
ಅಪ್ಪ, ಅಮ್ಮನಿಗಾಗಿ ಗಣಪತಿ ಎಲ್ಲದಕ್ಕೂ ಸಿದ್ಧ.ಸಮರಕ್ಕೂ ಸರಿ, ಸಮರಸಕ್ಕೂ ಸರಿ;ಸಂಧಾನಕ್ಕೂ ಸರಿ; ಸಂಘರ್ಷಕ್ಕೂ ಸರಿ!!
ಗಣಪತಿಯನ್ನು ಕುರಿತು ಹೇಳುವುದಕ್ಕೆ ಮತ್ತು ಕೇಳುವುದಕ್ಕೆ ಬಹಳಷ್ಟಿದೆ.
ಗಣಪತಿಯ ಕುರಿತಾಗಿ, ಅಷ್ಟಿಷ್ಟಲ್ಲ, ಸಾಕಷ್ಟನ್ನು ಹೇಳುವುದಕ್ಕೆ
ಒಂದು ಪುರಾಣವೇ ಮೀಸಲಿದೆ.
ಗಣೇಶ ಪುರಾಣವೆಂದೇ ಅದು ಬಹುಶ್ರುತ ಮತ್ತು ಸುಪ್ರಸಿದ್ಧ.
ಗಣಪತಿ ನಮ್ಮ ರಾಷ್ಟ್ರೀಯ ದೇವತೆ.
ಬರೀ ನಮ್ಮ ರಾಷ್ಟ್ರದಲ್ಲಷ್ಟೇ ಅಲ್ಲ;
ಅಂತರ್ರಾಷ್ಟ್ರೀಯ ಮಟ್ಟದಲ್ಲೂ
ಬಹುದೊಡ್ಡ ಪ್ರಮಾಣದಲ್ಲಿ ಸುದ್ದಿಮಾಡಿದ
ಹಿರಿಮೆ ಮತ್ತು ಹೆಗ್ಗಳಿಕೆ ಗಣಪತಿಯದು.
ಗಣಪತಿ ನಮ್ಮ ದೇಶದ ಹಾಗೆ
ಹತ್ತು ಹಲವಾರು ದೇಶಗಳಲ್ಲಿ
ಬಹುವಿಜೃಂಭಣೆಯಿಂದ ಪೂಜೆಗೊಳ್ಳುತ್ತಾನೆ.
ಗಣಪತಿ ಅಪ್ಪ, ಅಮ್ಮನ ಮನ ಮೆಚ್ಚಿದ ಮಗ.
ಆತ ಅಪ್ಪ, ಅಮ್ಮನ “ಡಾರ್ಲಿಂಗ್ ಸನ್”.
ಆತ ಅಮ್ಮನ ಆದೇಶಪಾಲನೆಗಾಗಿ
ಮತ್ತು ಅಪ್ಪನ ಆತ್ಮಲಿಂಗವನ್ನು ರಕ್ಷಿಸುವುದಕ್ಕಾಗಿ
ತನ್ನನ್ನೇ ತಾನು ಅಪಾಯಕ್ಕೆ ಒಡ್ಡಿಕೊಳ್ಳುತ್ತಾನೆ.
ಆತ ಸ್ವತಃ “ರಿಸ್ಕ್” ಮತ್ತು “ರಿಸ್ಪಾನ್ಸಿಲಿಟಿ”-
ಅಪಾಯ ಮತ್ತು ಜವಾಬ್ದಾರಿಗಳಿಗೆ ತನ್ನನ್ನು ತಾನು ಕೊಟ್ಟುಕೊಳ್ಳುತ್ತಾನೆ.
ಇದು ಕಾರಣ, ಆತ ಭಕ್ತವತ್ಸಲನೂ ಅಹುದು;
ಆತ ದೇವವತ್ಸಲನೂ ಅಹುದು.
ಗಣಪತಿಯ ಇನ್ನೊಂದು ವಿಶೇಷತೆ ಏನೆಂದರೆ,
ಸ್ವತಃ ದೇವಲೋಕದ ಹೈಕಮಾಂಡ್‌ನ್ನು
“ಬಚಾವು” ಮಾಡಿದ ಕೀರ್ತಿ ಆತನದು.
ಶಿವ ಆತ್ಮಲಿಂಗವನ್ನು ರಾವಣನಿಗೆ ಕೊಟ್ಟುಬಿಟ್ಟು
ಸಂಕಷ್ಟದಲ್ಲಿದ್ದಾಗ ಸ್ವತಃ ಅಪ್ಪನಿಗೆ ಗಣಪತಿ ಸಹಾಯಮಾಡುತ್ತಾನೆ.
ತಾಯಿ ಪಾರ್ವತಿಯ ಆದೇಶವನ್ನು ಪಾಲಿಸುವ ಸಂದರ್ಭದಲ್ಲಿ
ಗಣಪತಿ ತನ್ನ ತಲೆಯನ್ನೇ ತಲೆದಂಡವಾಗಿಸುತ್ತಾನೆ.
ರಾವಣನ ಕೈಯಿಂದ ತಲೆಗೆ ಬಲವಾಗಿ ಮೊಟಕಿಸಿಕೊಂಡರೂ ಪರವಾ ಇಲ್ಲ,
ಗಣಪತಿ ಬುದ್ಧಿವಂತಿಕೆಯಿಂದ
ಅಪ್ಪನ ಆತ್ಮಲಿಂಗವನ್ನು “ಬಚಾವು” ಮಾಡುತ್ತಾನೆ.
ಶಿವನ ತ್ರಿಶೂಲದಿಂದ ತನ್ನ ರುಂಡವದು ಮುಂಡದಿಂದ ಬೇರ್ಪಟ್ಟರೂ
ಗಣಪತಿ ಅಮ್ಮನ “ಆದೇಶಭಂಗ” ಮತ್ತು “ಆಜ್ಞಾಭಂಗ” ಮಾಡುವುದಿಲ್ಲ.
ಮಾತೃವಾಕ್ಯಪರಿಪಾಲನೆಗಾಗಿ ಗಣಪತಿ
ಸ್ವತಃ ತಂದೆ ಪರಮೇಶ್ವರನನ್ನೇ ಪ್ರತಿಭಟಿಸುತ್ತಾನೆ.
ತಂದೆ, ತಾಯಿಯ ವಿಷಯದಲ್ಲಿ
ಇಷ್ಟೊಂದು ಪ್ರೀತಿ, ವಿಶ್ವಾಸವನ್ನು ಹೊಂದಿರುವ ಗಣಪತಿ
ನಮಗೆಲ್ಲ ಜನ್ಮಕೊಟ್ಟ ತಂದೆ, ತಾಯಿ ಅಂದರೆ
ನಮ್ಮ “ಪೇರೆಂಟ್ಸ್” ಅದೆಷ್ಟು ಮುಖ್ಯ?
“ಹೌ ಇಂಪಾರ್ಟೆಂಟ್ ದೇ ಆರ್?” ಅನ್ನೋದನ್ನು ಪಾಠಮಾಡುತ್ತಾನೆ.
ಷಣ್ಮುಖ ಪ್ರಪಂಚವನ್ನು ಸುತ್ತಿಬರಲು
ಆ ಕಡೆ, ಈ ಕಡೆ ಹೊರಟುಹೋಗುತ್ತಾನೆ.
ಆದರೆ ಗಣಪತಿ ಮಾತ್ರ ತಂದೆ, ತಾಯಿಯಲ್ಲಿಯೇ
ಪ್ರಪಂಚವನ್ನು ಕಾಣುತ್ತಾನೆ ಮತ್ತು ಅವರೇ ತನ್ನ ಪ್ರಪಂಚ ಎನ್ನುತ್ತಾನೆ.
ಪಾರ್ವತಿ. ಪರಮೇಶ್ವರರು
“ಅದೇನಕ್ಕೆ ನಮ್ಮ ಸುತ್ತಮುತ್ತ ಪ್ರದಕ್ಷಿಣೆ ಮಾಡುತ್ತಿಯಾ?” ಎಂದು ಕೇಳಿದಾಗ
“ನೀವೇ ನನ್ನ ಪ್ರಪಂಚ. ನಿಮ್ಮಲ್ಲಿಯೇ ನನ್ನ ಪ್ರಪಂಚವಿದೆ” ಎಂದು ಹೇಳುತ್ತಾನೆ.
ತನ್ಮೂಲಕ ಗಣಪತಿ ಏಕಕಾಲದಲ್ಲಿ ತಂದೆ, ತಾಯಿಯ
ವಿಶೇಷ ಕೃಪಾನುಗ್ರಹಕ್ಕೆ ಭಾಜನನಾಗುತ್ತಾನೆ.
ಗಣಪತಿ ನಾವು, ನೀವುಗಳು ನಮ್ಮಗಳ
ತಂದೆ, ತಾಯಿಯ ವಿಷಯದಲ್ಲಿ ಯಾವ ರೀತಿ ವರ್ತಿಸಬೇಕು?
ಅವರನ್ನು ಯಾವ ರೀತಿ ಕಾಣಬೇಕು?”
ಎಂದು ತನ್ನನ್ನೇ ತಾನು ಉದಾಹರಣೆಯಾಗಿಸಿಕೊಂಡು
ಹಾಗೂ ತನ್ನನ್ನೇ ತಾನು ಮಾದರಿಯಾಗಿಸಿಕೊಂಡು ಪಾಠಮಾಡುತ್ತಾನೆ.
ಗಣಪತಿ ಬರೀ ಉತ್ಸವಮೂರ್ತಿ ಅಲ್ಲ.
ಗಣಪತಿ ಒಂದು ಪರಮದಿವ್ಯ ಸಂದೇಶ.
ಗಣಪತಿಯೊಂದು ನೀತಿಸಂಹಿತೆ. ಆತನೊಂದು ನೀತಿಪಾಠ.
ಅದೊಂದು ಸಲ,
ಕುಬೇರನಿಗೆ ತಾನೇ ಬಹುದೊಡ್ಡ ಶ್ರೀಮಂತ;
ತಾನೊಬ್ಬನೇ ಅಗಣ್ಯ ಸಂಪತ್ತಿನ ಮಾಲಿಕ ಎಂಬ ಗರ್ವಬರುತ್ತದೆ.
ತನ್ನ ಶ್ರೀಮಂತಿಕೆಯನ್ನು ದೇವತೆಗಳಿಗೆಲ್ಲ ತೋರಿಸಬೇಕು ಎಂಬ ಉದ್ದೇಶದಿಂದ
ಆತ ದೇವತೆಗಳಿಗಾಗಿ ಒಂದು ಬಹುದೊಡ್ಡ ಮೇಜವಾನಿಯನ್ನು ಏರ್ಪಡಿಸುತ್ತಾನೆ.
ಶಿವ, ಪಾರ್ವತಿಯರನ್ನು ಕೂಡ
ಆತ ಮೇಜವಾನಿಗೆ ಆಹ್ವಾನಿಸುತ್ತಾನೆ.
ಶಿವನಿಗೆ ಕುಬೇರನ ಒಳಗು ಅರ್ಥವಾಗುತ್ತದೆ.
ಆತ ಕುಬೇರನ ಗರ್ವಭಂಗ ಮಾಡಬೇಕೆಂದು ತೀರ್ಮಾನಿಸಿ
ಕುಬೇರನ ಔತಣಕೂಟಕ್ಕೆ ತಾನು ಹೋಗದೆ ಗಣಪತಿಯನ್ನು ಕಳುಹಿಸುತ್ತಾನೆ.
ಬಾಲ ಗಣಪತಿಯು ಕುಬೇರನ ಆತಿಥ್ಯವನ್ನು
ಸ್ವೀಕರಿಸುವುದಕ್ಕೆ ಹೋಗುತ್ತಾನೆ.
ಕುಬೇರ ವೈವಿಧ್ಯಮಯವಾದ ಭಕ್ಷ್ಯಭೋಜ್ಯಗಳ ಮೂಲಕ
ಗಣಪತಿಯನ್ನು ತುಷ್ಟನನ್ನಾಗಿಸಲು ಯತ್ನಿಸುತ್ತಾನೆ.
ಆದರೆ ಕುಬೇರ ಅಂದುಕೊಂಡ ಹಾಗೆ ಆಗುವುದಿಲ್ಲ.
ಲಂಬೋದರನ ಉದರವದು ಕುಬೇರನ
ಪಾಕಶಾಲೆಯಲ್ಲಿರುವುದನ್ನೆಲ್ಲ “ಸ್ವಾಹಾ” ಮಾಡುತ್ತದೆ.
ಗಣಪತಿಯ ಹಸಿವು ನೀಗುವುದಿಲ್ಲ.
ಕುಬೇರ ಅದೆಷ್ಟೇ ತಂದುಹಾಕಿದರೂ,
ಅದೇನೇ ತಂದುಹಾಕಿದರೂ ಗಣಪತಿಯು ಎಲ್ಲವನ್ನೂ ತಿಂದುಹಾಕುತ್ತಾನೆ.
ಗಣಪತಿಯು ಕುಬೇರನ ಅರಮನೆಯಲ್ಲಿನ ಪಾತ್ರೆ, ಪರಿಕರಗಳನ್ನೆಲ್ಲ
ತಿಂದುಹಾಕುವುದಕ್ಕೆ ತೊಡಗುತ್ತಾನೆ. ಈ ಬಾರಿಯ ಮಳೆಗೆ
ಗಣಪತಿಯ ಹಸಿವೆಯನ್ನು ಹೋಲಿಸಬಹುದು.
ಕುಬೇರ ಗಾಬರಿಯಾಗುತ್ತಾನೆ.
ಆತ ಓಡಿಬಂದು ಶಿವನಿಗೆ ಶರಣುಹೋಗುತ್ತಾನೆ.
ಗಣಪತಿಯ ಉದರಶಾಂತಿಯನ್ನು ಮಾಡುವುದು ತನ್ನಿಂದ ಸಾಧ್ಯವಿಲ್ಲ;
ದೇವತೆಗಳೆಲ್ಲರ ಮುಂದೆ ತನ್ನ ಮಾನ, ಮರ್ಯಾದೆ, ಬಡಿವಾರ....,
ಎಲ್ಲವೂ ಮೂರು ಕಾಸಿಗೆ ಮಾರಾಟವಾಗಿ ಹೋಯಿತು
ಎಂದು ಶಿವನ ಮುಂದೆ ನಾನಾವಿಧವಾಗಿ ಅಲವತ್ತುಕೊಳ್ಳುತ್ತಾನೆ.
ಇನ್ನೊಮ್ಮೆ ದೇವತೆಗಳನ್ನು ಔತಣಕೂಟಕ್ಕೆ ಕರೆಯುವಂಥ
ಔದ್ಧತ್ಯವನ್ನು ಖಂಡಿತವಾಗಿ ಮಾಡಲಾರೆ ಎಂದು ತಪ್ಪೊಪ್ಪಿಕೊಳ್ಳುತ್ತಾನೆ.
ಕುಬೇರನ ಗರ್ವಭಂಗವಾಗುತ್ತದೆ. ತನ್ನ ತಂದೆಯ ಮುಂದೆಯೇ
“ಬಿಲ್ಡ್ ಅಪ್” ಕೊಟ್ಟುಕೊಳ್ಳಲು ಹೋದ ಕುಬೇರನನ್ನು
ಗಣಪತಿ ಫಜೀತಿಮಾಡಿಹಾಕುತ್ತಾನೆ.
ಗಣಪತಿಯ ಮಾತೃಭಕ್ತಿ ಮತ್ತು ಪಿತೃಭಕ್ತಿ ಶಿರೋಧಾರ್ಯ.
ನಾವುಗಳು ಕೂಡ ಗಣಪತಿಯ ಹಾಗೆ ನಮ್ಮ
ತಂದೆ, ತಾಯಿಯನ್ನು ಪ್ರೀತಿಸಬೇಕು; ಮತ್ತವರನ್ನು ಗೌರವಿಸಬೇಕು.
ಸ್ವಾತಂತ್ರ್ಯಪೂರ್ವದಲ್ಲಿ ಭಾರತೀಯರನ್ನು ಸಂಘಟಿಸುವುದಕ್ಕಾಗಿ
ಲೋಕಮಾನ್ಯರೆಂಬ “ಅಭೂತಪೂರ್ವ” ಗೌರವಕ್ಕೆ ಪಾತ್ರರಾದ
ಬಾಲಗಂಗಾಧರ ತಿಲಕ್‌ರವರು,
ಈ ಮೊದಲು ಮನೆ ಮನೆಯಲ್ಲಿ ಪೂಜೆಗೊಳ್ಳುತ್ತಿದ್ದ
ಗಣಪತಿಯ ಪೂಜೆಗೆ ಸಾರ್ವಜನಿಕ ದೀಕ್ಷೆಯನ್ನು ಕೊಡುತ್ತಾರೆ.
ತನ್ಮೂಲಕ ಅವರು ಗಣಪತಿಯ ಪೂಜೆಯನ್ನು ಸಾರ್ವಜನಿಕಗೊಳಿಸುತ್ತಾರೆ.
ಗಣಪತಿಪೂಜೆಗೆ ಅವರು ಸಾರ್ವಜನಿಕದೀಕ್ಷೆಯನ್ನು ಕೊಟ್ಟು
ಅದನ್ನು ಗಣೇಶೋತ್ಸವವಾಗಿಸುತ್ತಾರೆ.
ಗಣಪತಿಯ ಪೂಜೆಯನ್ನು ತಿಲಕರು ಜಾತ್ಯತೀತಗೊಳಿಸುತ್ತಾರೆ
ಮತ್ತು ಗಣಪತಿಯ ಪೂಜೆಯನ್ನು ಅವರು ಮನೆಯಿಂದ ಆಚೆ ತಂದು
ಅದನ್ನು ಗೃಹಾತೀತವಾಗಿಸುತ್ತಾರೆ. ಜನಗಳು ಗಣಪತಿಯನ್ನು ವೃತ್ತಗಳಲ್ಲಿಟ್ಟು,
ಬೀದಿಗಳಲ್ಲಿಟ್ಟು ಪೂಜಿಸುವ ಹಾಗೆ ಮಾಡುತ್ತಾರೆ.
ಗಣೇಶೋತ್ಸವಕ್ಕೆ ಅವರು ಸಾಂಸ್ಕೃತಿಕ
ಹಾಗೂ ಸಾಮಾಜಿಕ ಮೆರಗನ್ನು ನೀಡುತ್ತಾರೆ.
ತಿಲಕರಿಂದಾಗಿ ಗಣಪತಿಯು “ಮಾಸ್ ಗಾಡ್”’ಆಗಿ
ಜನಗಳ ಮನಸ್ಸನ್ನು ಕಟ್ಟುವ ಕೆಲಸಮಾಡುತ್ತಾನೆ.”
ಗಣಪತಿಯು ಬರೀ “ಮಾಸ್ ಗಾಡ್” ಮಾತ್ರ ಅಲ್ಲ,
ಆತ ಈ ದೇಶದಲ್ಲಿ “ಫ್ರೀಡಮ್ ಗಾಡ್” ಎಂಬ ಗೌರವಕ್ಕೂ ಪಾತ್ರನಾಗಿದ್ದಾನೆ.
ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಿಸುವುದರಲ್ಲಿ
ಗಣೇಶೋತ್ಸವಗಳ ಅಹಂಭೂಮಿಕೆ ಇದೆ.
ಇಂದು ಅದೇ ಗಣೇಶೋತ್ಸವಗಳು ನಮ್ಮ, ನಿಮ್ಮಗಳನ್ನು
ಪರಸ್ಪರ ಸಂಘಟಿಸುವಲ್ಲಿ ಅಹಂಭೂಮಿಕೆಯನ್ನು ವಹಿಸಬೇಕಾಗಿದೆ.
ಗಣೇಶೋತ್ಸವಗಳು ನಮ್ಮೆಲ್ಲರ ಸಂಘಟನೆಗೆ “ಶ್ರೀಗಣೇಶ” ಹೇಳಬೇಕಿದೆ.
ಅಂದು ಸಮರಕ್ಕಾಗಿ ಗಣೇಶೋತ್ಸವವಾದರೆ
ಇಂದು ಸಾಮರಸ್ಯಕ್ಕಾಗಿ ಗಣೇಶೋತ್ಸವಗಳು ನಡೆಯಬೇಕಿದೆ.
ಅಂದು ರಾಷ್ಟ್ರೋತ್ಥಾನಕ್ಕಾಗಿ ಗಣೇಶೋತ್ಸವವಾದರೆ
ಇಂದು ರಾಷ್ಟ್ರಜಾಗೃತಿಗಾಗಿ ಗಣೇಶೋತ್ಸವಗಳು ನಡೆಯಬೇಕಿದೆ.
ಅಂದು ಬ್ರಿಟಿಷರಿಗೆ “ಕ್ವಿಟ್ ಇಂಡಿಯಾ” ಹೇಳುವುದಕ್ಕೆ
ಗಣೇಶೋತ್ಸವಗಳು ನಡೆದರೆ
ಇಂದು “ಕಮಿಟ್‌ಮೆಂಟ್ ಫಾರ್ ಇಂಡಿಯಾ” ಎಂಬ ಹೇಳುವುದಕ್ಕಾಗಿ
ಗಣೇಶೋತ್ಸವಗಳು ನಡೆಯಬೇಕಿದೆ.
ಗಣಪತಿಯನ್ನು ಬರೀ ಹಿಂದೂಗಳು ಮಾತ್ರವಲ್ಲ;
ತುಂಬ ಜನ ಮುಸ್ಲೀಂರೂ ಸಹ ಗಣಪತಿಯನ್ನು ಪೂಜಿಸುತ್ತಾರೆ.
ಅವರು ತಮ್ಮ ಮನೆ, ಮನೆಗಳಲ್ಲಿ
ಗಣಪತಿಯನ್ನು ಇಟ್ಟು ಪೂಜೆಮಾಡದೆ ಇರಬಹುದು.
ಆದರೆ ಸಾರ್ವಜನಿಕ ಗಣಪತಿಯ ಪೂಜೆ ಮತ್ತು ಉತ್ಸವದಲ್ಲಿ
ಅವರುಗಳು ಅಹಂಭೂಮಿಕೆಯನ್ನು ವಹಿಸುತ್ತಾರೆ.
ಇದಕ್ಕೆ ದೇಶದ ತುಂಬ ಸಾಕಷ್ಟು ಉದಾಹರಣೆಗಳು ಸಿಕ್ಕುತ್ತವೆ.
ನಮ್ಮ ಕರ್ನಾಟಕದ ಹಾಗೆ,
ನಮ್ಮ ಗಣಪತಿ ಸರ್ವಜನಾಂಗದ ತೋಟ
ಮತ್ತು ಸರ್ವಜನಾಂಗದ ದೈವ.
ಗಣಪತಿ ಸಾಮರಸ್ಯದ ಪ್ರತೀಕ.
ಗಣಪತಿ ಭಾವೈಕ್ಯದ ಪ್ರತೀಕ. ಗಣಪತಿ ಸನಾತನದ ಪ್ರತೀಕ.
ಗಣಪತಿ ಸಂಸ್ಕೃತಿಯ ಪ್ರತೀಕ. ಗಣಪತಿ ಸಾತ್ತ್ವಿಕದ ಪ್ರತೀಕ.
ಗಣಪತಿ ಬೌದ್ಧಿಕದ ಪ್ರತೀಕ.
ಗಣಪತಿ ಓಜಸ್ಸು, ತೇಜಸ್ಸುಗಳ ಪ್ರತೀಕ.
ಗಣಪತಿ ಭಾರತದ ಹಿರಿಮೆ, ಗರಿಮೆಗಳ ಪ್ರತೀಕ.
ಇಡೀ ಭಾರತ ಗಣಪತಿಯ ದಿವ್ಯಪಾದಗಳಿಗೆ
“ನಮೋ ನಮೋ” ಹೇಳುತ್ತದೆ.
ಮಕ್ಕಳು ತಮ್ಮ ತಂದೆಗೆ “ಪಪ್ಪಾ” ಎಂದು ಕರೆಯುವ ಹಾಗೆ,
ಇಡೀ ಭಾರತ ಗಣಪತಿಗೆ “ಬಪ್ಪಾ” ಎಂದು ಕರೆಯುತ್ತದೆ.
ನಮ್ಮ, ನಿಮ್ಮಗಳ ಗಣಪತಿ ತ್ರಿಕಾಲವಂದನೀಯ
ಮತ್ತು ಆತ ಅನುಗಾಲಸ್ಮರಣೀಯ.”
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
Comments
Post a Comment