Good Morning, Happy Thursday, 25th August 2022

@ TapOvanam, Hiremath, Tumkur




ಭಾರತವಿದು ಹತ್ತು ಹಲವು ವೈಶಿಷ್ಟ್ಯಗಳ ದೇಶ.

ಭಾರತವಿದು ಹತ್ತು ಹಲವು ವೈಶಿಷ್ಟ್ಯಗಳ ದೇಶ.
ಇದರಲ್ಲಿ ಎರಡು ಮಾತಿಲ್ಲ.
ಯಾರಾದರೂ ಸರಿ, ಎಂಥವರಾದರೂ ಸರಿ
ಇದನ್ನು ಒಪ್ಪಲೇಬೇಕು.

ಭಾರತದ ಈ ಹತ್ತು ಹಲವು ವೈಶಿಷ್ಟ್ಯಗಳ ಮಧ್ಯದಲ್ಲಿ,
ಈ ದೇಶದ ಇನ್ನೊಂದು ಮತ್ತು ಮತ್ತೊಂದು ಮಹತ್ತ್ವದ
ವೈಶಿಷ್ಟ್ಯವೇನೆಂದರೆ,
ಈ ದೇಶದಲ್ಲಿ ಬಹಳಷ್ಟು ಫಿಲಾಸಫಿಗಳು ಹುಟ್ಟುತ್ತವೆ;
ಮತ್ತವು ಇಲ್ಲಿಯೇ ಸಾಯುತ್ತವೆ, ಗೋಣುಚೆಲ್ಲುತ್ತವೆ.
ಬಹಳಷ್ಟು ತತ್ತ್ವ, ಸಿದ್ಧಾಂತಗಳು, ಮೌಲ್ಯಗಳು
ಇಲ್ಲಿಯೇ, ಈ ನಮ್ಮ ದೇಶದಲ್ಲಿಯೇ ಹುಟ್ಟುತ್ತವೆ;
ಮತ್ತವು ಇಲ್ಲಿಯೇ ಸಾಯುತ್ತವೆ.

ಉದಾಹರಣಾರ್ಥವಾಗಿ
ಒಂದೆರಡನ್ನು ಹೇಳಬಹುದು.

1.
“ಕಾಯಕವೇ ಕೈಲಾಸ” ಎಂಬ ಫಿಲಾಸಫಿ,
ತತ್ತ್ವ, ಸಿದ್ಧಾಂತ, ಮೌಲ್ಯ ಇಲ್ಲಿಯೇ,
ಈ ದೇಶದಲ್ಲಿಯೇ ಹುಟ್ಟುತ್ತದೆ;
ಮತ್ತದು ಇಲ್ಲಿಯೇ ಸಾಯುತ್ತದೆ.
ಅದೇನಕ್ಕೆ ಎಂದರೆ,
ನಾವೆಲ್ಲ ಅತಿಶಯ, ಇತೋSಪ್ಯತಿಶಯ
ಸೋಂಬೇರಿಗಳಾಗುವ ಮೂಲಕ ಮತ್ತು
ನಮ್ಮ ಸರಕಾರಗಳು, ಚುನಾಯಿತ ಪಕ್ಷಗಳು
ಹಾಗೂ ಚುನಾಯಿತ ಜನಪ್ರತಿನಿಧಿಗಳು
“ಪುಕ್ಕಟೆ”, “ಪುಗಸಟ್ಟೆ” ಮತ್ತು “ಬಿಟ್ಟಿ” ತಿನ್ನುವ ಸಂಸ್ಕೃತಿಯನ್ನು
ಜನಗಳ ಮಧ್ಯದಲ್ಲಿ
ಇನ್ನಷ್ಟು ಮತ್ತಷ್ಟು “ಪ್ರೊಮೋಟ್” Promote -
ಮಾಡುವ ಮೂಲಕ
“ಕಾಯಕವೇ ಕೈಲಾಸ ಎಂಬ ಫಿಲಾಸಫಿಯದು
ಇಲ್ಲಿಯೇ ಸಾಯುತ್ತದೆ.

2.
“ದಯವೇ ಧರ್ಮದ ಮೂಲವಯ್ಯ” ಎಂಬ ಫಿಲಾಸಫಿ
ಇಲ್ಲಿಯೇ, ಈ ದೇಶದಲ್ಲಿಯೇ ಹುಟ್ಟುತ್ತದೆ;
ಮತ್ತದು ಇಲ್ಲಿಯೇ ಸಾಯುತ್ತದೆ.
ಏಕೆಂದರೆ ನಾವು, ನೀವುಗಳು
ಧರ್ಮದಲ್ಲಿ ದಯೆಯ ವಾತಾವರಣವನ್ನು ಹುಟ್ಟುಹಾಕುತ್ತಿಲ್ಲ.
ನಾವು ಧರ್ಮದಲ್ಲಿ ಭಯದ ವಾತಾವರಣವನ್ನು ಹುಟ್ಟುಹಾಕುತ್ತಿದ್ದೇವೆ.
ಇತ್ತೀಚೆಗೆ ಧರ್ಮವೆಂದರೆ “ದಯೆ” ಎನ್ನುವ ಹಾಗೆ ಇಲ್ಲ.
ಇತ್ತೀಚೆಗೆ ಧರ್ಮವೆಂದರೆ “ಭಯ” ಎಂದಾಗಿಬಿಟ್ಟಿದೆ!!

3.
“ಅಹಿಂಸಾ ಪರಮೋ ಧರ್ಮಃ”
ಎಂಬ ಮೌಲ್ಯ, ತತ್ತ್ವಸಿದ್ಧಾಂತ, ಫಿಲಾಸಫಿ
ಇಲ್ಲಿಯೇ, ಈ ದೇಶದಲ್ಲಿಯೇ ಹುಟ್ಟುತ್ತದೆ;
ಮತ್ತದು ಇಲ್ಲಿಯೇ ಸಾಯುತ್ತದೆ.
ಏಕೆಂದರೆ ಈ ದೇಶದಲ್ಲಿ ಧರ್ಮದ ಹೆಸರಿನಲ್ಲಿಯೇ
ಹೆಚ್ಚು ಹೆಚ್ಚು ಹಿಂಸೆಯಾಗುತ್ತಿದೆ.
ಧರ್ಮ ಹಾಗೂ ದೇವರ ಹೆಸರಿನಲ್ಲಿಯೇ
ತಲೆಗಳನ್ನು ಕತ್ತರಿಸಿಹಾಕಲು ಕರೆಕೊಡಲಾಗುತ್ತಿದೆ.

4.
“ಸರ್ವೇ ಜನಾಃ ಸುಖಿನೋ ಭವಂತು” -
ಎಂಬ ಬಹುದೊಡ್ಡ ಆಶಯ, ಫಿಲಾಸಫಿ,
ಮೌಲ್ಯ ಇಲ್ಲಿಯೇ, ಈ ದೇಶದಲ್ಲಿಯೇ ಹುಟ್ಟುತ್ತದೆ;
ಮತ್ತದು ಇಲ್ಲಿಯೇ ಸಾಯುತ್ತದೆ.
ಏಕೆಂದರೆ, ನಾವು ಈ ದೇಶದಲ್ಲಿ
“ಸರ್ವೇ ಜನಾಃ ಸುಖಿನೋ ಭವಂತು” ಎಂಬ ಫಿಲಾಸಫಿಗಿಂತ
ಸ್ವಜನರು ಮಾತ್ರ ಸ್ವಪರಿವಾರಜನರು ಮಾತ್ರ
“ಸುಖಿನೋ ಭವಂತು” ಎಂಬ ಫಿಲಾಸಫಿಯನ್ನು
ಚಾಲ್ತಿಯಲ್ಲಿ, ಚಲಾವಣೆಯಲ್ಲಿ ಇಟ್ಟಿದ್ದೇವೆ.
ಈ ದೇಶದಲ್ಲಿ ಖುದಾನಿಗಿಂತಲೂ
“ಖುದಗರ್ಜೀ” ಹೆಚ್ಚು ಹೆಚ್ಚು ಚಲಾವಣೆಯಲ್ಲಿದೆ.
ಈ ದೇಶದಲ್ಲಿ ರಾಮನಿಗಿಂತಲೂ
“ಆರಾಮ್” ಹೆಚ್ಚು ಹೆಚ್ಚುಚಲಾವಣೆಯಲ್ಲಿದೆ.
5.
ಈ ದೇಶದಲ್ಲಿ “ಆರಾಮ್ ಹರಾಮ್ ಹೈ” -
ಎಂದೇನೋ ಹೇಳಲಾಗುತ್ತದೆ.
ಅಂಥೊಂದು ಫಿಲಾಸಫಿ, ಮೌಲ್ಯ
ಇಲ್ಲಿಯೇ, ಈ ದೇಶದಲ್ಲಿಯೇ ಹುಟ್ಟುತ್ತದೆ;
ಮತ್ತದು ಇಲ್ಲಿಯೇ ದಾರುಣವಾಗಿ ಸಾಯುತ್ತದೆ.
ಏಕೆಂದರೆ, ಈ ದೇಶದ ಗತಿ, ವಿಧಾನ,
ಚಲನವಲನಗಳನ್ನು ಗಮನಿಸಿದಾಗ
ಇಲ್ಲಿ “ಆರಾಮ್ ಹರಾಮ್ ಹೈ” ಎಂಬ ಫಿಲಾಸಫಿಗಿಂತ
“ಹರಾಮ್ ಆರಾಮ್ ಹೈ” ಎಂಬ ಸತ್ಯವು
ಕಣ್ಣಿಗೆ ಕಣ್ಣುಕೋರೈಸುವ ಹಾಗೆ ರಾಚುತ್ತದೆ.

ದೇಶವಿದು ಹರಾಮ್‌ದ ಆರಾಮೀಕರಣಕ್ಕೆ ವೇದಿಕೆಯಾಗಿದೆ.

ಈ ಹರಾಮ್‌ದ “ಆರಾಮು”
ಅದೊಂದು ದಿನ ಈ ದೇಶದ ಜನಗಳ
ಕರ್ತೃತ್ವಶಕ್ತಿ ಮತ್ತು ಕ್ಷಮತೆಯನ್ನು
ಕಳೆದುಹಾಕಿದರೆ ಯಾರೂ ಆಶ್ಚರ್ಯಪಡಬೇಕಿಲ್ಲ.
ಏಕೆಂದರೆ ಈ ಹರಾಮ್‌ದ ಆರಾಮು
“ಸ್ಲೋ ಪಾಯಿಜನ್” Slow Poison ಇದ್ದ ಹಾಗೆ.
ಇದು ಒಮ್ಮೆಲೇ ಸಾಯಿಸುವುದಿಲ್ಲ.
ಇದು ಜನಗಳನ್ನು ನಿಧಾನಕ್ಕೆ
ಮತ್ತು ಅದು ಹಂತ ಹಂತವಾಗಿ ಸಾಯಿಸುತ್ತದೆ.
ಈ ನಮ್ಮ ಮಾತು ಬಹಳಷ್ಟು ಜನಗಳಿಗೆ
ರುಚಿಸೋದಿಲ್ಲ ಮತ್ತು ರುಚಿಸಲಿಕ್ಕಿಲ್ಲ.
ಏಕೆಂದರೆ,
ನಮಗೆ “ಸತ್ಯಂ ಬ್ರೂಯಾತ್” ಎಂಬ ವಿಷಯವಷ್ಟೇ ಗೊತ್ತಿದೆ.
ನಮಗೆ “ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್,
ಮಾ ಬ್ರೂಯಾತ್ ಸತ್ಯಮಪ್ರಿಯಮ್” -
ಎಂಬ ಅನುಭವಿಗಳ ಈ ಅನುಭವದ ವಾಣಿಯನ್ನು ಮೈಗೂಡಿಸಿಕೊಳ್ಳೋದಕ್ಕೆ
ಮತ್ತು ಈ ಮಾತನ್ನು ಅಳವಡಿಸಿಕೊಳ್ಳೋದಕ್ಕೆ ಆಗುತ್ತಿಲ್ಲ!!

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು

Comments

Popular posts from this blog

21st September 2023