Good Morning, Happy Thursday
26th January 2023
@ TapOvanam, Hiremath, Tumkur
Happy Republic Day



ಅನಿವಾಸಿ ಭಾರತೀಯರೆಲ್ಲರಿಗೂ
ಮತ್ತು ಭಾರತ ದೇಶವಾಸಿಗಳೆಲ್ಲರಿಗೂ
74ನೇ ಗಣರಾಜ್ಯೋತ್ಸವದ ಶುಭಾಶಯಗಳು.

1.
ಇದು ಭಾರತದ ಗಣರಾಜ್ಯೋತ್ಸವ ಮಾತ್ರವಲ್ಲ;
ಇದು ಭಾರತದ ಗುಣರಾಜ್ಯೋತ್ಸವ ಕೂಡ ಅಹುದು.

2.
ಇದು ಸಂವಿಧಾನ ಶರಣಾರ್ಥಿಯ ದಿನ.
ಇದು ಸಂವಿಧಾನಕ್ಕೆ
“ಶರಣು ಶರಣಾರ್ಥಿ” ಹೇಳುವ ದಿನ.

3.
ಇವತ್ತು ಭಾರತದ ಗುಣಗಳನ್ನು
ಮತ್ತು ಭಾರತದ ಶಕ್ತಿಯನ್ನು
ಇಡೀ ಪ್ರಪಂಚಕ್ಕೆ ಮನಗಾಣಿಸುವ
ಮತ್ತು ಮನಂಬುಗುವಂತೆ ಮಾಡುವ ದಿನ.

4.
ಗಣರಾಜ್ಯೋತ್ಸವದ “ಪರೇಡ್” (ಪಥಸಂಚಲನದ)
ಮೂಲಕ ದೇಶದ “ಶಕ್ತಿಪ್ರದರ್ಶನ” ಮಾಡುವ ದಿನ.

5.
ನಮ್ಮ ಸೈನ್ಯದ ತಾಕತ್ತನ್ನು
ಮತ್ತು ನಮ್ಮ ದೇಶದ ಸಮರಾಯುಧಗಳ
ಸಾಮರ್ಥ್ಯವನ್ನು ಜಗತ್ತಿನ ಕಣ್ಣುಗಳೆದುರು
ಸಾರಿ ಸಾರಿ ಹೇಳುವ ದಿನವಿದು.

6.
ನಮ್ಮ ದೇಶದ ಬೌದ್ಧಿಕ ಮತ್ತು ಭೌತಿಕಗಳನ್ನು
ಹೆಮ್ಮೆಯಿಂದ ಘಂಟಾಘೋಷವಾಗಿ
ಸಾರಿ ಹೇಳುವ ದಿನವಿದು.

7.
“ಭಾರತಮಾತೆ ಅಬಲೆಯಲ್ಲ;
ಅವಳು ಮಹಾಬಲೆ, ಅವಳು ಅಹೋಬಲೆ” -
ಎಂದು ಎದೆ ತಟ್ಟಿಕೊಂಡು ಹೇಳುವ ದಿನವಿದು.

8.
ಅದು ನಮ್ಮ ನೆರೆಹೊರೆಯೇ ಇರಲಿ,
ಅದು ನಮ್ಮ ಅಕ್ಕಪಕ್ಕವೇ ಇರಲಿ
ಅಥವಾ
ಅದು ಜಗತ್ತಿನ ಯಾವುದೇ ಬಲಿಷ್ಠ, ಬಲಾಢ್ಯ,
ಆಯುಧಭೂಯಿಷ್ಠ ರಾಷ್ಟ್ರವೇ ಇರಲಿ
ಭಾರತವನ್ನು ಮತ್ತು ಭಾರತದ ಶಕ್ತಿ-ಸಾಮರ್ಥ್ಯವನ್ನು
“ಅಂಡರ್ ಎಸ್ಟಿಮೇಟ್” Under Estimate
ಮಾಡಲು ಹೋಗಕೂಡದು
ಎಂದು ಎಚ್ಚರಿಸುವ ದಿನವಿದು.

9.
“ಪಾಶ್ಚಿಮಾತ್ಯಕ್ಕಿಂತ ನಮ್ಮ ಪೌರ್ವಾತ್ಯವು
ಬಲ, ಬುದ್ಧಿಗಳಲ್ಲಿ ಕಡಿಮೆಯಲ್ಲ”
ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಮುಟ್ಟಿಸುವ ದಿನವಿದು.

1947 ಆಗಸ್ಟ್ 15ರ ಸ್ವಾತಂತ್ರ್ಯೋತ್ಸವಕ್ಕೂ

1950, ಜನೇವರಿ 26ರ ಗಣರಾಜ್ಯೋತ್ಸವಕ್ಕೂ
ಏನು ಅಂತರ, ಏನು ವ್ಯತ್ಯಾಸ?

