Good Morning, Happy Monday
29th August 2022
@ TapOvanam, Hiremath, Tumkur


ನಮ್ಮ ನಿಮ್ಮೆಲ್ಲರ ವೀರಭದ್ರ
ಒಲಿದರೆ ಅವತಾರ; ಮುನಿದರೆ ಅವಾಂತರ!!


ಭಾದ್ರಪದ ಮಾಸದ ಮೊದಲ ಮಂಗಳವಾರವು
ರಾಜ್ಯಾದ್ಯಂತ ಮತ್ತು ರಾಷ್ಟ್ರಾದ್ಯಂತ
“ವೀರಭದ್ರ ಜಯಂತಿ” ಎಂದು ಆಚರಿಸಲ್ಪಡುತ್ತಿದೆ.
ವೀರಭದ್ರ ನಿಗೂ ಮಂಗಳವಾರಕ್ಕೂ ಇರುವ ನಂಟು
ತುಂಬ ಹಳೆಯದು.
ಅದು ಇವತ್ತು ನಿನ್ನೆಯದಲ್ಲ ಮತ್ತು
ನಿನ್ನೆ ಮೊನ್ನೆಯದಲ್ಲ.
ಸುದೀರ್ಘ ಕಾಲದಿಂದ ಆ ಬಂಧ-ಸಂಬಂಧವದು
ಬೆಳೆದುಕೊಂಡು ಮತ್ತು ಉಳಿದುಕೊಂಡು ಬಂದಿದೆ.
ಉತ್ತರ ಕರ್ನಾಟಕದಲ್ಲಿ ಈಗಲೂ ಜನಗಳು
“ಮಂಗಳವಾರ ಈರಣ್ಣನ ವಾರ” ಎಂದು ಹೇಳುತ್ತಾರೆ.
ಯುವಕರು ವೀರಭಧ್ರನನ್ನು “ಯೂಥ್ ಐಕಾನ್” ಆಗಿ
ಸ್ವೀಕರಿಸಿರುವುದು ನಿಜಕ್ಕೂ ಅಭಿನಂದನೀಯ.
ಇದುವರೆಗೆ ಬಹುತೇಕ ವೀರಶೈವರ ಮನೆದೇವರಾಗಿದ್ದ
ವೀರಭದ್ರ, ಈಗ ಯುವಕರ ಮನೋದೇವರಾಗಿ
ವಿಜೃಂಭಿಸುತ್ತಿರುವುದು ಹೆಮ್ಮೆಪಡಬೇಕಾದ ಸಂಗತಿ;
ಮತ್ತಿದು ಸ್ವಾಗತಾರ್ಹ ಬೆಳವಣಿಗೆ!!
ವೀರಭದ್ರ ಮನೆದೇವರಾದರೆ ವರುಷಕ್ಕೊಮ್ಮೆ;
ಆತ ಮನೋದೇವರಾದರೆ ನಿಮಿಷಕ್ಕೊಮ್ಮೆ!!
ವೀರಭದ್ರ ಮನೆದೇವರಾದರೆ ವರುಷಕ್ಕೊಮ್ಮೆ
ಆತನ ದೇವಸ್ಥಾನಕ್ಕೆ ಹೋಗಿ ಹಣ್ಣು, ಕಾಯಿ ಕೊಟ್ಟು
ಹರಕೆ ತೀರಿಸಿಕೊಂಡು ಬರುತ್ತಾರೆ.
ಅದುವೇ ವೀರಭಧ್ರ ಮನೋದೇವರಾದರೆ
ಅನುಕ್ಷಣ, ಅನುದಿನ
ಆತ ಜನಗಳ ಮನೋಮಂದಿರದಲ್ಲಿ
ಸಂಚರಿಸಿಕೊಂಡಿರುತ್ತಾನೆ.
ವೀರಭದ್ರ ಮನೆದೇವರಾಗಿರುವುದರ
ಜೊತೆ ಜೊತೆಯಲ್ಲಿ ಮನೋದೇವರಾಗಬೇಕು.
ವೀರಭದ್ರ ಅಹರ್ನಿಶಿ ನಮಗೆ “ಸಾಥ್”
ಕೊಟ್ಟುಕೊಂಡಿರಬೇಕು.
ಬಹುತೇಕವೀರಶೈವ, ಲಿಂಗಾಯತರಿಗೆ
ವೀರಭದ್ರ ಮನೆದೇವರು.
ವೀರಭದ್ರ ಬಹುತೇಕರಿಗೆ
ವಂಶೀಯ, ಆನುವಂಶೀಯ.
ನಮ್ಮಗಳ ಮಧ್ಯದಲ್ಲಿರುವ ಬಹುತೇಕರು
ವೀರಭದ್ರನ ಒಕ್ಕಲು.
ಬಹುತೇಕರಿಗೆ ವೀರಭದ್ರ ಗೋತ್ರಪುರುಷ.
ವೀರಭದ್ರ, ವೀರಭದ್ರನೂ ಅಹುದು;
ಆತ ಈರಣ್ಣನೂ ಅಹುದು.
ಗ್ರಾಂಥಿಕ ಭಾಷೆಯಲ್ಲಿ ವೀರಭದ್ರ, ವೀರಭದ್ರನಾದರೆ
ಗ್ರಾಮ್ಯಭಾಷೆಯಲ್ಲಿ ಆತ ಈರಣ್ಣ!!
“ವೀರಭದ್ರನೇ ಬೇರೆ, ಈರಣ್ಣನೇ ಬೇರೆ” ಎಂದು ಹೇಳಲು
ಯಾರಾದರೂ ಶುರುಹಚ್ಚಿಕೊಂಡರೆ
ಸ್ವತಃ ವೀರಭದ್ರನೂ ಕೂಡ ಅದನ್ನು ಒಪ್ಪುವುದಿಲ್ಲ.
ವೀರಭದ್ರನ ಭಕ್ತರಂತೂ
ಒಪ್ಪುವ ಪ್ರಶ್ನೆಯೇ ಇಲ್ಲ.
ನಮ್ಮ ದೃಷ್ಟಿಯಲ್ಲಿ,
ವೀರಭದ್ರ ಎಂದರೆ ಯೌವನ.
ವೀರಭದ್ರ ಎಂದರೆ ಉತ್ಸಾಹ.
ವೀರಭದ್ರನೆಂದರೆ ಸಂಭ್ರಮ.
ವೀರಭದ್ರನೆಂದರೆ ಸಡಗರ.
ವೀರಭದ್ರ ಎಂದರೆ ಶಿಷ್ಟರಕ್ಷಣ
ಮತ್ತು ದುಷ್ಟಮರ್ದನ.
ವೀರಭದ್ರ ಎಂದರೆ ರೋಮಾಂಚನ.
ವೀರಭದ್ರ ಸತ್ತಂತಿಹರನು
ಬಡಿದೆಚ್ಚರಿಸುವ ಮಹಾರುದ್ರ!!
ವೀರಭದ್ರನಿಗೆ ಶಿವಗಣದಲ್ಲಿ
ಪ್ರಮುಖ ಸ್ಥಾನವಿದೆ.
ಆತ ಗಣವೂ ಅಹುದು;
ಆತ ಗಣಸೇನಾನಿಯೂ ಅಹುದು!!
ವೀರಭದ್ರ ಅಪ್ರತಿಮ ಮಾತೃಭಕ್ತ
ಮತ್ತು ಆತ ಅಪ್ರತಿಹತ ಪಿತೃಭಕ್ತ.
ಪಿತೃವಾಕ್ಯಪರಿಪಾಲನೆಗೆ ಬರೀ ರಾಮನಷ್ಟೇ ಅಲ್ಲ,
ವೀರಭದ್ರನು ಕೂಡ ಒಂದು ಬಹುದೊಡ್ಡ ಉದಾಹರಣೆ.
