Good Evening, Happy Friday
@ TapOvanam, Hiremath, Tumkur
13th January 2023
ಪರಮಪೂಜ್ಯಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರು,
ಬರೀ ಕೀರ್ತಿಶೇಷರಲ್ಲ; ಅವರು ಕೀರ್ತಿವಿಶೇಷರು...!!
ದಿವಂಗತರಾಗಿ, ಅವರು ಭೈರವಂಗತರಾಗಿ
ಒಂದು ದಶಮಾನವಾಯಿತು.
ನಾವುಗಳು ಇಂದು ತುಮಕೂರಿನಲ್ಲಿ
ಅವರ 10ನೆಯ ಪುಣ್ಯಸ್ಮರಣೋತ್ಸವವನ್ನು
ಆಚರಿಸುತ್ತಿದ್ದೇವೆ.
ತನ್ಮೂಲಕ ನಾವೆಲ್ಲರೂ ಇಂದು
ಪೂಜ್ಯರ ನಡೆ, ನುಡಿಗಳನ್ನು
ಜ್ಞಾಪಿಸಿಕೊಳ್ಳುತ್ತಿದ್ದೇವೆ;
ಮತ್ತವರು ತಮ್ಮ ಬದುಕಿನುದ್ದಕ್ಕೂ
ಬದುಕಿದ ಆದರ್ಶ ಮತ್ತು ಮೌಲ್ಯಗಳನ್ನು
ಮೆಲುಕುಹಾಕುತ್ತಿದ್ದೇವೆ.
ಅವರ ಸಾಧನೆ, ಸಿದ್ಧಿಗಳನ್ನು
ಸ್ಮರಿಸಿಕೊಳ್ಳುವ ಮೂಲಕ
ಅವರಿಗೆ ನುಡಿಗೌರವವನ್ನು ಸಲ್ಲಿಸುತ್ತಿದ್ದೇವೆ;
ಮತ್ತು ಅವರ ಭಾವಚಿತ್ರಕ್ಕೆ
ಗೌರವಾದರಗಳಿಂದ
ಪುಷ್ಪನಮನವನ್ನು ಸಲ್ಲಿಸುತ್ತಿದ್ದೇವೆ.
18, ಜನೇವರಿ 1945ರಂದು,
ಇವತ್ತಿನ ರಾಮನಗರ ಜಿಲ್ಲೆಯ
ಬಿಡದಿ-ಬಾಣಂದೂರಿನಲ್ಲಿ
ತಂದೆ ಚಿಕ್ಕಲಿಂಗೇಗೌಡ
ಮತ್ತು ತಾಯಿ ಮೋಟಮ್ಮನವರ
ಮಗನಾಗಿ ಜನಿಸಿದ
ಪರಮಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳು ಬದುಕಿದ್ದು
ಕೇವಲ 67 ವರುಷ
(18, ಜನೇವರಿ 1945 - 13, ಜನೇವರಿ 2013)
ಆದರೆ ಅವರು ಆ ಒಂದು
ಬದುಕಿನಲ್ಲಿ ಸಾಧಿಸಿದ್ದು
ಅಪಾರ, ಅನಂತ, ಮತ್ತದು ಅನೂಹನೀಯ.
ಪರಮಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳು ಸಂಕಲ್ಪ
ಹಾಗೂ ಸಿದ್ಧಿಯ ಮಹಾಪರ್ವತ.
ಅವರೊಂದು ಸಾಧನೆ
ಹಾಗೂ ಸಾಮರಸ್ಯಗಳ ಗಂಗೆ, ಕಾವೇರಿ.
ಸಾಮಾನ್ಯರಂತೆ ಹುಟ್ಟಿ ಸಾಮಾನ್ಯರಂತೆ
ಬದುಕಿ ಅಸಾಮಾನ್ಯವಾಗಿ ಬೆಳೆದುನಿಂತ
ಮಹಾನುಭಾವರವರು!!
ಆದಿಚುಂಚನಗಿರಿ ಕ್ಷೇತ್ರವನ್ನು
ತಮ್ಮ ಧರ್ಮಕ್ಷೇತ್ರವನ್ನಾಗಿ
ಆಯ್ಕೆಮಾಡಿಕೊಂಡ
ಪೂಜ್ಯರು ತಮ್ಮ ಸಾಧನೆಯ ಸಸಿಗಳನ್ನೆಲ್ಲ
ಆದಿಚುಂಚನಗಿರಿಯ
ತಪೋಭೂಮಿಯಲ್ಲಿ ಕಸಿಮಾಡಿದರು.
ಆ ಕಸಿಗೆ ತಕ್ಕ ಹಾಗೆ
ಅವರು ನಿರಂತರವಾಗಿ
ಅದಕ್ಕೆ ಶ್ರಮದೀಕ್ಷೆಯನ್ನು ನೀಡಿದರು.
ಅವರ ಶ್ರಮ, ಪರಿಶ್ರಮ
ಮತ್ತು ತಪಸ್ಸುಗಳ ಬಲದಿಂದಾಗಿ
ಆದಿಚುಂಚನಗಿರಿ ಕ್ಷೇತ್ರವು
ದಿನೇ ದಿನೇ ಮರ, ಹೆಮ್ಮರವಾಗಿ
ಬೆಳೆಯತೊಡಗಿತು.
ಪರಮಪೂಜ್ಯರು ತಮ್ಮ ಬದುಕಿಗೆ
“ಕರ್ಮಣ್ಯೇವಾಧಿಕಾರಸ್ತೇ
ಮಾ ಫಲೇಷು ಕದಾಚನ” ಎಂಬ
ದೀಕ್ಷೆಯನ್ನು ಕೊಟ್ಟುಕೊಂಡರು.
ದೇವರು ಅವರ ಧರ್ಮ, ಕರ್ಮಗಳನ್ನು
ಗೌರವಿಸಿದ.
ದೇವರು ಪೂಜ್ಯರ ಒಲವು, ನಿಲುವುಗಳ
ಯೋಗಕ್ಷೇಮಕ್ಕೆ ತನ್ನನ್ನು ತಾನೇ
ಜವಾಬ್ದಾರನನ್ನಾಗಿಸಿಕೊಂಡ.
ಇದು ಕಾರಣ, ಪೂಜ್ಯರು
ಮುಟ್ಟಿದ್ದೆಲ್ಲ ಕಲ್ಪವಾಗತೊಡಗಿತು,
ಕಲ್ಪವೃಕ್ಷವಾಗತೊಡಗಿತು.
ಪೂಜ್ಯರು ದಕ್ಷಿಣ ಕರ್ನಾಟಕದಲ್ಲಿರುವ
ಅತಿಹೆಚ್ಚು ಸಂಖ್ಯೆಯಲ್ಲಿರುವ
ಒಕ್ಕಲಿಗ ಸಮುದಾಯದ
ಅಸ್ಮಿತೆಯನ್ನು ಎಚ್ಚರಿಸಿದರು.
ಅವರು ಒಕ್ಕಲಿಗ ಸಮುದಾಯದ
ಪಂಗಡ, ಒಳಪಂಗಡಗಳನ್ನು ಒಗ್ಗೂಡಿಸಿದರು.
ಸ್ವಜಾತೀಯ ತರ, ತಮಗಳನ್ನು
ಮೀರಿ ಬೆಳೆಯುವುದಕ್ಕೆ
ಅವರು ಸಮಾಜಬಾಂಧವರಿಗೆ ಕರೆಕೊಟ್ಟರು.
ಅವರ ಕರೆಯದು ವ್ಯರ್ಥವಾಗಲಿಲ್ಲ;
ಅದು ಸಾರ್ಥಕವಾಯಿತು.
ಪೂಜ್ಯರು ಆದಿಚುಂಚನಗಿರಿ ಕ್ಷೇತ್ರವನ್ನು
ಒಕ್ಕಲಿಗ ಸಮುದಾಯದ
ಶಕ್ತಿಕೇಂದ್ರವನ್ನಾಗಿಸುವುದರ
ಜೊತೆ ಜೊತೆಯಲ್ಲಿ
ಅವರು ಆದಿಚುಂಚನಗಿರಿ ಕ್ಷೇತ್ರವನ್ನು
ಸರ್ವಜನಾಂಗದ ತೋಟವನ್ನಾಗಿಸಿದರು.
ಪರಮಪೂಜ್ಯರ ಯೋಚನೆ, ಯೋಜನೆಗಳು
ಎಲ್ಲ ಜನಾಂಗದ ಜನಗಳನ್ನು
ತಲುಪತೊಡಗಿದವು.
ಪರಮಪೂಜ್ಯರು ಆದಿಚುಂಚನಗಿರಿ
ಕ್ಷೇತ್ರದ ಸರ್ವಾಂಗೀಣ ಪ್ರಗತಿಯ
ಸಂಕಲ್ಪದೀಕ್ಷೆಯನ್ನು ತೊಟ್ಟು
ಆದಿಚುಂಚನಗಿರಿ ಕ್ಷೇತ್ರವನ್ನು
ಜನಮಾನಸದ ಶ್ರದ್ಧಾಕೇಂದ್ರವಾಗಿಸಿದರು.
ಅವರು ಶ್ರೀಕ್ಷೇತ್ರಕ್ಕೆ
ಕಲ್ಪದೀಕ್ಷೆಯನ್ನು ನೀಡಿದರು.
ಆದಿಚುಂಚನಗಿರಿ ಶ್ರೀಕ್ಷೇತ್ರದಲ್ಲಿ
ಶಿವನ ಸಾತ್ತ್ವಿಕ ರೂಪ, ಗುಣಗಳಿಗೆ ಮಾತ್ರವಲ್ಲ,
ಶಿವನ ರಾಜಸಿಕ ಹಾಗೂ ತಾಮಸಿಕ
ರೂಪ, ಗುಣಗಳಿಗೆ ಕೂಡ
ಪೂಜೆ ಸಂದಾಯವಾಗತೊಡಗಿತು.
ಒಂದೆಡೆ ಶ್ರೀಕ್ಷೇತ್ರದಲ್ಲಿ
ಶಿವನು ಗಂಗಾಧರೇಶ್ವರನಾಗಿ
ಪೂಜೆಗೊಂಡರೆ,
ಇನ್ನೊಂದೆಡೆ ಆತ ಕಾಲಭೈರವೇಶ್ವರನಾಗಿ
ಪೂಜಗೊಳ್ಳತೊಡಗುತ್ತಾನೆ.
ಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳು,
ಅದುವರೆಗೆ ಬರೀ ಧರ್ಮಕ್ಷೇತ್ರವಾಗಿದ್ದ
ಆದಿಚುಂಚನಗಿರಿಯನ್ನು
ಸರ್ವತೋಮುಖ ಅಭಿವೃದ್ಧಿಯ
ಸುಕ್ಷೇತ್ರವನ್ನಾಗಿ ಪರಿವರ್ತಿಸಿದರು.
ಪೂಜ್ಯರ ಕಾಲಘಟ್ಟದಲ್ಲಿ
ಶ್ರೀಕ್ಷೇತ್ರದಲ್ಲಿ ಸಾಮಾಜಿಕ,
ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ,
ಸಾಂಸ್ಕೃತಿಕದ ಶಕ್ತಿಪಾತವಾಯಿತು.
ಶ್ರೀಕ್ಷೇತ್ರವು ಸಾಮಾಜಿಕ,
ಶೈಕ್ಷಣಿಕಗಳ ಮತ್ತು ಧಾರ್ಮಿಕ,
ಆಧ್ಯಾತ್ಮಿಕಗಳ ಶಕ್ತಿಕೇಂದ್ರವಾಯಿತು.
ದಿನೇ ದಿನೇ ಶ್ರೀಕ್ಷೇತ್ರದ ಭೌತಿಕ
ಹಾಗೂ ಬೌದ್ಧಿಕ ಬೆಳೆಯತೊಡಗಿತು.
ಪರಮಪೂಜ್ಯರ ಪ್ರಬಲವಾದ ಇಚ್ಛಾಶಕ್ತಿ
ಹಾಗೂ ಸಂಕಲ್ಪದ ಕಾರಣದಿಂದಾಗಿ,
ಆದಿಚುಂಚನಗಿರಿಮಠವು
ಕೆಲವೇ ಕೆಲವು ವರುಷಗಳಲ್ಲಿ
ಕರ್ನಾಟಕದ ಒಂದು ಶಕ್ತಿಶಾಲಿ
ಮಠವಾಗಿ ಬೆಳೆದು ನಿಂತುಕೊಂಡಿತು.
ಅದಕ್ಕೆ ತಕ್ಕ ಹಾಗೆ ಪೂಜ್ಯರಿಗೆ
ಸಮಾಜಬಾಂಧವರ
ಮತ್ತು ಸಮುದಾಯದ ಜನಗಳ
ಹಂಬಲ ಮತ್ತು ಬೆಂಬಲ -
ಇವೆರಡೂ ಕೂಡ ನಿರೀಕ್ಷೆ ಮೀರಿ ದೊರಕಿದವು.
ಕರ್ನಾಟಕದ ಪ್ರತಿಷ್ಠಿತ
ವಿಪ್ರ ಹಾಗೂ ವೀರಶೈವ ಮಠಗಳ ಹಾಗೆ
ಆದಿಚುಂಚನಗಿರಿ ಮಠವು
ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ
ತನ್ನ ನೋಟ-ಮುನ್ನೋಟ
ಹಾಗೂ ಯೋಚನೆ ಮತ್ತು ಯೋಜನೆಗಳ
ಪ್ರಗತಿಪತ್ರವನ್ನು ಸೇರಿಸತೊಡಗಿತು.
ಪರಮಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳ ತಪಸ್ಸಿನ ಬಲದಿಂದಾಗಿ
ಆದಿಚುಂಚನಗಿರಿ ಮಠವು
ಕರ್ನಾಟಕದ ಮುಂಚೂಣಿಯ
ಮಠಗಳಲ್ಲಿ ಒಂದಾಯಿತು.
ಇದು ಕಾರಣ,
ಕರ್ನಾಟಕ ಸರಕಾರ
ಹಾಗೂ ಕೇಂದ್ರ ಸರಕಾರಗಳು
ಆದಿಚುಂಚನಗಿರಿ ಮಠದ ಎದುರಿನಲ್ಲಿ
ನತಮಸ್ತಕವಾಗತೊಡಗಿದವು.
ಪರಮಪೂಜ್ಯ
ಬಾಲಗಂಗಾಧರನಾಥ ಮಹಾಸ್ವಾಮಿಗಳು
ಆದಿಚುಂಚನಗರಿ ಕ್ಷೇತ್ರವನ್ನು
ಗತಿ, ಪ್ರಗತಿಯ ಕಾಶಿಯನ್ನಾಗಿಸಿದರು.
ಪರಮಪೂಜ್ಯರು ಸಮಸ್ತ ಕರ್ನಾಟಕವನ್ನು ಸಸ್ಯಕಾಶಿಯನ್ನಾಗಿಸಬೇಕೆಂದು
ಸಂಕಲ್ಪದೀಕ್ಷೆಯನ್ನು ತೊಟ್ಟರು.
ಅದಕ್ಕೆ ಸರಕಾರಗಳು
ಧ್ವನಿಸಂಯೋಜನೆ
ಮತ್ತು ರಾಗಸಂಯೋಜನೆ ಮಾಡಿದವು.
ಪರಮಪೂಜ್ಯರು ತಮ್ಮ
“ಅಥಾSತೋ” ಹಸಿರು ಜಿಜ್ಞಾಸೆಯಿಂದಾಗಿ,
ನಾಡಿನ ಜನಗಳು ಅವರನ್ನು
“ಹಸಿರುಕ್ರಾಂತಿಯ ಹರಿಕಾರ” ಎಂದು ಕರೆದರು.
ಪರಮಪೂಜ್ಯರು ನಾಡಿನ ಜನಗಳಿಂದ
ಮತ್ತು ನಾಡೋಜರಿಂದ
ಹಸಿರು ಕ್ರಾಂತಿಯ ಹರಿಕಾರ
ಗೌರವಕ್ಕೆ ಪಾತ್ರರಾದರು.
ಪರಮಪೂಜ್ಯರ ಸರ್ವತೋಮುಖ
ವ್ಯಕ್ತಿತ್ವ ಮತ್ತು ಅವರುಗಳ
ಸರ್ವತೋಮುಖ ವಿಕಾಸ ಕಾರ್ಯಂಗಳನ್ನು
ನೋಡಿಬಿಟ್ಟು ಭಾರತ ಸರಕಾರವು
ಅವರಿಗೆ 2010ರಲ್ಲಿ “ಪದ್ಮಭೂಷಣ”
ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಪರಮಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳು
ಬರೀ ಸ್ವಧರ್ಮೀಯರ ಪ್ರೀತಿಗೆ ಮಾತ್ರವಲ್ಲ;
ಅವರು ಸರ್ವಧರ್ಮೀಯರ ಪ್ರೀತಿಗೆ
ಪಾತ್ರರಾಗಿದ್ದರು.
ಒಂದರ್ಥದಲ್ಲಿ,
ಪೂಜ್ಯರು ಸರ್ವಧರ್ಮೀಯರು.
ಪರಮಪೂಜ್ಯರು ಆದಿಚುಂಚನಗಿರಿ
ಮಠವನ್ನು ಸರ್ವಧರ್ಮಗಳ
ಸಮನ್ವಯಕೇಂದ್ರವಾಗಿಸಿದರು.
ಈ ಸಂದರ್ಭದಲ್ಲಿ
ಇನ್ನೊಂದು ಮಾತನ್ನು ಹೇಳಲೇಬೇಕು.
ಪರಮಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳು ಸಜ್ಜನವತ್ಸಲರು
ಮತ್ತು ಸಾಧುಪ್ರೇಮಿಗಳು.
ಅವರ ಮಠದಲ್ಲಿ ಸಾಧು, ಸಂತರ
ಸಂಚಾರ ಸದಾಕಾಲದಲ್ಲೂ ಇರುತ್ತಿತ್ತು.
ಉತ್ತರ ಭಾರತದ ಅನೇಕ ಜನ
ಸಾಧು, ಸಂತರು ಪೂಜ್ಯರ ಬಳಿ ಬಂದು
ಆದಿಚುಂಚನಗಿರಿ ಮಠದಲ್ಲಿ
ಒಂದಷ್ಟು ದಿನಗಳ ಕಾಲ
ವಾಸಮಾಡುತ್ತಿದ್ದರು.
ಸಾಧು, ಸಂತರನ್ನು
ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದ
ಪೂಜ್ಯರು ಸಾಧು ಸಂತರು
ಮಠದಲ್ಲಿ ಇರುವಾಗ
ಅವರಿಗೆ ಹೊಟ್ಟೆತುಂಬ
ಮೃಷ್ಟಾನ್ನ ಭೋಜನವನ್ನು ಕೊಟ್ಟು;
ಮತ್ತವರು ಶ್ರೀಕ್ಷೇತ್ರದಿಂದ ಹೊರಡುವಾಗ
ಅವರಿಗೆ ಕೈತುಂಬ ದಕ್ಷಿಣೆ, ಕಾಣಿಕೆ ಕೊಟ್ಟು,
ಮೈತುಂಬ ಬಟ್ಟೆಕೊಟ್ಟು ಉಪಚರಿಸಿ
ವರುಗಳನ್ನು ಮತ್ತೆ ಮತ್ತೆ ತಾವುಗಳು ಬರಬೇಕು
ಎಂಬ ಆಗ್ರಹದೊಂದಿಗೆ
ಕಳುಹಿಸಿಕೊಡುತ್ತಿದ್ದರು.
ಪೂಜ್ಯರ ಕಾಲಘಟ್ಟದಲ್ಲಿ
ಉತ್ತರ ಭಾರತ ಮತ್ತು ದಕ್ಷಿಣ ಭಾರತದ
ಸಾಧು, ಸನ್ಯಾಸಿಗಳಿಗೆ
ಅದಿಚುಂಚನಗಿರಿ ಮಠವು
“ಸ್ವರ್ಗಾದಪಿ ಗರೀಯಸೀ” ಆಗಿತ್ತು.
ಆಗಷ್ಟೇ ಎಂದಲ್ಲ,
ಈಗಲೂ ಹಾಗೇನೇ!!
ಪರಮಪೂಜ್ಯ
ಡಾ. ಶ್ರೀ ಶ್ರೀ ನಿರ್ಮಲಾನಂದನಾಥ
ಮಹಾಸ್ವಾಮಿಗಳು ಕೂಡ
ಅವರ ಗುರುಗಳ ಹಾಗೆಯೇ
ಸಾಧುಪ್ರೇಮಿಗಳು ಮತ್ತು ಸಜ್ಜನವತ್ಸಲರು.
ಈಗಲೂ ಸಹ ಆದಿಚುಂಚನಗಿರಿ
ಮಠಕ್ಕೆ ಭೇಟಿ ಕೊಟ್ಟರೆ,
ಅಲ್ಲಿ ನಿಮ್ಮಗಳಿಗೆ ಭಾರತದ
ವಿವಿಧ ಪ್ರಾಂತಗಳಿಂದ ಆಗಮಿಸಿದ
ಸಾಧು, ಸಂತರು ನೋಡಲು ಸಿಕ್ಕುತ್ತಾರೆ.
ಪರಮಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳ ದೂರದೃಷ್ಟಿ
ನಿಜಕ್ಕೂ ಅಭಿನಂದನೀಯ.
ಪೂಜ್ಯರು ಬೃಹದಾಕಾರವಾಗಿ ಬೆಳೆದ
ಆದಿಚುಂಚನಗಿರಿ ಮಠಕ್ಕೆ
ವಿದ್ಯಾವಂತರೂ ಮತ್ತು ವಿದ್ಯಾಮಾನಸರಾದ
ಮತ್ತು ಎಮ್. ಟೆಕ್. ಪದವೀಧರರೂ,
ವಿನಯಗುಣಸಂಪನ್ನರೂ
ಹಾಗೂ ಸರ್ವಜನಸಂತೋಷಿಗಳೂ ಆದ
ಪರಮಪೂಜ್ಯ ಡಾ. ನಿರ್ಮಲಾನಂದನಾಥ
ಮಹಾಸ್ವಾಮಿಗಳನ್ನು
ತಮ್ಮ “ಉತ್ತರಾಧಿಕಾರಿ” ಎಂದು ಘೋಷಿಸುತ್ತಾರೆ.
ಪರಮಪೂಜ್ಯರು
ಡಾ. ನಿರ್ಮಲಾನಂದ ಮಹಾಸ್ವಾಮಿಗಳ ಮೇಲೆ
ತಮ್ಮ ಅನುಗ್ರಹಕಟಾಕ್ಷವನ್ನು
ಧಾರೆ ಎರೆಯುತ್ತಾರೆ.
ಆದಿಚುಂಚನಗಿರಿ ಮಠದ
ಕಾರ್ಯಕ್ಷೇತ್ರವನ್ನು
ಇನ್ನಷ್ಟು ಮತ್ತಷ್ಟು ವಿಸ್ತರಿಸುವುದಕ್ಕೆ,
ಹಾಗೆಯೇ ಆದಿಚುಂಚನಗಿರಿ
ಸುಕ್ಷೇತ್ರದ ಕೀರ್ತಿಶಿಖರವನ್ನು
ಇನ್ನಷ್ಟು, ಮತ್ತಷ್ಟು
ಮತ್ತು ಇತೋSಪ್ಯತಿಶಯ ಎತ್ತರಕ್ಕೆ
ಕೊಂಡೊಯ್ಯಲು ಆಶೀರ್ವಾದ ಮಾಡುತ್ತಾರೆ.
ಗುರುಗಳ ಮನೋವಾಂಛಿತವನ್ನು
ಈಡೇರಿಸುವಲ್ಲಿ
ಪ್ರಸ್ತುತ ಪೀಠಾಧಿಪತಿಗಳಾದ
ಡಾ. ನಿರ್ಮಲಾನಂದನಾಥ
ಮಹಾಸ್ವಾಮಿಗಳು ಅಕ್ಷರಶಃ
ಸಫಲರಾಗಿದ್ದಾರೆ.
ಅನುದಿನವೂ, ಅನುಕ್ಷಣವೂ
ಅವರು ಗುರುಗಳು ತೋರಿಸಿದ
ಮಾರ್ಗದಲ್ಲಿ ಮತ್ತು ಗುರುಗಳು ಹಾಕಿಕೊಟ್ಟ
ಮಾರ್ಗಸೂಚಿಯಲ್ಲಿ ನಡೆಯುತ್ತ
ಜನಮನಕ್ಕೆ ಹತ್ತಿರವಾಗಿದ್ದಾರೆ.
ಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳು,
“ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ” ಎಂದು ಹೇಳಿದರೆ
ಪೂಜ್ಯ ಡಾ. ನಿರ್ಮಲಾನಂದನಾಥ
ಮಹಾಸ್ವಾಮಿಗಳು
“ಗುರುತೋರಿದ ಗುರಿ ಮುಟ್ಟುವ ತನಕ
ದೊರೆಯದಣ್ಣ ಮುಕುತಿ” - ಎಂಬ
ಮನೋಭಾವದವರಾಗಿದ್ದಾರೆ.
ಪೂಜ್ಯರು ತಮ್ಮ ಗುರುಗಳು
ತೋರಿದ ಮಾರ್ಗದಲ್ಲಿ ನಡೆಯುತ್ತ
ಸರ್ವಜನಾಂಗದ ಗೌರವಾದರಗಳಿಗೆ
ಪಾತ್ರರಾಗುತ್ತಲಿದ್ದಾರೆ.
ಪೂಜ್ಯ ಡಾ. ನಿರ್ಮಲಾನಂದನಾಥ
ಮಹಾಸ್ವಾಮಿಗಳು ಎಲ್ಲರಿಗೂ ಸ್ಪಂದಿಸುತ್ತಾರೆ
ಮತ್ತು ಎಲ್ಲಕ್ಕೂ ಸ್ಪಂದಿಸುತ್ತಾರೆ.
ಪೂಜ್ಯರು ಕೂಡ ತಮ್ಮ ಗುರುಗಳ ಹಾಗೆ,
ತಮ್ಮ ಬದುಕಿಗೆ
“ಬಹುಜನ ಹಿತಾಯ -
ಬಹುಜನ ಸುಖಾಯ” ದೀಕ್ಷೆಯನ್ನು
ಕೊಟ್ಟುಕೊಂಡಿದ್ದಾರೆ.
ಪರಮಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳು ಜನೇವರಿ, 13, 2013ರಂದು
ತಮ್ಮ ಐಹಿಕಯಾತ್ರೆಗೆ ವಿದಾಯ ಹೇಳಿ
ಭಗವತ್ಸನ್ನಿಧಾನವನ್ನು ಸೇರಿದಾಗ
ಇಡೀ ಕರ್ನಾಟಕವೇ ಮೌನವಾಗಿ
ಅವರಿಗೆ ಮೌನಗೌರವವನ್ನು ಸಲ್ಲಿಸಿದುದನ್ನು
ನಾವೆಲ್ಲ ಸಾಕ್ಷಿಸಿದ್ದೇವೆ.
ಈಗಲೂ ಸಹ ಸಮಸ್ತ ಕನ್ನಡಿಗರಿಂದ
ಪರಮಪೂಜ್ಯರಿಗೆ “ಶೀರ್ಷಗೌರವ”ವು
ಸಂದಾಯವಾಗುತ್ತಿದೆ.
ಪರಮಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳು,
ಈಗ ಭೌತಿಕವಾಗಿ ಮತ್ತು ಐಹಿಕವಾಗಿ
ನಮ್ಮ, ನಿಮ್ಮಗಳೊಂದಿಗೆ
ಇಲ್ಲದಿರಬಹುದು.
ಆದರೆ ಅವರು ಅನಂತವಾಗಿ
ಮತ್ತು ಅನಿಕೇತನರಾಗಿ
ನಮ್ಮ, ನಿಮ್ಮಗಳೊಂದಿಗೆ
ಯಾವಾಗಲೂ ಇದ್ದಾರೆ
ಮತ್ತು ಯಾವಾಗಲೂ ಇರುತ್ತಾರೆ.
ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು
ಹಿರೇಮಠ, ತಪೋವನ, ತುಮಕೂರು
Comments
Post a Comment