ಇದು ಅಮೃತ ಮಹೋತ್ಸವದ ಸಮಯ ಮಾತ್ರವಲ್ಲ;

ಇದು ಆತ್ಮಾವಲೋಕನದ ಸಮಯ ಕೂಡ ಅಹುದು.


ನಿನ್ನೆಯ ದಿನ, ಇಡೀ ದೇಶ ಮತ್ತು ದೇಶಬಾಂಧವರು 
ದೇಶ, ವಿದೇಶಗಳಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು 
ಆಚರಿಸುತ್ತಿರುವ ಸಂದರ್ಭದಲ್ಲಿ,


ನಾವು ಸ್ವಾತಂತ್ರ್ಯ ಹೋರಾಟಗಾರರ ಋಣ ನಮ್ಮ ಮೇಲಿದೆ ಎಂದು ಹೇಳಿದ್ದೆವು. 


ಹಾಗೆಯೇ ಮಾತೃಋಣ, ಪಿತೃಋಣ, ದೇವಋಣ, ಗುರುಋಣ, 

ಭೂತಋಣಗಳ ಜೊತೆ ಜೊತೆಯಲ್ಲಿ ನಾವುಗಳು
ನಮ್ಮ ಮೇಲಿರುವ ಸ್ವಾತಂತ್ರ್ಯಹೋರಾಟಗಾರರ  

ಋಣವನ್ನು ಕೂಡ ತೀರಿಸಬೇಕಿದೆ ಎಂದು ಹೇಳಿದ್ದೆವು.

ನಮ್ಮ ದೇಶವನ್ನು ಸರ್ವತಂತ್ರಸ್ವತಂತ್ರವಾಗಿಸುವುದಕ್ಕಾಗಿ ರಕ್ತವಾಗಿ ಹರಿದುಹೋದ, ನಮ್ಮ ದೇಶವನ್ನು ಸರ್ವತಂತ್ರಸ್ವತಂತ್ರವಾಗಿಸುವುದಕ್ಕಾಗಿ ನೇಣಿಗೆ ಕತ್ತುಕೊಟ್ಟ, ಗಲ್ಲುಗಂಬಗಳಿಗೆ ಕೊರಳುಕೊಟ್ಟ, ನಮ್ಮ ದೇಶವನ್ನು ಸರ್ವತಂತ್ರಸ್ವತಂತ್ರವಾಗಿಸುವುದಕ್ಕಾಗಿ ಮನೆ, ಮಡದಿ, ಮಕ್ಕಳನ್ನು ಕೂಡ ಗಮನಿಸದೆಹೋದ, ಅವತ್ತಿನ ದಿನಮಾನಗಳಲ್ಲಿ ದೇಶಕ್ಕಾಗಿ ಸಮಸ್ತವನ್ನೂ ತ್ಯಾಗಮಾಡಿದ ಸ್ವಾತಂತ್ರ್ಯಹೋರಾಟಗಾರರ ಋಣವನ್ನು ನಾವು ಸಂದಾಯಮಾಡಬೇಕಿದೆ ಎಂದು ಮತ್ತೆ ಮತ್ತೆ ಒತ್ತಿ ಒತ್ತಿ ಹೇಳಿದ್ದೆವು. 
ನಮ್ಮ ದೃಷ್ಟಿಯಲ್ಲಿ, 
ಇದು ಬರೀ ಅಮೃತಮಹೋತ್ಸವದ ಸಮಯ ಮಾತ್ರ ಅಲ್ಲ;
ಇದು ಆತ್ಮಾವಲೋಕನದ ಸಮಯ ಕೂಡ ಅಹುದು.
ನಾವು, ನೀವುಗಳು ಸ್ವಾತಂತ್ರ್ಯಹೋರಾಟಗಾರರ ಋಣವನ್ನು ತೀರಿಸುತ್ತಿರುವುದು ಉಂಟಾ? ಅಷ್ಟೊಂದು ಕಷ್ಟಪಟ್ಟು ಹಗಲು, ರಾತ್ರಿ, ಛಳಿ, ಮಳೆ, ಗಾಳಿಗಳೆನ್ನದೆ ಹೊಡೆದಾಡಿ, ಬಡಿದಾಡಿ ಅವರು ನಮಗೆ ಕೊಡಿಸಿದ ಸ್ವಾತಂತ್ರ್ಯವನ್ನು ಅವರುಗಳು ಖುಷಿಪಡುವಂತೆ ನಾವು, ನೀವುಗಳು ನಡೆದುಕೊಳ್ಳುತ್ತಿರುವೆವೋ? 
ನಮಗೆ ಸ್ವಾತಂತ್ರ್ಯಕೊಡಿಸಿದ ಅವರಿಗೆ ಸಂತೋಷವಾಗಿದೆಯಾ? ಅವರುಗಳ ಆತ್ಮಕ್ಕೆ ಶಾಂತಿ ಸಿಕ್ಕುತ್ತಿದೆಯಾ? ಅವರುಗಳು ನಿಟ್ಟುಸಿರುಬಿಟ್ಟುಕೊಂಡು ಸಮಾಧಾನದಿಂದ ಇರಲಿಕ್ಕೆ ಸಾಧ್ಯವಾಗಿದೆಯಾ? ಅವರ ಆತ್ಮಕ್ಕೆ ಶಾಂತಿ ಸಿಕ್ಕುವಂಥ ಕೆಲಸವನ್ನು ನಾವು, ನೀವುಗಳು ಮಾಡುತ್ತಿರುವುದು ಉಂಟಾ? ಅವರ ತ್ಯಾಗ, ತಪಸ್ಸು, ಬಲಿದಾನ, ಮರಣಗಳು ಸಾರ್ಥಕವಾಗಿವೆಯಾ? ಅವರು ಸಂತೋಷದಿಂದಿರುವರೆ? ಅವರು ನೊಂದುಕೊಳ್ಳುತ್ತಿಲ್ಲವೆ? 
ಅವರು ನಿಜಕ್ಕೂ ಖುಷಿಯಾಗಿದ್ದಾರಾ? ಆರ್ ದೇ ಹ್ಯಾಪಿ? ಆರ್ ದೇ ಓಕೆ?  
ಂಡಿe ಣheಥಿ ಊಚಿಠಿಠಿಥಿ, ಂಡಿe ಣheಥಿ ಔಞ? 
ಅಹುದು, ನಿನ್ನೆಯ ದಿನ, ಆಗಸ್ಟ್ ೧೫ರಂದು,
 ನಾವು ನಮ್ಮ ದೇಶದ ವಿಷಯದಲ್ಲಿ ನಕಾರಾತ್ಮಕವಾಗಿ ಮಾತನಾಡಬಾರದು ಮತ್ತು ನಕಾರಾತ್ಮಕವಾಗಿ ಯೋಚನೆ ಮಾಡಬಾರದು ಎಂದು ತೀರ್ಮಾನಿಸಿದ್ದೆವು. ನಾವು ನಿನ್ನೆಯ ದಿನ ಕೇವಲ ದೇಶದ ಸಾಧನೆ ಮತ್ತು ಸಕಾರಾತ್ಮಕ ವಿಷಯಗಳ ಕುರಿತು ಮಾತ್ರ ಮಾತನಾಡಬೇಕು ಎಂದು ಮೊದಲೇ ನಿಶ್ಚಯಿಸಿಯಾಗಿತ್ತು. ಜನರೆಲ್ಲರೂ ಸಂಭ್ರಮ, ಸಡಗರ, ಸಂತೋಷ, ಉತ್ಸಾಹ, ಉಮ್ಮೇದುಗಳಲ್ಲಿರುವಾಗ ನಾವೇಕೆ ಅವರ ಸಂಭ್ರಮ, ಸಡಗರಕ್ಕೆ ಹುಳಿಹಿಂಡಬೇಕು ಎಂದು ಸುಮ್ಮನಿದ್ದೆವು. ನಾವೇಕೆ ಸುಮ್ಮನೇ ಜನರನ್ನು ಯೋಚನೆಗೆ ಹಚ್ಚಿಬಿಟ್ಟು ಅವರ ಸಂತೋಷ, ಸಂಭ್ರಮಗಳಿಗೆ ಅಡ್ಡಗಾಲು ಹಾಕಬೇಕು ಎಂದು ನಮಗೆ ನಾವೇ “ಮೌನ ದೇವೋ ಭವ” ಎಂದು ಹೇಳಿಕೊಂಡಿದ್ದೆವು. 
ನಮ್ಮ ದೇಶದ ವಿಷಯದಲ್ಲಿ ಕೆಟ್ಟದ್ದನ್ನು ಮಾತನಾಡಬಾರದು ಎಂಬುವುದು ನಮಗೆ ಚೆನ್ನಾಗಿ ಗೊತ್ತಿದೆ. ನಕಾರಾತ್ಮಕವಾಗಿ ಯೋಚಿಸಬಾರದು. ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಿಕೊಂಡಿರಬೇಕು. ಯಾವಾಗಲೂ ಸಕಾರಾತ್ಮಕ ಅಂಶಗಳನ್ನು ಮಾತ್ರ ಗಮನಿಸಿಕೊಂಡಿರಬೇಕು. 
“ಪೊಜಿಟಿವ್ ಥಿಂಕಿಂಗ್” ಇರಬೇಕು ಎಂಬ ಈ “ಪೊಜಿಟಿವ್ ಥಿಂಕಿಂಗ್ ಫಿಲಾಸಫಿ” Posiಣive ಖಿhiಟಿಞiಟಿg Phiಟosoಠಿhಥಿ ಕೂಡ ನಮಗೆ ಗೊತ್ತಿದೆ. 
ಆದರೂ ಸಹ ಇದು ಬರೀ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಮಯ ಮಾತ್ರವಲ್ಲ, 
ಇದು ಆತ್ಮಾವಲೋಕನದ ಸಮಯವೂ ಆಗಿರುವುದರಿಂದ ನಾವುಗಳು ನಮ್ಮ ದೇಶದ ನಕಾರಾತ್ಮಕ ಅಂಶಗಳತ್ತ, ನಮ್ಮಗಳ ಗುಣಾವಗುಣಗಳತ್ತ ಕೂಡ ಗಮನಹರಿಸಬೇಕಿದೆ. 
ನಮ್ಮ ದೇಶದ ನಕಾರಾತ್ಮಕ ಅಂಶಗಳನ್ನು ಖಂಡಿತವಾಗಿಯೂ ನಾವು ಗಮನಬಾಹಿರವಾಗಿಸಬಾರದು. ಹಾಗೆಂದು ಹಿರಿಯರು ಮತ್ತು ಬಲ್ಲವರು ಹೇಳುತ್ತಾರೆ. ಹಿರಿಯರ ಮಾತುಗಳನ್ನು ಅಲ್ಲಗಳೆಯಲಾಗದು. ಏಕೆಂದರೆ ಅವರ ಮಾತದು ಬರೀ ಮಾತಲ್ಲ; ಅದು ಅವರ ಅನುಭವವಾಣಿ ಮತ್ತು ಅದು ಅವರ ಅನುಭವ ಉವಾಚ.  
ಈ ಸಂದರ್ಭದಲ್ಲಿ, ಒಂದು ವಿಷಯವನ್ನು ನಾವು “ಮಸ್ಟ್ & ಶುಡ್” ಮಾದರಿಯಲ್ಲಿ ಹೇಳಲೇಬೇಕು.
ನಮ್ಮ ಸ್ವಾತಂತ್ರ್ಯಹೋರಾಟಗಾರರು ಯಾವ ಉದ್ದೇಶಕ್ಕಾಗಿ ಈ ದೇಶವನ್ನು ಸರ್ವತಂತ್ರಸ್ವತಂತ್ರವಾಗಿಸಿದರೋ ನಾವುಗಳು ಆ ಒಂದು ಉದ್ದೇಶವನ್ನೇ ಮರೆತುಬಿಟ್ಟಿದ್ದೇವೆ. 
ನಾವುಗಳು ಈಗ ಆಡುತ್ತಿರುವ ಆಟವನ್ನು ನೋಡಿಬಿಟ್ಟು ಆ ನಮ್ಮ ಸ್ವಾತಂತ್ರ್ಯಹೋರಾಟಗಾರರು, ದೇಶಕ್ಕಾಗಿ ಹುತಾತ್ಮರಾದ ಆ ನಮ್ಮ ಮಹಾನುಭಾವರುಗಳು ಅದೆಷ್ಟು ನೊಂದುಕೊಳ್ಳುತ್ತಿದ್ದಾರೋ ಏನೋ? ನಮ್ಮನ್ನು ಕಂಡು, ನಮ್ಮ, ನಿಮ್ಮಗಳ ಈ ಅವತಾರ, ಅವಾಂತರಗಳನ್ನು ಕಂಡು ಅವರೇನು ಅಂದುಕೊಳ್ಳುತ್ತಿದ್ದಾರೋ? ಅವರು ನಮ್ಮ ಕುರಿತು ಏನಂದುಕೊಂಡಾರೋ - ಎಂಬ ಕನಿಷ್ಠ ಕಾಳಜಿಯಾದರೂ ನಮ್ಮಲ್ಲಿದೆಯಾ? 

೧. ದೇಶವನ್ನು ಜಾತ್ಯತೀತ, ಜಾತ್ಯತೀತ ಎನ್ನುತ್ತಲೇ ದೇಶವನ್ನು ಜಾತಿಯಾಗಿ ನಿಲ್ಲಿಸಿಬಿಟ್ಟಿದ್ದೇವೆ.  
ಎಲ್ಲ ಧರ್ಮಗಳಿಗೂ, ಎಲ್ಲ ಸಿದ್ಧಾಂತಗಳಿಗೂ ಆಶ್ರಯಕೊಟ್ಟ ಈ ದೇಶವನ್ನು ಧರ್ಮಾಂಧ ಮತ್ತು ಜಾತ್ಯಂಧಗೊಳಿಸಿಬಿಟ್ಟಿದ್ದೇವೆ. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಈ ದೇಶವನ್ನು ಇದೀಗ ಸರ್ವಜನಾಂಗದ ಕಾಟಕ್ಕೆ ವೇದಿಕೆಯಾಗಿಸಿದ್ದೇವೆ.


ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ದಿನನಿತ್ಯದಲ್ಲೂ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದೇವೆ. 
ದೇಶವನ್ನು ಧರ್ಮವಾಗಿಸುವುದನ್ನು ಬಿಟ್ಟು ನಮ್ಮ, ನಮ್ಮ ಸ್ವಕಪೋಲಕಲ್ಪಿತಗಳನ್ನು ಧರ್ಮವಾಗಿಸಿಬಿಟ್ಟಿದ್ದೇವೆ. ಧರ್ಮದ ಹೆಸರಿನಲ್ಲಿ ವಿನಾಕಾರಣ ಧಂಗೆ, ದಾಂಧಲೆ, ಗಲಾಟೆ, ಗದ್ದಲ, ಗಲಭೆಗಳನ್ನು ಹುಟ್ಟುಹಾಕುತ್ತಿದ್ದೇವೆ. ಪ್ರತ್ಯಕ್ಷವಾಗಿ ಕಣ್ಣೆದುರಿಗೆ ಕಾಣುವ ದೇಶವನ್ನು ಬಿಟ್ಟು ಕಾಣದ ದೇವರಿಗಾಗಿ ಕೈ ಕೈ ಮಿಲಾಯಿಸಿಕೊಂಡಿದ್ದೇವೆ. 


ಯಾವ ಧರ್ಮವನ್ನು ಕುರಿತು ನಮ್ಮ ಹಿರಿಯರು, ನಮ್ಮ ನಾಡಿನ ಶಿವಶರಣರು 
“ದಯವೇ ಧರ್ಮದ ಮೂಲವಯ್ಯ” ಎಂದು ಹೇಳಿದರೋ ಅಂಥ ಧರ್ಮವನ್ನು ನಾವುಗಳು ಹಿಂಸಾಚಾರದ ವೇದಿಕೆಯನ್ನಾಗಿಸಿಕೊಂಡಿದ್ದೇವೆ. ದೇಶವನ್ನು ಧರ್ಮದ ಹೆಸರಿನಲ್ಲಿ 

ಕೊಲ್ಲು, ಕಡಿ, ಹೊಡಿ, ಬಡಿಗಳ ಬಲಿಪೀಠವಾಗಿಸಿದ್ದೇವೆ. ಅಕ್ಷರಶಃ ಧರ್ಮವಿದು ಈಗ ಈ ದೇಶದಲ್ಲಿ ದಯೆಯ ಮೂಲವಾಗದೆ ಅದು ಭಯದ ಮೂಲವಾಗಿದೆ. 


೨. ಯಾವ ನಮ್ಮ ದೇಶದಲ್ಲಿ ನಮ್ಮ ಹಿರಿಯರು “ಕಾಯಕವೇ ಕೈಲಾಸ” ಎಂದು ಹೇಳಿದರೋ 
ಅದೇ ಈ ನಮ್ಮ ದೇಶದಲ್ಲಿ ಈಗ ಕಾಯಕವನ್ನೇ ಕೈಲಾಸಕ್ಕೆ ಕಳುಹಿಸಿಬಿಡುವ ವ್ಯವಸ್ಥೆ ನಿರ್ಮಾಣವಾಗಿದೆ. ಈವಾಗ ಈ ದೇಶದಲ್ಲಿ ಕಾಯಕ ಕೈಲಾಸವಾಗಲಿಲ್ಲ. ಈಗ ಈ ದೇಶದಲ್ಲಿ ಕಾಯಕ ಕೈಲಾಸವಾಸಿಯಾಗಿದೆ. 
ಅದು ದಿವಂಗತವಾಗಿದೆ; ಮತ್ತದು ಅಸ್ತಂಗತವಾಗುತ್ತಲಿದೆ. 


೩. ದೇಶದಲ್ಲಿ ಪರಿಶ್ರಮ ಸಂಸ್ಕೃತಿ ಹೊರಟುಹೋಗುತ್ತಲಿದೆ. ಪುಕ್ಕಟೆ ಸಂಸ್ಕೃತಿಯದು ಉಚ್ಚ್ರಾಯ ಮತ್ತು ಉತ್ತುಂಗ ಸ್ಥಿತಿಯಲ್ಲಿದೆ. ದಿನೇ ದಿನೇ ಜನಗಳನ್ನು ಕಾಮಚೋರ್‌ರನ್ನಾಗಿಬಿಟ್ಟು ಪುಕ್ಕಟೆ ಸಂಸ್ಕೃತಿಯನ್ನು ಪುಸಲಾಯಿಸಿಕೊಂಡಿದ್ದೇವೆ. “ಅದು ಉಚಿತ”, “ಇದು ಉಚಿತ” ಎಂದು ಹೇಳುತ್ತ ಜನಗಳಲ್ಲಿನ “ಕರ್ತುಂ” ಸಾಮರ್ಥ್ಯವನ್ನು ಕಳೆದುಹಾಕುತ್ತಿದ್ದೇವೆ. 
ದೇಶದ ಜನಗಳನ್ನು ಶ್ರಮಸಂಸ್ಕೃತಿಯಿಂದ ವಂಚಿತರನ್ನಾಗಿಸಿಬಿಟ್ಟು ಅವರನ್ನು ಭಿಕ್ಷುಕರನ್ನಾಗಿಸುತ್ತಿದ್ದೇವೆ.  ಅವತ್ತು ಸ್ವಾತಂತ್ರ್ಯಹೋರಾಟಗಾರರು ನಮ್ಮ, ನಿಮ್ಮಗಳಿಗೆ “ಆರಾಮ್ ಹರಾಮ್ ಹೈ” ಎಂದು ಹೇಳಿದ್ದರು.
ಈಗ ದೇಶದಲ್ಲಿ ಅದಕ್ಕೆಲ್ಲ ತದ್ವಿರುದ್ಧ. ಈಗ “ಹರಾಮ್ ಆರಾಮ್ ಹೈ” ಆಗಿಬಿಟ್ಟಿದೆ. 


