Good Morning, Happy Monday23rd January 2023@ TapOvanam, Hiremath, Tumkur
ಬೇಕು, ಬೇಕು - ಇದು ಪೂರ್ಣವಿರಾಮರಹಿತ
ಮತ್ತು ಅಲ್ಪವಿರಾಮಸಹಿತ.
ಸಾಕು, ಸಾಕು - ಇದು ಫುಲ್ಪಾಯಿಂಟ್ಸಹಿತ (. . .)
ಮತ್ತು ಕಾಮಾರಹಿತ (, , ,) !!
ಸಾಕು, ಸಾಕು - ಇದು
ಪೂರ್ಣವಿರಾಮಸಹಿತ ಮತ್ತು ಕಾಮಾರಹಿತ.
“ಬೇಕು” ಪದದಲ್ಲಿ ಹಸಿವೆ ಇದೆ.
“ಸಾಕು” ಪದದಲ್ಲಿ ತೃಪ್ತಿ ಇದೆ.
“ಬೇಕು” ಪದವಿದು ಸಂಸಾರಕ್ಕೆ ಹತ್ತಿರ.
“ಸಾಕು” ಪದವಿದು ಸನ್ಯಾಸಕ್ಕೆ ಹತ್ತಿರ.
“ಸಾಕು, ಸಾಕು” ಎಂದರೆ ಸ್ವರ್ಗ.
“ಬೇಕು, ಬೇಕು” ಎನ್ನುತ್ತಲೇ ಇದ್ದರೆ ಅದು ನರಕ.
ನಮ್ಮ ಬೇಕುಗಳಿಗೆ “ಬ್ರೆಕ್” ಹಾಕಿಕೊಂಡು
ಸಾಕುಗಳ “ಸ್ಪೀಡ್” ಹೆಚ್ಚಿಸಿಕೊಂಡಿದ್ದರೇನೇ
ನಮ್ಮ ಜೀವನ ಪ್ರಯಾಣ ಸುಗಮವಾಗಿ
ಸಾಗಿಕೊಂಡಿರುತ್ತದೆ.
ನಾವು ಜೀವನದಲ್ಲಿ ದಿನೇ ದಿನೇ
ನಮ್ಮಗಳ ಬೇಕುಗಳ ಸಂಖ್ಯೆಯನ್ನು
ಹೆಚ್ಚಿಸಿಕೊಂಡಿದ್ದರೆ
ನಮ್ಮ ಜೀವನವು “ಏಕ್ ಮಾರ್,
ದೋ ತುಕಡಾ”ಗೆ ವೇದಿಕೆಯಾಗುತ್ತದೆ.
ಅದು ಬೇರೆಯವರ ಕಣ್ಣುರಿ,
ಹೊಟ್ಟೆಯುರಿಗೆ ಕಾರಣವಾಗುತ್ತದೆ.
ನಾವುಗಳು ಸಾಕುಗಳನ್ನು ಸೆರೆಮನೆಗೆ ತಳ್ಳಿಬಿಟ್ಟು,
ಅವುಗಳಿಗೆ “ಕಾಲಾಪಾನಿ” ಶಿಕ್ಷೆ ಕೊಟ್ಟು
ದಿನೇ ದಿನೇ ನಮ್ಮ ಬೇಕುಗಳ ಸಾಮ್ರಾಜ್ಯವನ್ನು
ವಿಸ್ತರಿಸಿಕೊಂಡಿದ್ದೇವೆ.
ನಾವು ಬೇಕುದಾಸರಾಗಿದ್ದೇವೆ.
ನಾವು ಬೇಕು, ಬೇಕುಗಳ ದಾಸರಾಗಿದ್ದೇವೆ.
ನಿಜಕ್ಕೂ ಹೇಳಬೇಕೆಂದರೆ,
ನಾವು ಕನಕದಾಸರಾಗಬೇಕು,
ಪುರಂದರದಾಸರಾಗಬೇಕು,
ಕಬೀರದಾಸರಾಗಬೇಕು,
ತುಳಸೀದಾಸರಾಗಬೇಕು,
ಸೂರ್‌ದಾಸರಾಗಬೇಕು.