ಶ್ರೀರಾಮಚಂದ್ರ ಪಿತೃವಾಕ್ಯಪರಿಪಾಲನೆಗಾಗಿ
ಕಾಡಿಗೆ ಹೋದರೆ
ವೀರಭದ್ರ ತನ್ನ ತಂದೆ, ತಾಯಿಯ ಘನತೆ,
ಗೌರವದ ರಕ್ಷಣೆಗಾಗಿ ದಕ್ಷನಂಥ ಪಟ್ಟಭದ್ರ
ಹಿತಾಸಕ್ತಿಯೊಂದಿಗೆ ಹೋರಾಟಕ್ಕೆ ಇಳಿಯುತ್ತಾನೆ.
ಶಿವನ ಅವಹೇಳನೆಯನ್ನು
ಮಾಡುವುದಕ್ಕೆಂದೇ ಯಜ್ಞವನ್ನು ಹಮ್ಮಿಕೊಂಡಿದ್ದ
ದಕ್ಷ ಸ್ವತಃ ತನ್ನ ಮಗಳನ್ನು ಕೂಡ ಕಡೆಗಣಿಸುತ್ತಾನೆ.
ಅಳಿಯನನ್ನು ಬಿಡಿ;
ಮಗಳ ವಿಷಯದಲ್ಲಾದರೂ ಪಿತೃವಾತ್ಸಲ್ಯ ಬೇಡವೇ?
ವೀರಭದ್ರ ದಕ್ಷನ ಯಜ್ಞವನ್ನು ಚೆಂಡಾಡುತ್ತಾನೆ.
ದಕ್ಷನಿಗೆ ಆತ ಪಾಠಕಲಿಸುತ್ತಾನೆ.
ದಕ್ಷಯಜ್ಞದ ಕರ್ತೃ ದಕ್ಷನ ರುಂಡವನ್ನು
ಕತ್ತರಿಸಿಹಾಕಿದ ಮೇಲೆ ಮತ್ತೆ
ದಕ್ಷನ ರುಂಡವನ್ನು ಆಡಿನ ತಲೆಯ ಮೂಲಕ
“ರಿಪ್ಲೇಸ್’ ಮಾಡುವ ಮೂಲಕ
ವೀರಭದ್ರ ದಕ್ಷನಿಗೆ, ಹಿಂಬಾಲಕರಿಗೆ,
ಮತ್ತು ದಕ್ಷನ ಹಿಮ್ಮೇಳಕ್ಕೆ
ಅವರ “ಸ್ಥಾನಮಾನ” ಮತ್ತು ಅವರುಗಳ
“ಇತಿಮಿತಿ” ಏನೆಂದು ತೋರಿಸಿಕೊಡುತ್ತಾನೆ.
ಹಿಂದಿಯಲ್ಲಿ ಹೇಳುವುದಾದರೆ,
ವೀರಭದ್ರ ಅವರ “ಔಕಾತ್ ದಿಖಾತಾ ಹೈ” -
ಏನು ಎಂಬುವುದನ್ನು ಪರಿಚಯಿಸುತ್ತಾನೆ.
ದಕ್ಷನಿಗೆ ಬಹುಪಾಲು ದೇವತೆಗಳೆಲ್ಲ
ತನ್ನ ಅಳಿಯಂದಿರು!! “ಶಿವನೇನು ಮಹಾ?”
ಎಂಬ ಭಾವನೆ, ಗರ್ವ ಅವನಿಗೆ.
ಶಿವನ ವಿಷಯದಲ್ಲಿ ಆತನಿಗೆ
ವಿಪರೀತ ಅಸಡ್ಡೆ.
ಆತ ತನ್ನ ತಲೆ ಬಿಟ್ಟು ಹೋಗುವವರೆಗೆ,
ಆತ ತಲೆಬಿದ್ದು ಹೋಗುವವರೆಗೆ
ಆತ ಶಿವನನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ.
ದೇವಾಧಿದೇವತೆಗಳ ಬೆಂಬಲ ತನಗಿದೆ
ಎಂದು ಕೊಚ್ಚಿಕೊಳ್ಳುತ್ತಿದ್ದ
ದಕ್ಷನಂಥ ಪಟ್ಟಭದ್ರ ಹಿತಾಸಕ್ತಿಯನ್ನು
ವೀರಭದ್ರ ಪಲ್ಲಟಗೊಳಿಸುತ್ತಾನೆ.
ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ
ಸಮರ ಸಾರಿದ ವೀರಭದ್ರ ಶಿವದ್ರೋಹಿಗಳನ್ನು
ಶಾಸನ, ಅನುಶಾಸನದ ಅಡಿಯಲ್ಲಿ
ತಂದುನಿಲ್ಲಿಸುತ್ತಾನೆ.
ಸಿದ್ಧಾಂತ ಶಿಖಾಮಣಿಯಲ್ಲಿ ಒಂದು ಮಾತಿದೆ,
“ಶಿವನಿಂದಾಕರಂ ದೃಷ್ಟ್ವಾ
ಘಾತಯೇತ್ ಅಥವಾ ಶಪೇತ್|
ಅಥವಾ ತತ್ ಸ್ಥಾನಂ ಪರಿತ್ಯಜ್ಯ ಗಚ್ಛೇತ್||” -
ಶಿವನಿಂದಕರನ್ನು ಕಂಡರೆ ಸುಮ್ಮನೇ ಬಿಡಬಾರದು.
ಅವರನ್ನು ಚೆನ್ನಾಗಿ ದಂಡಿಸಬೇಕು.
ದಂಡಿಸುವ ಸಾಮರ್ಥ್ಯವಿಲ್ಲದೆ ಇದ್ದರೆ
ಶಿವನಿಂದೆಯನ್ನು ಕೇಳಿಸಿಕೊಳ್ಳದೆ
ಆ ಜಾಗವನ್ನು ಬಿಟ್ಟು
ದೂರ ಬಹುದೂರ ಹೋಗಬೇಕು” - ಎಂದು.
ಶಿವನಿಂದೆಯನ್ನು ಕೇಳಿಸಿಕೊಳ್ಳಲಾಗದೆ
“ಅಗ್ನಿಪ್ರವೇಶ” ಮಾಡುವ ಸತಿ
ಪರಮ ಸಾತ್ತ್ವಿಕಳು ಮತ್ತು ಅವಳು ಪತಿವ್ರತೆ.
ಶಿವನಿಂದೆಯನ್ನು ಕೇಳಿಸಿಕೊಳ್ಳಲಾಗದೆ
ಅವಳು ತನ್ನನ್ನೇ ತಾನು ಬಲಿದಾನವಾಗಿಸಿಕೊಳ್ಳುತ್ತಾಳೆ.
ಅವಳ ಮಾತೇ ಬೇರೆ!!
ವೀರಭದ್ರ ಹಾಗಲ್ಲ;
ವೀರಭದ್ರನದು ಶಿವನಿಂದಕರಿಗೆ
ಬಡಿದು ಬುದ್ಧಿಕಲಿಸುವ ಜಾಯಮಾನ.
ಶಿವನಿಂದಕರನ್ನು
ವೀರಭದ್ರ ಚೆನ್ನಾಗಿ ವಿಚಾರಿಸಿಕೊಳ್ಳುತ್ತಾನೆ.
ಅವರಿಗೆ ತಕ್ಕ ಶಾಸ್ತಿಮಾಡುತ್ತಾನೆ.
ವೀರಭದ್ರ,
ವೀರನೂ ಅಹುದು; ಆತ ಭದ್ರನೂ ಅಹುದು.
ವೀರಭದ್ರ ಒಲವಿನಲ್ಲಿ ವೀರನಾದರೆ
ಆತ ನಿಲುವಿನಲ್ಲಿ ಭದ್ರ!!
ವೀರಭದ್ರ ಹುಟ್ಟುಸಾಹಸಿ.
ಆತ ಹುಟ್ಟುವೀರ.
ವೀರಭದ್ರ ಶಿವನ ಕೋಪಮಾನಸಪುತ್ರ!!
ವೀರಭದ್ರ ಒಲಿದರೆ ಅವತಾರ;
ಆತ ಮುನಿದರೆ ಅವಾಂತರ!!
ವೀರಭದ್ರ ಭಕ್ತರಿಗೆ ಅವತಾರ;
ದಕ್ಷನಂಥ ಶಿವದ್ವೇಷಿಗಳಿಗೆ
ಆತ ಅಕ್ಷರಶಃ ಅವಾಂತರ!!
