``ಏಕೆಂದರೆ ನಾನು ಬುದ್ಧನಲ್ಲ''


ನಾನು ಮನೆ ಬಿಡೋದಿಲ್ಲ.  ಏಕೆಂದರೆ ನಾನು ಬುದ್ಧನಲ್ಲ.

ನಾನು ಮಡದಿಯನ್ನು ಬಿಡೋದಿಲ್ಲ.  ಏಕೆಂದರೆ ನಾನು ಬುದ್ಧನಲ್ಲ.

ನಾನು ಮಕ್ಕಳು, ಮೊಮ್ಮಕ್ಕಳನ್ನು ಬಿಡೋದಿಲ್ಲ. ಏಕೆಂದರೆ ನಾನು ಬುದ್ಧನಲ್ಲ.

ನಾನು ಅಧಿಕಾರ, ಅಂತಸ್ತು, ಆಸೆಯನ್ನು ಬಿಡೋದಿಲ್ಲ. ಏಕೆಂದರೆ ನಾನು ಬುದ್ಧನಲ್ಲ.

ನಾನು ಆಸೆಯೇ ದುಃಖಕ್ಕೆ ಕಾರಣ ಎಂದು ಹೇಳೋದಿಲ್ಲ.  ಏಕೆಂದರೆ ನಾನು ಬುದ್ಧನಲ್ಲ. 

ನಾನು ರಾಜ್ಯ, ರಾಜಕಾರಣ, ರಾಜಕೀಯವನ್ನು ಬಿಡೋದಿಲ್ಲ. ಏಕೆಂದರೆ ನಾನು ಬುದ್ಧನಲ್ಲ.

ನಾನು ಪದ, ಪ್ರತಿಷ್ಠೆ, ಪ್ರತೀಕಾರ ಮನೋಭಾವನೆಯನ್ನು ಬಿಡೋದಿಲ್ಲ. 

ಏಕೆಂದರೆ ನಾನು ಬುದ್ಧನಲ್ಲ.

ನಾನು ವಿಪರೀತದ ದಾಹ, ಮೋಹ, ವ್ಯಾಮೋಹಗಳನ್ನು ಬಿಡೋದಿಲ್ಲ. 

ಏಕೆಂದರೆ ನಾನು ಬುದ್ಧನಲ್ಲ.

ನನಗೆ ಆಮಿಷ, ಪ್ರಲೋಭನೆಗಳನ್ನು ಮೀರಿ ನಿಲ್ಲುವುದಕ್ಕೆ ಆಗುತ್ತಿಲ್ಲ. 

ಏಕೆಂದರೆ ನಾನು ಬುದ್ಧನಲ್ಲ.

ನನಗೆ ರಾಗ, ದ್ವೇಷವಿವರ್ಜಿತನಾಗುವುದಕ್ಕೆ ಆಗುತ್ತಿಲ್ಲ. 

ಏಕೆಂದರೆ ನಾನು ಬುದ್ಧನಲ್ಲ. 

ನನಗೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ 

ಸಹವಾಸ, ಸಾಹಚರ್ಯ ಸಾಕೆನಿಸುತ್ತಿಲ್ಲ. 

ಏಕೆಂದರೆ ನಾನು ಬುದ್ಧನಲ್ಲ. 

ನಾಹಂ ಬುದ್ಧ: ಬುದ್ಧಃ ನಾಹಂ. 

ನನಗೆ ಸ್ಪರ್ಧಾತೀತ, ಪ್ರಶ್ನಾತೀತನಾಗಿ ನಿಲ್ಲುವುದಕ್ಕೆ ಆಗುತ್ತಿಲ್ಲ. 

ಏಕೆಂದರೆ ನಾನು ಬುದ್ಧನಲ್ಲ.

ನನಗೆ ಜಪ, ತಪ, ಅನುಷ್ಠಾನ, ಧ್ಯಾನವನ್ನು ಮಾಡುತ್ತ ಕುಳಿತುಕೊಳ್ಳುವುದಕ್ಕೆ ಆಗುತ್ತಿಲ್ಲ.

ಏಕೆಂದರೆ ನಾನು ಬುದ್ಧನಲ್ಲ.

ನನಗೆ ಸುಮ್ಮನೇ ಕಣ್ಣುಮುಚ್ಚಿಕೊಂಡು ಕುಳಿತುಕೊಂಡಿರೋದಕ್ಕೆ

ನನಗೆ ಸುಮ್ಮನೇ ಬಾಯಿಮುಚ್ಚಿಕೊಂಡು ಇರೋದಕ್ಕೆ ಆಗುತ್ತಿಲ್ಲ.

ಏಕೆಂದರೆ ನಾನು ಬುದ್ಧನಲ್ಲ.

ನನಗೆ ಸ್ವಗತ, ಆತ್ಮಗತ, ಅಂತರ್ಗತನಾಗಲಿಕ್ಕೆ ಆಗುತ್ತಿಲ್ಲ. 

ಏಕೆಂದರೆ ನಾನು ತಥಾಗತನಲ್ಲ. 

ಏಕೆಂದರೆ ನಾನು ಬುದ್ಧನಲ್ಲ.

“ನಾನು ಬುದ್ಧ” ಎಂದು ಹೇಳೋದಕ್ಕೆ ಛಲ, ಬಲ, ಮನೋಬಲ ಬೇಕು.

“ನಾನು ಬುದ್ಧ” ಎಂದು ಹೇಳೋದಕ್ಕೆ ನಿಗ್ರಹಾನುಗ್ರಹ, ಸಂಯಮ ಬೇಕು.

“ನಾನು ಬುದ್ಧ” ಎಂದು ಹೇಳೋದಕ್ಕೆ 

ಮನಸ್ಸಿನ ಏಕಾಗ್ರೀಕರಣ, ಸಂಯಮೀಕರಣ ಬೇಕು.

“ನಾನು ಬುದ್ಧ” ಎಂದು ಹೇಳುವುದಕ್ಕೆ ಭಗವಂತನೊಂದಿಗೆ 

ಮನ, ಮತಿಗಳ ಏಕೀಕರಣವಾಗಬೇಕು.

“ನಾನು ಬುದ್ಧ” ಎಂದು ಹೇಳುವುದಕ್ಕೆ ಎದೆ ಬೇಕು, 

ಎದೆಗಾರಿಕೆ ಬೇಕು, ಆತ್ಮಬಲ ಬೇಕು.

ಎಲ್ಲಕ್ಕೂ ಮುಖ್ಯವಾಗಿ “ನಾನು ಬುದ್ಧ” ಎಂದು ಹೇಳೋದಕ್ಕೆ 

“ಗಟ್ಸ್” Guts ಬೇಕು.

“ನಾನು ಬುದ್ಧನಲ್ಲ” ಎಂದು ಹೇಳುವುದಕ್ಕೆ 

ಈಗ ಹ್ಯಾಗಿದ್ದೇವೆಯೋ ಹಾಗೆ ಇದ್ದರೆ ಸಾಕು. 

“ನಾನು ಬುದ್ಧನಲ್ಲ” ಎಂದು ಹೇಳುವುದಕ್ಕೆ

ತೆರಣಿಯ ಹುಳುವಿನಂತಿದ್ದರೆ ಸಾಕು.

“ನಾನು ಬುದ್ಧನಲ್ಲ” ಎಂದು ಹೇಳುವುದಕ್ಕೆ 

ಏನು, ಏನು, ಏನೇನೂ ಬೇಕಿಲ್ಲ.

“ನಾನು ಬುದ್ಧ” ಎಂದು ಹೇಳುವುದಕ್ಕೆ ಮಾತ್ರ 

ಬಹಳ, ಬಹಳ, ಬಹಳಷ್ಟು ಬೇಕು. 

ಬುದ್ಧನಾಗುವುದಕ್ಕೆ ಬಹಳಷ್ಟು ಬೇಕು. 

ಬುದ್ಧನಾಗುವುದಕ್ಕೆ ಸಾಧನೆ ಬೇಕು.

‘’ಬುದ್ಧನಲ್ಲ” ಎಂದು ಒಪ್ಪಿಕೊಳ್ಳುವುದು 

ತುಂಬ ತುಂಬಾನೇ ಸುಲಭ, ಸಲೀಸು.

ಇದು ಕಾರಣ, ದೀನ, ಹೀನ, ಸಾಹಸವಿಹೀನ ಮನಸ್ಥಿತಿ ಇದ್ದವರು 

ಅಂಧ, ಪಂಗು, ಬಧಿರ ಮನಸ್ಥಿತಿಯನ್ನು ಅಪ್ಪಿಕೊಂಡು, 

ಒಪ್ಪಿಕೊಂಡು ಇರುವವರು  ಸುಲಭವಾಗಿ

 “ನಾನು ಬುದ್ಧನಲ್ಲ” 

ಎಂದು ಒಪ್ಪಿಕೊಂಡುಬಿಡುತ್ತಾರೆ.


ಡಾ. ಶಿವಾನಂದ ಶಿವಾಚಾರ್ಯರು

ಹಿರೇಮಠ, ತುಮಕೂರು

Comments

Popular posts from this blog