ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ, ಬರೀ ಇದೊಂದು ಹೆಸರಲ್ಲ. ಇದು ಬಹುಜನಗಳ ಉಸಿರು.
ನರೇಂದ್ರ ಮೋದಿ ಎಂಬ ಈ ಹೆಸರು ಈಗ ಬಹುಜನಗಳ ಬ್ರಹ್ಮಬಲ, ಅಹೋಬಲ ಮತ್ತು ಮಹಾಬಲ.
ನರೇಂದ್ರ ಮೋದಿ ಎಂಬ ಹೆಸರು, ಈಗ ವಿಶ್ವದಾದ್ಯಂತ ಚಿರಪರಿಚಿತ.
ನರೇಂದ್ರ ಮೋದಿ ಹೆಸರು ಈಗ ಜಗದಗಲ, ಮುಗಿಲಗಲ, ಮಿಗೆಯಗಲ.
ನರೇಂದ್ರ ಮೋದಿಯವರ ಹೆಸರು ಕೇಳುತ್ತಲೇ
ಬರೀ ಜನಗಳ ಕಣ್ಣುಗಳು ಮತ್ತು ಕಿವಿಗಳು ಮಾತ್ರವಲ್ಲ,
ಇಡೀ ಜಗತ್ತಿನ ಕಣ್ಣುಗಳು, ಕಿವಿಗಳು ಚುರುಕಾಗುತ್ತವೆ.
ನರೇಂದ್ರ ಮೋದಿ ಎಂದರೆ ಅದು ಬರೀ ಹೆಸರಲ್ಲ;
ನರೇಂದ್ರ ಮೋದಿ ಎಂದರೆ ಅದೊಂದು ಸಂಚಲನ;
ಅದೊಂದು ಅದಮ್ಯ ಇಚ್ಛಾಶಕ್ತಿ;
ಅದೊಂದು ಅದ್ಭುತ ದೇಶಪ್ರೇಮ;
ಅದೊಂದು ಅಪರಿಮಿತ ರಾಷ್ಟ್ರಶಕ್ತಿ;
ಅದೊಂದು ಅಸ್ಖಲಿತ ಜೀವನಗಾಥೆ;
ಅದೊಂದು ಧೀಮಂತ ಜೀವನಯಾತ್ರೆ.
ನರೇಂದ್ರ ಮೋದಿ ಎಂದರೆ ಬರೀ ವ್ಯಕ್ತಿಯಲ್ಲ.
ನರೇಂದ್ರ ಮೋದಿ ಎಂದರೆ ಅದು ಕರ್ತವ್ಯನಿಷ್ಠೆ.
ನರೇಂದ್ರ ಮೋದಿ ಎಂದರೆ ಅದು ಬದ್ಧತೆ.
ನರೇಂದ್ರ ಮೋದಿ ಎಂದರೆ ಅದು ಪ್ರಬುದ್ಧತೆ.
ನರೇಂದ್ರ ಮೋದಿ ಎಂದರೆ ಅದು ನಿಖರತೆ.
ನರೇಂದ್ರ ಮೋದಿ ಎಂದರೆ ಪ್ರಖರತೆ.
ಹಾಗೆಂದು ಬರೀ ಹೇಳೋದಕ್ಕಲ್ಲ; ಅದು ಸಾಬೀತಾಗಿದೆ.
ಅವತ್ತು “ನರೇಂದ್ರ” ಎಂಬ ಹೆಸರಿಗೆ ವಿಶಿಷ್ಟ ತಾಕತ್ತಿದೆ
ಮತ್ತು ವಿಲಕ್ಷಣ ತಾಕತ್ತಿದೆ ಎಂಬುವುದನ್ನು
ಸ್ವಾಮಿ ವಿವೇಕಾನಂದರು ಸಾಬೀತುಪಡಿಸಿದ್ದರು.
