Good Morning, Happy Friday
13th January 2023
@ TapOvanam, Hiremath, Tumkur
“ಅಥಾತೋ ಶೂನ್ಯಜಿಜ್ಞಾಸಾ”
“ಶೂನ್ಯ ಏವ ಜಯತೇ” -
ಇದರಲ್ಲಿ ಎರಡು ಮಾತಿಲ್ಲ.
“ಶೂನ್ಯ ಏವ ಜಯತೇ” -
ಇದಕ್ಕೆ ಗ್ಯಾರಂಟಿ ಕಾರ್ಡ್ ಕೊಡಬಹುದು.
“ಸತ್ಯಮೇವ ಜಯತೇ” -
ಇದಕ್ಕೆ ಗ್ಯಾರಂಟಿ ಕಾರ್ಡ್ ಕೊಡಕ್ಕೆ ಆಗಲ್ಲ.
ಶೂನ್ಯ ಕಿಸ್ಮತ್ತು, ಕಲಾಬತ್ತು,
ಕಿರಿಕಿರಿಯತ್ತುಗಳ ತ್ರಿವೇಣಿ ಸಂಗಮ.
ಶೂನ್ಯ ಒಲಿದರೆ ಕೊರಡು ಕೊನರುತ್ತದೆ.
ಶೂನ್ಯ ಒಲಿದರೆ ಬರಡು ಹಯನುತ್ತದೆ.
ಶೂನ್ಯ ಒಲಿದರೆ ವಿಷವು ಅಮೃತವಾಗುತ್ತದೆ.
“ಬೊಂಬೆ ಆಟವಯ್ಯ,
ಇದು ಬೊಂಬೆ ಆಟವಯ್ಯ
ಬ್ರಹ್ಮಾಂಡವೇ ಆ ದೇವನಾಡುವ ಬೊಂಬೆಯಾಟವಯ್ಯ” -
ಎಂದು ಆ ದೇವರ ಕುರಿತು ಹೇಳುವ ಹಾಗೆ,
“ಶೂನ್ಯದಾಟವಯ್ಯ, ಇದು ಶೂನ್ಯದಾಟವಯ್ಯ
ಈ ಬ್ರಹ್ಮಾಂಡವೇ ಆ ಶೂನ್ಯವಾಡುವ ಶೂನ್ಯದಾಟವಯ್ಯ” -
ಎಂದು ಶೂನ್ಯದ ಕುರಿತು ಹೇಳಬೇಕಾಗುತ್ತದೆ.
ಶೂನ್ಯ ನಮ್ಮ ಹಿಂದೆ ಬಂದು ನಿಂತು
ನಮ್ಮಗಳ ಮೇಲೆ ಹಿಂದಿನಿಂದ
“ವಾರ್”( War) ಮಾಡಿದರೆ, ಪ್ರಹಾರ ಮಾಡಿದರೆ
ನಾವು ಹಿಂದುಳಿಯುತ್ತೇವೆ
ಮತ್ತು “ಬಿ. ಪಿ. ಎಲ್” ಕಾರ್ಡ್‌ಗಾಗಿ
ಪರದಾಡುವಂತಾಗುತ್ತೇವೆ;
ನಾವು ದರಿದ್ರನಾರಾಯಣರಾಗುತ್ತೇವೆ.
ಅದೇ ಶೂನ್ಯ ನಮ್ಮಗಳ ಮುಂದೆ ಬಂದು ನಿಂತು
ಮುಂದಿನಿಂದ ನಮಗೆ ಮಣೆಹಾಕತೊಡಗಿದರೆ
ನಾವು ಸಹಸ್ರ ಸಹಸ್ರವಾಗುತ್ತೇವೆ,
ಲಕ್ಷ ಲಕ್ಷವಾಗುತ್ತೇವೆ, ಕೋಟಿ ಕೋಟಿಯಾಗುತ್ತೇವೆ.
ನಾವು ``ಸ್ವೈಪ್ ಕಾರ್ಡ್ ಓನರ್''
Swipe Card Owner ಆಗುತ್ತೇವೆ
ಮತ್ತು ಲಕ್ಷ್ಮೀನಾರಾಯಣರಾಗುತ್ತೇವೆ.
ಅಷ್ಟು ಮಾತ್ರವಲ್ಲ, ನಾವು
ನವಕೋಟಿ ನಾರಾಯಣರೂ ಆಗುತ್ತೇವೆ,
ಲಕ್ಷ್ಮೀ ರಮಾರಮಣರೂ ಆಗುತ್ತೇವೆ.
ಶೂನ್ಯ ಅಥವಾ ಸೊನ್ನೆ ಇದು,
ಒಂದು ಅಂಕಿಯ ಹಿಂದೆ ಬಂದುನಿಂತುಕೊಂಡರೆ
(01, 001, 001)
ಒಂದು ಏನೂ ಅಲ್ಲವೇ ಅಲ್ಲ;
ಅದಕ್ಕೆ ಬಿಡಿಸ್ಥಾನ ಅಷ್ಟೇ!!
ಅದೇ ಶೂನ್ಯ, ಸೊನ್ನೆ ಒಂದು ಅಂಕಿಯ
ಮುಂದೆ ಬಂದು ಒಂದೊಂದಾಗಿ
(1, 0, 1, 00, 1, 000, 1, 0000, 1, 00000)
ಅದು ತನ್ನನ್ನು ತಾನು ಹೆಚ್ಚಿಸಿಕೊಳ್ಳುತ್ತ ಹೋದರೆ
ಒಂದು ಅದು,
ಆಗ ಒಂದು ಅಲ್ಲವೇ ಅಲ್ಲ;
ಅದು ಇನ್ನೊಂದು, ಮತ್ತೊಂದು, ಮಗದೊಂದು!!
ಆಗ ಅದು ಸಹಸ್ರ ಸಹಸ್ರ,
ಲಕ್ಷ ಲಕ್ಷ ಮತ್ತು ಕೋಟಿ, ಕೋಟಿ!!
``ಶೂನ್ಯದಿಂದಲೇ ಇಹವು;
ಶೂನ್ಯದಿಂದಲೇ ಪರವು'' -
ಈ ಮಾತಲ್ಲಿ ಎಡರಿಲ್ಲ, ತೊಡರಿಲ್ಲ.
ಅಲೆಮಾರಿ ಸ್ವಭಾವದ ಶೂನ್ಯವು
ಯಾವಾಗ ಒಂದಂಕಿಯ ಮುಂದೆ ಬಂದು
ನಿಂತುಕೊಳ್ಳುತ್ತದೆಯೋ
ಅಥವಾ ಯಾವಾಗ ಶೂನ್ಯವಿದು
ಒಂದಂಕಿಯ ಹಿಂದೆ ಬಂದು ನಿಂತುಕೊಳ್ಳುತ್ತದೆಯೋ
ಗೊತ್ತಾಗುವುದೇ ಇಲ್ಲ...!!!
ನಾವು, ನೀವುಗಳು ಕಣ್ಣುಬಿಟ್ಟು
ನೋಡು-ನೋಡುತ್ತಿರುವ ಹಾಗೆಯೇ ಶೂನ್ಯವಿದು,
ಕೆಂಚನನ್ನು ಕರಿಕನನ್ನಾಗಿಸುತ್ತದೆ,
ರಾಜನನ್ನು ರಂಕನನ್ನಾಗಿಸುತ್ತದೆ,
ಅಟ್ಟವನ್ನು ಬೆಟ್ಟವನ್ನಾಗಿಸುತ್ತದೆ,
ಬೆಟ್ಟವನ್ನು ಅಟ್ಟವಾಗಿಸುತ್ತದೆ.
ಅಹಮಾಲಯವನ್ನು ತಣ್ಣಗೆ ಮಾಡಿಬಿಟ್ಟು
ಹಿಮಾಲಯವಾಗಿಸುತ್ತದೆ;
ಹಿಮಾಲಯವನ್ನು
ದುಡ್ಡು-ದುಗ್ಗಾಣಿಯನ್ನು ಕೊಟ್ಟುಬಿಟ್ಟು ಅಹಮಾಲಯವಾಗಿಸಿಬಿಡುತ್ತದೆ.
ಇದು “ಸಮ್ ಮೋರ್, ಸಮ್ ಮೋರ್”
Some More , Some More
ಎಂದು ಅನ್ನುವವರನ್ನು
“ನೋ ಮೋರ್” No More ಆಗಿಸಿಬಿಡುತ್ತದೆ.