೪. ಇಡೀ ದೇಶವನ್ನು ಮೀಸಲಾತಿ ಮತ್ತು ವಸೂಲಾತಿಗಳಿಂದ ಕಟ್ಟಿಹಾಕಿದ್ದೇವೆ. 
ಜನಗಳನ್ನು ಅವರುಗಳ ಸ್ವಂತ ಕಾಲುಗಳ ಮೇಲೆ ನಿಲ್ಲಲಿಕ್ಕೆ ಬಿಡುತ್ತಿಲ್ಲ. ಜನಗಳನ್ನು ಮಾನಸಿಕವಾಗಿ ದಿವ್ಯಾಂಗರನ್ನಾಗಿಸುತ್ತಿದ್ದೇವೆ. ಜನಗಳು ಸ್ವಾಭಿಮಾನದಿಂದ ಬದುಕುವುದಕ್ಕೆ ಬಿಡುತ್ತಲೇ ಇಲ್ಲ. 


೫. ದೇಶದಲ್ಲಿ ರಾಷ್ಟ್ರಕಾರಣವು ದಿನೇ ದಿನೇ ಕಣ್ಮರೆಯಾಗುತ್ತಿದ್ದು ಎಲ್ಲವನ್ನೂ ಮತ್ತು ಎಲ್ಲರನ್ನೂ ರಾಜಕಾರಣವು ಆವರಿಸಿಕೊಂಡುಬಿಟ್ಟಿದೆ. 


೬. ಇವತ್ತು ದುಡ್ಡಿಲ್ಲದವನು ರಾಜಕೀಯಕ್ಕೆ ಬರುವ ಹಾಗೆ ಇಲ್ಲವೇ ಇಲ್ಲ; ದುಡ್ಡಿಲ್ಲದವನಿಗೆ ದೇಶದ ನಾಯಕತ್ವದ ಹಕ್ಕಿಲ್ಲ ಎಂಬಂತಾಗಿಬಿಟ್ಟಿದೆ. 
ಅಂದು ಬಸವಣ್ಣನವರು 
“ಉಳ್ಳವರು ಶಿವಾಲಯವ ಮಾಡುವರು. ನಾನೇನು ಮಾಡಲಿ ಬಡವನಯ್ಯ?” ಅಂದರು. 
ಈವಾಗ “ಉಳ್ಳವರು ರಾಜಕಾರಣವ ಮಾಡುವರು; ಉಳ್ಳವರು ಶಾಸಕ, ಸಂಸದರು ಆಗುವರು; ಉಳ್ಳವರು ಮಂತ್ರಿ, ಮುಖ್ಯಮಂತ್ರಿ ಆಗುವರು. ನಾನೇನು ಮಾಡಲಿ, ನಾನೇನು ಆಗಲಿ ಬಡವನಯ್ಯ?” - ಎಂದು 

ಈ ದೇಶದ ಆಮ್ ಆದ್ಮೀ, ಈ ದೇಶದ ಜನಸಾಮಾನ್ಯ, ಈ ದೇಶದ ಸಾಮಾನ್ಯ ನಾಗರಿಕ ಹೇಳುವಂತಾಗಿದೆ. 


೭. ಈಗ ದೇಶದ ತುಂಬೆಲ್ಲ ದುಡ್ಡಿನದೇ ಹವಾ ಮತ್ತು ದುಡ್ಡಿನದೇ ದರ್ಬಾರು. 

ದುಡ್ಡು, ದುಡ್ಡು, ದುಡ್ಡು ಎಲ್ಲರ ಬಾಯಲ್ಲೂ ದುಡ್ಡಿನದೇ ಮಾತು!! ದುಡ್ಡಿದ್ದವರೇ ಇವತ್ತು ಅಧಿಕಾರಕ್ಕೆ ಬರುತ್ತಾರೆ ಮತ್ತು ಅವರೇ ಏನಕೇನ ಪ್ರಕಾರೇಣ ಅಧಿಕಾರಗ್ರಹಣ ಮಾಡುತ್ತಾರೆ. 

ಈ ದೇಶದಲ್ಲಿ “ದುಡ್ಡೇ ದೊಡ್ಡಪ್ಪ” ಎಂಬ ಸಂಸ್ಕೃತಿ ಇನ್ನಷ್ಟು, ಮತ್ತಷ್ಟು ತೇಜಸ್ವಿಯಾಗಿ 
ಮತ್ತು ರಭಸವಾಗಿ ಬೆಳೆಯುತ್ತಲಿದೆ. 


೮. ಈ ದೇಶದಲ್ಲಿ ಚುನಾವಣೆ ಎಂದರೆ ದೊಡ್ಡ ಮಟ್ಟದಲ್ಲಿ 
ಹಣದ ಚಲಾವಣೆ ಎಂದು ಸಾಬೀತಾಗಿಬಿಟ್ಟಿದೆ.


೯. ಈ ದೇಶದಲ್ಲಿ ಕೆಲವರಿಗೆ ಗಾಳಿಹಾಕಲಾಗುತ್ತಿದೆ. ಇನ್ನು ಕೆಲವರಿಗೆ ಅವರಿಗೆ ಗೊತ್ತಿಲ್ಲದ ಹಾಗೆ ಗಾಳಹಾಕಲಾಗುತ್ತಿದೆ. 

೧೦. ದೇಶದ ತುಂಬೆಲ್ಲ ಕುಟುಂಬ ರಾಜಕಾರಣದ್ದೇ ಮೇಲುಗೈ. ಪರಿವಾರ ರಾಜಕಾರಣದಿಂದ ಹೊರಗೆ ಬರುವುದು ಈ ದೇಶಕ್ಕೆ ಕಷ್ಟವಾಗತೊಡಗಿದೆ. ಇದು ಕಾರಣ, ಈ ದೇಶದಲ್ಲಿ ಅಪ್ಪ, ಮಗ, ಮೊಮ್ಮಕ್ಕಳನ್ನು ಸಹಿಸಿಕೊಂಡು ಇರಲೇಬೇಕಾದ ಪರಿಸ್ಥಿತಿ ಇದೆ. 
ಅಂದು ದೇಶದ ಮೇಲೆ ರಾಜಮನೆತನಗಳ ಒಡೆತನವಿತ್ತು. 
ಈವಾಗ ರಾಜಕಾರಣಿಗಳ ಮನೆತನಗಳ ಒಡೆತನವಿದೆ. 


೧೧. ಅವತ್ತು ನಮ್ಮ ಸ್ವಾತಂತ್ರ್ಯಹೋರಾಟಗಾರರು ಜನಗಳಿಗೆ ಮತ್ತು ಗುಲಾಮಗಿರಿಗೆ “ಗುಲಾಮೀ ಹಟಾವೋ” ಎಂದು ಹೇಳಿಕೊಂಡಿದ್ದರು. ಆದರೆ ಸದ್ಯದಲ್ಲಿ ದೇಶದಲ್ಲಿ “ಗುಲಾಮೀ ಹಟಾವೋ” ಆಂದೋಲನಕ್ಕಿಂತ “ಗುಲಾಮೀ ಬಚಾವೋ” ಆಂದೋಲನವೇ ಹೆಚ್ಚು ಹೆಚ್ಚು ಸದ್ದುಮಾಡಿಕೊಂಡಿದೆ.