ಕನಕದಾಸರು,
“ಯುದ್ಧ, ಅದು, ಇದು ಇನ್ನು
ಈ ಸಂಘರ್ಷ, ಸಮರ” ಸಾಕೆಂದು
ತೊರೆದು ಬಂದವರು.
ಪುರಂದರದಾಸರು,
“ನನ್ನ ಆಸೆಯದು ಅತಿಯಾಯಿತು,
ನನ್ನ ಹೆಂಡತಿಯೇ ಭಯಪಡುವಷ್ಟು
ನನ್ನ ಆಸೆ ಜಾಸ್ತಿಯಾಯಿತು.
ಇನ್ನು ಈ ಸಂಸಾರ, ಈ ಭ್ರಮೆ,
ಸಾಕೆಂದು ತೊರೆದು ಬಂದವರು.
ತುಳಸೀದಾಸರು
“ನನ್ನ ಮೋಹವದು ಅತಿಯಾಯಿತು,
ನನ್ನ ಹೆಂಡತಿಯೇ ಬೇಸರಿಸಿಕೊಳ್ಳುವಷ್ಟು
ನನ್ನ ಮೋಹ ಜಾಸ್ತಿಯಾಯಿತು.
ಇನ್ನು ಈ ಮೋಹ, ವ್ಯಾಮೋಹ
ಸಾಕೆಂದು ತೊರೆದು ಬಂದವರು.
ಸೂರ್‌ದಾಸರು,
“ಅದೊಮ್ಮೆ ದೇವರನ್ನು ನೋಡಿದ ಮೇಲೆ
ಈ ಕಣ್ಣುಗಳು
ಮತ್ತಾರನ್ನೂ ಮತ್ತಾವುದನ್ನೂ ನೋಡುವುದು ಬೇಡ.
ಇನ್ನು ಸಾಕು. ಅವರಿವರನ್ನು ದೃಷ್ಟಿಸುವುದು ಬೇಡ” -
ಎಂದು ದೇವರಲ್ಲಿ ಮನವಿ ಮಾಡಿಕೊಂಡು
ತಮ್ಮ ಕುರುಡನ್ನು
ಮುಂದುವರಿಸಿಕೊಂಡಿರಲು
ಕೇಳಿದ ಮಹಾನುಭಾವರವರು!!
ನೋಡಿ,
“ಅದು ಬೇಕು, ಇದು ಬೇಕು” ಎಂದು
ಬಡಿದಾಡಿಕೊಂಡಿದ್ದವರು
ಆಗಲೇ ಮುಗಿದುಹೋಗಿದ್ದಾರೆ.
“ಸಾಕು, ಸಾಕು” ಎಂದ ಈ ಎಲ್ಲ ಮಹಾನುಭಾವರು
ನಮ್ಮ, ನಮ್ಮಗಳ ಮಧ್ಯದಲ್ಲಿ
ಇನ್ನೂ ಜೀವಂತವಾಗಿದ್ದಾರೆ;
ಕಥೆಯಾಗಿ, ಹರಿಕಥೆಯಾಗಿ,
ಮಾದರಿಯಾಗಿ, ಮಹಾನುಭಾವರಾಗಿ.
“ಸಾಕು, ಸಾಕು” - ಇದು,
ನಮ್ಮಗಳನ್ನು ಶಾಶ್ವತವಾಗಿ ಉಳಿಸುತ್ತದೆ.
“‘ಬೇಕು, ಬೇಕು” - ಇದು,
ನಮ್ಮಗಳನ್ನು ಶಾಶ್ವತವಾಗಿ ಅಳಿಸಿಹಾಕುತ್ತದೆ.
ಸಾಕು, ಬೇಕುಗಳ ಈ ಸಂಘರ್ಷ, ಸಮರದಲ್ಲಿ
``ಸಾಕು'' ಶಾಶ್ವತ. ``ಬೇಕು' ಅಶಾಶ್ವತ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment