Good Evening, Happy Tuesday
17th January 2023
@ TapOvanam, Hiremath, Tumkur
ನಿನ್ನೆ ಭಕ್ತರೊಬ್ಬರು
ನಮ್ಮನ್ನು ಕೇಳುತ್ತಿದ್ದರು,
“ಯಾತ್ರೆ ಯಾವಾಗ ಮಾಡಬೇಕು, ಬುದ್ಧೀ?” ಎಂದು.
“ಶರೀರದಲ್ಲಿ ಯಾತನಾ ಯಾತ್ರೆ
ಶುರುವಾಗೋದಕ್ಕೆ
ಮುನ್ನವೇ ಯಾತ್ರೆ ಮಾಡುವುದು ಒಳ್ಳೆಯದು”
ಅದೊಮ್ಮೆ ಶರೀರದಲ್ಲಿ
ಯಾತನಾಯಾತ್ರೆ ಶುರುವಾಗಿಬಿಟ್ಟರೆ
ಎಲ್ಲವೂ ಕಷ್ಟ ಮತ್ತು ಎಲ್ಲಕ್ಕೂ ಕಷ್ಟ.
ಶರೀರದಲ್ಲಿ ಯಾತನಾಯಾತ್ರೆ
ಶುರುವಾಗಿಬಿಟ್ಟರೆ
ಎಲ್ಲೂ ಸಹ ಹೊರಗೆ ಹೋಗುವುದಕ್ಕೆ ಆಗುವುದಿಲ್ಲ.
ದೇಹ ಸ್ಪಂದಿಸುವುದಿಲ್ಲ.
ಯಾತ್ರೆಗೆ ಹೋಗಲು
ಬರೀ ಮನಸ್ಸೊಂದಿದ್ದರೆ ಸಾಲದು;
ದುಡ್ಡು, ಹಣಕಾಸು ಒಂದಿದ್ದರೆ ಸಾಲದು.
ದೇಹವೂ “ಸಾಥ್” ಕೊಟ್ಟುಕೊಂಡಿರಬೇಕು.
ಹಾಗೆಯೇ ಶರೀರದಲ್ಲಿ
ಅದೊಮ್ಮೆ ಮಾತ್ರಾಯಾತ್ರೆ ಶುರುವಾದರೆ
ಯಾತ್ರೆ ಮಾಡುವುದು ಕಷ್ಟವಾಗುತ್ತದೆ.
ಈ ವಿಷಯದಲ್ಲಿ
ಬಸವಣ್ಣನವರು ಕೂಡ ಹೇಳಿದ್ದಾರೆ.
“ನರೆ ಕೆನ್ನೆಗೆ ತೆರೆ ಗಲ್ಲಕೆ
ಶರೀರ ಗೂಡುವೋಗದ ಮುನ್ನ
ಹಲ್ಲು ಹೋಗಿ, ಬೆನ್ನು ಬಾಗಿ,
ಅನ್ಯರಿಗೆ ಹಂಗಾಗದ ಮುನ್ನ
ಕಾಲಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ
ಮುಪ್ಪಿಂದೊಪ್ಪವಳಿಯದ ಮುನ್ನ
ಮೃತ್ಯು ಮುಟ್ಟದ ಮುನ್ನ ಪೂಜಿಸು
ಕೂಡಲಸಂಗಮದೇವನ” -
ಎಂದು ಬಸವಣ್ಣನವರು ಹೇಳುತ್ತಾರೆ.
ಅವರು
“ನರೆ ಕೆನ್ನೆಗೆ, ತೆರೆ ಗಲ್ಲಕೆ.......
ಇವೆಲ್ಲ ಹೀಗೆ ಆಗುವ ಮೊದಲು
ಶರೀರ ಸಾಮರ್ಥ್ಯ ಕುಗ್ಗುವ ಮೊದಲು
ಕೂಡಲಸಂಗಮನನ್ನು
ಅಂದರೆ ದೇವರನ್ನು ಪೂಜಿಸಲು ಹೇಳುತ್ತಾರೆ.
ನಾವು ಶರೀರ ಸಾಮರ್ಥ್ಯ
ಕೈಕೊಡುವ ಮೊದಲು,
ಶರೀರದಲ್ಲಿ “ಅದು ನೋಯುತ್ತಿದೆ,
ಇದು ನೋಯುತ್ತಿದೆ
ಅಲ್ಲಿ ಹಿಡಿಯಿತು, ಇಲ್ಲಿ ಬಿಟ್ಟಿತು” ಎಂದು
ಹೇಳುವುದಕ್ಕೆ ಮೊದಲು,
ಹಾಗೆಂದು ಗೋಳಾಡುವುದಕ್ಕೆ ಮೊದಲು,
ಯಾತ್ರೆ ಮಾಡಲು ಹೇಳುತ್ತಿದ್ದೇವೆ, ಅಷ್ಟೇ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment