ಏಕೆಂದರೆ ನಾವು ಬಸವಣ್ಣನಲ್ಲ - ಡಾ. ಶಿವಾನಂದ ಶಿವಾಚಾರ್ಯರು


 “ಏಕೆಂದರೆ ನಾವು ಬಸವಣ್ಣನಲ್ಲ” 


ನಾವು,

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ”  ಎಂದು ಹೇಳುವುದಿಲ್ಲ.

ಏಕೆಂದರೆ ನಾವು ಬಸವಣ್ಣನಲ್ಲ. 


ನಾವು,

 “ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ. ತನ್ನ ಬಣ್ಣಿಸಬೇಡ,

ಇದಿರ ಹಳಿಯಲುಬೇಡ” ಎಂದು ಹೇಳುವುದಿಲ್ಲ. 

ಏಕೆಂದರೆ ನಾವು ಬಸವಣ್ಣನಲ್ಲ.  

“ಹೀಗೆಂದು ಬಸವಣ್ಣ ಹೇಳಿದ. 

ಇದು ಬಸವಣ್ಣನ ವಚನ. 

ಇದು ಬಸವಣ್ಣನ ಮಾತು” - ಎಂದು ಘಂಟಾಘೋಷವಾಗಿ ಹೇಳಬಲ್ಲೆವು.


ನಾವು,

“ಹೊನ್ನಿನೊಳಗೊಂದೊರೆಯ, ಸೀರೆಯೊಳಗೆಂದೆಳೆಯ 

ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ” ಎಂದು ಹೇಳುವುದಿಲ್ಲ.

ಏಕೆಂದರೆ ನಾವು ಬಸವಣ್ಣನಲ್ಲ. 

“ಹೀಗೆಂದು ಬಸವಣ್ಣ ಹೇಳಿದ. 

ಇದು ಬಸವಣ್ಣನ ವಚನ. ಇದು ಬಸವಣ್ಣನ ಮಾತು” -

ಎಂದು ಸಾವಿರ ಸಾವಿರ ಜನಗಳ ಎದುರಿನಲ್ಲಿ ಗಂಟೆ, ಜಾಗಟೆ ಬಾರಿಸಿ 

ಪುಂಖಾನುಪುಂಖವಾಗಿ ಹೇಳಬಲ್ಲೆವು.


ನಾವು,

ದಯವಿಲ್ಲದ ಧರ್ಮವದೇವುದಯ್ಯ? 

ದಯವೇ ಬೇಕು ಸಕಲಪ್ರಾಣಿಗಳಲ್ಲಿ.

ದಯವೇ ಧರ್ಮದ ಮೂಲವಯ್ಯ” ಎಂದು ಹೇಳುವುದಿಲ್ಲ.

ಏಕೆಂದರೆ ನಾವು ಬಸವಣ್ಣನಲ್ಲ. 

“ಹೀಗೆಂದು ಬಸವಣ್ಣ ಹೇಳಿದ. 

ಇದು ಬಸವಣ್ಣನ ವಚನ. ಇದು ಬಸವಣ್ಣನ ಮಾತು” -

ಎಂದು ಸಾವಿರ ಸಾವಿರ ಜನಗಳ ಎದುರಿನಲ್ಲಿ ಗಂಟೆ, ಜಾಗಟೆ ಬಾರಿಸಿ 

ಪುಂಖಾನುಪುಂಖವಾಗಿ ಹೇಳಬಲ್ಲೆವು.


ನಾವು,

“ಹೊಯಿದವರೆನ್ನ ಹೊರೆದವರೆಂಬೆ, 

ಬಯಿದವರೆನ್ನ ಬಂಧುಗಳೆಂಬೆ,

ನಿಂದಿಸಿದವರೆನ್ನ ತಂದೆ ತಾಯಿಗಳೆಂಬೆ, 

ಆಳಿಗೊಂಡವರೆನ್ನ ಆಳ್ದವರೆಂಬೆ, 

ಜರಿದವರೆನ್ನ ಜನ್ಮಬಂಧುಗಳೆಂಬೆ 

ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ” ಎಂದು ಹೇಳುವುದಿಲ್ಲ. 

ಏಕೆಂದರೆ ನಾವು ಬಸವಣ್ಣನಲ್ಲ. 

“ಹೀಗೆಂದು ಬಸವಣ್ಣ ಹೇಳಿದ. 