1947 ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ -

``ಮುಹೂರ್ತ ಕಳೆದುಹೋಗುತ್ತದೆ
ಎಂದು ಅವಸರ ಅವಸರವಾಗಿ
ಗುರುಗಳನ್ನು ಮನೆಗೆ ಬರಮಾಡಿಕೊಂಡು
ಗುರುಗಳ ಪಾದಪೂಜೆಯನ್ನು ಮಾಡಿ
“ಗೃಹಪ್ರವೇಶ” ಮಾಡಿದ ಹಾಗೆ.''

1950, ಜನೇವರಿ 26 ಗಣರಾಜ್ಯೋತ್ಸವ -

``ಅವಸರ ಅವಸರವಾಗಿ “ಗೃಹಪ್ರವೇಶ” ಮಾಡಿದ
ಹೊಸ ಮನೆಯಲ್ಲಿ ಶೇಷವಾಗಿ ಉಳಿದ
(ಬಾಕಿ ಉಳಿದ) ಮನೆಗೆ ಸಂಬಂಧಿಸಿದ
ಒಂದಷ್ಟು ಸಣ್ಣಪುಟ್ಟ
ಕೆಲಸ, ಕಾರ್ಯಗಳನ್ನು ಪೂರೈಸಿಬಿಟ್ಟು

ಮನೆಯವರು ಮತ್ತು ಮನೆಯ ಸಾಮಾನುಗಳೆಲ್ಲ
ಅಚ್ಚುಕಟ್ಟಾಗಿ “ಸೆಟಲ್” ಆದ ಮೇಲೆ

ಮನೆಯ ಸಾಮಾನು-ಸರಂಜಾಮುಗಳನ್ನೆಲ್ಲ
ಮನಸ್ಸಿಗೆ ಒಪ್ಪುವಂತೆ ಜೋಡಿಸಿಯಾದ ಮೇಲೆ

ಹೊಸಮನೆಗೆ ಗುರುಗಳನ್ನು ಕರೆಯಿಸಿ
ಶಿವಪೂಜೆ ಮಾಡಿಸಿದ ಹಾಗೆ!!

ಸ್ವಾತಂತ್ರ್ಯೋತ್ಸವವಿದು
ಸುಧಾರಿಸಿಕೊಳ್ಳುವುದಕ್ಕೆ ಮೊದಲು;

ಗಣರಾಜ್ಯೋತ್ಸವವಿದು
ಸುಧಾರಿಸಿಕೊಂಡಾದ ಮೇಲೆ.

1950, ಜನೇವರಿ 26, ಗಣರಾಜ್ಯೋತ್ಸವದಂದು,
ನಮ್ಮ ಭಾರತ ಸರ್ವತಂತ್ರ ಸ್ವತಂತ್ರವಾಯಿತು;
ಅದು ಸಾರ್ವಭೌಮವಾಯಿತು.
ಅದು ವಿಧಾನ-ಸಂವಿಧಾನಗೊಂಡಿತು.

1947, ಆಗಸ್ಟ್ 15 ಸ್ವತಂತ್ರ ದಿನ.
1950, ಜನೇವರಿ 26, ಗಣತಂತ್ರ ದಿನ.

1947, ಆಗಸ್ಟ್ 15, ಪರತಂತ್ರ ಮುಕ್ತಿದಿನ.
1950, ಜನೇವರಿ 26, ಪ್ರಜಾತಂತ್ರ “ಶ್ರೀಗಣೇಶ” ದಿನ;
ಅದು ಪ್ರಜಾತಂತ್ರ “ಅಥಶ್ರೀ” ದಿನ
ಮತ್ತು “ಅಕ್ಷರಾಭ್ಯಾಸ” ದಿನ.

ಬನ್ನಿ,

ಇವತ್ತಿನ ದಿನ ನಮ್ಮ ಸ್ವಾತಂತ್ರ್ಯಸೇನಾನಿಗಳನ್ನು
ಮತ್ತು ವೀರಯೋಧರನ್ನುಸ್ಮರಿಸಿಕೊಳ್ಳುತ್ತ,
ನಮ್ಮ ದೇಶದ ಘನತೆ, ಗೌರವಗಳನ್ನು
& ಸಭ್ಯತೆ, ಸೌಜನ್ಯಗಳನ್ನು ಮೆಲುಕುಹಾಕುತ್ತ
ಈ ದಿನವನ್ನು ಇಡಿಯಾಗಿ ಸಂಭ್ರಮಿಸುತ್ತ
ಈ ದಿನಕ್ಕೆ ಸಂತೋಷ, ಸಡಗರದ ದೀಕ್ಷೆ ಕೊಟ್ಟುಕೊಂಡಿರುವಾ.

ನಮ್ಮನ್ನೆಲ್ಲ ಒಟ್ಟೈಸಿದ
ಮತ್ತು ಒಗ್ಗೂಡಿಸಿದ ಭಾರತಮಾತೆಗೆ

ಮತ್ತು

ನಮ್ಮ ದೇಶದ ಸಂವಿಧಾನಸರಸ್ವತಿಗೆ
“ನಮೋ” ಎನ್ನೋಣ;
ಅವರಿಗೆ “ಜೈ ಹೋ” ಹೇಳೋಣ.



ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog