದಾಯದ ಜವಾಬ್ದಾರಿ ಇದೆ.
ಅದು ಸ್ವಾತಂತ್ರ್ಯಹೋರಾಟಗಾರರ ಋಣ.
ನಮ್ಮ, ನಿಮ್ಮಗಳ ಮೇಲೆ ಸ್ವಾತಂತ್ರ್ಯಹೋರಾಟಗಾರರ ಋಣವಿದೆ. ನಮಗೆಲ್ಲ ಗೊತ್ತಿದೆ, ಅವರುಗಳ ತ್ಯಾಗ, ತಪಸ್ಸು, ಬಲಿದಾನಗಳಿಂದಾಗಿ ನಮಗೆ ಸ್ವಾತಂತ್ರ್ಯ ದೊರೆತಿದೆ. ಅವರು ಸ್ವತಃ ತಾವು ರಕ್ತವಾಗಿ ಹರಿದುಹೋಗಿ ನಮಗೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟಿದ್ದಾರೆ. ಅವರುಗಳು ನಮ್ಮನ್ನು ಬ್ರಿಟಿಷ್ ದಾಸ್ಯದಿಂದ, ಬ್ರಿಟಿಷ್ ಆಡಳಿತದಿಂದ ಮುಕ್ತರನ್ನಾಗಿ ಮಾಡಿದ್ದಾರೆ. ಅವರು ಗುಲಾಮಗಿರಿಗೆ “ಗುಲಾಮಗಿರಿ ಹಟಾವೋ” ಹೇಳಿದ್ದಾರೆ.
ಅವರುಗಳು ಅವತ್ತು ದಿನದಿನವೂ ಸತ್ತು, ಅನುದಿನವೂ ಹೋರಾಡಿ, ಅನುಕ್ಷಣವೂ ಬಾಣಲೆಯಲ್ಲಿ ಬೆಂದು ನಾವು, ನೀವುಗಳು ಗುಲಾಮಗಿರಿಯಿಂದ ಆಚೆ ಬಂದು ಸ್ವತಂತ್ರವಾಗಿ ಬದುಕುವ ಹಾಗೆ ಮಾಡಿದ್ದಾರೆ.
ಇವತ್ತು ನಮ್ಮ, ನಿಮ್ಮಗಳಿಗೆ ಯಾರದೋ ಆಧಿಪತ್ಯ, ಆಡಳಿತ, ಅಂಕುಶದಡಿಯಲ್ಲಿದ್ದು ಅವರುಗಳ “ಹೂಂ” ಜೊತೆಗೆ “ಹೂಂ”, ಅವರುಗಳ “ಊಹುಂ” ಜೊತೆಗೆ “ಊಹುಂ” ಸೇರಿಸಿ ಬದುಕುವ ಅವಶ್ಯಕತೆ ಇಲ್ಲ. ಅವರುಗಳು ನಾವು ಯಾರಿಗೋ “ಜೀ ಹುಜೂರ್” ಹಾಗೂ “ಸಲಾಂ ಸಾಬ್” ಎಂದಂದುಕೊಂಡು ಬದುಕುವುದನ್ನು ತಪ್ಪಿಸಿದ್ದಾರೆ.ಅವರುಗಳ ಸಾಧನೆ, ಸಾಹಸ, ಪರಿಶ್ರಮಗಳಿಂದಾಗಿ ನಾವು, ನೀವುಗಳು ಇಂದು ಮುಕ್ತ, ಮುಕ್ತರಾಗಿದ್ದೇವೆ.
ಎಲ್ಲಕ್ಕೂ ಮೊದಲು ನಾವು, ನೀವುಗಳು ಅವರುಗಳ ಋಣವನ್ನು ತೀರಿಸಬೇಕಿದೆ.
ಸ್ವಾತಂತ್ರ್ಯ ಹೋರಾಟಗಾರರು ಸ್ವತಃ ತಾವು ಶಹೀದ್‌ರಾಗಿ ನಮಗೆ ಸ್ವಾತಂತ್ರ್ಯದ ಶಹದ್‌ನ್ನು (ಜೇನುತುಪ್ಪ) ಸವಿಯುವ ಹಾಗೆ ಮಾಡಿದ್ದಾರೆ. ಸ್ವತಂತ್ರ ಭಾರತದ ಸರ್ವತಂತ್ರ ಸ್ವತಂತ್ರ ದೇಶವಾಸಿಗಳಾದ ನಾವುಗಳು ಪಂಚಋಣಗಳ ಜೊತೆ ಜೊತೆಯಲ್ಲಿ ನಾವುಗಳ ಅವರುಗಳ ಆರನೆಯ ಋಣವನ್ನೂ ತೀರಿಸಬೇಕು.
ಅದು ಹೇಗೆ ಅವರ ಋಣವನ್ನು ತೀರಿಸುವುದು, ಅಂತೀರಾ?
ನಾವು, ನೀವುಗಳು ನಮ್ಮ, ನಿಮ್ಮಲ್ಲಿನ ದೇಶಭಕ್ತಿಯನ್ನು, ರಾಷ್ಟ್ರಪ್ರೇಮವನ್ನು ಇನ್ನಷ್ಟು ಮತ್ತಷ್ಟು ಹೆಚ್ಚಿಸಿಕೊಂಡು ದೇಶಕ್ಕಾಗಿ ತನು, ಮನ, ಧನಗಳಿಂದ ಸೇವೆ ಸಲ್ಲಿಸಿದರೆ ಸಾಕು. ಅದು ಅವರುಗಳ ಋಣವನ್ನು ತೀರಿಸಿದಂತೆ. ದೇಶದ್ರೋಹದ ವಿಚಾರವನ್ನು ಕನಸು, ಮನಸ್ಸಿನಲ್ಲಿಯೂ ಮಾಡದಿದ್ದರೆ ಅದು ಅವರ ಋಣವನ್ನು ತೀರಿಸಿದಂತೆ!!” -
ಎಂದು ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳುಇಂದು ತುಮಕೂರು ಮಹಾನಗರದ ಉಪ್ಪಾರಹಳ್ಳಿಯಲ್ಲಿ ಉಪ್ಪಾರಹಳ್ಳಿ ನಾಗರಿಕ ಹಿತರಕ್ಷಣಾ ಸಮಿತಿ ಏರ್ಪಡಿಸಿದ ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಭಾರತಕ್ಕಾಗಿ ಹೋರಾಡಿದ ಸೈನಿಕರನ್ನು ಸನ್ಮಾನಿಸುತ್ತ ಈ ಮೇಲಿನ ಮಾತುಗಳನ್ನು ಹೇಳಿದರು.
Comments
Post a Comment