ಇದು ಬಸವಣ್ಣನ ವಚನ. ಇದು ಬಸವಣ್ಣನ ಮಾತು”

ಎಂದು ಮಾತ್ರ ಲಕ್ಷ ಲಕ್ಷ ಜನಗಳ ಎದುರಿನಲ್ಲಿ ಧೈರ್ಯದಿಂದ ಹೇಳಬಲ್ಲೆವು.


ನಾವು,

“ಹರಿವ ಹಾವಿಗಂಜೆ, ಉರಿಯ ನಾಲಗೆಗಂಜೆ, 

ಸುರಗಿಯ ಮೊನೆಗಂಜೆ, 

ಒಂದಕ್ಕಂಜುವೆ, ಒಂದಕ್ಕಳಕುವೆ, 

ಪರಸ್ತ್ರೀ ಪರಧನವೆಂಬೀ ಜೂಬಿಂಗಂಜುವೆ” ಎಂದು ಹೇಳುವುದಿಲ್ಲ. 

ಏಕೆಂದರೆ ನಾವು ಬಸವಣ್ಣನಲ್ಲ. 

“ಹೀಗೆಂದು ಬಸವಣ್ಣ ಹೇಳಿದ. 

ಇದು ಬಸವಣ್ಣನ ವಚನ. 

ಇದು ಬಸವಣ್ಣನ ಮಾತು” - ಎಂದು ಕೋಟಿ ಕೋಟಿ ಜನಗಳ ಎದುರಿನಲ್ಲಿ 

ಜೋರು ಜೋರಾಗಿ ಕೂಗಿ ಕೂಗಿ ಹೇಳಬಲ್ಲೆವು.


ನಾವು,

“ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ. 

ವೇದ ಘನವೆಂಬೆನೆ? ಪ್ರಾಣಿವಧೆಯ ಹೇಳುತ್ತಿದೆ.

ಶ್ರುತಿ ಘನವೆಂಬೆನೆ? ಮುಂದಿಟ್ಟು ಅರಸುತ್ತಿದೆ. 

ಅಲ್ಲೆಲ್ಲಿಯೂ ನೀವಿಲ್ಲದ ಕಾರಣ” ಎಂದು ಹೇಳುವುದಿಲ್ಲ. 

ಏಕೆಂದರೆ ನಾವು ಬಸವಣ್ಣನಲ್ಲ. 

ಆದರೆ “ಹೀಗೆಂದು ಬಸವಣ್ಣ ಹೇಳಿದ. 

ಇದು ಬಸವಣ್ಣನ ವಚನ. ಇದು ಬಸವಣ್ಣನ ಮಾತು”

ಎಂದು ಅಸಂಖ್ಯಾತ ಜನಗಳ ಎದುರಿನಲ್ಲಿ ಎದೆ ತಟ್ಟಿಕೊಂದು, 

ಎದೆ ಮುಟ್ಟಿಕೊಂಡು ಹೇಳಬಲ್ಲೆವು.


ನಾವು,

“ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು 

ಸಗಣಕ್ಕೆ ಸಾಸಿರ ಹುಳು ಹುಟ್ಟವೆ, ದೇವಾ?” ಎಂದು ಕೇಳುವುದಿಲ್ಲ.  

ಏಕೆಂದರೆ ನಾವು ಬಸವಣ್ಣನಲ್ಲ. 

ಆದರೆ  “ಹೀಗೆಂದು ಬಸವಣ್ಣ ಕೇಳಿದ. 

ಇದು ಬಸವಣ್ಣನ ವಚನ. ಇದು ಬಸವಣ್ಣನ ಮಾತು”

ಎಂದು ಎಲ್ಲರೆದುರಿನಲ್ಲಿ ನಿರ್ಭಯವಾಗಿ, 

ನಿರಾತಂಕವಾಗಿ, ನಿಖರವಾಗಿ ಹೇಳಬಲ್ಲೆವು.


ನಾವು,

“ಆವನಾದಡೇನು 

ಶ್ರೀ ಮಹಾದೇವನ ನೆನೆವವನ ಬಾಯ ತಾಂಬೂಲವ ಮೆಲುವೆ, 

ಬೀಳುಡುಗೆಯ ಹೊದೆವೆ, 

ಪಾದರಕ್ಷೆಯ ಕಾಯ್ದು ಬದುಕುವೆ” ಎಂದು ಹೇಳುವುದಿಲ್ಲ.

ಏಕೆಂದರೆ ನಾವು ಬಸವಣ್ಣನಲ್ಲ. 

ಆದರೆ  “ಹೀಗೆಂದು ಬಸವಣ್ಣ ಹೇಳಿದ. 

ಇದು ಬಸವಣ್ಣನ ವಚನ. ಇದು ಬಸವಣ್ಣನ ಮಾತು”  - ಎಂದು 

ಸಭೆ, ಸಮಾರಂಭಗಳಲ್ಲಿ ಮೈಕಾಸುರನ ಕತ್ತನ್ನು ಹಿಡಿದು 

ಜೋರು ಜೋರಾಗಿ ಹೇಳಬಲ್ಲೆವು.


ನಾವು,

“ಆರು ಮುನಿದು ನಮ್ಮನೇನ  ಮಾಡುವರು?

ಊರು ಮುನಿದು ನಮ್ಮನೆಂತು ಮಾಡುವುದು?” ಎಂದು ಹೇಳುವುದಿಲ್ಲ. 

ಏಕೆಂದರೆ ನಾವು ಬಸವಣ್ಣನಲ್ಲ. 


ಆದರೆ “ಹೀಗೆಂದು ಬಸವಣ್ಣ ಕೇಳಿದ. 

ಇದು ಬಸವಣ್ಣನ ವಚನ. ಇದು ಬಸವಣ್ಣನ ಮಾತು”

ಎಂದು ಗಂಟೆಗಟ್ಟಲೆ, ತಾಸುಗಟ್ಟಲೆ ಭಾಷಣಮಾಡುತ್ತ, 

ಉಪನ್ಯಾಸಮಾಡುತ್ತ ಹೇಳಬಲ್ಲೆವು.


ನಾವು,

“ಆಡಿದಡೇನು, ಹಾಡಿದಡೇನು, ಓದಿದಡೇನು? 

ತ್ರಿವಿಧದಾಸೋಹವಿಲ್ಲದನ್ನಕ್ಕ?

“ಆಡದೆ ನವಿಲು, ಹಾಡದೆ ತಂತಿ, ಓದದೆ ಗಿಳಿ?” ಎಂದು ಕೇಳುವುದಿಲ್ಲ. 

ಏಕೆಂದರೆ ನಾವು ಬಸವಣ್ಣನಲ್ಲ. 

ಆದರೆ “ಹೀಗೆಂದು ಬಸವಣ್ಣ ಕೇಳಿದ. 

ಇದು ಬಸವಣ್ಣನ ವಚನ. 

ಇದು ಬಸವಣ್ಣನ ಮಾತು” ಎಂದು ಮಾತ್ರ ಬಹುಕೋಟಿ 

ಜನಗಳ ಎದುರಿನಲ್ಲಿ ಹಾರಾಡಿ, ಹೋರಾಡಿ ಹೇಳಬಲ್ಲೆವು.


ನಾವು,

“ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ

ಭಕ್ತರ ಮನೆಯಲ್ಲಿ ತೊತ್ತಾಗಿಪ್ಪುದು ವರ ಲೇಸಯ್ಯ.

“ತಾರೌ ಅಗ್ಘವಣಿ, ನೀಡೌ ಪತ್ರೆಯ 

ಲಿಂಗಕ್ಕೆ ಬೋನವ ಹಿಡಿಯೌ” ಎಂಬರು” ಎಂದು ಹೇಳುವುದಿಲ್ಲ.

ಏಕೆಂದರೆ ನಾವು ಬಸವಣ್ಣನಲ್ಲ. 

ಆದರೆ “ಹೀಗೆಂದು ಬಸವಣ್ಣ ಕೇಳಿದ. 

ಇದು ಬಸವಣ್ಣನ ವಚನ. ಇದು ಬಸವಣ್ಣನ ಮಾತು”

ಎಂದು ಮಾತ್ರ ಸಹಸ್ರಾರು ಜನಗಳ ಎದುರಿನಲ್ಲಿ 

ಭೂರಿ ಭೂರಿ ಸಲ ಕೂಗಿ ಕೂಗಿ ಹೇಳಬಲ್ಲೆವು.


ನಾವು,

“ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ

ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ

ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ 

ನಿಮ್ಮ ಶರಣರ ಪಾದವಲ್ಲದೆ 

ಅನ್ಯ ವಿಷಯಕ್ಕೆಳೆಸದಂತೆ ಇರಿಸು” ಎಂದು ಹೇಳುವುದಿಲ್ಲ.

ಏಕೆಂದರೆ ನಾವು ಬಸವಣ್ಣನಲ್ಲ. 

ಆದರೆ 

“ಹೀಗೆಂದು ಬಸವಣ್ಣ ಕೇಳಿದ. 

ಇದು ಬಸವಣ್ಣನ ವಚನ. ಇದು ಬಸವಣ್ಣನ ಮಾತು”

ಎಂದು ಮಾತ್ರ ರಾಜಾರೋಷವಾಗಿ ಮೈಕ್ ಹಿಡಿದು, 

ಡಂಗುರ ಬಾರಿಸಿ ಬೀದಿ ಬೀದಿಗಳಲ್ಲಿ ಸಾರಿ ಹೇಳಿಬರಬಲ್ಲೆವು.


ಅದೆಷ್ಟೋ ಸಲ, 

“ನಮ್ಮನ್ನು ನಾವೇ  “ನಾವೇಕೆ ಬಸವಣ್ಣನಲ್ಲ? 

ನಾವೇಕೆ ಬಸವಣ್ಣನಂತಿಲ್ಲ?’ 

ಎಂದು ಕೇಳಿಕೊಂಡಾಗ ನಮಗೆ ಬಸವಣ್ಣ ಹೇಳಿದ

 ಅಂತರಂಗಶುದ್ಧಿ, ಬಹಿರಂಗಶುದ್ಧಿಯ ಮಾತು ಜ್ಞಾಪಕಕ್ಕೆ ಬರುತ್ತದೆ.


ಬಸವಣ್ಣನಾಗಬೇಕೆಂದರೆ ಬಸವಣ್ಣನ ಹಾಗೆ 

ಅಂತರಂಗಶುದ್ಧಿ, ಬಹಿರಂಗಶುದ್ಧಿ ಇರಬೇಕು.


ಬಸವಣ್ಣನಾಗಬೇಕೆಂದರೆ ಬಸವಣ್ಣನ ಹಾಗೆ 

ಒಳ-ಹೊರಗುಗಳ ಮಧ್ಯದಲ್ಲಿ ಪಾರದರ್ಶಕತೆ ಇರಬೇಕು.


ಬಸವಣ್ಣನಾಗಬೇಕೆಂದರೆ ಬಸವಣ್ಣನ ಹಾಗೆ 

“ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ”

ಎಂಬ ನಮ್ರತೆ, ವಿನಮ್ರತೆಯನ್ನು ಮೈಗೂಡಿಸಿಕೊಂಡಿರಬೇಕು.


ನಾವುಗಳು ಕೂಡ ಪ್ರಯತ್ನಮಾಡಿದರೆ ಬಸವಣ್ಣನಾಗಬಹುದು 

ಮತ್ತು ಬಸವಣ್ಣನಂತಾಗಬಹುದು!!

ಆದರೆ ನಾವುಗಳು ಪ್ರಯತ್ನವನ್ನು ಮಾಡುತ್ತಿಲ್ಲವಲ್ಲ??


ನಾವುಗಳು ಬಸವಣ್ಣನ ಹಾಗೆ ಆಗದೆ 

ಬಸವಣ್ಣನಿಗೆ ``ಪರಾಕು'', ``ಜೈಪರಾಕು'' ಹೇಳುವುದರಲ್ಲಿಯೇ

ತೃಪ್ತಿಪಟ್ಟುಕೊಳ್ಳುತ್ತಿದ್ದೇವೆ, ನಾವು ಅಲ್ಪತೃಪ್ತರಾಗಿದ್ದೇವೆ, 

ನಾವುಗಳು ಯದೃಚ್ಛಾಲಾಭಸಂತುಷ್ಟರಾಗಿದ್ದೇವೆ.

ನಮ್ಮಗಳ ಈ ಅಲ್ಪತೃಪ್ತಿಯೇ 

ನಮ್ಮ ಸಾಧನೆ, ಸಾಹಸಗಳಿಗೆ

ಅಡ್ಡಗಾಲುಹಾಕಿಕೊಂಡಿದೆ.  




ಡಾ. ಶಿವಾನಂದ ಶಿವಾಚಾರ್ಯರು

ಹಿರೇಮಠ, ತುಮಕೂರು

Comments

Popular posts from this blog