ಈವಾಗ “ನರೇಂದ್ರ” ಎಂಬ ಹೆಸರಿಗೆ
ವಿಶಿಷ್ಟ ಹಾಗೂ ವಿಲಕ್ಷಣ ತಾಕತ್ತು ಮತ್ತು ಶಕ್ತಿ ಇರುವುದನ್ನು
ಮೋದಿಯವರು ಸಾಬೀತುಪಡಿಸಿದ್ದಾರೆ.
ಗಟ್ಟಿಯಾದ ನಡೆ ಮತ್ತು ಗಟ್ಟಿಯಾದ ನುಡಿಗೆ
ಮೋದಿಯವರು ಇನ್ನೊಂದು ಹೆಸರು.
ಮೋದಿಯವರಲ್ಲಿ ಎದೆಯುಬ್ಬಿಸಿ ನಡೆಯುವ ತಾಕತ್ತಿದೆ.
ನರೇಂದ್ರ ಮೋದಿಯವರು
“ಧೈರ್ಯ” ಮತ್ತು “ಸ್ಥೈರ್ಯ” ಪದಗಳಿಗೆ ಪರ್ಯಾಯ. ವಿಕಲ್ಪ.
ಈ ಜಗತ್ತಿನಲ್ಲಿ ಏನಾದರೂ ಆಗಬಹುದು.
ಆದರೆ ಮೋದಿಯಾಗುವುದು ಕಷ್ಟ.
ಮೋದಿಯವರು ಸಾಕಷ್ಟು ಕಷ್ಟಗಳನ್ನು ಸಹಿಸಿ,
ಪೆಟ್ಟುಗಳನ್ನು ತಿಂದು ಮೋದಿಯವರಾಗಿದ್ದಾರೆ.
ಇದು ಕಾರಣ, ಅವರು ಯಾರಿಗೂ ಜಗ್ಗುವುದಿಲ್ಲ;
ಅವರು ಯಾರ ಮುಂದೆಯೂ ಬಾಗುವುದಿಲ್ಲ.
ಅವರು ಮತ್ತೆ ಮತ್ತೆ ಸುತ್ತಿಗೆಯ ಪೆಟ್ಟುತಿಂದು
ಗಟ್ಟಿಯಾಗಿ ರೂಪುಗೊಂಡಿದ್ದಾರೆ.
ಅವರ ಮೈ, ಮನಸ್ಸುಗಳು ಗಟ್ಟಿಯಾಗಿವೆ.
ಅವರು ನಡೆದು ಬಂದ ದಾರಿ ಹೂವಿನದಲ್ಲ
ನರೇಂದ್ರ ಮೋದಿಯವರ ಮನಸ್ಸಿನಷ್ಟೇ ದೇಹ ಗಟ್ಟಿ.
ಅವರ ದೇಹದಷ್ಟೇ ಮನಸ್ಸು ಗಟ್ಟಿ.
ನಮ್ಮ ದೇಶದ ದೇವಾಲಯಗಳಲ್ಲಿ ಪ್ರತಿನಿತ್ಯದಲ್ಲೂ
ದೇವರುಗಳಿಗೆ ಸ್ತುತಿಅಷ್ಟೋತ್ತರವಾಗುವಂತೆ
ಮೋದಿಯವರಿಗೂ ಕೂಡ ಈ ದೇಶದಲ್ಲಿ
ದಿನಾಲೂ ವಿರೋಧಿಗಳಿಂದ
ನಿಂದಾಅಷ್ಟೋತ್ತರವಾಗುತ್ತಲೇ ಇರುತ್ತದೆ.
ಆದರೆ ಮೋದಿ ಅದಾವುದಕ್ಕೂ ಕುಗ್ಗುವುದಿಲ್ಲ
ಮತ್ತು ಕುಸಿಯುವುದಿಲ್ಲ.
ವಿರೋಧಿಗಳು ಅವರನ್ನು ಬಯ್ದಷ್ಟು
ಅವರ ಶಕ್ತಿ, ಸಾಮರ್ಥ್ಯಗಳು ಹೆಚ್ಚುತ್ತಲೇ ಇವೆ.
ರಾಷ್ಟ್ರಕವಿ ಕುವೆಂಪುರವರು ಹೇಳಿದ ಹಾಗೆ,
“ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ,
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ -
ಭಾರತಖಂಡದ ಹಿತವೇ ನನ್ನ ಹಿತವೆಂದು,
ಭಾರತಮಾತೆಯ ಮತವೇ ನನ್ನ ಮತವೆಂದು,
ಭಾರತಾಂಬೆಯ ಸುತರೇ ಸೋದರರು ಎಂದು,
ಭಾರತಾಂಬೆಯ ಮುಕ್ತಿ, ಮುಕ್ತಿ ನನಗೆಂದು,
ನಡೆ ಮುಂದೆ, ನಡೆ ಮುಂದೆ ನುಗ್ಗಿ ನಡೆ ಮುಂದೆ” -
ಮೋದಿಯವರದು ನುಗ್ಗಿ ನಡೆಯುವ ಜಾಯಮಾನ. ”
ಮೋದಿಯವರ ವಿಷಯದಲ್ಲಿ ಇನ್ನೊಂದು ವಿಶೇಷವೇನೆಂದರೆ,
ಮೋದಿಯವರಿಗೆ ವಿರೋಧಿಗಳಿಂದಲೂ
ಅಷ್ಟೋತ್ತರ ಮತ್ತು ಅಭಿಮಾನಿಗಳಿಂದಲೂ ಅಷ್ಟೋತ್ತರ!!
ವಿರೋಧಿಗಳಿಂದ ಮೋದಿಯವರಿಗೆ
ನಿಂದಾಷ್ಟೋತ್ತರವಾದರೆ ಅಭಿಮಾನಿಗಳಿಂದ
ಅವರಿಗೆ ಪ್ರಶಂಸಾಷ್ಟೋತ್ತರ.
ಈ ಎರಡರಲ್ಲೂ ಅವರು ಸ್ಥಿತಪ್ರಜ್ಞರು
ಮತ್ತು ಈ ಈರ್ವರಲ್ಲೂ ಅವು ಹಿತಪ್ರಜ್ಞರು.
ಅವರು ಹೊಗಳಿಕೆಗಾಗಲಿ, ತೆಗಳಿಕೆಗಾಗಲಿ
ಹೆಪ್ಪು, ಸೊಪ್ಪುಹಾಕದೆ ಕಾಯಕವೇ ಕೈಲಾಸವೆನ್ನುತ್ತ
ತಮ್ಮ ಕಾರ್ಯ, ಕೆಲಸಗಳನ್ನು ಮಾಡಿಕೊಂಡು
ಮುನ್ನುಗ್ಗಿಕೊಂಡಿರುತ್ತಾರೆ.
ವಿರೋಧಿಗಳು ವಿಧ ವಿಧವಾಗಿ ಬಯ್ದರೂ
ಮೋದಿಯವರು ತಾಳ್ಮೆ ಕಳೆದುಕೊಳ್ಳುವುದಿಲ್ಲ.
ಆ ಕೃಷ್ಣನಾದರೋ ಶಿಶುಪಾಲ ಬಯ್ಯುವಾಗ
ಕೊನೆಯದಾಗಿ ತಾಳ್ಮೆ ಕಳೆದುಕೊಳ್ಳುತ್ತಾನೆ.
ನರೇಂದ್ರ ಮೋದಿಯವರು ಮಾತ್ರ ತಾಳ್ಮೆ ಕಳೆದುಕೊಳ್ಳುವುದಿಲ್ಲ.
ಮೋದಿಯವರನ್ನು ಮತ್ತೆ ಮತ್ತೆ ಬಹುಮತಗಳಿಂದ
ಆಯ್ಕೆಮಾಡಿ ಕಳುಹಿಸುವ ಮೂಲಕ
ಜನರೇ ವಿರೋಧಿಗಳಿಗೆ ಬಲವಾಗಿ ಉತ್ತರಿಸುತ್ತಾರೆ.
ಮೋದಿಯವರ ವ್ಯಕ್ತಿತ್ವ ಹಗರಣಬಾಹಿರ.
ಅವರ ಸುತ್ತಮುತ್ತ ಹೆಂಡತಿ, ಮಕ್ಕಳು, ಗಡಿಬಿಡಿ,
ಗದ್ದಲ, ಗೊಂದಲ ಇರದೇ ಇರೋದರಿಂದ
ಮೋದಿಯವರಲ್ಲಿ ವಿರೋಧಿಗಳ ಟೀಕೆಗೆ
ಬೇಕಾಗುವಂಥ ಸರಕು ಇಲ್ಲ.
ಇದು ಕಾರಣ,
ಮೋದಿವಿರೋಧಿಗಳು ಅವರು
ಧರಿಸುವ ಬಟ್ಟೆಗಳ ಕುರಿತು ಟೀಕಾಪ್ರಹಾರ ಮಾಡುತ್ತಾರೆ.
ಮೋದಿಯವರು ಜನಗಳ ದೃಷ್ಟಿಯಲ್ಲಿ,
“ಡಾಟ್‌ಲೆಸ್” ಮತ್ತು “ಡೌಟ್‌ಲೆಸ್” ಲೀಡರ್.
ಮೋದಿಯವರು ಕಳಂಕರಹಿತ ಮತ್ತು ಸಂದೇಹರಹಿತ ನಾಯಕ.
ಮೋದಿಯವರ ನಾಯಕತ್ವಕ್ಕೆ ಮತ್ತು ಪಾರದರ್ಶಕತೆಗೆ
ವಿಶ್ವದ ಶೀರ್ಷನಾಯಕರು ಅವರಿಗೆ ತಲೆಬಾಗುತ್ತಾರೆ.
ಒಬಾಮಾ, ಬೈಡನ್, ಪುಟಿನ್‌ರಂಥ ಮಹಾನಾಯಕರು
ಅವರ ಸಖ್ಯವನ್ನು ಬಯಸುತ್ತಾರೆ.
ಮೋದಿಯವರು ಜನಪ್ರಿಯತೆಯಲ್ಲಿ
ವಿಶ್ವದ ಶೀರ್ಷನಾಯಕರನ್ನು ಹಿಂದಿಕ್ಕಿದ್ದಾರೆ.
ನರೇಂದ್ರ ಮೋದಿಯವರು
ಯೋಜನೆ ಮತ್ತು ಯೋಚನೆಗಳ ಕೂಡಲಸಂಗಮ.
ಅಷ್ಟು ಮಾತ್ರವಲ್ಲ,
ಮೋದಿಯವರು ಚಂದ್ರಗುಪ್ತ, ಚಾಣಕ್ಯರ ಸಂಗಮವೂ ಕೂಡ ಅಹುದು.
ಮೋದಿಯವರಲ್ಲಿ ಚಂದ್ರಗುಪ್ತನ ಸಾಹಸವಿದೆ.
ಅವರಲ್ಲಿ ಚಾಣಕ್ಯನ ಕೌಶಲ್ಯವಿದೆ.
ಮೋದಿಯವರು ಬಾಲ್ಯದಿಂದಲೇ
ತಮ್ಮನ್ನು ರಾಷ್ಟ್ರಾರ್ಪಣಗೊಳಿಸಿದ್ದಾರೆ.
ಅವರು ತಮಗೆ ತಾವೇ
“ರಾಷ್ಟ್ರಾರ್ಪಣಮಸ್ತು” ದೀಕ್ಷೆಯನ್ನು ಕೊಟ್ಟುಕೊಂಡಿದ್ದಾರೆ.
ಮೋದಿಯವರು ಬಡತನದ ಹಿನ್ನೆಲೆಯಿಂದ ಬೆಳೆದುಬಂದವರು.
ಅವರದು ಶ್ರೀಸಾಮಾನ್ಯ ಕುಟುಂಬ.
ಇದು ಕಾರಣ, ಅವರಿಗೆ ಬಡವರ ಕಷ್ಟಸುಖಗಳು
ಬೇಗನೇ ಗಮನಕ್ಕೆ ಬರುತ್ತವೆ. ಬಹುಮುಖ್ಯವಾಗಿ
ಮೋದಿಯವರು ಭಾರತದ ಮಧ್ಯಮವರ್ಗದ ಜನರ ಧ್ವನಿಯಾಗಿ
ಗುರುತಿಸಿಕೊಂಡಿದ್ದಾರೆ.
ಮೋದಿಯವರನ್ನು ವಿರೋಧಿಸುವವರು
ಅವರನ್ನು “ಶ್ರೀಮಂತರ ಜೇಬು” ಎಂದು ಟೀಕಿಸುತ್ತಾರೆ.
ಆದರೆ ಮಧ್ಯಮವರ್ಗದ ಜನಗಳು ಈ ಟೀಕೆಯನ್ನು ಒಪ್ಪುತ್ತಿಲ್ಲ.
ಮೋದಿಯವರಿಗೆ ಶ್ರೀಮಂತರನ್ನು ಓಲೈಸಿ
ಆಗಬೇಕಾದುದು ಏನೂ ಇಲ್ಲ ಎಂಬುವುದು ಜನಗಳಿಗೆ ಗೊತ್ತಿದೆ.
ಈ ದೇಶದಲ್ಲಿ ನರೇಂದ್ರ ಮೋದಿಯವರನ್ನು
ಪ್ರೀತಿಸುವವರನ್ನು “ಹುಚ್ಚ” ಎನ್ನುವವರೂ ಇದ್ದಾರೆ.
ಹಾಗೆಯೇ ಮೋದಿಯವರನ್ನು ಹುಚ್ಚುಚ್ಚಾಗಿ,
ಅಚ್ಚುಮೆಚ್ಚಾಗಿ ಪ್ರೀತಿಸುವವರೂ ಇದ್ದಾರೆ.
ವಿರೋಧಿಗಳು ಮೋದಿಯವರನ್ನು “ಮಾಂತ್ರಿಕ” ಎನ್ನುತ್ತಾರೆ.
ಆದರೆ ಮೋದಿಪರವಾದಿಗಳು ಮತ್ತವರ ಅಸಂಖ್ಯಾತ ಅಭಿಮಾನಿಗಳು
ಅವರನ್ನು “ಮಂತ್ರ” ಎಂದು ಭಾವಿಸಿದ್ದಾರೆ.
ಅವರಿಗೆ ಮೋದಿಯವರೆಂದರೆ “ನಮೋ!!
ಮೋದಿಯವರು ಹೆಚ್ಚು ಓದಿರಲಿಕ್ಕಿಲ್ಲ.
ಅವರು ತಮ್ಮ ಹೆಗಲು ಮತ್ತು ಕೊರಳುಗಳಿಗೆ
ಭಾರವಾದ ಡಿಗ್ರಿಗಳನ್ನು ನೇತುಹಾಕಿಕೊಂಡಿರಲಿಕ್ಕಿಲ್ಲ.
ಆದರೆ ಅವರಲ್ಲಿ ತಾವು ಓದಿರುವುದನ್ನು
ಮತ್ತು ಅಚ್ಚುಕಟ್ಟಾಗಿ ತಾವು ತಿಳಿದುಕೊಂಡಿರುವುದನ್ನು
ಜನಗಳಿಗೆ ನೇರವಾಗಿ ತಲುಪಿಸುವ ಸಾಮರ್ಥ್ಯವಿದೆ.
ಮೋದಿಯವರ ಮಾತುಗಳನ್ನು ಜನಗಳು
ಮಂತ್ರಮುಗ್ಧರಾಗಿ ಕೇಳುತ್ತಾರೆ.
ಮೋದಿಯವರು ಮನದಾಳದಿಂದ ಮಾತನಾಡುತ್ತಾರೆ.
ಇದು ಕಾರಣ,
ಜನಗಳು ಅವರ “ಮನ್ ಕೀ ಬಾತ್”ಗೆ ಕಿವಿಯಾಗುತ್ತಾರೆ.
ಮೋದಿಯವರಲ್ಲಿ ಓರ್ವ ದಾರ್ಶನಿಕ,
ಓರ್ವ ಸನ್ಯಾಸಿ, ಓರ್ವ ಕವಿ, ಓರ್ವ ಸಾಧಕ,
ಓರ್ವ ತಪಸ್ವಿ ಇದ್ದಾನೆ.
ಬಹುಮುಖ್ಯವಾಗಿ ಅವರಲ್ಲಿ ಓರ್ವ ಫಕೀರನಿದ್ದಾನೆ.
ಮೋದಿಯವರು “ಕಿಂಗ್ ಮೇಕರ್” ಆಗಿರುವ ಹಾಗೆ
ಅವರು “ಕಿಂಗ್ ಫಿಲಾಸಾಫರ್” ಕೂಡ ಅಹುದು.
ನಮ್ಮ ದೇಶದಲ್ಲಿಯೇ ಆಗಿರಬಹುದು
ಇಲ್ಲವೆ ವಿದೇಶಗಳಲ್ಲಿಯೇ ಆಗಿರಬಹುದು;
ಪುಟ್ಟ ಪುಟ್ಟ ಮಕ್ಕಳನ್ನು ಮೊದಲುಮಾಡಿಕೊಂಡು
ವಯೋವೃಧ್ಧರವರೆಗೆ ಎಲ್ಲರೂ “ಮೋದಿ, ಮೋದಿ” ಎನ್ನುತ್ತಾರೆ.
ಮೋದಿ ಈಗ ಎಲ್ಲರಿಗೂ ಬಾಯಿಪಾಠವಲ್ಲ.
ಮೋದಿ ಈಗ ಎಲ್ಲರಿಗೂ ಮನೆಪಾಠ!!
ಜನಗಳು “ಹರ್ ಹರ್ ಮಹಾದೇವ್” ಎಂದು ಹೇಳುತ್ತ
ಮಹಾದೇವನನ್ನು ಸಂಭ್ರಮಿಸುವ ಹಾಗೆ
“ಘರ್ ಘರ್ ಮೋದಿ” ಎಂದು ಹೇಳುತ್ತ
ಮೋದಿಯವರನ್ನು ಸಂಭ್ರಮಿಸುತ್ತಿದ್ದಾರೆ.
ಅದೇನು ಕಾರಣವೆಂದರೆ,
ಮೋದಿಯವರು ತಮಗಾಗಿ ಮಾತನಾಡುವುದಿಲ್ಲ;
ಅವರು ದೇಶಕ್ಕಾಗಿ ಮಾತನಾಡುತ್ತಾರೆ
ಮತ್ತು ಅವರು ದೇಶವಾಗಿ ಮಾತನಾಡುತ್ತಾರೆ
ಎಂಬ ವಿಷಯವಿದು ಎಲ್ಲರ ತಲೆಗೆ ಹೋಗಿಬಿಟ್ಟಿದೆ.
ಈ ದೇಶದಲ್ಲಿ ಅದೊಂದು ಕಾಲದಲ್ಲಿ “ಗಾಂಧೀಪರ್ವ” ಇತ್ತು.
ಈಗ ದೇಶದಲ್ಲಿ “ಮೋದಿಪರ್ವ” ಶುರುವಾಗಿದೆ.
ಇದುವರೆಗಿನದು ಗಾಂಧಿಯುಗ.
ಇನ್ನು ಮುಂದಿನದು ಮೋದಿಯುಗ!!
ಮೋದಿಯವರ ನಡೆ, ನುಡಿ ಜನಕ್ಕೆ ಇಷ್ಟವಾಗಿಬಿಟ್ಟಿದೆ.
ಮೋದಿಯವರು ಏನೇ ಹೇಳಿದರೂ
ಜನ ಅವರು ಹೇಳಿದ್ದನ್ನು ಕೇಳುತ್ತಾರೆ.
ಮೋದಿಯವರು,
ದೀಪ ಹಚ್ಚಲು ಹೇಳಿದರೆ ಜನ ದೀಪ ಹಚ್ಚುತ್ತಾರೆ;
ಅವರು ಗಂಟೆ ಬಾರಿಸಲು ಹೇಳಿದರೆ ಗಂಟೆ ಬಾರಿಸುತ್ತಾರೆ.
ಅವರು ಮನೆ ಮನೆಯಲ್ಲೂ ಧ್ವಜ ಹಾರಿಸಲು ಹೇಳಿದರೆ
ಧ್ವಜ ಹಾರಿಸುತ್ತಾರೆ.
ಮೋದಿಯವರ ಮಾತುಗಳನ್ನು
ಜನಗಳು ಶ್ರದ್ಧೆಯಿಂದ ಕೇಳುತ್ತಾರೆ
ಮತ್ತು ಭಕ್ತಿಯಿಂದ ಅವರ ಮಾತುಗಳನ್ನು ಪಾಲಿಸುತ್ತಾರೆ.
ಮೋದಿಯವರನ್ನು ಕುರಿತು ಜನಗಳಲ್ಲಿ
ಅದೆಂಥ ವಿಶ್ವಾಸ, ಭರವಸೆ ಬೆಳೆದಿದೆ ಎಂದರೆ,
“ಇಫ್ ಮೋದಿ ಈಜ್ ದೇರ್, ವಿ ಆರ್ ಸೇಫ್” -
If Modi is there we are Safe -
ಮೋದಿ ಇದ್ದರೆ ನಾವು ಸುರಕ್ಷಿತ;
ನಮ್ಮ ದೇಶ ಸುರಕ್ಷಿತ -
“ಮೋದಿ ಹೈ ತೋ
ನಾಮುಮಕಿನ್ ಭೀ ಮುಮಕಿನ್” ಎಂದು ಜನ
ಮಾತನಾಡಿಕೊಳ್ಳುತ್ತಿದ್ದಾರೆ.
ಅವತ್ತು ನಮ್ಮ ಋಷಿಮುನಿಗಳು,
“ಧಿಕ್ ಕ್ಷತ್ರಿಯಬಲಂ, ಬ್ರಹ್ಮಬಲಮೇವ ಬಲಮ್”
ಎಂದು ಹೇಳಿದ ಹಾಗೆ
ಈವಾಗ, ಈ ಹತ್ತು ವರುಷಗಳ ಅವಧಿಯಲ್ಲಿ
ಮೋದಿಯವರು,
“ಧಿಕ್ ಫೇಮಿಲಿಬಲಂ, ಜನಬಲಮೇವ ಬಲಮ್”
ಎಂದು ಹೇಳುವುದನ್ನು ಜನಗಳಿಗೆ ಅಭ್ಯಾಸಮಾಡಿಸಿದ್ದಾರೆ.
ಮೋದಿಯವರ ಅನುಯಾಯಿಗಳು,
ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಹೀಗೆ ಹೇಳುತ್ತಿದ್ದಾರೆ,
“ಧಿಕ್ ಫೇಮಿಲಿಬಲಂ, ಮೋದಿಬಲಮೇವ ಬಲಮ್” ಎಂದು!!
ಮೋದಿಬಲ ಚಿಕ್ಕದೇನಲ್ಲ.
ಅದು ಬ್ರಹ್ಮಬಲದಷ್ಟೇ ಸಬಲ ಮತ್ತು ಪ್ರಬಲ.
ಮೋದಿಯವರ ವಿಷಯದಲ್ಲಿ
ಅವರ ಅಭಿಮಾನಿಗಳು ಮತ್ತು ಅನುಯಾಯಿಗಳು
ಅದೇನೇ ಹೇಳಿದರೂ
ಮೋದಿಯವವರು ಮಾತ್ರ
“ಓರ್ವ ಆಮ್ ಆದಮೀ, ಒಬ್ಬ ಜನಸಾಮಾನ್ಯ,
ನನಗೆ ಮಾದರಿ” ಎನ್ನುತ್ತಾರೆ.
“ದೇಶದ ಪ್ರತಿಯೊಬ್ಬ ಪ್ರಜೆಯೂ ನನ್ನ ಮಾಲಿಕ.
ನಾನು ಅವರ ಸೇವಕ” ಎನ್ನುತ್ತಾರೆ ಮೋದಿಯವರು.
ಬಸವಣ್ಣನವರ ಹಾಗೆ ಮೋದಿಯವರದು ಕೂಡ
“ಎನಗಿಂತ ಕಿರಿಯರಿಲ್ಲ;
ಶಿವಭಕ್ತರಿಗಿಂತ ಹಿರಿಯರಿಲ್ಲ” ಫಿಲಾಸಫಿ.
ಬಸವಣ್ಣನವರು
“ಶಿವಭಕ್ತರಿಗಿಂತ ಹಿರಿಯರಿಲ್ಲ” ಎನ್ನುತ್ತಾರೆ.
ಮೋದಿಯವರು ದೇಶದ “ಜನಗಳಿಗಿಂತ ಹಿರಿಯರಿಲ್ಲ” ಎನ್ನುತ್ತಾರೆ.
ಈ ಸಂದರ್ಭದಲ್ಲಿ ಮೋದಿಯವರನ್ನು ಕುರಿತು
ಇನ್ನೊಂದು ಮಾತನ್ನು ಹೇಳಲೇಬೇಕು.
ಮೋದಿಯವರು ಚರಿಷ್ಮಾ, ಕರಿಷ್ಮಾಗಳ ಅಭೂತಪೂರ್ವ ಸಂಗಮ.
ಈ ದೇಶದಲ್ಲಿ ಬರೀ ಮೋದಿಯವರಿಗೆ ಅಷ್ಟೇ ಅಲ್ಲ,
ಮೋದಿಯವರ ಹೆಸರಿಗೂ ತಾಕತ್ತಿದೆ,
ರಾಮನಾಮದ ಹಾಗೆ!!
ಮೋದಿಯವರಿಗೆ ಭಾರತದ ಜನತಾ ಜನಾರ್ದನನ
ಆಶೀರ್ವಾದದ ಜೊತೆಯಲ್ಲಿ ಅವರ ತಾಯಿ
ಶತಾಯು ಹೀರಾಬೆನ್‌ರ ಆಶೀರ್ವಾದವಿದೆ.
ಮಾತೃ ಆಶೀರ್ವಾದದ ಮುಂದೆ ಇನ್ನು ಆಶೀರ್ವಾದಗಳುಂಟೆ?
ಪ್ರಧಾನಿ ನರೇಂದ್ರ ಮೋದಿಯವರ 72ನೆಯ ಜನ್ಮವರ್ಧಂತಿ
(17.09. 2022 ) ಮಹೋತ್ಸವದಂದು,
ಮೋದಿಯವರಿಗೆ ಆ ದೇವರು
ಯಥೇಷ್ಟವಾಗಿ ಆಯುಷ್ಯ
ಮತ್ತು ಆರೋಗ್ಯವನ್ನು ದಯಪಾಲಿಸಲಿ.
ಅವರಿಂದ ಈ ದೇಶಕ್ಕೆ ಮತ್ತು ಈ ದೇಶದ ಜನಗಳಿಗೆ
ಇನ್ನಷ್ಟು, ಮತ್ತಷ್ಟು ಚೈತನ್ಯ, ಸ್ಫೂರ್ತಿ ದೊರಕಲಿ -
ಎಂದು ನಾವುಗಳು ತುಂಬು ಹೃದಯದಿಂದ
ಹದುಳ ಹಾರೈಸುತ್ತೇವೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
Comments
Post a Comment