Good Morning, Happy Saturday
10th September 2022
@ TapOvnam, Hiremath, Tumkur



ಜನಾಭಿಪ್ರಾಯಕ್ಕೆ ದೊಡ್ಡ ಶಕ್ತಿ ಇದೆ.
ಜನಾಭಿಪ್ರಾಯದ ತಾಕತ್ತು ಬಲು ದೊಡ್ಡದು.




ಜನಾಭಿಪ್ರಾಯವು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸಲೂ ಬಲ್ಲುದು.

ಮತ್ತದೇ ಜನಾಭಿಪ್ರಾಯವು ವ್ಯಕ್ತಿಯ ವ್ಯಕ್ತಿತ್ವವನ್ನು ಕುರೂಪಿಸಲೂ ಬಲ್ಲುದು.

ಜನಾಭಿಪ್ರಾಯ ಅಥವಾ ಪ್ರಜಾಮತ ಓರ್ವ ವ್ಯಕ್ತಿಯನ್ನು ಹಾಲಿಯಾಗಿಸಿ
ಚಲಾವಣೆಯಲ್ಲಿ ಇರಿಸಬಲ್ಲುದು.

ಅದೇ ಜನಾಭಿಪ್ರಾಯ ಓರ್ವ ವ್ಯಕ್ತಿಯನ್ನು ಮಾಜಿಯಾಗಿಸಿಬಿಟ್ಟು ಮನೆಯಲ್ಲಿ

ಕುಳ್ಳಿರಿಸಬಲ್ಲುದು.

ಜನಾಭಿಪ್ರಾಯ ಓರ್ವ ವ್ಯಕ್ತಿಯನ್ನು ಶಾಸಕ, ಎಮ್ ಎಲ್. ಎ.  (M L A) 

ಸಂಸದ, ಎಮ್. ಪಿ. ( M P)  ರಾಜ್ಯಸಭಾಸದಸ್ಯ, ಎಮ್. ಎಲ್ ಸಿ. (M L C) 
ಮತ್ತಿನ್ನೇನೋ ಆಗಿಸಬಲ್ಲುದು.

ಅದೇ ಜನಾಭಿಪ್ರಾಯ ಆತನನ್ನು ಮಾಜಿ ಶಾಸಕ, ಮಾಜಿ ಸಂಸದ, 
ಮಾಜಿ ರಾಜ್ಯಸಭಾಸದಸ್ಯ, ಮಾಜಿ ಎಮ್. ಎಲ್. ಸಿ. 
ಮಾಜಿ ಮಂತ್ರಿ, ಮುಖ್ಯಮಂತ್ರಿ ಆಗಿಸಬಲ್ಲುದು.

ಜನಾಭಿಪ್ರಾಯಕ್ಕೆ ಎತ್ತನ್ನು ಕತ್ತೆಯಾಗಿಸುವ  ಮತ್ತು ಕತ್ತೆಯನ್ನು ಎತ್ತಾಗಿಸುವ ಶಕ್ತಿ ಇದೆ.
 
ಜನಾಭಿಪ್ರಾಯವಿದು ಇದು ತುಂಬ ವಿಚಿತ್ರ. 

ಇದೊಂದು ತೆರನಾಗಿ ``ಮರ್ಜಿ ಕಾ ಮಾಲಿಕ್''.

 
ಅದೊಂದು ವೇಳೆ, 



ತುಂಬ ಜನ ಎತ್ತನ್ನು ಕತ್ತೆ ಎನ್ನತೊಡಗಿದರೆ 
ಎತ್ತು ಎತ್ತಾಗಿದ್ದರೂ ಮತ್ತುಅದು ನಿಯತ್ತಾಗಿದ್ದರೂ 
ಅದು ಕತ್ತೆಯಾಗುತ್ತದೆ ಮತ್ತು ಅದರ ಪಾಡು ಕತ್ತೆಪಾಡಾಗುತ್ತದೆ.



ಅದೇ ಜನ, ಅದೊಮ್ಮೆ ಕತ್ತೆಯನ್ನು ಎತ್ತು ಎನ್ನತೊಡಗಿದರೆ 

ಕತ್ತೆಗೂ ಕೂಡ ಎತ್ತಿನ ಗೌರವ 

ಮತ್ತು ಎತ್ತರದ ಗೌರವ ಸಿಕ್ಕತೊಡಗುತ್ತದೆ.

“ಮಹಾಜನೋ ಯೇನ ಗತಃ ಸ ಏವ ಪಂಥಾಃ”
ಎಂದು ಮಹಾಭಾರತದ ವನಪರ್ವದಲ್ಲಿ 
ಧರ್ಮರಾಜನು ಯಕ್ಷಪ್ರಶ್ನೆಗೆ ಉತ್ತರಿಸುತ್ತಾನೆ.

“ಮಹಾಜನಗಳು ನಡೆದ ದಾರಿಯೇ  ನಿಜವಾದ ದಾರಿ” ಎಂದರ್ಥ.

ಮಹಾಭಾರತದ ಕಾಲದಲ್ಲಿ ಮಹಾಜನಗಳು ಅಂದರೆ  
ಮಹಾತ್ಮರು, ಪುಣ್ಯಪುರುಷರು ಎಂದರ್ಥ.

ಈ ಕಾಲದಲ್ಲಿ ಮಹಾಜನಗಳು ಎಂದರೆ 
ತುಂಬ ಜನಗಳು, ಹೆಚ್ಚು ಹೆಚ್ಚು ಜನಗಳು ಎಂದರ್ಥ.

ಒಬ್ಬ ವ್ಯಕ್ತಿ ಒಳ್ಳೆಯವನು ಎಂದು ಒಂದಷ್ಟು ಜನಗಳು 
ಹೇಳತೊಡಗಿದರೆ ಅಂದರೆ ಬಹುಸಂಖ್ಯಾತ ಜನಗಳು
(ಈ ಕಾಲದಲ್ಲಿ ಮಾಧ್ಯಮಗಳು) 

ಅದನ್ನು ಆ ಕೂಡಲೇ ಉಳಿದೆಲ್ಲ ಜನಗಳು  
“ಸರಿ” ಎಂದು ಒಪ್ಪಿಕೊಂಡು

ವ್ಯಕ್ತಿಯ ಒಳ-ಹೊರಗುಗಳ ಆಳ, ಆದ್ಯಂತಗಳು  
ಮತ್ತು ವ್ಯಕ್ತಿಯ ಅಬಕಗಳು
ಮತ್ತು ಆತನ ಸುತ್ತಮುತ್ತ ಗೊತ್ತಿಲ್ಲದಿದ್ದರೂ 
ಆತನಿಗೆ “ಜೈ ಪರಾಕ್” ಮತ್ತು “ಬಹುಪರಾಕ್” ಹೇಳುವುದಕ್ಕೆ 
ಶುರುಹಚ್ಚಿಕೊಂಡುಬಿಡುತ್ತಾರೆ.

ಒಬ್ಬ ವ್ಯಕ್ತಿ ಒಳ್ಳೆಯವನಲ್ಲ, 



ಅವನು ಕೆಟ್ಟವ, ಅವನೊಂದು ಕೆಡುಕು, 
ಅವನೊಂದು ಅನಿಷ್ಟ ಎಂದು 
ಒಂದಷ್ಟು ಜನಗಳು ಹೇಳತೊಡಗಿದರೆ 
ಬಹುಸಂಖ್ಯಾತ ಜನಗಳು ಹೇಳತೊಡಗಿದರೆ 
(ಈ ಕಾಲದಲ್ಲಿ ಮಾಧ್ಯಮಗಳು) 

ಅದನ್ನು ಆ ಕೂಡಲೇ ಉಳಿದ ಜನಗಳು  “ಸರಿ” ಎಂದು ಒಪ್ಪಿಕೊಂಡು  
ಆ ವ್ಯಕ್ತಿಯ ಒಳ-ಹೊರಗುಗಳು ಮತ್ತು ಆಳ, ಆದ್ಯಂತಗಳು 

ಮತ್ತು ಆತನ ಸುತ್ತಮುತ್ತ ಗೊತ್ತಿಲ್ಲದೆ ಇದ್ದರೂ ಆತನಿಗೆ 
ಹಿಗ್ಗಾಮುಗ್ಗಾ ಮತ್ತು ನಾಲಿಗೆಗೆ ಬಂದಂತೆ 
ಬಯ್ಯುವುದಕ್ಕೆ ಶುರುಹಚ್ಚಿಕೊಂಡುಬಿಡುತ್ತಾರೆ.

ಅದರಲ್ಲೂ ಈ ಕಾಲ ಸಂಪರ್ಕಕ್ರಾಂತಿಯ ಕಾಲ 
ಮತ್ತು ಇದು ಸಂವಹನಕ್ರಾಂತಿಯ ಕಾಲ.

ಈ ಕಾಲದಲ್ಲಿ ಒಳ್ಳೆಯದಕ್ಕಿಂತಲೂ 
ಕೆಟ್ಟದ್ದು ಬಹಳ ಬೇಗನೇ “ವೈರಲ್” ಆಗಿಬಿಡುತ್ತದೆ.

ರಾಮಾಯಣ, ಮಹಾಭಾರತದ ಆ ಕಾಲದಲ್ಲಿ 
ವೈರಿಗಳ ಕಾಟವಾದರೆ ಈ ಕಾಲದಲ್ಲಿ ವೈರಲ್‌ದ ಕಾಟ!!

“ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು” ಎಂದು 

ನಮ್ಮ ಹಿರಿಯರು ಮತ್ತು ಅನುಭವಿಗಳು ಹೇಳುತ್ತಾರೆ. ಆ ಮಾತಿಗೆ ಈಗ ಕವಡೆ ಕಿಮ್ಮತ್ತಿಲ್ಲ. 
ಆ ಮಾತು ಈಗ “ಬ್ಯಾನ್” ಮಾಡಿದ ನೋಟಿನಂತಾಗಿದೆ.


ಈಗ ಪ್ರಮಾಣಿಸಿ ನೋಡುವ ಹಂತಕ್ಕೆ  ಜನಗಳು ಹೋಗುವುದೇ ಇಲ್ಲ.

“ಪ್ರತ್ಯಕ್ಷ ಕಾಣುತ್ತಿಲ್ಲವೆ?  ಟಿ. ವ್ಹಿ.ಯಲ್ಲಿ ಬರುತ್ತಿಲ್ಲವೆ? 
ಇನ್ನೇನು ಪ್ರಮಾಣ ಬೇಕು?” - ಎಂದು  ಅವರು ವಾದಿಸತೊಡಗುತ್ತಾರೆ. 

ಈಗ ಮಾಧ್ಯಮಗಳೇ ಅವರಿಗೆ ಪ್ರಮಾಣ.

ನಮ್ಮ ಶಾಸ್ತ್ರಗಳು ಮತ್ತು ದಾರ್ಶನಿಕರು ನಮಗೆ

ಪ್ರತ್ಯಕ್ಷ ಪ್ರಮಾಣ, ಅನುಮಾನ ಪ್ರಮಾಣ, 
ಉಪಮಾನ ಪ್ರಮಾಣ, ಶಬ್ದ ಪ್ರಮಾಣ,

ಅರ್ಥಾಪತ್ತಿ ಪ್ರಮಾಣ,  ಅನುಪಲಬ್ಧಿ ಪ್ರಮಾಣ ಎಂಬ 
ಈ ಆರು ಪ್ರಮಾಣಗಳ ಕುರಿತು ಪಾಠಮಾಡಿದ್ದಾರೆ.

ಇವುಗಳ ಜೊತೆ ಜೊತೆಯಲ್ಲಿ ಅವರು 
ಅನುಭವ ಪ್ರಮಾಣ, ಐತಿಹ್ಯ ಪ್ರಮಾಣ, ಸಂಭಾವ್ಯ ಪ್ರಮಾಣ 
ಇತ್ಯಾದಿಗಳ ಕುರಿತು ಕೂಡ ಹೇಳಿದ್ದಾರೆ.


ಸದ್ಯ ನಾವು, ನೀವುಗಳು ಈ ಎಲ್ಲ ಪ್ರಮಾಣಗಳ ಕುರಿತು 
ತಲೆ ಕೆಡಿಸಿಕೊಳ್ಳುವುದೇ ಇಲ್ಲ.

ನಮ್ಮ, ನಿಮ್ಮಗಳಿಗೆ ಈಗ ಟಿ. ವ್ಹಿ. 
ಹಾಗೂ ಯೂಟ್ಯೂಬ್‌ಗಳೇ ಪ್ರಮಾಣವಾಗಿಬಿಟ್ಟಿವೆ.


ನಾವು ಇವುಗಳಲ್ಲಿ ಬರೋದನ್ನು 
ಮತ್ತು ಬಂದಿರೋದನ್ನು ತಕ್ಷಣ ನಂಬಿಬಿಡುತ್ತೇವೆ.

ಹಾಗೆಯೇ ಬಹುಬೇಗನೇ  ಒಂದು ನಕಾರಾತ್ಮಕ ಅಭಿಪ್ರಾಯಕ್ಕೆ 
ಜಾಗಮಾಡಿಕೊಟ್ಟುಬಿಡುತ್ತೇವೆ.

ಯಾವುದನ್ನೇ ಆಗಲಿ, ಅದು ಸತ್ಯವೋ, ಮಿಥ್ಯವೋ,
ಎಂದು ಪ್ರಮಾಣಿಸಿ ನೋಡುವುದಕ್ಕಾಗಲಿ 
ಅಥವಾ ಕಾದುನೋಡುವುದಕ್ಕಾಗಲಿ ಹೋಗುವುದೇ ಇಲ್ಲ.
ತಕ್ಷಣ ಮತ್ತು ಆ ಕೂಡಲೇ ನಂಬಿಬಿಡುತ್ತೇವೆ.

ಅಷ್ಟು ಮಾತ್ರವಲ್ಲ, 

ಕಥಿತ ಮತ್ತು ತಥಾಕಥಿತ ವ್ಯಕ್ತಿಯ ಮೇಲೆ  
ಹಿಂದೆ ಮುಂದೆ ನಿಗಾ ಮಾಡದೆ
ಆ ಕೂಡಲೇ ತೀವ್ರ ವಾಗ್ಬಾಣಗಳನ್ನು 
ಮತ್ತು ``ಕಮೆಂಟ್ಸ್'' ಎಂಬ ಬ್ರಹ್ಮಾಸ್ತ್ರಗಳನ್ನು 
ಬಿಡುವುದಕ್ಕೆ ಶುರುಮಾಡಿಬಿಡುತ್ತೇವೆ.


ನ್ಯಾಯಾಲಯದ ತೀರ್ಪು ಬರುವವರೆಗೆ  
ಕಾಯುವಷ್ಟು ತಾಳ್ಮೆ ನಮಗೆ ಇರೋದಿಲ್ಲ.

ನಮ್ಮ ನ್ಯಾಯಾಲಯಗಳು ಕೂಡ ಹಾಗೇನೇ!!

ಅವು ನಮ್ಮ ಅವಸರ ಮತ್ತು ಆತುರಕ್ಕೆ ತಕ್ಕಂತೆ ಸ್ಪಂದಿಸುವುದಿಲ್ಲ.

ಅವು ತಪ್ಪು, ಒಪ್ಪುಗಳ ಕುರಿತು ಹೇಳುವುದನ್ನು 
ಮತ್ತು ಸರಿ, ತಪ್ಪುಗಳ ಕುರಿತು
ನಿರ್ಧರಿಸುವ ಕ್ರಿಯೆ-ಪ್ರಕ್ರಿಯೆಯನ್ನು 
ತುಂಬ ತುಂಬಾನೇ ನಿಧಾನವಾಗಿಸಿಬಿಟ್ಟಿವೆ.

ನ್ಯಾಯಾಲಯದ ವಿಲಂಬನೀತಿಯ ಪರಿಣಾಮದಿಂದಾಗಿ 
ಊಹಾಪೋಹಗಳ ಮಾರುಕಟ್ಟೆಗೆ

ಮತ್ತು ಅಂತೆ, ಕಂತೆಗಳ ಸಂತೆಗೆ 
ಭೀಮಬಲ ಮತ್ತು ಬಕಾಸುರಬಲ 
ಬಂದುಬಿಡುತ್ತದೆ.


“ಅದಂತೆ, ಇದಂತೆ, ಹಾಗಂತೆ, ಹೀಗಂತೆ” ಎಂಬ 
ಈ ತರ್ಕ, ವಿತರ್ಕ, ಕುತರ್ಕಗಳ
ಮಾಯಾಬಜಾರಿಗೆ ``ಬ್ರಹ್ಮಾಂಡಬಲ'' ಬಂದುಬಿಡುತ್ತದೆ.


ಊಹಾಪೋಹಗಳ ಶೇರುಮಾರುಕಟ್ಟೆಯಲ್ಲಿ 
ವ್ಯಕ್ತಿ ಹಾಗೂ ವ್ಯಕ್ತಿತ್ವದ ಶೇರಿನ ಮೌಲ್ಯ 
ದಿಢೀರನೇ ಕುಸಿಯತೊಡಗುತ್ತದೆ.

ಜನಾಭಿಪ್ರಾಯದ ಮಹಾಸುಳಿಗೆ ಸಿಕ್ಕ 
ವ್ಯಕ್ತಿಯ ಕಹಿ ಮತ್ತು ಕಸಿವಿಸಿ 
ಕ್ಷಣಕ್ಷಣಕ್ಕೂ ಹೆಚ್ಚಿಕೊಂಡಿರುತ್ತದೆ.

ಉಕ್ಕೇರಿ ಹರಿದುಬಂದ ಜನಾಭಿಪ್ರಾಯದ ಸುಳಿಗೆ 
ಸಿಕ್ಕ ವ್ಯಕ್ತಿಯ ಪರಿಸ್ಥಿತಿಜೀವತ್‌ಶವದ ಹಾಗೆ 
ಮತ್ತು ಉಸಿರಾಡುವ ಸಜೀವದೇಹದ ಹಾಗೆ 
ಆಗಿಬಿಡುತ್ತದೆ. 

ಅವತ್ತೊಂದು ದಿನ,  “ಅಯ್ಯೋ ಪಾಪ” ಎಂದು 
ಎಲ್ಲರ ವಿಷಯದಲ್ಲಿ ಕರುಣಿಸಿದವನು ಕೂಡ 
ಜನಗಳ ದೃಷ್ಟಿಯಲ್ಲಿ  “ಅಯ್ಯೋ ಪಾಪಿ” ಆಗಿಬಿಡುತ್ತಾನೆ.

ಆತ 

“ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ”  ಎಂಬ 
ಗಾದೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತ  
ಕಣ್ಣೀರು ಹಾಕಿಕೊಂಡಿರಬೇಕಾಗುತ್ತದೆ.

ನಿಜಕ್ಕೂ ಜನಾಭಿಪ್ರಾಯವಿದು ತುಂಬ ವಿಚಿತ್ರ.

ಜನಾಭಿಪ್ರಾಯವಿದು,

ಒಂದೊಂದು ಸಲ ಸವಿಯಾದ ಬೆಲ್ಲದಚ್ಚು.
ಒಂದೊಂದು ಸಲ ಅದು ಹರಿತವಾದ ಮಚ್ಚು.

ಅಷ್ಟು ಮಾತ್ರವಲ್ಲ, 

ಜನಾಭಿಪ್ರಾಯವಿದು ಒಲಿದರೆ ಬೆಲ್ಲದಚ್ಚು!
ಮುನಿದರೆ ಅದು ಹುಚ್ಚನ ಕೈಯಲ್ಲಿರುವ ಮಚ್ಚು!!



ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು






Comments

Popular posts from this blog