“ನಮ್ಮ ಬಳಿ ಏನೂ ಇಲ್ಲ,
ಏನೇನೂ ಇಲ್ಲ” ಎಂದು
ಗದ್ದಲ, ಗಲಾಟೆ, “ಶೋರ್” ಮಾಡಿಕೊಂಡಿರುವವರನ್ನು
“ಸಮ್ ಮೋರ್” ಮಾಡಿಬಿಡುತ್ತದೆ.
ಸೊನ್ನೆ, ಶೂನ್ಯವಿದು ಇಷ್ಟೊಂದೆಲ್ಲ
ಗದ್ದಲ, ಗಲಾಟೆ ಮಾಡುತ್ತದೆ ಎಂದೇ
ಜ್ಞಾನಿಗಳು ಮತ್ತು ಅನುಭಾವಿಗಳು
``ಶೂನ್ಯದ ಸೊಂಟಮುರಿದು
ಶೂನ್ಯವನ್ನು ನಿಶ್ಶೂನ್ಯವಾಗಿಸಬೇಕು'' ಎಂದು ಕರೆಕೊಟ್ಟರು.
ಶೂನ್ಯಸಂಪಾದನೆ ಇದು,
ಕೆಲವರ ದೃಷ್ಟಿಯಲ್ಲಿ
“ದಿ ಗ್ರೇಟ್” The Great ಆಗಿರಬಹುದು.
ಅದು ಅವರುಗಳ ಜೀವನದ ಉದ್ದೇಶ
ಮತ್ತು ಅಭೀಪ್ಸೆ ಕೂಡ ಆಗಿರಬಹುದು.
ಆದರೆ ನಮ್ಮ ದೃಷ್ಟಿಯಲ್ಲಿ ಮಾತ್ರ
ಶೂನ್ಯವನ್ನು ಸಂಪಾದಿಸುವುದಾಗಲಿ ಅಥವಾ ಶೂನ್ಯಸಿಂಹಾಸನಾಧೀಶ್ವರರಾಗುವುದಾಗಲಿ
ಎರಡೂ ಸಹ ಕಷ್ಟದ ಕೆಲಸವೇ ಸರಿ;
ಬೋಥ್ ಆರ್ ರಿಸ್ಕಿ - Both are Risky.
ಶೂನ್ಯವನ್ನು ಸಂಪಾದಿಸುವುದಾಗಲಿ ಅಥವಾ ಶೂನ್ಯಸಿಂಹಾಸನಾಧೀಶ್ವರರಾಗುವುದಾಗಲಿ
ಅಷ್ಟೊಂದು ಹಗುರವೂ ಅಲ್ಲ;
ಅದು ಹಗುರದ ಕೆಲಸವೂ ಅಲ್ಲ.
ಶೂನ್ಯವೂ ಕೂಡ ಐಕ್ಯವಾಗಬೇಕು.
ಶೂನ್ಯ ನಿಶ್ಶೂನ್ಯವಾಗಬೇಕು.
ಶೂನ್ಯದ ಅಂತಸ್ತು, ಅಸ್ತಿತ್ವ
ಇಲ್ಲ, ಇನ್ನಿಲ್ಲವಾಗಬೇಕು.
ಶೂನ್ಯವಿದು ನಿಶ್ಶೂನ್ಯವಾಗುವ
ಕ್ರಿಯೆ, ಪ್ರಕ್ರಿಯೆಯೇ ಬಯಲಾಗುವಿಕೆ.
ಶರಣರು ಬಯಲಾಗುವ ಕ್ರಿಯೆ, ಪ್ರಕ್ರಿಯೆಯನ್ನು
ತುಂಬ ಇಷ್ಟಪಡುತ್ತಿದ್ದರು.
“ಬಯಲು ಬಯಲಾಗಬೇಕು;
ಬಯಲು ಬಯಲನು ಸೇರಬೇಕು” -
ಎಂಬುವುದೇ ಅವರ ಆಸೆ, ಅಭಿಲಾಶೆ
ಮತ್ತು ಮನೋವಾಂಛಿತ.
ಕೊನೆಗೊಂದು ದಿನ,
ಕನ್ನಡದ ನಮ್ಮ ಕನಕದಾಸರು ಕೇಳುವ ಹಾಗೆ,
“ಬಯಲು ಆಲಯದೊಳಗೊ,
ಆಲಯವು ಬಯಲೊಳಗೊ?” ಎಂದು ಕೇಳುವಂತಾಗಬೇಕು.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment