ಅದೊಂದು ರಾಜ್ಯ. ಅಲ್ಲೊಬ್ಬ ರಾಜ. ಅದೊಂದು ದಿನ ರಾಜನಿಗೆ ತನ್ನ ರಾಜ್ಯದಲ್ಲಿರುವ ಮಹಾಮೂರ್ಖರನ್ನು ಸತ್ಕರಿಸಿ ಗೌರವಿಸಬೇಕೆನಿಸಿತು. ಬುದ್ಧಿವಂತರನ್ನು ಎಲ್ಲರೂ ಗೌರವಿಸುತ್ತಾರೆ. ಪಾಪ, ಮೂರ್ಖರನ್ನು ಅದಾರು ತಾನೆ ಗೌರವಿಸಬೇಕು?
ರಾಜ ಮಂತ್ರಿಯನ್ನು ಕರೆದು ರಾಜ್ಯದಲ್ಲಿರುವ ಮಹಾಮೂರ್ಖರನ್ನು ಗುರುತಿಸಿ ಅವರನ್ನು ಕರೆತರುವ ಜವಾಬ್ದಾರಿಯನ್ನು ಮಂತ್ರಿಗೊಪ್ಪಿಸಿದ.
ಮಂತ್ರಿ ರಾಜ್ಯದ ತುಂಬೆಲ್ಲ ಪ್ರಕಟಣೆಯನ್ನು ಜಾರಿಮಾಡಿ ಡಂಗುರ ಸಾರಿದ.
ಪ್ರಕಟಣೆಯದು ಹೀಗಿತ್ತು,
“ಮಹಾರಾಜರು ಮೂರ್ಖರನ್ನು ಸನ್ಮಾನಿಸಿ ಅವರಿಗೊಂದು ಪ್ರಶಸ್ತಿ ಫಲಕ,
ಹತ್ತು ಸಾವಿರ ರೂ.ಗಳ ನಗದು ಬಹುಮಾನ ಮತ್ತು ಮಾಸಾಶನವನ್ನು ಕೊಡುವುದಾಗಿ ಹೇಳಿದ್ದಾರೆ. ಆದ್ದರಿಂದ ಅರ್ಹ ಮೂರ್ಖರು ಮೂರ್ಖಪ್ರಶಸ್ತಿಗೆ ಅರ್ಜಿ ಹಾಕಿಕೊಳ್ಳಬಹುದು” ಎಂದು.
ವಾರ, ಎರಡು ವಾರ ಕಳೆದುಹೋದರೂ ಮೂರ್ಖಪ್ರಶಸ್ತಿಗೆ ಒಂದು ಅರ್ಜಿ ಕೂಡ ಬರಲಿಲ್ಲ.
ಇದರರ್ಥ ಆ ರಾಜ್ಯದಲ್ಲಿ ಮೂರ್ಖರಿರಲಿಲ್ಲವೆಂದೇನಲ್ಲ. ಆದರೆ ಮೂರ್ಖರು ತಮ್ಮನ್ನು ಮೂರ್ಖರೆಂದು ಒಪ್ಪಿಕೊಳ್ಳುವುದು ಅಷ್ಟೊಂದು ಸುಲಭವೇ? ಅದನ್ನವರು
ಜಗಜ್ಜಾಹಿರ ಮಾಡುವುದು ಎಲ್ಲಾದರೂ ಉಂಟೇ?
ಅದರಲ್ಲೂ ಬಲಿತ ಮೂರ್ಖರಂತೂ ತಮ್ಮನ್ನು ತಾವು ತುಂಬ ಬುದ್ಧಿವಂತರೆಂದು ತಿಳಿದುಕೊಂಡಿರುತ್ತಾರೆ. ಅವರುಗಳೆಂದಾದರೂ ಮುಂದೆ ಬಂದು ತಮ್ಮನ್ನು ಮೂರ್ಖ, ಮಹಾಮೂರ್ಖರೆಂದು ಘೋಷಿಸಿಕೊಳ್ಳುವುದು ಉಂಟೇ?
ತಿಂಗಳು, ತಿಂಗಳೆರಡು ಕಳೆದರೂ ಅರ್ಜಿಗಳು ಬರಲೇ ಇಲ್ಲ.
ಮಂತ್ರಿಯ ಮೇಲೆ ರಾಜನ ಒತ್ತಡ ಹೆಚ್ಚಾಯಿತು. ಮಂತ್ರಿ ಖುದ್ದಾಗಿ ತನ್ನ ಸಿಬ್ಬಂದಿಯನ್ನು ಕರೆದುಕೊಂಡು ಮೂರ್ಖರನ್ನು ಹುಡುಕುವುದಕ್ಕೆ ಹೊರಡುತ್ತಾನೆ. ಆತ ಮನೆ-ಮನೆಗೆ ಹೋಗಿ ಮೂರ್ಖಗಣತಿಯಲ್ಲಿ (ಸೆನ್ಸಸ್) ತೊಡಗುತ್ತಾನೆ. ರಾಜಧಾನಿಯಲ್ಲಿನ ಪ್ರತಿಯೊಂದು ಮನೆಗೂ ಹೋಗಿ, ಮನೆಯಲ್ಲಿಯ ಪ್ರತಿಯೊಬ್ಬರನ್ನೂ ಕರೆದು, “ನೀನು ಮೂರ್ಖನೋ?” ಎಂದು ವಿಚಾರಿಸುತ್ತಾನೆ.
ಅವರು ಮೂರ್ಖರೆಂದು ಒಪ್ಪಿಕೊಂಡರೆ ಬಹುಮಾನ ಕೊಡುವುದಾಗಿ ಪ್ರಲೋಭನೆ ಒಡ್ಡುತ್ತಾನೆ.
ಮಂತ್ರಿ “ಅಮ್ಮಯ್ಯ, ದಮ್ಮಯ್ಯ” ಎಂದು ಅದೆಷ್ಟೇ ಗೋಗರೆದರೂ ಸಹ ಯಾರೊಬ್ಬರೂ ತಮ್ಮನ್ನು ತಾವು ಮೂರ್ಖರೆಂದು ಗುರುತಿಸಿಕೊಳ್ಳುವುದಕ್ಕೆ ಮತ್ತು ಹಾಗೆಂದು ಘೋಷಿಸಿಕೊಳ್ಳುವುದಕ್ಕೆ ಮುಂದೆ ಬರುವುದಿಲ್ಲ.
ಮಂತ್ರಿಗೆ ಭಯ ಶುರುವಾಗುತ್ತದೆ. ಮಂತ್ರಿ ಭಯಪಟ್ಟುಕೊಂಡು ಓರ್ವ ಸಾಧುವಿನ ಬಳಿ ಬರುತ್ತಾನೆ. ಸಾಧುವಿನಲ್ಲಿ ಆತ ತನ್ನ ಕಷ್ಟ-ಸಂಕಷ್ಟವನ್ನು ನಿವೇದಿಸಿಕೊಳ್ಳುತ್ತಾನೆ.
ಒಬ್ಬನಾದರೂ ಮೂರ್ಖನನ್ನು ಕರೆತರದಿದ್ದರೆ ರಾಜ ತನ್ನನ್ನು ಭಯಂಕರವಾಗಿ ದಂಡಿಸುತ್ತಾನೆ;
ತನಗೆ ಮರಣದಂಡನೆ ವಿಧಿಸುವುದಾಗಿ ರಾಜ ರೋಪುಹಾಕಿದ್ದಾನೆ ಎಂದು ಸಾಧುವಿನ ಬಳಿ ಮಂತ್ರಿ ತನ್ನ ಮನದಾಳದ ನೋವನ್ನು ಅರಿಕೆಮಾಡಿಕೊಳ್ಳುತ್ತಾನೆ.
ಸಾಧುವಿಗೆ ಮಂತ್ರಿಯ ಮೇಲೆ ಕರುಣೆ ಬರುತ್ತದೆ. ಸಾಧುವಾತ ಮಂತ್ರಿಯನ್ನು ಕಷ್ಟದಿಂದ ಪಾರುಮಾಡಲು ನಿರ್ಧರಿಸುತ್ತಾನೆ. ಸಾಧು ಸ್ವತಃ ತನ್ನನ್ನೇ ತಾನು ರಾಜನ ಎದುರಿನಲ್ಲಿ ಮೂರ್ಖನೆಂದು ಪ್ರಸ್ತುತಪಡಿಸಿಕೊಳ್ಳಲು ಸಿದ್ಧನಾಗುತ್ತಾನೆ.
ಮಂತ್ರಿ ಸಾಧುವನ್ನು ರಾಜನ ಬಳಿ ಕರೆದೊಯ್ಯುತ್ತಾನೆ.
“ಸಾಧು ಆತ ಮೂರ್ಖನಹುದೋ, ಅಲ್ಲವೋ?” - ಎಂಬುವುದನ್ನು ಪರೀಕ್ಷಿಸುವುದಕ್ಕಾಗಿ
ರಾಜ ಸಾಧುವಿನ ಕೈಗೆ ನೂರು ಚಿನ್ನದ ನಾಣ್ಯಗಳನ್ನು ಕೊಡುತ್ತಾನೆ.
ಸಾಧುವಾತ ಚಿನ್ನದ ನಾಣ್ಯಗಳನ್ನು ತೆಗೆದುಕೊಂಡು ಹೋಗಿ ತಿಪ್ಪೆಗೆ ಎಸೆದುಬರುತ್ತಾನೆ. ರಾಜನಿಗೆ ಸಾಧುವಾತ ಪಕ್ಕಾ ಮೂರ್ಖನೆಂಬುವುದು ಮನವರಿಕೆಯಾಗುತ್ತದೆ. ಯಾರಾದರೂ ಚಿನ್ನವನ್ನು ತಿಪ್ಪೆಗೆ ಚೆಲ್ಲುತ್ತಾರೆಯೇ? ಯಾರಾದರೂ ಚಿನ್ನವನ್ನು ಕಸವೆಂದು ಭಾವಿಸುತ್ತಾರೆಯೇ? ಕಡುಮೂರ್ಖರು ಮಾತ್ರ ಹಾಗೆ ಮಾಡಬಲ್ಲರು.
ಚಿನ್ನ ಕೈಗೆ ಸಿಕ್ಕರೆ ಜನಗಳು ಚಿನ್ಮಯನನ್ನು ಕೂಡ ಮರೆತುಬಿಡುತ್ತಾರೆ.
ಜನಗಳಲ್ಲಿ ಚಿನ್ನದ ಕುರಿತು ಅಷ್ಟೊಂದು ಮೋಹ-ವ್ಯಾಮೋಹವಿದೆ.
ರಾಜ ಸಾಧುವಿಗೆ ಮಹಾಮೂರ್ಖ ಪ್ರಶಸ್ತಿಯನ್ನು ಕೊಟ್ಟು ಸಂತೋಷಪಡುತ್ತಾನೆ.
“ತನಗೆ ರಾಜ ಮೂರ್ಖಪ್ರಶಸ್ತಿಯನ್ನು ಗೌರವಿಸಿದ ಕಾರಣ ಮಂತ್ರಿಯ ಪ್ರಾಣ ಉಳಿಯತಲ್ಲ?
ಇಲ್ಲದಿದ್ದರೆ ಬಡಪಾಯಿ ಮಂತ್ರಿ, ವಿನಾಕಾರಣ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತಿತ್ತು?- ಎಂದು
ಆ ಕರುಣಾಮಯಿ ಸಾಧು ಒಂದು ಸಾರ್ಥಕ ಕೆಲಸ ಮಾಡಿದ ಧನ್ಯತಾ ಭಾವದಿಂದ ತನ್ನ ಗೂಡಿಗೆ ಮರಳುತ್ತಾನೆ. ಒಟ್ಟಿನಲ್ಲಿ ಮೂರ್ಖಪ್ರಶಸ್ತಿಪ್ರದಾನ ಸಮಾರಂಭವದು ಸುಖಾಂತ್ಯವನ್ನು ಕಂಡುಕೊಳ್ಳುತ್ತದೆ.ಇದಾದ ಕೆಲವು ದಿನಗಳ ನಂತರ ಮೂರ್ಖಪ್ರಶಸ್ತಿಯನ್ನು ನೀಡಿದ ರಾಜನಾತ ಯಾವುದೋ ಒಂದು ಅಜ್ಞಾತ ಕಾಯಿಲೆಯಿಂದ ಬಳಲತೊಡಗುತ್ತಾನೆ. ಕಾಯಿಲೆಯದು ದಿನೇ ದಿನೇ ಉಲ್ಬಣಗೊಂಡು ರಾಜ ಹಾಸಿಗೆ ಹಿಡಿಯುತ್ತಾನೆ. ವೈದ್ಯರೆಲ್ಲರೂ ಕೈ ಚೆಲ್ಲುತ್ತಾರೆ. ರಾಜನ ಸಾವು ಸನ್ನಿಹಿತವಾಗುತ್ತದೆ. ರಾಜ ಮರಣಶಯ್ಯೆಯಲ್ಲಿ ಮಲಗಿಕೊಂಡಿರುತ್ತಾನೆ.ಈ ಸುದ್ದಿ ಸಾಧುವಿಗೆ ಗೊತ್ತಾಗುತ್ತದೆ.
ಸಾಧುವಾತ ರಾಜ ತನಗೆ ಕೊಟ್ಟ ಮೂರ್ಖಪ್ರಶಸ್ತಿಯನ್ನು ತೆಗೆದುಕೊಂಡು ರಾಜನ ಬಳಿ ಬರುತ್ತಾನೆ.
ರಾಜ ನರಳುತ್ತ ಹಾಸಿಗೆಯ ಮೇಲೆ ಮಲಗಿಕೊಂಡಿರುತ್ತಾನೆ.
ಸಾಧು ರಾಜನನ್ನು ಮಾತನಾಡಿಸುತ್ತ,
“ಅದೇಕೆ ನರಳುತ್ತಿರುವೆ? ನೀನು ಇಷ್ಟೊಂದೆಲ್ಲ ಸಂಪತ್ತನ್ನು ಗಳಿಸಿರುವೆ. ನಿನ್ನಲ್ಲಿ ಚಿನ್ನ, ಬೆಳ್ಳಿ, ಒಡವೆ, ವಸ್ತ್ರ, ಮನೆ, ಮಹಲು..., ಇವೆಲ್ಲ ಇವೆ. ನೀನು ಜೀವನದುದ್ದಕ್ಕೂ ಹೋರಾಡಿ ಇಷ್ಟೊಂದು ಸಂಪತ್ತನ್ನು ಗಳಿಸಿರುವೆ. ಈ ಎಲ್ಲ ಸಂಪತ್ತನ್ನು ನೀನು ನಿನ್ನ ಜೊತೆಯಲ್ಲಿ ತೆಗೆದುಕೊಂಡು ಹೋಗುವಿಯಾ?” ಎಂದು ಕೇಳುತ್ತಾನೆ.
ರಾಜ ಹೇಳುತ್ತಾನೆ,
“ಅದು ಹೇಗೆ ಸಾಧ್ಯ? ನಾನು ಗಳಿಸಿದ ಸಂಪತ್ತನ್ನೆಲ್ಲ ಇಲ್ಲಿಯೇ ಬಿಟ್ಟುಹೋಗುತ್ತೇನೆ. ಇದಾವುದೂ ನನ್ನ ಜೊತೆ ಬರುವುದಿಲ್ಲ” ಎಂದು.
ಸಾಧು ಹೇಳುತ್ತಾನೆ,
“ಅವತ್ತಿನ ದಿನ ನೀನು ಕೊಟ್ಟ ನೂರು ಚಿನ್ನದ ನಾಣ್ಯಗಳನ್ನು ತಿಪ್ಪೆಯಲ್ಲಿ ಎಸೆದುಬಂದೆ ಎಂಬ ಕಾರಣಕ್ಕಾಗಿ ನೀನು ನನಗೆ ಮೂರ್ಖಪ್ರಶಸ್ತಿಯನ್ನು ನೀಡಿದೆ. ಇವತ್ತು ನೀನು ಇಷ್ಟೊಂದೆಲ್ಲ ಸಂಪತ್ತನ್ನು ಕಸದ ಹಾಗೆ ಇಲ್ಲಿಯೇ ಬಿಟ್ಟು ಖಾಲಿ ಕೈಯಿಂದ ದೇವರ ಬಳಿ ಹೋಗುತ್ತಿರುವಿ ತಾನೆ?
ಅವತ್ತು ನೀನು ನನಗೆ ಕೊಟ್ಟ ಚಿನ್ನವದು ನನ್ನ ಪಾಲಿಗೆ ಕಸವಾಗಿತ್ತು. ಇವತ್ತು ನೀನು ಗಳಿಸಿದ ಸಂಪತ್ತೆಲ್ಲವೂ ನಿನ್ನ ಪಾಲಿಗೆ ಕಸವಾಗಿ ಪರಿಣಮಿಸಿದೆ. ನೀನು ಅದೇನೇ ಗಳಿಸಿದರೂ, ಅದೆಷ್ಟೇ ಗಳಿಸಿದರೂ ಅದನ್ನೆಲ್ಲ ಕಸದ ಹಾಗೆ ಇಲ್ಲಿಯೇ ಬಿಟ್ಟು ಹೋಗಬೇಕಾಗಿ ಬಂದಿದೆ.
ಅವತ್ತು ನೀನು ನನ್ನನ್ನು ಮೂರ್ಖ ಎಂದೆ. ಇವತ್ತು ನಾನು ನಿನ್ನನ್ನು ಮೂರ್ಖ ಎಂದು ಕರೆಯುತ್ತಿದ್ದೇನೆ. ನಾನೀಗ ನೀನು ಅವತ್ತು ನನಗೆ ಕೊಟ್ಟು ಮೂರ್ಖಪ್ರಶಸ್ತಿಯನ್ನು ನಿನಗೇನೇ ಹಿಂತಿರುಗಿಸಲು ಬಂದಿದ್ದೇನೆ. ಮೂರ್ಖಪ್ರಶಸ್ತಿಯ ನಿಜವಾದ ವಾರಸುದಾರ ನೀನು.
ಅದು ನಾನಲ್ಲ. ನಾನೇನೋ ನೂರು ಚಿನ್ನದ ನಾಣ್ಯಗಳನ್ನು ಮಾತ್ರ ತಿಪ್ಪೆಗೆ ಎಸೆದಿದ್ದೆ. ನೀನಾದರೋ ನಿನ್ನ ಸಂಪತ್ತನ್ನೆಲ್ಲ ಕಸದ ಹಾಗೆ ಎಸೆದುಬಿಟ್ಟು ಹೋಗುತ್ತಿರುವೆ.
ನೀನು ಬಿಟ್ಟುಹೋಗುವ ಸಂಪತ್ತನ್ನು ಗಳಿಸಿದೆ. ನೀನು ನಿಜವಾದ ಬುದ್ಧಿವಂತನಾಗಿದ್ದರೆ ನಿನ್ನ ಜೊತೆ ತೆಗೆದುಕೊಂಡು ಹೋಗುವ ಸಂಪತ್ತನ್ನು ಗಳಿಸಬೇಕಿತ್ತು!!
ನೀನು ಭಕ್ತಿಧನವನ್ನು ಗಳಿಸಬೇಕಿತ್ತು. ನೀನು ಪ್ರೇಮಧನವನ್ನು ಗಳಿಸಬೇಕಿತ್ತು.
ನೀನು ಪರಮಾರ್ಥಧನ, ಪುಣ್ಯಧನವನ್ನು ಗಳಿಸಬೇಕಿತ್ತು.
ನಿನ್ನ ಜೊತೆಯಲ್ಲಿ ಬರುವ ಸಂಪತ್ತನ್ನು ಗಳಿಸದೆ ಇಲ್ಲಿಯೇ ಬಿಟ್ಟುಹೋಗುವ ಸಂಪತ್ತನ್ನು ಗಳಿಸಿದೆ.
ನಿನ್ನ ಜೊತೆಗೆ ಬಾರದಿರುವ ಸಂಪತ್ತನ್ನು ಗಳಿಸುವುದಕ್ಕಾಗಿ ನಿನ್ನ ಬದುಕನ್ನೇ ಹಾಳುಮಾಡಿಕೊಂಡೆ.
ಆದ್ದರಿಂದ ನೀನು ಅತಿದೊಡ್ಡ ಮೂರ್ಖ!!” ಎಂದು.
ಸಾಧುವಿನ ಮಾತುಗಳನ್ನು ಕೇಳಿ ರಾಜನ ಕಣ್ಣಂಚಿನಿಂದ ಕಣ್ಣೀರು ಜಿನುಗುತ್ತದೆ.
ಆತ ಸಾಧುವಿನ ಕ್ಷಮೆ ಕೇಳಿ ತನ್ನ ತಪ್ಪನ್ನು ಮನ್ನಿಸಬೇಕೆಂದು ಅರಿಕೆ ಮಾಡಿಕೊಳ್ಳುತ್ತಾನೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
Comments
Post a Comment