 
೧೨. ದೇಶವನ್ನು ಮತ್ತೆ ಮತ್ತೆ ಕೆಲವೇ ಕೆಲವು ಕುಟುಂಬಗಳ ಗುಲಾಮಗಿರಿಗೆ ತಳ್ಳುವ ಯತ್ನ, ಪ್ರಯತ್ನ ನಿರಂತರವಾಗಿ ನಡೆದುಕೊಂಡಿದೆ. 


೧೩. ಜನಗಳನ್ನು “ಬಕರಾ” ಆಗಿಸಲು ಅದೇನೇನು “ನಕರಾ” ಬೇಕೋ ಅದನ್ನೆಲ್ಲ ಮಾಡಲಾಗುತ್ತಿದೆ. 


೧೪. ದೇಶದ ಯಾವುದೇ ಮೂಲೆಗೂ ಹೋದರೂ ಸಹ ಲಂಚಾಸುರ, ಭ್ರಷ್ಟಾಸುರರದೇ ಉಗ್ರತಾಂಡವ!! 
ಈ ಲಂಚಾಸುರ, ಭ್ರಷ್ಟಾಸುರರು ಅವತ್ತಿನ ಆ ಕೃತಯುಗ, ತ್ರೇತಾಯುಗ, ದ್ವಾಪರಯುಗಗಳಲ್ಲಿ ಕುಖ್ಯಾತರಾಗಿದ್ದ ಎಲ್ಲ ಘಟಾನುಘಟಿ ಅಸುರರನ್ನು ಮೀರಿಸಿಬಿಟ್ಟಿದ್ದಾರೆ. ಲಂಚಾಸುರ, ಭ್ರಷ್ಟಾಸುರರು ಯಾವೊಂದೂ ಬಂಧ, ನಿರ್ಬಂಧವಿಲ್ಲದೆ ದಿನೇ ದಿನೇ ತಮ್ಮ ಕಬಂಧ ಬಾಹುಗಳನ್ನು ಚಾಚುತ್ತಲೇ ಇದ್ದಾರೆ. 
ಅದೇನಕ್ಕೆ ನಾವು ಈ ಮಾತನ್ನು ಹೇಳುತ್ತಿದ್ದೇವೆ ಎಂದರೆ, 
ಈ ದೇಶದಲ್ಲಿ ವಯೋವೃದ್ಧರು, ವಿಧವೆಯರು, ಬಡಕಲಾವಿದರು ತಮಗೆ ಸಿಕ್ಕುವ ಅಲ್ಪ, ಸ್ವಲ್ಪ ಮಾಸಾಶನದಲ್ಲೂ ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. 


೧೫. ಅವತ್ತೊಂದು ಕಾಲದಲ್ಲಿ “ಈಶಾವಾಸ್ಯಮಿದಂ ಸರ್ವಮ್” ಎಂದು ಹೇಳುತ್ತಿದ್ದ ಜನಗಳು 
ಈಗ “ಲಂಚಾವಾಸ್ಯಮಿದಂ ಸರ್ವಮ್” ಎಂದು ಹೇಳಬೇಕಾದ ಪರಿಸ್ಥಿತಿ ಇದೆ. 


೧೬. ಅವತ್ತು ಕನ್ನಂಬಾಡಿಯನ್ನು ಕಟ್ಟುತ್ತಿದ್ದರು. ಈಗ ಕನ್ನಂಬಾಡಿಯನ್ನೇ ನುಂಗಿಹಾಕುತ್ತಿದ್ದಾರೆ. 
ಸದ್ಯ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕೊಠಿಡಾದ ಕರಮ್ ನದಿಗೆ ಕಟ್ಟಲಾದ ಆಣೆಕಟ್ಟು ಸೋರಿಹೋಗಿ ಸಾವಿರಾರು ಹಳ್ಳಿಗಳು ಜಲಮಯವಾಗಿಬಿಟ್ಟಿವೆ. ಆಗುತ್ತಿರುವ ಈ ಎಲ್ಲ ಅನಾಹುತಗಳಿಗೆ ಭ್ರಷ್ಟಾಚಾರ ಮತ್ತು ಭ್ರಷ್ಟಾಸುರನೇ ಕಾರಣ. 


೧೭. ಇನ್ನು ಈ ನಮ್ಮ ದೇಶದ ಮಾಧ್ಯಮಗಳೋ? 
ಅವುಗಳನ್ನು ಯಾರೂ ಹಿಡಿಯುವಂತಿಲ್ಲ ಮತ್ತು ಅವುಗಳನ್ನು ಯಾರೂ ಕೇಳುವಂತಿಲ್ಲ. ಅವು ಬೆಂಕಿಯನ್ನು ಆರಿಸುವುದಕ್ಕಿಂತ ಬೆಂಕಿಯನ್ನು ಹಚ್ಚುವ ಕೆಲಸವನ್ನೇ ಹೆಚ್ಚು ಹೆಚ್ಚಾಗಿ ಮಾಡುತ್ತಿವೆ. ಅವು ಮನಸ್ಸು ಮನಸ್ಸುಗಳನ್ನು ಒಡೆಯುವ ಕೆಲಸದಲ್ಲಿ “ಅಗ್ರಗಾಮಿ” ಧೋರಣೆಯನ್ನು ಹೊಂದಿವೆ. 
ಅವತ್ತು ನಮ್ಮ ದೇಶದಲ್ಲಿ ತ್ರಿಲೋಕಸಂಚಾರಿಯಾದ ನಾರದರನ್ನು “ಕಲಹಪ್ರಿಯ” ಎಂದು ಕರೆಯಲಾಗುತ್ತಿತ್ತು. ಈಗ ನಮ್ಮ ಮಾಧ್ಯಮಗಳು ಬಹಳೇ ಬಹಳಷ್ಟು ಮುಂದುವರಿದುಬಿಟ್ಟು ಆ ನಮ್ಮ ನಾರದರನ್ನೇ ಮಾಜಿಯಾಗಿಸಿಬಿಟ್ಟಿವೆ. 
ತಾವು ಪ್ರಸಾರಮಾಡುವ ವರದಿ, ವಿವರಗಳಿಂದ ಜನಗಳ ಮೇಲೆ ಅದೇನು ಪರಿಣಾಮವಾಗಬಹುದು, ಪರಿಣಾಮ ಏನಾಗಬಹುದು ಎಂಬುವುದನ್ನು ಅವು ಯೋಚಿಸುತ್ತಲೇ ಇಲ್ಲ. 
“ಬುದ್ಧಿಜೀವಿ” ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡ ಮಾಧ್ಯಮಗಳು ಶಾಂತಿ, ಸೌಹಾರ್ದಗಳ ಪ್ರಾಥಮಿಕ ಅರಿವು ಕೂಡ ಇಲ್ಲದ ಹಾಗೆ ಬೇಕಾಬಿಟ್ಟಿಯಾಗಿ ವರ್ತಿಸಿಕೊಂಡಿವೆ. ಸುದ್ದಿಮಾಧ್ಯಮಗಳು ಸ್ಫೋಟಕ ಸುದ್ದಿಗಳನ್ನು ಕೊಡುವ ಭರಾಟೆಯಲ್ಲಿ ಜನಗಳ ಮನಸ್ಸನ್ನು ಸ್ಫೋಟಿಸುತ್ತಿವೆ. 


