Good Morning, Happy Tuesday
20th September 2022
@ TapOvanam, Hiremath, Tumkur
“ಅರ್ಚಕಸ್ಯ ಪ್ರಭಾವೇಣ ಶಿಲಾ ಭವತಿ ಶಂಕರಃ”
ಇದೇನೋ ಸರಿ.
ಇದು ಅರ್ಚಕರ ಹೆಗ್ಗಳಿಕೆಯ ಮಾತಾಯಿತು.
ಹಾಗಾದರೆ
“ಶಿವನಿಂದ, ಶಂಕರನಿಂದ ಏನಾಗುತ್ತದೆ?” -
ಎಂಬುವುದನ್ನು ಕೂಡ ತಿಳಿದುಕೊಳ್ಳಬೇಕಲ್ಲವೆ?
“ಶಂಕರಸ್ಯ ಪ್ರಭಾವೇಣ ಅರ್ಚಕಸ್ಯ ಜೀವನಂ ಭವತಿ ಸುಂದರಮ್”
ಶಂಕರನ ಪ್ರಭಾವದಿಂದ ಅರ್ಚಕನ ಬದುಕು ಸುಂದರವಾಗುತ್ತದೆ.
ಬರೀ “ಸುಂದರಮ್” ಅಷ್ಟೇ ಅಲ್ಲ,
“ಶಂಕರಸ್ಯ ಪ್ರಭಾವೇಣ ಅರ್ಚಕಸ್ಯ ಭವತಿ ಜೀವನಂ
ಗೌರವಾರ್ಹಂ, ಅಭಿನಂದನಾರ್ಹಂ, ಪೂಜಾರ್ಹಂ,
ಸಾತ್ತ್ವಿಕಮ್, ಸಂಪದ್ಭರಿತಂ ಮತ್ತು ವಿಪದ್‌ರಹಿತಮ್”
ಅರ್ಚಕರು ದೇವರಿಗಾಗಿ ಒಂದಷ್ಟು ಮಾಡಿದರೆ
ದೇವರು ಅವರಿಗಾಗಿ ಬಹಳಷ್ಟನ್ನು ಮಾಡುತ್ತಾನೆ.
ಅರ್ಚಕರು ಒಂದು ಕೈನಿಂದ ದೇವರ ಪೂಜೆ ಮಾಡಿದರೆ
ಆತ ಎರಡು ಕೈಗಳಿಂದ ಅರ್ಚಕರನ್ನು ಅಪ್ಪಿಕೊಳ್ಳುತ್ತಾನೆ.
ಅರ್ಚಕರು ಎರಡು ಕೈನಿಂದ ಪೂಜೆ ಮಾಡಿದರೆ
ದೇವರು ನಾಲ್ಕು ಕೈಗಳಿಂದ ಅವರ ಬದುಕನ್ನು ಅಚ್ಚುಕಟ್ಟುಗೊಳಿಸುತ್ತಾನೆ.
ಅರ್ಚಕರು ಬಹಿರಂಗಶುದ್ಧಿಗೆ ಆದ್ಯತೆಯನ್ನು ಕೊಟ್ಟುಕೊಂಡು ಪೂಜೆಮಾಡಿದರೆ
ದೇವರು ಅರ್ಚಕರ ಬಹಿರಂಗವನ್ನು ಬೆಳಗುತ್ತಾನೆ.
ಅರ್ಚಕರು ಅಂತರಂಗಶುದ್ಧಿಗೆ ಆದ್ಯತೆಯನ್ನು ಕೊಟ್ಟುಕೊಂಡು ಪೂಜೆಮಾಡಿದರೆ
ದೇವರು ಅವರ ಅಂತರಂಗ ಮತ್ತು ಬಹಿರಂಗಗಳೆರಡನ್ನೂ ಬೆಳಗುತ್ತಾನೆ.
ಅರ್ಚಕರು ಕಾಟಾಚಾರಕ್ಕೆ ಪೂಜೆಮಾಡಿದರೆ ಅದಕ್ಕೆ ಫಲವಿಲ್ಲ.
ಅರ್ಚಕರು ಲೆಕ್ಕಾಚಾರವನ್ನು ಇಟ್ಟುಕೊಂಡು ಪೂಜೆಮಾಡಿದರೆ ಅದಕ್ಕೂ ಫಲವಿಲ್ಲ.
ಅರ್ಚಕರು ಕೇವಲ ಶಿಷ್ಟಾಚಾರಕ್ಕಾಗಿಪೂಜೆಮಾಡಿದರೆ ಅದಕ್ಕೂ ಫಲವಿಲ್ಲ.
ಅ ಕರು ಆತ್ಮೋದ್ಧಾರಕ್ಕಾಗಿ ಪೂಜೆ ಮಾಡಬೇಕು.
ಅರ್ಚಕರು ಲೋಕೋದ್ಧಾರಕ್ಕಾಗಿ ಪೂಜೆ ಮಾಡಬೇಕು.
ದೇವರನ್ನು ಶ್ರದ್ಧೆಯಿಂದ ಪೂಜೆಮಾಡಿದಷ್ಟು ದೇವರ ಪ್ರಭಾವ ಹೆಚ್ಚುತ್ತದೆ.
ದೇವರ ಪ್ರಭಾವ ಹೆಚ್ಚಿದಷ್ಟು ಅರ್ಚಕರಿಗೆ ಅನುಕೂಲವಾಗುತ್ತದೆ.
ಅರ್ಚಕರು ಮೂರ್ತಿಯನ್ನು ದೇವರಾಗಿಸಿದರೆ ದೇವರು ಅರ್ಚಕರ ಬದುಕನ್ನು
ಸುಮುಹೂರ್ತವಾಗಿಸುತ್ತಾನೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
Comments
Post a Comment