Good Morning, Happy Monday
16th January 2023
@ TapOvanam, Hiremath, Tumkur



ಇತ್ತೀಚಿನ ದಿನಗಳಲ್ಲಿ
ಆತ್ಮಜಿಜ್ಞಾಸೆ ಕಡಿಮೆಯಾಗುತ್ತಿದೆ.

ಅನ್ಯಜಿಜ್ಞಾಸೆ ಅತಿಯಾಗುತ್ತಿದೆ
ಮತ್ತು ಅದು ಜಾಸ್ತಿಯಾಗುತ್ತಿದೆ.

ಬೆಳಿಗ್ಗೆ ಬೆಳಿಗ್ಗೆ ಎದ್ದ ತಕ್ಷಣ,

“ಅವನು ಸರಿ ಇಲ್ಲ, ಇವನು ಸರಿ ಅಲ್ಲ.
ಆಕೆ ಸರಿ ಇಲ್ಲ, ಈಕೆ ಸರಿ ಅಲ್ಲ;
ಅವರು ಸರಿ ಇಲ್ಲ, ಇವರು ಸರಿ ಇಲ್ಲ.
ಅದು ಸರಿ ಇಲ್ಲ, ಇದು ಸರಿ ಇಲ್ಲ” ಎಂದೇ
ದಿನಾರಂಭಕ್ಕೆ ಶುರುಹಚ್ಚಿಕೊಳ್ಳುತ್ತೇವೆ.

ಇದುವೇ ನಮ್ಮ ಬೆಳಗಿನ
ಮಂತ್ರ, ಸುಪ್ರಭಾತ ಆಗಿರುತ್ತದೆ.

ನಮ್ಮಲ್ಲಿ ಬಹುಪಾಲು ಜನಗಳು,

“ನಾವೆಷ್ಟು ಸರಿ? ನಾನೆಷ್ಟು ಸರಿ?
ನಾನು ಸರೀನಾ, ನನ್ನದು ಸರೀನಾ?
ನನ್ನದು ಸರಿ ಇದ್ದರೂ
ಅದು ಎಷ್ಟರ ಮಟ್ಟಿಗೆ ಸರಿ?” ಎಂದು

ಒಂದೇ ಒಂದು ಚೂರು (ಸ್ವಲ್ಪ) ಕೂಡ
ಯೋಚನೆ ಮಾಡುವುದಿಲ್ಲ.

ಬೆಳಿಗ್ಗೆ ಬೆಳಿಗ್ಗೆ ಎದ್ದ ತಕ್ಷಣ
ಬೇರೆಯವರ ತಟ್ಟೆಯನ್ನು ನೋಡುವುದಕ್ಕೇನೇ 

ಶುರುಹಚ್ಚಿಕೊಂಡುಬಿಡುತ್ತೇವೆ.

ನಮ್ಮ ತಟ್ಟೆಯತ್ತ ನಮಗೆ ಗಮನವೇ ಇಲ್ಲ.

ನಮಗೆ ಧರ್ಮಗ್ಲಾನಿಯಾಗುವುದು
ಗೊತ್ತಾಗುತ್ತದೆ.

ನಮಗೆ ಅನ್ಯಗ್ಲಾನಿಯಾಗುವುದು,
ನಮಗೆ ಅವರಿವರ
ಗ್ಲಾನಿ, ಹಾನಿಗಳು ಗೊತ್ತಾಗುತ್ತವೆ.

ನಮಗೆ ನಮ್ಮ ಆತ್ಮಗ್ಲಾನಿಯಾಗುತ್ತಿರುವುದು
ಗೊತ್ತಾಗುವುದೇ ಇಲ್ಲ.

ಆ ದೃಷ್ಟಿಯಿಂದ,
ನಾವುಗಳು
ಜಾಣಕುರುಡು, ಜಾಣಕಿವುಡು,
ಜಾಣಕುಂಟುಗಳಿಗೆ ಮತ್ತು ಕುಂಟುನೆಪಗಳಿಗೆ
“ಜೈ” ಎನ್ನುತ್ತೇವೆ; ಮತ್ತವುಗಳಿಗೆ “ಸೈ” ಎನ್ನುತ್ತೇವೆ.

ನಮಗೆ ಬೇರೆಯವರ ಮನೆಯ ಮುಂದೆ
ಕಸ ಬಿದ್ದಿರುವುದು ಗೊತ್ತಾಗುತ್ತದೆ.

ನಮಗೆ ನಮ್ಮ ಮನೆಯ ಮುಂದೆ
ಮತ್ತು ನಮ್ಮ ಮನದೊಳಗೆ ಕಸ ಬಿದ್ದಿರುವುದು
ಗೊತ್ತಾಗುವುದೇ ಇಲ್ಲ!!

ನಮಗೆ ನಮ್ಮ ಬೆನ್ನು ಹಾಗೂ ನಮ್ಮ ಹಿಂಭಾಗ
ಹೇಗೆ ಕಾಣುವುದಿಲ್ಲವೋ ಹಾಗೆ

ನಮಗೆ ನಮ್ಮ ತಪ್ಪುಗಳು
ಮತ್ತು ನಮ್ಮೊಳಗಣ
ಕುಹಕ, ಕಲ್ಮಷಗಳು ಕಾಣುವುದೇ ಇಲ್ಲ.

ನಾವು ನಮ್ಮ ಸುತ್ತಮುತ್ತ ಇರುವವರನ್ನು
ಮತ್ತು ಪ್ರಪಂಚದಲ್ಲಿರುವ ಬಹುತೇಕ
ಎಲ್ಲರನ್ನೂ ಯಕ್ಷಪ್ರಶ್ನೆಯಾಗಿಸಿಕೊಳ್ಳುತ್ತೇವೆ.

ಆದರೆ ನಮ್ಮನ್ನು ನಾವು
ಯಕ್ಷಪ್ರಶ್ನೆಯಾಗಿಸಿಕೊಳ್ಳುವುದೇ ಇಲ್ಲ.

“ನಾನು ಸರೀನಾ?
ಅದೊಂದು ವೇಳೆ,
ನಾನು ಸರಿ ಇದ್ದರೂ ಅದೆಷ್ಟರಮಟ್ಟಿಗೆ ಸರಿ?” -

ಎಂದು ಅದೊಮ್ಮೆ ನಮ್ಮನ್ನು ನಾವು
ಕೇಳಲು ಶುರುಮಾಡಿಕೊಂಡರೆ

ನಮ್ಮನ್ನು ಸುತ್ತಿಕೊಂಡಿರುವ,
ನಮ್ಮನ್ನು ಮೆತ್ತಿಕೊಂಡಿರುವ
ಬಹುಪಾಲು ಸಮಸ್ಯೆಗಳು ತಮ್ಮಷ್ಟಕ್ಕೆ ತಾವೇ
ನಮ್ಮನ್ನು ಬಿಟ್ಟುಹೋಗುತ್ತವೆ.

ಇದರಲ್ಲಿ ಎರಡು ಮಾತಿಲ್ಲ.
ಇದರಲ್ಲಿ ಸಂದೇಹದ ಲವಲೇಶವಿಲ್ಲ.

ನಾವುಗಳು ಕಾಣುವ
ನಮ್ಮನ್ನೇ ನಾವು ಬಿಟ್ಟುಕೊಟ್ಟು

ಕೈಗೆ ಸಿಕ್ಕುವ ನಮ್ಮನ್ನೇ ನಾವು
ಹಿಡಿದುಕೊಳ್ಳುವುದನ್ನು ಬಿಟ್ಟು

ಕಾಣದ ಮತ್ತು ``ಶತಾಯ, ಗತಾಯ''
ಎಂದರೂಕೈಗೆ ಸಿಕ್ಕದ ಆ ದೇವರನ್ನು

“ನಮ್ಮನ್ನು ಸರಿಮಾಡು;
ನಮ್ಮನ್ನು ಸರಿಪಡಿಸು” ಎಂದರೆ

ಪಾಪ, ಆ ದೇವರೇನು ಮಾಡಿಯಾನು?!!

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು 

Comments

Popular posts from this blog