21st January 2023
Good Morning, Happy Saturday
21st January 2023
@ Hiremath, TapOvanam, Tumkur
Happy DaasOha Day to All.
ದಾಸೋಹ ದಿನವೆಂದರೆ
ಇವತ್ತಿನ ದಿನ ನಮ್ಮ ಸುತ್ತಮುತ್ತ
ಮತ್ತು ಅಕ್ಕಪಕ್ಕ ಯಾರೂ ಸಹ ಹಸಿವೆಯಿಂದ
ಬಳಲದಂತೆ ನೋಡಿಕೊಂಡಿರುವುದು.
ಹಸಿವು, ಬಾಯಾರಿಕೆ, ಆಯಾಸ, ಬಳಲಿಕೆ -
ಈ ಎಲ್ಲ ಪದಗಳ ವಿರುದ್ಧಾರ್ಥಕ ಪದವೇ ದಾಸೋಹ.
ಯಾರಾದರೂ ಸರಿ,
ಅವರು “ಅವನೇ ಆಗಲಿ”, “ಅವಳೇ ಆಗಲಿ”,
“ಅದುವೇ ಆಗಲಿ”
ಹಸಿವು, ಬಾಯಾರಿಕೆ, ಸುಸ್ತುಗಳಿಂದ
ಬಳಲದಂತೆ ನೋಡಿಕೊಳ್ಳುವುದೇ ದಾಸೋಹ.
ಇವತ್ತಿನ ದಿನ
“ಹಸಿವು, ದಾಹ” ಎಂಬ ಪದಗಳು
ನಿಘಂಟಿನಲ್ಲಿ ಕಾಣಿಸದಂತೆ
ಮಾಡುವುದೇ ದಾಸೋಹ ದಿನ.
ಇವತ್ತಿನ ದಿನ
“ಉದರನಿಮಿತ್ತಂ ಬಹುಕೃತವೇಷಮ್” ಎಂಬ ಪದವನ್ನು
ಮಾಜಿಯಾಗಿಸುವುದು ದಾಸೋಹ.
ಯಾರೂ ಸಹ, ಯಾರೊಬ್ಬರೂ ಸಹ
ಹಸಿವೆಯಿಂದ ಬಳಲಬಾರದು ಎಂಬುವುದೇ -
ಲಿಂಗೈಕ್ಯ ಡಾ. ಶಿವಕುಮಾರ ಮಹಾಸ್ವಾಮಿಗಳ
ಮಹದಾಶಯ ಮತ್ತು ಮಹೋನ್ನತ ಆಶಯವಾಗಿತ್ತು.
ಆದ್ದರಿಂದ,
ಅವರು ಸ್ವತಃ ತಾವೇ ದಾಸೋಹವಾದರು
ಮತ್ತು ದಾಸೋಹತತ್ತ್ವವಾದರು.
“ಯಾರಾದರೂ ಶಿವಕುಮಾರ
ಮಹಾಸ್ವಾಮಿಗಳು ತಮ್ಮ ಬದುಕಿನುದ್ದಕ್ಕೂ
ದಾಸೋಹವನ್ನು ಮಾಡಿದರು'' -
ಎಂದು ಹೇಳಿದರೆ ನಾವು ಅದನ್ನು ಒಪ್ಪುವುದಕ್ಕೆ ಸಿದ್ಧರಿಲ್ಲ.
ಸಿದ್ಧಗಂಗಾ ಮಹಾಸ್ವಾಮಿಗಳು
ದಾಸೋಹವನ್ನು ಮಾಡಲಿಲ್ಲ;
ಅವರು ಸ್ವತಃ ತಾವೇ ದಾಸೋಹವಾದರು.
ಅವರು ದಾಸೋಹತತ್ತ್ವವಾದರು,
ಅವರು ದಾಸೋಹಸಿದ್ಧಾಂತವಾದರು.
ಅವರು ದಾಸೋಹಪರ್ವವಾದರು.
ಅವರು ದಾಸೋಹಯುಗವಾದರು.
ಅವರು ದಾಸೋಹದ ಮುನ್ನುಡಿ, ಬೆನ್ನುಡಿಯಾದರು.
ಅಷ್ಟು ಮಾತ್ರವಲ್ಲ,
ಅವರು ಸ್ವತಃ ತಾವೇ ದಾಸೋಹದ
ನಡೆ, ನುಡಿ, ಪರಿವಿಡಿಯಾದರು.
ಆದ್ದರಿಂದಲೇ,
ಸಿದ್ಧಗಂಗಾ ಮಠದಲ್ಲಿ ಪತ್ರಿನಿತ್ಯದಲ್ಲೂ
ಹತ್ತು ಸಹಸ್ರಕ್ಕೂ ಹೆಚ್ಚು ಮಕ್ಕಳು
ತಮ್ಮ ತಂದೆ, ತಾಯಿಯ ಪ್ರೀತಿ, ವಾತ್ಸಲ್ಯ,
ಬಿಸಿಯಪ್ಪುಗೆ,
ಮನೆಯ ಆಕರ್ಷಣೆಯನ್ನು ಮರೆತು
ಸುಖವಾಗಿ ಉಂಡುಟ್ಟು
ಯಥೇಚ್ಛವಾಗಿ ಮತ್ತು ಯಥೇಷ್ಟವಾಗಿ
ಓದು, ಬರಹಗಳನ್ನು ಕಲಿತು
ವಿದ್ಯಾವಂತರಾಗುವುದಕ್ಕೆ ಸಾಧ್ಯವಾಯಿತು.
ಬರೀ ವಿದ್ಯಾವಂತರಾಗುವುದು ಮಾತ್ರವಲ್ಲ,
ಅವರು ಅನ್ಯರ ಹಂಗಿಗೆ ಒಳಗಾಗದೆ,
ಸ್ವತಃ ತಮ್ಮ ತಂದೆ, ತಾಯಿಗಳ
ಹಾಗೂ ಅಜ್ಜ, ಮುತ್ತಜ್ಜರ
ಪಿತ್ರಾರ್ಜಿತ, ಮಾತ್ರಾರ್ಜಿತಗಳ
ಹಂಗಿಗೂ ಒಳಗಾಗದೆ
ಅಪ್ಪಟ ಸ್ವಾವಲಂಬಿಗಳಾಗಿ
ದೇಶ, ವಿದೇಶಗಳಲ್ಲಿ ಬದುಕು, ಬಾಳನ್ನು
ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಯಿತು.
ಇವತ್ತು ಸಿದ್ಧಗಂಗಾ ಮಠದಲ್ಲಿ
ಓದಿದ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ;
ಮತ್ತವರು ವಿಶ್ವದಾದ್ಯಂತ!!
ಪರಮಪೂಜ್ಯ ಲಿಂಗೈಕ್ಯ
ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಂದಾಗಿ
ಸಿದ್ಧಗಂಗಾ ಮಠವು ಬರೀ ದಕ್ಷಿಣಕಾಶಿಯಾಗಲಿಲ್ಲ;
ಅದು ದಾಸೋಹಕಾಶಿಯಾಯಿತು;
ಅದು ಲಕ್ಷ ಲಕ್ಷ ಮಕ್ಕಳ ಜ್ಞಾನಕಾಶಿಯಾಯಿತು.
ಅದು ವಿದ್ಯಾಕಾಶಿಯಾಯಿತು.
ಇವತ್ತಿನ ದಿನ ಪರಮಪೂಜ್ಯರ
ಸ್ಮರಣೆ, ಸಂಸ್ಮರಣೆಯಲ್ಲಿ
ನಮ್ಮಗಳ ತನು ದಾಸೋಹವಾಗಬೇಕು.
ನಮ್ಮಗಳ ಮನ ದಾಸೋಹವಾಗಬೇಕು.
ನಮ್ಮಗಳ ಧನ ದಾಸೋಹವಾಗಬೇಕು.
ಸೇವಾರ್ಥ ಇವತ್ತು ನಮ್ಮಗಳ
ತನುದಾಸೋಹವಾಗಬೇಕು.
ಪರಮಪೂಜ್ಯರ ಪವಿತ್ರ ನೆನಹಿನಲ್ಲಿ
ಇವತ್ತು ನಮ್ಮಗಳ ಮನದಾಸೋಹವಾಗಬೇಕು.
ಇವತ್ತಿನ ದಿನ ಪರಮಪೂಜ್ಯರ
ಆಸೆ, ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ
ನಮ್ಮಗಳ ಹಣವನ್ನು ಸದುಪಯೋಗಮಾಡುವ
ಮೂಲಕ ನಮ್ಮಗಳ ಧನದಾಸೋಹವಾಗಬೇಕು.
ನಮ್ಮ ದೃಷ್ಟಿಯಲ್ಲಿ,
ಇದು ದಾಸೋಹ ದಿನವಷ್ಟೇ ಅಲ್ಲ.
ಇದು ದಾಸೋSಹಂ ದಿನ ಕೂಡ ಅಹುದು!!
ಅಣ್ಣ ಬಸವಣ್ಣನವರ ಹಾಗೆ ಇವತ್ತಿನ ದಿನಪೂರ್ತಿ,
“ಎನಗಿಂತ ಕಿರಿಯರಿಲ್ಲ; ಶಿವಭಕ್ತರಿಗಿಂತ ಹಿರಿಯರಿಲ್ಲ” -
ಎಂಬ ನಮ್ರ-ವಿನಮ್ರ ಭಾವ-ಭಾವನೆಯಲ್ಲಿದ್ದರೆ
ಅದು ದಾಸೋSಹಂ ದಿನ.
ಇವತ್ತಿನ ದಿನ, ಬಸವಣ್ಣನವರ ಹಾಗೆ
“ಬಾಗಿದ ತಲೆಯ ಮುಗಿದ ಕೈಯಾಗಿರಿಸು” -
ಎಂದು ಅಂದುಕೊಂಡಿದ್ದರೆ ದಾಸೋSಹಂ ದಿನ.
ಇವತ್ತಿನ ದಿನ ,
“ಇವನಾರವ, ಇವನಾರವ,
ಅವನಾರವ, ಅವನಾರವ” ಎನ್ನದೆ
ಬಸವಣ್ಣನವರ ಹಾಗೆ
``ಇವ ನಮ್ಮವ, ಇವ ನಮ್ಮವ'',
``ಅವ ನಮ್ಮವ, ಅವ ನಮ್ಮವ” ಎಂದು
ಅಂದುಕೊಂಡಿದ್ದರೆ ಅದು ದಾಸೋSಹಂ ದಿನ.
ಪರಮಪೂಜ್ಯ
ಲಿಂಗೈಕ್ಯ ಡಾ. ಶಿವಕುಮಾರ ಮಹಾಸ್ವಾಮಿಗಳು
ಬಯಲೊಳಗೆ ಬಯಲಾದ
ಇವತ್ತಿನ ದಿನವು, 21, ಜನೇವರಿ
ದಾಸೋಹ ದಿನದ ಹಾಗೆ
ದಾಸೋSಹಂ ದಿನ ಕೂಡ ಆಗಲಿ.
ಇವತ್ತಿನ ದಿನವನ್ನು
“ದಾಸೋಹದಿನ”ವೆಂದು ಸರಕಾರ ಘೋಷಿಸಿದೆ.
ಘೋಷಿಸುವುದು ಸರಕಾರದ ಕೆಲಸ.
ಅದು ತನ್ನ ಕೆಲಸ ತಾನು ಮಾಡಿದೆ.
ಈ ದಿನವನ್ನು ದಾಸೋಹದಿನವಾಗಿ
ಪಾಲಿಸುವುದು ಮತ್ತು ಪೋಷಿಸುವುದು
ನಮ್ಮ, ನಿಮ್ಮಗಳ ಕೆಲಸ.
ಅದನ್ನು ನಾವುಗಳು ಮಾಡೋಣ.
ದಾಸೋಹ ದಿನಾಚರಣೆಯ ಈ ದಿನದಂದು,
ಒಂದು ದಿನದ ಮಟ್ಟಿಗಾದರೂ ಸರಿ,
ನಮ್ಮಗಳಿಗೆ ನಾವು ದಾಸೋSಹಂ ದೀಕ್ಷೆಯನ್ನು
ಕೊಟ್ಟುಕೊಂಡಿರೋಣ.
ಪರಮಪೂಜ್ಯ ಲಿಂಗೈಕ್ಯ
ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ
ವ್ಯೋಮಚೇತನವನ್ನು ಸಾಕ್ಷಿಯಾಗಿಸಿಕೊಂಡು
ತಮಗೆಲ್ಲ ನಾವು ದಾಸೋಹ ದಿನದ
ಶುಭಾಶಯಗಳನ್ನು ಹೇಳುತ್ತಿದ್ದೇವೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments
Post a Comment