೧೮. ಇತ್ತೀಚಿನ ದಿನಗಳಲ್ಲಿ ನಮ್ಮಗಳ ಪತ್ರಿಕೆ, ದಿನಪತ್ರಿಕೆಗಳಲ್ಲಿ ಸುದ್ದಿಗಳಿಗಿಂತ ಜಾಹೀರಾತುಗಳೇ ಜಾಸ್ತಿಯಾಗಿಬಿಟ್ಟಿವೆ. ಪತ್ರಿಕೆಗಳ ಮುಖಪುಟದಿಂದ ಮೊದಲುಮಾಡಿಕೊಂಡು ಕೊನೆಯ ಪುಟದವರೆಗೂ ಜಾಹೀರಾತುಗಳು ವಿಜೃಂಭಿಸಿಕೊಂಡಿರುತ್ತವೆ. 
ದಿನನಿತ್ಯವೂ ಪತ್ರಿಕೆಗಳ ಮುಖಪುಟದಲ್ಲೇ ಅತ್ಯಾಚಾರ, ಅಪಘಾತ, ದಂಗೆ, ಗಲಭೆ, ಗಲಾಟೆ, ಕೊಲೆ, ಸುಲಿಗೆಗಳ ಬರ್ಬರ ಸುದ್ದಿಗಳು. 

ಬೆಳಿಗ್ಗೆ ಬೆಳಿಗ್ಗೆ ಪತ್ರಿಕೆಗಳನ್ನು ಕೈಗತ್ತಿಕೊಂಡರೆ ದಿನದ ತುಂಬೆಲ್ಲ ಮನಸ್ಸಿನ ತುಂಬ ಕಹಿ. 


೧೯. ಅವತ್ತು ಆ ನಮ್ಮ ಸ್ವಾತಂತ್ರ್ಯಹೋರಾಟಗಾರರು “ಫ್ರೀಡಮ್ ಫೈಟರ‍್ಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈವಾಗ ನಾವು, ನೀವುಗಳು “ಪಾವರ್ ಹಂಟರ‍್ಸ್” ಎಂಬ ಕುಖ್ಯಾತಿಗೆ ಪಾತ್ರರಾಗಿದ್ದೇವೆ. 


೨೦. ದೇಶದಲ್ಲಿ “ಅಪರಾಧೀ ರಾಜಕಾರಣ” ಪರ್ವ ಶುರುವಾಗಿದೆ ಮತ್ತು ದಿನೇ ದಿನೇ ರಾಜಕಾರಣದ ಅಪರಾಧೀಕರಣವಾಗುತ್ತಲಿದೆ. 


೨೧. ಈಗ ರಾಷ್ಟ್ರಕಾರಣಕ್ಕಿಂತ ರಾಜಕಾರಣವೇ ಎಲ್ಲವನ್ನೂ ಮತ್ತು ಎಲ್ಲರನ್ನೂ “ಸ್ವಾಹಾ”, “ಸ್ವಧಾ” ಮಾಡಿಕೊಂಡಿದೆ. ದೇಶದ ಎಲ್ಲ ಸನಾತನ ಆದರ್ಶ, ಮೌಲ್ಯಗಳನ್ನು ಹೋಮಮಾಡಿಕೊಂಡಿದೆ.


೨೨. ಈ ದೇಶದಲ್ಲಿ ಈಗ ಸನ್ಯಾಸವು ಕೂಡ ಪೂರ್ಣಪ್ರಮಾಣದ ಸನ್ಯಾಸವಾಗಿ ಉಳಿದಿಲ್ಲ. ಕಾವಿ ಧರಿಸಿದ ಸನ್ಯಾಸಿಗಳಿಗೂ ಕೂಡ ಈಗ ಸನ್ಯಾಸಕ್ಕೆ ಪೂರ್ಣಪ್ರಮಾಣದ ನ್ಯಾಯವನ್ನು ದೊರಕಿಸಿಕೊಡುವುದಕ್ಕೆ ಆಗುತ್ತಿಲ್ಲ. ಪ್ರಚಾರದಿಂದ ದೂರ ಇರಬೇಕಾದ ಸನ್ಯಾಸಿಗಳಿಗೂ ಕೂಡ ಈಗ ವಿಪರೀತದ ಪ್ರಚಾರಮೋಹ ಬೆಳೆದಿದೆ. ಎಲ್ಲರೂ ಮಾಧ್ಯಮಕ್ಕೆ ಬರಬೇಕು ಎನ್ನುತ್ತಾರೆ ಮತ್ತು ಎಲ್ಲರೂ ಮಾಧ್ಯಮಗಳಲ್ಲಿ ರಾರಾಜಿಸಬೇಕೆನ್ನುತ್ತಾರೆ.  


೨೩. ಪ್ರಮುಖವಾಗಿ ನಮ್ಮ ದೇಶದ ನೈತಿಕ ಶಕ್ತಿಕೇಂದ್ರಗಳಾದ ಮಠ, ಮಾನ್ಯಗಳು ಈಗ ಪಕ್ಷ, ಜನ, ಜನಾಂಗ, ಸಮುದಾಯ ಮತ್ತು ಸಮುದಾಯದ ನಾಯಕನ ವಕ್ತಾರವಾಗಿಬಿಟ್ಟಿವೆ. 


೨೪. ಇವತ್ತಿನ ದಿನಮಾನಗಳಲ್ಲಿ “ಸಮಾಜಮುಖಿ” ಕಾರ್ಯಗಳು ಗೌಣವಾಗಿವೆ. “ಸಮುದಾಯಮುಖಿ” ಕಾರ್ಯಗಳು ಮುಂಚೂಣಿಯಲ್ಲಿವೆ. “ಸಮಾಜ ದೇವೋ ಭವ” ಎಂಬ ಮಾತು ಈಗ ಮಾಜಿಯಾಗಿದೆ. “ಸಮುದಾಯ ದೇವೋ ಭವ” ಎಂಬ ಮಾತು ಈಗ ಹಾಲಿಯಾಗಿದೆ.  ಸಮಾಜದ ಹಿತಕ್ಕಿಂತ ಸಮುದಾಯದ ಹಿತವೇ ಮುಖ್ಯ ಎಂದು ಎಲ್ಲರೂ ಹೇಳಿಕೊಂಡಿದ್ದಾರೆ. 


೨೫. ಸಮುದಾಯದ ಮತ್ತು ಜಾತಿ, ಉಪಜಾತಿಗಳ ಶಕ್ತಿಪ್ರದರ್ಶನಕ್ಕಾಗಿ ಸಭೆ, ಸಮಾರಂಭ, ಸಮಾವೇಶಗಳು ನಡೆಯುತ್ತಿವೆ. 


೨೬. ಅಷ್ಟು ಮಾತ್ರವಲ್ಲ, ಸಮುದಾಯದ ನಾಯಕ ಏನು ಮಾಡಿದರೂ ಸರಿ. ಅವನದು ೧೦೦ಕ್ಕೆ ನೂರು ತಪ್ಪಿದ್ದರೂ ಸಮುದಾಯಗಳು ಆತನ ಪರವಾಗಿ ನಿಲ್ಲುತ್ತಿವೆ. ಆತ ಏನು ಮಾತನಾಡಿದರೂ ಅದು “ಶಂಖದಿಂದ ಬಂದದ್ದು ತೀರ್ಥ” ಎನ್ನುವ ಲೆಕ್ಕಕ್ಕೆ ಆತನ ಮಾತಿಗೆ ಮತ್ತು ಆತನ ನಿಲುವಿಗೆ ಪೂರಕವಾಗಿ ನಿಂತುಕೊಳ್ಳುತ್ತವೆ. 


೨೭. ಈ ದೇಶದ ರಾಜಕಾರಣಿಗಳ ನಾಲಿಗೆಗಳಂತೂ ಜಾರುಬಂಡೆಗಳಾಗಿಬಿಟ್ಟಿವೆ. ಅವರ ನಾಲಿಗೆಯಲ್ಲಿ ಒಳ್ಳೆಯ ಮಾತುಗಳು ಬರುತ್ತಲೇ ಇಲ್ಲ. ಅವರ ನಾಲಿಗೆಗಳು ಕೊಚ್ಚೆಯಾಗಿಬಿಟ್ಟಿವೆ, ಕಸದ ತಿಪ್ಪೆಯಾಗಿಬಿಟ್ಟಿವೆ. ಅವರು ಮಾತನಾಡಿದರೆ ಸಾಕು, ಕೊಳಕು, ಕೆಡುಕು ಎನ್ನುವಂತಾಗಿದೆ.


೨೮. ಈ ದೇಶದಲ್ಲಿ “ಸರ್ವೇ ಜನಾಃ ಸುಖಿನೋ ಭವಂತು”, “ಲೋಕಾಃ ಸಮಸ್ತಾಃ ಸುಖಿನೋ ಭವಂತು” ಎಂಬ ಮಾತುಗಳು ಈಗ “ಗತಾಸು” ಆಗಿವೆ. 


೨೯. ದೇಶದಲ್ಲಿ ಎಲ್ಲವೂ ವ್ಯಾಪಾರವಾಗಿಬಿಟ್ಟಿದೆ. ಸರ್ವಿಸ್ ಮೈಂಡ್‌ಗಿಂತ “ಬಿಜಿನೆಸ್ ಮೈಂಡ್” ಹೆಚ್ಚಾಗಿದೆ. ಎಲ್ಲ ವೃತ್ತಿಗಳೂ “ಬಿಜಿನೆಸ್” ಆಗಿಬಿಟ್ಟಿವೆ. ವೈದ್ಯರಿಂದ ಮೊದಲುಮಾಡಿಕೊಂಡು ಭವರೋಗವೈದ್ಯರವರೆಗೆ ಎಲ್ಲರೂ ವ್ಯಾವಹಾರಿಕರಾಗಿದ್ದಾರೆ. 


೩೦. ಸ್ನೇಹ, ಸೌಹಾರ್ದ, ಸಂಬಂಧಗಳನ್ನು ಕೂಡ ವ್ಯಾಪಾರವಾಗಿಸಲಾಗಿದೆ. 
ಇಡೀ ದೇಶವನ್ನು ವೃತ್ತಿಭೇದವಿಲ್ಲದೆ ವ್ಯಾಪಾರೀಕರಣದ ವೇದಿಕೆಯನ್ನಾಗಿಸಲಾಗಿದೆ. 


೩೧. ಈ ದೇಶದಲ್ಲಿ ಜನಗಳು ಈಗ ನ್ಯಾಯಕ್ಕೆ “ಸಾಥ್” ಕೊಡಲು ಕೂಡ ಹಿಂದೇಟುಹಾಕುವಂತಾಗಿದೆ. 
ಈ ದೇಶದ ಜನಗಳು ಒಳ್ಳೆಯವರ ಪರವಾಗಿ “ಸಾಕ್ಷಿ” ಹೇಳಲು ಅಂಜುವಂತಾಗಿದೆ. 


೩೨. ಯಾರನ್ನೇ ಕೇಳಿ, “ಸಿಸ್ಟಮ್ಮೇ ಹಾಗಿದೆ. ಏನು ಮಾಡುವುದು?” ಎನ್ನುತ್ತಾರೆ. 


ಈ ಮೊದಲು ಸನ್ನಿವೇಶದ ಶಿಶುಗಳಾಗಿದ್ದ ನಾವುಗಳು ಈಗ ಸಿಸ್ಟಮ್‌ನ ಶಿಶುಗಳಾಗಿಬಿಟ್ಟಿದ್ದೇವೆ. 
ಇರಲಿ ಬಿಡಿ. ಈಗ ಇದಿಷ್ಟು ಸಾಕು. ಇದೊಂದು ಮುಗಿಯದ ಕಥೆ! 
ಇಂದೊಂದು ಪೂರ್ಣವಿರಾಮವಿಲ್ಲದ ವ್ಯಥೆ!! 


ಕೊನೆಯಲ್ಲಿ ಇನ್ನೊಂದು ಮಾತು. 
76ನೆಯ ಸ್ವಾತಂತ್ರ್ಯೋತ್ಸವದ ದಿನ ದೆಹಲಿಯ ಕೆಂಪುಕೋಟೆಯ ಮೇಲೆ ನಿಂತುಕೊಂಡು ಈ ದೇಶದ ಪ್ರಧಾನಿಗೆ “ಗಂದಗೀ ಸೇ ನಫರತ್ ಕರೋ” - ಗಲೀಜನ್ನು, ಕೊಳಕನ್ನು ದ್ವೇಷಿಸಿ - ಆ ರೀತಿಯ ಸ್ವಭಾವವನ್ನು ಬೆಳೆಯಿಸಿಕೊಳ್ಳಿ ಎಂದು ಹೇಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ. 
ವಸ್ತುಸ್ಥಿತಿ ಹೀಗಿರುವಾಗ ನಾವು, ನೀವುಗಳು ಅದು ಹೇಗೆ ನಮ್ಮಗಳ ಜನ್ಮಭೂಮಿಯನ್ನು 
“ಸ್ವರ್ಗಾದಪಿ ಗರೀಯಸಿ” ಎಂದು ಹೇಳುವುದು? 
ಅವತ್ತೇನೋ ಆ ನಮ್ಮ ಶ್ರೀರಾಮಚಂದ್ರ ದೊಡ್ಡದಾಗಿ “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ” ಎಂದು ಹೇಳಿದ. ಆತನ ಕಾಲಕ್ಕೇನೋ, ಆ ಪುಣ್ಯಾತ್ಮನ ಕಾಲಕ್ಕೇನೋ ಆ ಮಾತು ಸರಿ, 
ಈಗ ನಾವು, ನೀವುಗಳು ಹಾಗೆಂದು ಹೇಳುವುದು ಹೇಗೆ? ಎಂಬ ಯೋಚನೆಯಾಗಿದೆ ನಮಗೆ. 
ಅದೇನೇ ಇರಲಿ. ಅದೇನೇ ಹೋಗಲಿ!! 
ನಮ್ಮ ದೇಶ ನಾವು, ನೀವುಗಳು ಪೂರ್ಣಪ್ರಮಾಣದಲ್ಲಿ ಹತಾಶರಾಗುವಷ್ಟು ಇನ್ನೂ ಕೆಟ್ಟಿಲ್ಲ. 
ಅದೇನೇ ನೂರಾರು, ಸಾವಿರಾರು ಐಬುಗಳಿರಲಿ, ಏನಿದ್ದರೂ ನಮಗೆ ನಮ್ಮ ದೇಶವೇ ಚೆಂದ! 
ನಮಗೆ ನಮ್ಮ ದೇಶವೇ ಅಂದ!! ನಮ್ಮ ದೇಶದಲ್ಲಿಯೇ ನಮಗೆ ಆನಂದ!!
ಬೇರೆ ಕೆಲವು ನಮ್ಮ ಅಕ್ಕಪಕ್ಕದ ರಾಷ್ಟ್ರಗಳನ್ನು ನೋಡಿದರೆ ನಮ್ಮ ದೇಶ ಬರೀ ಸಾವಿರಪಟ್ಟು ಮಾತ್ರವಲ್ಲ, ಸಾವಿರಾರುಪಟ್ಟು ವಾಸಿ. ನಮ್ಮ ಅಕ್ಕಪಕ್ಕದ ಬಹುತೇಕ ದೇಶಗಳು ಬೌದ್ಧಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ದಿವಾಳಿ ಎದ್ದುಹೋಗಿವೆ. 
ನಮ್ಮ ದೇಶ ಒಂದಷ್ಟು ಲೋಪದೋಷಗಳ ಮಧ್ಯದಲ್ಲೂ 
ಅಮೇರಿಕೆ, ರಶಿಯಾದಂಥ ಬಲಿಷ್ಠ ಹಾಗೂ ಬಲಾಢ್ಯ ರಾಷ್ಟ್ರಗಳ ಹೆಗಲ ಮೇಲೆ ಕೈಹಾಕಿಕೊಂಡಿದೆ ಮತ್ತು ಅವುಗಳ ತಲೆಯ ಮೇಲೆ ಕೈ ಇಡುತ್ತ ಮುನ್ನಡೆದಿದೆ. 
ಯಾರು ಅದೇನೇ ಹೇಳಿದರೂ ಸರಿ, ನಮ್ಮ ದೇಶ ಈಗಲೂ “ಲಾಖೋಂ ಮೇ ಏಕ್”, “ಕರೋಡೋಂ ಮೇ ಏಕ್” ಎಂಬುವುದರಲ್ಲಿ ಎರಡು ಮಾತಿಲ್ಲ. 
ಏಕೆಂದರೆ, ಈ ದೇಶದ ಜನಗಳಲ್ಲಿ ಅಪಾರವಾದ ಸಹಿಷ್ಣುತೆ ಇದೆ. ಈ ದೇಶದ ಜನಗಳಲ್ಲಿ ಎಲ್ಲವನ್ನೂ ಭರಿಸಿಕೊಂಡುಹೋಗುವ ಮತ್ತು ವಹಿಸಿಕೊಂಡು, ನಿಭಾಯಿಸಿಕೊಂಡು ಹೋಗುವ ಸಾಮರ್ಥ್ಯವಿದೆ. 
ಆ ಭಗವಂತನ ಹಾಗೆ ನಮ್ಮ ದೇಶಕ್ಕೂ ಕೂಡ “ಯೋಗಕ್ಷೇಮಂ ವಹಾಮ್ಯಹಮ್” ಎಂದು ಹೇಳುವ ತಾಕತ್ತಿದೆ. ಅಥೊಂದು ಎದೆ ಮತ್ತು ಎದೆಗಾರಿಕೆ ಈ ದೇಶಕ್ಕಿದೆ ಮತ್ತು ಈ ದೇಶದ ಜನಗಳಿಗಿದೆ.
ನಾವು, ನೀವುಗಳು ಇನ್ನಷ್ಟು, ಮತ್ತಷ್ಟು ಜೋರಾಗಿ ಮನಸ್ಸು ಮಾಡಿದರೆ ನಮ್ಮ ದೇಶವನ್ನು 

ಎಲ್ಲ ವಿಧವಾದ ಲೋಪದೋಷಗಳಿಂದಲೂ ಮುಕ್ತ, ಮುಕ್ತವಾಗಿಸಿಬಿಟ್ಟು 
ನಮ್ಮ ಸ್ವಾತಂತ್ರ್ಯಹೋರಾಟಗಾರರ ಆತ್ಮಕ್ಕೆ ಶಾಂತಿಯನ್ನು ದೊರಕಿಸಿಕೊಡಬಹುದು 
ಮತ್ತು ನಮ್ಮ ದಿವಂಗತ ಸ್ವಾತಂತ್ರ್ಯಹೋರಾಟಗಾರರ ಆತ್ಮಗಳು 
“ಭಲೇ, ಭೇಷ್” ಎಂದು ಹೇಳುವಂತೆ ಮಾಡಬಹುದು.  

ಡಾ. ಶಿವಾನಂದ ಶಿವಾಚಾರ್ಯರು 

ಹಿರೇಮಠ, ತುಮಕೂರು




Comments

Popular posts from this blog