ನಮ್ಮ, ನಿಮ್ಮಗಳದು ಬರೀ ಕೋಪ.
ಪ್ರಕೃತಿಯದು ಭಾರೀ ಪ್ರಕೋಪ.
ನಮ್ಮ ನಿಮ್ಮಗಳ ಕೋಪವದು ಎಷ್ಟೊಂದು
ಹಾನಿಯನ್ನು ಉಂಟುಮಾಡುತ್ತದೆ
ಎಂಬುವುದು ನಮ್ಮೆಲ್ಲರ ಗಮನಕ್ಕೆ
ಮತ್ತು ಸ್ವಾನುಭವಕ್ಕೆ ಬಂದಿರುತ್ತದೆ.
ಇನ್ನು ಪ್ರಕೃತಿಯ ಪ್ರಕೋಪವದು
ಅದೆಷ್ಟೊಂದು ಹಾನಿಯನ್ನು ಉಂಟುಮಾಡಬಹುದು
ಎಂಬುವುದು ನಾವುಗಳು ಊಹಿಸಿಕೊಳ್ಳಬೇಕಷ್ಟೇ.
ನಿಜಕ್ಕೂ ಹೇಳಬೇಕೆಂದರೆ,
ಅದು ಊಹೆಗೂ ಅತೀತ. ಅದು ಊಹಾತೀತ!!
ಈವಾಗ ಮಾನಸ ಸರೋವರವನ್ನು ನೋಡುವುದಕ್ಕೆ
ಬಹಳ ದೂರ ಹೋಗಬೇಕಿಲ್ಲ.
ಸದ್ಯ ಬೆಂಗಳೂರಿಗೆ ಹೋದರೆ ಮಾನಸ ಸರೋವರವನ್ನು
ಧಾರಾಳವಾಗಿ ನೋಡಬಹುದು.
ಧಾರಾಕಾರವಾಗಿ ಸುರಿಯುತ್ತಿರುವ ಮಳೆ
ಬೆಂಗಳೂರನ್ನು ಮಾನಸ ಸರೋವರವನ್ನಾಗಿಸಿದೆ.
ಜನಗಳು ರಾಜಕಾಲುವೆಗಳನ್ನುನುಂಗಿಹಾಕಿದರು.
ಈಗ ರಾಜಕಾಲುವೆಗಳು ಜನಗಳ
ಬಾಳು, ಬದುಕನ್ನು ನುಂಗಿಹಾಕುತ್ತಿವೆ,
ಅದೂ ಕೂಡ ರಾಜಾರೋಷವಾಗಿ!!
“ಮಾಡಿದ್ದುಣ್ಣೋ ಮಹಾರಾಯ,
ಬಿತ್ತಿದ್ದನ್ನು ಬೆಳೆದುಕೋ,
ಉಂಡಿದ್ದನ್ನು ಕಕ್ಕಿಕೋ” -
ಎಂಬ ಈ ಕರ್ಮಸಿದ್ಧಾಂತವನ್ನು ತಿಳಿದುಕೊಳ್ಳುವುದಕ್ಕೆ
ಧರ್ಮಗ್ರಂಥಗಳನ್ನು, ಆಧ್ಯಾತ್ಮಿಕ ಗ್ರಂಥಗಳನ್ನು
ಭಗವದ್ಗೀತೆಯನ್ನು ಓದಬೇಕಿಲ್ಲ.
ಸದ್ಯ ಬೆಂಗಳೂರ ಮಹಾನಗರವನ್ನು ನೋಡಿದರೆ ಸಾಕು.
ಮನುಷ್ಯ ಮತಿಮೀರಿ ಆಸೆಪಡುತ್ತಾನೆ.
ಆಸೆ ಅತಿಯಾಗಿಬಿಟ್ಟು ಅದನ್ನು ಸುಧಾರಿಲಾಗದೆ ಅದೊಂದು ದಿನ
ತನಗೆ ತಾನೇ “ಇತಿಶ್ರೀ” ಹೇಳಿಕೊಂಡು ಹೊರಟುಹೋಗುತ್ತಾನೆ.
“ಎಲ್ಲವೂ ತನ್ನದೇ” ಎಂದು ಅಬ್ಬರಿಸುತ್ತ,
ಹುಬ್ಬೇರಿಸುತ್ತ ಸದ್ದುಮಾಡುತ್ತಾನೆ.
ಕೊನೆಗೆ “ಯಾವುದೂ ತನ್ನದಲ್ಲ” ಎಂಬ ಸತ್ಯಕ್ಕೆ ಸಾಕ್ಷಿಯಾಗಿ
ಸದ್ದಿಲ್ಲದೆ ಹೊರಟುಹೋಗುತ್ತಾನೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
Comments
Post a Comment