ವೀರಭದ್ರ ಒಲಿದರೆ ಸುಫಲಾಂ ಸುಜಲಾಮ್!!
ಆತ ಮುನಿದರೆ ಪ್ರಳಯಕಾಲ!!!
ಗಣಪತಿಯ ಹಾಗೆ ವೀರಭದ್ರನು ಕೂಡ
ನಮ್ಮಗಳಿಗೆ ಮಾತೃಭಕ್ತಿ
ಮತ್ತು ಪಿತೃಭಕ್ತಿಯ ಪಾಠಮಾಡುತ್ತಾನೆ.
ತಂದೆ, ತಾಯಿಗಿಂತ ಈ ಪ್ರಪಂಚದಲ್ಲಿ
ಯಾರೂ ದೊಡ್ಡವರಲ್ಲ.
ನಮ್ಮ ಮೊದಲ ಮರ್ಯಾದೆ,
ಮೊದಲ ಗೌರವ ತಂದೆ, ತಾಯಿಗೆ ಸಲ್ಲಬೇಕು -
ಇದು ವೀರಭದ್ರನ ಮನೋಗತ.
ಇದು ವೀರಭದ್ರ ಸಿದ್ಧಾಂತ.
“ಭಲೆರೇ, ಭಲೇ ಭಲೇ... ” ಇದು ವೀರಭದ್ರನ ಭಾಷೆ.
ವೀರಭದ್ರನ ವಾಣಿಯದು
ಸಾಮಾನ್ಯದ ವಾಣಿಯಲ್ಲ.
ಅದು ವೀರವಾಣಿ. ಅದು ಘೋಷವಾಣಿ;
ಅದು ಉದ್ಘೋಷವಾಣಿ.
ಎಂಥ ಜಡವ್ಯಕ್ತಿಯಾದರೂ ಸರಿ,
ವೀರಭದ್ರನ ವಾಣಿ ಕಿವಿಗೆ ಬೀಳುತ್ತಲೇ
ಉತ್ಸಾಹಗೊಳ್ಳುತ್ತಾನೆ.
ಆತನ ಮೈ, ಮನಸ್ಸುಗಳ ತುಂಬೆಲ್ಲ
ರೋಮಾಂಚನದ ಸಂಚಾರವಾಗುತ್ತದೆ.
ವೀರಭದ್ರ ಅದೇನೇ ಹೇಳಲಿ,
ಆತ ಅದನ್ನು
“ಏಕ್ ಮಾರ್ ದೋ ತುಕಡಾ”
ರೀತಿಯಲ್ಲಿ ಹೇಳುತ್ತಾನೆ.
ವೀರಭದ್ರ ಅಡಿ ಇಟ್ಟಲ್ಲಿ
ವೀರರಸದ ಸಂಚಾರವಾಗುತ್ತದೆ.
ವೀರಭದ್ರ ಅಡಿ ಇಟ್ಟರೆ ಸಾಕು,
ಅಲ್ಲಿ ವೀರಾವೇಶವು ಮೂರ್ತಗೊಳ್ಳುತ್ತದೆ.
ವೀರಭದ್ರನ ವೀರಾವೇಶಕ್ಕೆ
ಅದೆಂಥ ಅತಿರಥ, ಮಹಾರಥರಿದ್ದರೂ ಸರಿ,
ಬೆರಗಾಗುತ್ತಾರೆ, ಬೆನ್ನುಬಾಗುತ್ತಾರೆ.
ಭದ್ರಕಾಳಿ, ವೀರಭದ್ರನ ನೆಚ್ಚಿನ ಸತಿ.
ಆಕೆ ಶಿವಕೈಂಕರ್ಯದಲ್ಲಿ
ವೀರಭದ್ರನಿಗೆ “ಸಾಥ್” ಕೊಡುತ್ತಾಳೆ.
ಶಿವ ಕಂದರ್ಪಹರನಾದರೆ
ವೀರಭದ್ರ ದರ್ಪಹರ.
ಶಿವ ರುದ್ರನಾದರೆ ವೀರಭದ್ರ ರೌದ್ರ.
ಎಲ್ಲಕ್ಕೂ ಮಿಗಿಲಾಗಿ ವೀರಭದ್ರ ಎಂದರೆ
“ನೋ ಕಾಂಪ್ರೋಮೈಜ್” - No Compromise!!
ಮತ್ತು “ಫುಲ್ ಕಮಿಟ್‌ಮೆಂಟ್” -Full Commitment!!!
ವೀರಭದ್ರನ ಅನುಗ್ರಹವನ್ನು ಪಡೆಯಲು
ಆತನ “ನೋ ಕಾಂಪ್ರೋಮೈಜ್”
ಮತ್ತು “ಫುಲ್ ಕಮಿಟ್‌ಮೆಂಟ್” ಸಿದ್ಧಾಂತವನ್ನು
ನಾವುಗಳು ಕೂಡ ಅಳವಡಿಸಿಕೊಳ್ಳಬೇಕಾಗುತ್ತದೆ.
ವೀರಭದ್ರನ ಭಕ್ತರು
ಬರೀ ಕರ್ನಾಟಕದಲ್ಲಿ ಮಾತ್ರವಲ್ಲ,
ರಾಷ್ಟ್ರಾದ್ಯಂತ ಇದ್ದಾರೆ.
ಮಹಾರಾಷ್ಟ್ರ, ಆಂಧ್ರಪ್ರದೇಶ,
ತೆಲಂಗಾಣ, ತಮಿಳುನಾಡು, ಕೇರಳ,
ಗುಜರಾತ್, ಹಿಮಾಚಲ ಪ್ರದೇಶ
ಹಾಗೂ ಉತ್ತರ ಭಾರತದ ಹತ್ತು ಹಲವಾರು
ಪ್ರಾಂತ, ಪ್ರದೇಶಗಳಲ್ಲಿ ವೀರಭದ್ರನ ಭಕ್ತರಿದ್ದಾರೆ.
“ಯತ್ರ ಯೋಗೇಶ್ವರೋ ಕೃಷ್ಣಃ
ಯತ್ರ ಪಾರ್ಥೋ ಧನುರ್ಧರಃ,
ತತ್ರ ಶ್ರೀಃ ವಿಜಯಃ, ಭೂತಿಃ” -
ಎಂದು ಹೇಳುವ ಹಾಗೆ,
ಎಲ್ಲಿ ವೀರಭದ್ರನಿರುತ್ತಾನೋ
ಅಲ್ಲಿ ಶಿವಭಕ್ತಿ ಮತ್ತು ಶಿವಸಂಸ್ಕೃತಿಯ
ಸಂಗಮವಾಗುತ್ತದೆ.
ಅಲ್ಲಿ ಅಕಾರ, ಉಕಾರ, ಮಕಾರಗಳ
ಓಂಕಾರಮಯ ಪ್ರಣವಲೋಕ
ತೆರೆದುಕೊಳ್ಳುತ್ತದೆ;
ಅಲ್ಲಿ ಅಕಾರ, ಉಕಾರ, ಮಕಾರಗಳ
ನಾದಮಯ ಕುಂಭಮೇಲಾ ಆಗುತ್ತದೆ.
ಇದರಲ್ಲಿ ಎರಡು ಮಾತಿಲ್ಲ!!
ವೀರಭದ್ರ ಜಯಂತಿಯ ಸಂದರ್ಭದಲ್ಲಿ,
ನಾವೆಲ್ಲರೂ
ವೀರಭದ್ರನ ಸನ್ನಿಧಾನಕ್ಕೆ ತಲೆಬಾಗಿ,
ಆತನ ಶ್ರೀಚರಣಂಗಳಿಗೆ ಹಣೆಹಚ್ಚಿ
ನಮಸ್ಕರಿಸುವಾ.
ಆತನಿಗೆ ಜೈ ವೀರಭದ್ರ, ಶ್ರೀ ವೀರಭದ್ರ,
ನಮೋ ವೀರಭದ್ರ ಹೇಳುವಾ.
ಎಲ್ಲರಿಗೂ
ವೀರಭದ್ರ ಜಯಂತಿಯ ಶುಭಾಶಯಗಳು.


ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog

21st September 2023