Good Morning, Happy Saturday 20th August 2022 Look @ Bodhivruksha of Vijaya Karnataka Religious & Spiritual Paper "Amrutadhaare AnkaNa" Title of the Article: "MaLeya JotegoMdu Samvaada'' State Edition


 ಮಳೆಯ ಜೊತೆಗೊಂದು ಸಂವಾದ


“ಇದೇನು ಮಳೆ, 
ಈ ರೀತಿ ನೀನು “ಐ ಡೋಂಟ್ ಕೇರ್” ಮಾದರಿಯಲ್ಲಿ ಸುರಿಯುತ್ತಲಿದ್ದರೆ 
ನಾವುಗಳು ಸುಧಾರಿಸಿಕೊಳ್ಳುವುದು ಹೇಗೆ? 
“ಹುಯ್ಯೋ, ಹುಯ್ಯೋ ಮಳೆರಾಯ” ಎಂದರೆ 
“ಅಯ್ಯೋ ಅಯ್ಯೋ” ಎನ್ನುವ ಹಾಗೆ ನೀನು ಸುರಿಯತೊಡಗಿದರೆ 
ನಮ್ಮ ಗತಿ ಏನು? 
ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದರೆ ಹೇಗೆ?” ಎಂದು ಕೇಳಿದಾಗ -

ಇದು,  “ಅಥ ಶ್ರೀ ಮಳೆರಾಯ ಉವಾಚ - 

“ಈಗ ನಿಮಗೆ ಗೊತ್ತಾಗುತ್ತಿದೆಯಾ, ನೀವು ಗುಬ್ಬಿ ಎಂದು!! 
ಪರಿಸರವನ್ನು ಹಾಳುಮಾಡುವಾಗ ಗೊತ್ತಾಗಲಿಲ್ಲವೆ? 
ಪರಿಸರವನ್ನು ಗಬ್ಬು ಹಿಡಿಸುವಾಗ 
ನಿಮಗೆ ಗೊತ್ತಾಗಲಿಲ್ಲವೆ, ನೀವು ಗುಬ್ಬಿ ಎಂದು!! 

ಯಾವುದಕ್ಕೂ ಒಂದು ಇತಿ ಇರುತ್ತದೆ, 
ಒಂದು ಮಿತಿ ಇರುತ್ತದೆ. ನೀವು ಇತಿ, ಮಿತಿ ಎರಡನ್ನೂ ಮೀರಿರುವಿರಿ. 
ನನ್ನ ತಾಳ್ಮೆಗೂ ಒಂದು ಮಿತಿ ಇದೆ. 
ನನ್ನ ಸಹನೆಗೂ ಒಂದು ಫುಲ್‌ಸ್ಟಾಪ್ ಇದೆ ಎಂಬುವುದನ್ನು 
ನೀವು ಮರೆತೇ ಬಿಟ್ಟಿದ್ದೀರಿ. 

ಹಿಂದೂ ಜನಗಳ ಹಾಗೆ, ಅದೆಷ್ಟು ದಿನ ತಾನೆ, 
ನೀವು ನನಗೆ “ಸಹಿಷ್ಣು” ಸಿದ್ಧಾಂತವನ್ನು 
ಬೋಧಿಸಿಕೊಂಡಿರುತ್ತೀರಿ? 

ಇದುವರೆಗೆ ನಾನೂ ಸಹ, 
“ಇರಲಿ ಬಿಡು, ಇರಲಿ ಬಿಡು” ಎಂದು 
ಈ ಮಾನವರು ಬಚ್ಚಾಗಳು ಎಂದು ನನ್ನ ಪಾದದಿಂದ ಕಂಠದವರೆಗೆ, 
ನನ್ನ ನೆತ್ತಿಯಿಂದ ಕುತ್ತಿಗೆಯವರೆಗೆ ಬರುವವರೆಗೆ ಸಹಿಸಿಕೊಂಡಿದ್ದೇನೆ. 

ನೀವು ಮಾತ್ರ ಯಾವಾಗಲೂ ನನಗೆ 
ಕಚ್ಚಾ ಬದಾಮ್‌ನ್ನು ತಿನ್ನಿಸಿಕೊಂಡೇ ಬರುತ್ತಿದ್ದೀರಿ. 
ಆದರೂ ಸಹ ನಾನು ನನ್ನ ಮಾನಸಿಕ ಸಮತೋಲನವನ್ನು 
ಕಳೆದುಕೊಳ್ಳದೆ ಇದುವರೆಗೆ ನಿಮ್ಮನ್ನು ಸಹಿಸಿಕೊಂಡೇ ಬಂದಿದ್ದೇನೆ. 
ನೀವು ಮಾತ್ರ ಯಾವಾಗಲೂ ದಹಿಸಿಕೊಂಡೇ ಇದ್ದೀರಿ; 
ಧಗಧಗಿಸಿಕೊಂಡೇ ಇದ್ದೀರಿ.

ನೀವು ದೇವರೆಂದು ತಿಳಿದು ಪೂಜಿಸುವ 
ನಿಮ್ಮ ಆ ಕೃಷ್ಣನು ಕೂಡ ಅದೊಂದು ದಿನ ತಾಳ್ಮೆಯನ್ನು 
ಕಳೆದುಕೊಳ್ಳಲಿಲ್ಲವೆ? 
ಅದೆಷ್ಟು ಹೊತ್ತು ಆತ ಶಿಶುಪಾಲನನ್ನು ಸಹಿಸಿಕೊಂಡ ಹೇಳಿ, 
ನೋಡುವಾ. 
ಆತ ಶಿಶುಪಾಲನಿಗೆ ನೂರು ಬಯ್ಗಳವರೆಗೆ 
ಒಂದು “ಡೆಡ್‌ಲೈನ್” ಕೊಟ್ಟಿದ್ದ. 

ಯಾವಾಗ ಶಿಶುಪಾಲ ಆ ಡೆಡ್‌ಲೈನ್‌ನನ್ನು “ಕ್ರಾಸ್” ಮಾಡಿದನೋ 
ಆಗ ಕೃಷ್ಣಪರಮಾತ್ಮ ಸುದರ್ಶನ ಚಕ್ರಕ್ಕೆ ಶಿಶುಪಾಲನ ತಲೆಯನ್ನು 
ಕತ್ತರಿಹಾಕಲು ಆದೇಶಮಾಡಿದ.

ನಾನು ಮಳೆ, 
“ಒಲಿದರೆ ಮಳೆ, ಮುನಿದರೆ ಮೊಳೆ” - ಅದೂ ಕೂಡ ಅಂತಿಂಥ ಮಳೆಯಲ್ಲ, 
ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆ ಎಂದೇ ತಿಳಿಯಿರಿ.

ನನ್ನ ತಲೆಕೆಟ್ಟರೆ ಮತ್ತು ನನಗೆ ತಲೆ ತಿರುಗಿದರೆ
ನಾನು ಪ್ರಕೃತಿ, ವಿಕೃತಿ, ಸಂಸ್ಕೃತಿ ಎಲ್ಲವನ್ನೂ 
ನುಂಗಿಹಾಕುತ್ತಾನೆ. 

ನನಗೆ ಊರ್ಧ್ವಪ್ರಯಾಣ ಮಾಡಿ ಗೊತ್ತೇ ಇಲ್ಲ. 

ನನ್ನದು ಯಾವಾಗಲೂ ಅಧೋಪ್ರಯಾಣ, 
ಅಧೋಗಮನ ಮತ್ತು ಅಧೋಗತಿ. 
ಇದು ಕಾರಣ, ನಾನು ಎಲ್ಲವನ್ನೂ ತಗ್ಗಿಗೇನೇ ತಂದುಹಾಕುತ್ತೇನೆ
 ಮತ್ತು ತಗ್ಗಿನತ್ತಲೇ ತಳ್ಳಿಕೊಂಡಿರುತ್ತೇನೆ.

ಅದೊಮ್ಮೆ ನಾನು ರಭಸವಾಗಿ ನುಗ್ಗಲು ಶುರುಹಚ್ಚಿಕೊಂಡರೆ 
ನನಗೆ ಏನೂ ಕಾಣಿಸುವುದಿಲ್ಲ. 
ನಾನು ಆಗ ಧೃತರಾಷ್ಟ್ರ, ಗಾಂಧಾರಿಯಾಗಿಬಿಡುತ್ತೇನೆ. 

ಧೃತರಾಷ್ಟ್ರ, ಗಾಂಧಾರಿಯರಿಗೆ ಪಾಂಡುವಿನ ಮಕ್ಕಳಾದ 
ಪಾಂಡವರ ವಿಷಯದಲ್ಲಿ ಮಾತ್ರ ಕುರುಡಿತ್ತು. 
ಆದ್ದರಿಂದ ಅವರು “ಮಾಮಕಾಃ ಪಾಂಡವಾಶ್ಚೈವ” 
ಎಂದಂದುಕೊಂಡಿದ್ದರು. 

ನಾನು ಹಾಗಲ್ಲ. 
ಅದೊಮ್ಮೆ ನಾನು ಫೀಲ್ಡ್‌ಗೆ ಇಳಿದರೆ ನನ್ನಲ್ಲಿ 
“ಮಾಮಕಾಃ ಪಾಂಡವಾಶ್ಚೈವ” ಎಂಬ ಪ್ರಶ್ನೆಯೇ ಇಲ್ಲ. 
ನನ್ನಲ್ಲಿ ನನ್ನವರು, ತನ್ನವರು, 
ಬೇರೆಯವರು ಎಂಬ ಮಾತೇ ಇಲ್ಲ. 
ನನಗೆ ಎಲ್ಲರೂ ಸಮಾನರು.
ನನ್ನ ಸಂಹಾರಕಾರ್ಯದಲ್ಲಿ ತರತಮಗಳು, 
ನನ್ನ, ತನ್ನಗಳು, “ಇದಂ ಮಮ”, “ಇದಂ ನ ಮಮ” ಇಲ್ಲವೇ ಇಲ್ಲ. 

ನೀವು ಮನುಷ್ಯರು ನಿಮಗೆ “ಬುದ್ಧಿ” ಇದೆ ಎಂದು 
ನಮ್ಮ ಮೇಲೆ ನೀವುಗಳು ಯಾವಾಗಲೂ 
ದೌರ್ಜನ್ಯ ಮಾಡುತ್ತಲೇ ಬಂದಿರುವಿರಿ. 

ವಿಪರೀತವಾಗಿ ಜನಸಂಖ್ಯೆಯನ್ನು ಹೆಚ್ಚಿಸಿಕೊಂಡು 
ದಿನೇ ದಿನೇ ಭೂಭಾರವನ್ನು ಹೆಚ್ಚಿಸುತ್ತ ಬಂದಿರುವಿರಿ. 

ಇಡೀ ಪ್ರಕೃತಿ ಬರೀ ಸಹನೆಯನ್ನಷ್ಟೇ ಅಲ್ಲ, 
ಅದು ಸಮತೋಲನವನ್ನು ಕೂಡ 
ಕಳೆದುಕೊಳ್ಳುವ ಹಾಗೆ ಮಾಡಿರುವಿರಿ. 
ಇದೀಗ ನೀವು ಬರೀ ಜಲಗಂಡವನ್ನು 
ಮತ್ತು ಜಲಗಂಡಾಂತರವನ್ನು ನೋಡುತ್ತಿದ್ದೀರಿ. 

ಇನ್ನು ಈ ಭೂಮಿ, ಆ ಅಗ್ನಿ, ಆ ವಾಯು, 
ಮತ್ತೆ ಆ ಆಕಾಶ ತಲೆಕೆಟ್ಟು ನಿಂತುಕೊಂಡರೆ 
ನೀವು ಟೋಟಲ್ಲಿ, “ಶಿವಾಯ ನಮಃ”!! 

ನೀವುಗಳು “ಅನ್ಯಥಾ ಗತಿರ್ನಾಸ್ತಿ” ಎಂದು 
ಶಿವನ ಪಾದ ಸೇರಬೇಕಷ್ಟೇ. 
“ಸುಮ್ಮನೇ ಬದುಕಿಕೊಂಡಿರಲಿ ಬಿಡು, 
ಬಡಪಾಯಿಗಳು” ಎಂದು 
ನಾವು ಕಣ್ಣುಮುಚ್ಚಿಕೊಂಡು ಕುಳಿತುಕೊಂಡರೆ, 
ನೀವುಗಳು ಧರ್ಮ ಅದು, ಇದು ಎಂದು 
ಅದೆಷ್ಟು ಗದ್ದಲ, ಗಲಾಟೆ ಮಾಡಿಕೊಂಡಿರುವಿರಿ? 

ಧರ್ಮ ಹಾಗೂ ದೇವರುಗಳ ಹೆಸರಿನಲ್ಲಿ 
ಮಾನವೀಯತೆಯನ್ನು ಕೊಂದುಹಾಕುತ್ತಿರುವಿರಿ. 

ಎಲ್ಲ ಧರ್ಮಗಳಲ್ಲೂ ಮಾನವಧರ್ಮವೇ ಶ್ರೇಷ್ಠ 
ಎಂಬುವುದು ನಿಮಗೆ ಗೊತ್ತಿಲ್ಲವೆ? 

ಧರ್ಮದ ಹೆಸರಿನಲ್ಲಿ ಅಮಾಯಕ ಜನಗಳ ತಲೆಕತ್ತರಿಸುತ್ತ, 
ಬರ್ಬರಹತ್ಯೆ ಮಾಡುತ್ತ “ನರಸಂಹಾರ”’ 
ಮಾಡುತ್ತ ಹೊರಟಿದ್ದೀರಿ. 

ಆಧುನಿಕರಾಗುತ್ತ ಹೊರಟಹಾಗೆಲ್ಲ 
ನೀವುಗಳು ಮಾನವೀಯತೆಯನ್ನು ಮರೆತು, 
ಜೀವಗೌರವವನ್ನು ಕಳೆದುಕೊಂಡು 
ನಿರ್ಮಾನುಷರಾಗುತ್ತ ಹೊರಟಿರುವಿರಿ. 

ನಿಮಗೆ “ಕಂಪೇರ್” ಮಾಡಿನೋಡಿದರೆ 
ಏನೊಂದೂ ಸಂಸ್ಕಾರವಿಲ್ಲದ ಮತ್ತು 
ಅವತ್ತು ಮೈಮೇಲೆ ಬಟ್ಟೆ ಕೂಡ ಹಾಕಿಕೊಳ್ಳದೆ 
ಹಾಗೇನೇ ತಿರುಗಿಕೊಂಡಿದ್ದ ಶಿಲಾಯುಗದ 
ಆ ಮನುಷ್ಯನೇ ವಾಸಿ. 

ಕೇವಲ ಆತ ತನ್ನ ಹೊಟ್ಟೆಪಾಡಿಗಾಗಿ 
ಪ್ರಾಣಿಗಳನ್ನು ಕೊಂದುತಿನ್ನುತ್ತಿದ್ದ, ಅಷ್ಟೇ. 

ಆತನಿಗೆ ಸಂಸ್ಕಾರದ ಅಬಕಗಳು ಕೂಡ ಗೊತ್ತಿರಲಿಲ್ಲ. 
ಆದರೂ ತನ್ನ ಪಾಡಿಗೆ ತಾನು ಆತ ನಿಶ್ಚಿಂತನಾಗಿದ್ದ 
ಮತ್ತು ಮಾನಸಿಕವಾಗಿ ನಿರಾಮಯನಾಗಿದ್ದ. 

ನೀವುಗಳೋ, ಅದಷ್ಟೊಂದು ಓದಿದವರಾಗಿ, 
ಬರೆದವರಾಗಿ, ವಿದ್ವಾಂಸರಾಗಿ, ಪಂಡಿತರಾಗಿ 
ಆಧುನಿಕರಾಗಿ ಇದ್ದುಕೊಂಡು ಏನು ಮಾಡುತ್ತಿರುವಿರಿ? 

ದಿನಾಲೂ ಅದು, ಇದು, ಜಗಳ, ಗದ್ದಲ, ಗಲಾಟೆ, ಕಿತ್ತಾಟ, 
ಕಿರಿಕ್ಕು, ಕಿತಾಪತಿ, ಕಿರಿಕಿರಿ ಇದ್ದೇ ಇದೆ ಅಲ್ಲವೆ? 

ಮೊಬೈಲ್‌ನ್ನು ಕೈಯಲ್ಲಿ ಹಿಡಿದುಕೊಂಡು
 “ದುನಿಯಾ ಮೇರೀ ಮುಟ್ಠೀ ಮೇ ಹೈ” ಎಂದು ಹೇಳಿಕೊಂಡು 
ಬೀಗುವ ನಿಮಗೆ ನಿಮ್ಮ ಮನಸ್ಸು, ನಿಮ್ಮ ಬುದ್ಧಿ 
ನಿಮ್ಮಗಳ ಕೈಯಲ್ಲಿ ಇಲ್ಲದೆ ಇರುವುದು ಗೊತ್ತಾಗುತ್ತಿಲ್ಲವೆ? 

“ಥೂ” ನಿಮ್ಮ! ನಾವೂ ಸಹ, ಪಂಚಮಹಾಭೂತಗಳು 
ಇದುವರೆಗೆ “ಈ ಮನುಷ್ಯರು ತುಂಬ ಬುದ್ಧಿವಂತರು” ಎಂದು 
ಪರಸ್ಪರ ಮಾತನಾಡಿಕೊಳ್ಳುತ್ತಿದ್ದೆವು. 

ಅದ್ಯಾಕೋ ಏನೋ, ನಿಮ್ಮ ಬುದ್ಧಿಯದು ಅತಿಯಾಯಿತು. 
ಯಾವುದೂ ಸಹ ಅತಿಯಾಗಬಾರದು. 
ನಮ್ಮಗಳ ಸೌಜನ್ಯವಾದರೂ ಸರಿ; ನಿಮ್ಮಗಳ ದೌರ್ಜನ್ಯವಾದರೂ ಸರಿ.

ಅತಿಯಾದರೆ ಎಲ್ಲವೂ ವಿನಾಶದತ್ತಲೇ ಕೊಂಡೊಯ್ಯುತ್ತದೆ. 

ನೀವೇನಾದರೂ ಬೇಗನೇ ಎಚ್ಚತ್ತುಕೊಳ್ಳದಿದ್ದರೆ, 
ಬೇಗನೇ ಹುಷಾರಾಗದಿದ್ದರೆ  
ನೀವುಗಳು ಇನ್ನು ಮುಂದಿನ ದಿನಗಳಲ್ಲಿ 
ನಮ್ಮಗಳ ಇನ್ನಷ್ಟು, ಮತ್ತಷ್ಟು ದೊಡ್ಡ ಪ್ರಮಾಣದ 
ರೌದ್ರರೂಪವನ್ನು ನೋಡಬೇಕಾಗುತ್ತದೆ. 
ಈಗ ಇರೋದು ಮತ್ತು ನಿಮಗೆ ತೋರಿಸುತ್ತಿರುವುದು 
ಸುಮ್ಮನೇ “ಸ್ಯಾಂಪಲ್” ಅಷ್ಟೇ!! 

ಈಗ ಸುಮ್ಮನೇ ಕೆರೆ, ಹಳ್ಳ, ಬಾವಿಗಳು 
ತುಂಬಿ ಹರಿಯುವಂತೆ ಮಾಡಿದ್ದೇವೆ. 

ಈಗ ಸದ್ಯಕ್ಕೆ ಊರು, ನಗರ, ಪಟ್ಟಣಗಳಲ್ಲಿ 
ತಳಮಳ, ತಹತಹವನ್ನು ಉಂಟುಮಾಡುತ್ತಿದ್ದೇವೆ. 
ಮುಂದಿನ ನಮ್ಮ ಕಾರ್ಯಯೋಜನೆ ನಿಮಗೆ ಗೊತ್ತಿಲ್ಲ. 
ನಾವುಗಳು ಮನುಕುಲವೇ ಇಲ್ಲದಂತೆ ಮಾಡುತ್ತೇವೆ. 

ಗಂಗಾವತರಣಕ್ಕೆ ಒಬ್ಬ ಭಗೀರಥ ಸಾಕು 
ಮತ್ತು ಒಬ್ಬ ಭಗೀರಥನ ಪ್ರಯತ್ನ ಮತ್ತು ತಪಸ್ಸು ಸಾಕು.

ಗಂಗಾ ಅವಾಂತರವನ್ನು ನಿಲ್ಲಿಸುವುದಕ್ಕೆ 
ನೂರಾರು, ಸಾವಿರಾರು ಭಗೀರಥರು ಬಂದರೂ ಸಾಲದು. 
ಅವರದೆಷ್ಟೇ ತಪಸ್ಸು ಮಾಡಿದರೂ ಸಾಲದು. 
ಸರ್ವನಾಶ ಶತಸ್ಸಿದ್ಧ!!

ಸಾಕ್ಷಾತ್ ಆ ಕೃಷ್ಣಪರಮಾತ್ಮನ ದ್ವಾರಕಾನಗರಿಯನ್ನೇ 
ಸಮುದ್ರದಲ್ಲಿ ಮುಳುಗಿಸಿದ ನಮಗೆ,
ಅವತ್ತಿನ ದಿನಮಾನಗಳಲ್ಲಿ ವಾನರುಗಳ ಸಹಾಯದಿಂದ 
ರಾಮ ಕಟ್ಟಿದ ರಾಮಸೇತುವೆಯನ್ನು ಮುಳುಗಿಸಿದ ನಮಗೆ, 

ಅವುಗಳನ್ನೇ “ಸ್ವಾಹಾ”, “ಸ್ವಧಾ” ಮಾಡಿದ ನಮಗೆ 
ನೀವು ಕಟ್ಟಿದ ಮನೆ, ಮಠಗಳು, ಮಂದಿರ, ಮಸೀದೆ, 
ಮದರಸಾಗಳು, ಚರ್ಚು, ಗುರುದ್ವಾರಗಳು ಯಾವ ಲೆಕ್ಕ? 

ನನಗನಿಸುತ್ತದೆ, 
ನಿಮಗೆ ನಮ್ಮ ತಾಕತ್ತಿನ ಅಂದಾಜು ಇದ್ದಂತಿಲ್ಲ. 

“ಹಿಂದೆ ಬಂದರೆ ಒದೆಯಬೇಡಿ, 
ಮುಂದೆ ಬಂದರೆ ಹಾಯಬೇಡಿ” ಎಂದು ಕೇಳಿಕೊಳ್ಳಲು 
ನಾವೇನು ನಿಮ್ಮ ಆ ಪುಣ್ಯಕೋಟಿಯೇ? 
ನೀವುಗಳು ನಮ್ಮನ್ನು ಪಾಪದ ಆ ಪುಣ್ಯಕೋಟಿ 
ಎಂದು ಭಾವಿಸಿಕೊಂಡಂತಿದೆ. 

ನಾವು ಮನಸ್ಸು ಮಾಡಿದರೆ 
ಈ ಭೂಮಿಯನ್ನೇ ಸ್ವಾಹಾಮಾಡಿಬಿಡುತ್ತೇವೆ. 
ಈ ಭೂಮಿಯನ್ನೇ ಇಲ್ಲ ಎನಿಸಿಬಿಡುತ್ತೇವೆ. 

ಎಲ್ಲವನ್ನೂ ಸಮುದ್ರಾಂತರ್ಗತ 
ಮತ್ತು ಸಮುದ್ರಮಯ ಮಾಡಿಬಿಡುತ್ತೇವೆ.  

ಹುಷಾರು!! ನೀವು ನಿಮ್ಮ ಇತಿಮಿತಿಯಲ್ಲಿರಿ. 
ನೀವು ಮಿತಿ ಮೀರಿದರೆ ನಾವುಗಳು 
ಮತಿ ಮೀರಿ ವರ್ತಿಸಬೇಕಾಗುತ್ತದೆ” - 
ಹೀಗೆಲ್ಲ ಹೇಳುತ್ತ ಮಳೆರಾಯ ಚೆನ್ನಾಗಿಯೇ 
“ಕ್ಲಾಸ್” ತೆಗೆದುಕೊಂಡ.  

ನಾವುಗಳು ಆತನಿಗೆ, 

“ಆಯ್ತು ಮಹರಾಯಾ, 
ಇನ್ನು ಮೇಲೆ ನಾವು ಮನುಷ್ಯರು 
ನಮ್ಮನ್ನು ನಾವು ತಿದ್ದಿಕೊಳ್ಳುತ್ತೇವೆ” ಎಂದು ಹೇಳಿ 
ಅಲ್ಲಿಂದ ಜಾಗ ಖಾಲಿಮಾಡಿದೆವು. 

ಮಳೆರಾಯ ಇಷ್ಟೊಂದು ಸೀರಿಯಸ್ಸಾಗಿದ್ದಾನೆ 
ಮತ್ತು ಇಷ್ಟೊಂದು ಸೀರಿಯಸ್ಸಾಗಿ ಮಾತನಾಡುತ್ತಾನೆ -
ಎಂದು ನಾವು ಅಂದುಕೊಂಡಿರಲಿಲ್ಲ. 

ಆತ ನಮ್ಮೆಲ್ಲರನ್ನೂ ಅಂದರೆ ನಾವು ಮನುಷ್ಯರುಗಳನ್ನು 
ಮತ್ತು ಮನುಷ್ಯರ ರೀತಿ, ನೀತಿ, ವ್ಯವಹಾರ, 
ವರ್ತನೆ ವಿತಂಡಗಳನ್ನು ಒಂದಷ್ಟು ಗಂಭೀರವಾಗಿಯೇ 
ಪರಿಗಣಿಸಿದ್ದಾನೆ ಎಂದು ನಮಗೆ ಚೆನ್ನಾಗಿ ಅರ್ಥವಾಯಿತು. 

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು

Comments

Popular posts from this blog