Good Morning, Happy Thursday
@ TapOvanam, Hiremath, Tumkur
12th January 2023
ನಿಜಕ್ಕೂ ಹೇಳಬೇಕೆಂದರೆ,
ಯೌವನವನ್ನು ನಾವು, ನೀವುಗಳು ಅಕ್ಷರಶಃ ಬದುಕಬೇಕು.
ಯೌವನವನ್ನು ಚೈತನ್ಯವಾಗಿಸಿಕೊಂಡುಬದುಕಬೇಕು.
ಯೌವನವನ್ನು ಚಿಲುಮೆಯಾಗಿಸಿಕೊಂಡು ಬದುಕಬೇಕು.
ಯೌವನವನ್ನು ಬದುಕುವುದರಲ್ಲಿ ಎರಡು ವಿಧ.
ಒಂದು,
ಯೌವನವನ್ನು ವರವಾಗಿಸಿಕೊಂಡು ಬದುಕುವುದು.
ಇನ್ನೊಂದು,
ಯೌವನವನ್ನು ಶಾಪವಾಗಿಸಿಕೊಂಡು ಬದುಕುವುದು.
ಕೆಲವರು ಯೌವನವನ್ನು ವರವಾಗಿಸಿಕೊಂಡು ಬದುಕುತ್ತಾರೆ.
ಇನ್ನು ಕೆಲವರು ಯೌವನವನ್ನುಶಾಪವಾಗಿಸಿಕೊಂಡು ಬದುಕುತ್ತಾರೆ.
ವಿವೇಕಾನಂದರಂಥ ಮಹಾನುಭಾವರು
ಯೌವನವನ್ನು ವರವಾಗಿಸಿಕೊಂಡು ಬದುಕಿದರು.
ಇದು ಕಾರಣ, ಯೌವನ ಎಂದ ತಕ್ಷಣ
ನಮಗೆ ವಿವೇಕಾನಂದರ ಆ ಆಕರ್ಷಕ ರೂಪ,
ಆ ಕಟ್ಟುಮಸ್ತಾದ ದೇಹಯಷ್ಟಿ,
ಥಳಥಳ ಹೊಳೆಯುವ ತೇಜಃಪುಂಜವಾದ ಕಣ್ಣುಗಳು
ಕಾಷಾಯದ ಉದ್ದನೆಯ ಆ ನಿಲುವಂಗಿ,
ಆ ದಿಟ್ಟ ನಿಲುವು ಮತ್ತು ಆ ಹೃದ್ಯ ಗಾತ್ರ
ನಮ್ಮಗಳ ಕಣ್ಣುಗಳ ಮುಂದೆ ಬಂದುನಿಲ್ಲುತ್ತದೆ.
ವಿವೇಕಾನಂದರು ಬರೀ ಯುವಕರಾಗಿ ಬದುಕಲಿಲ್ಲ.
ಅವರು ಯೌವನಕ್ಕೊಂದು
ಹೊಸ ಭಾಷ್ಯವನ್ನು ಬರೆಯುತ್ತ ಬದುಕಿದರು.
ಅವರು ಯೌವನವನ್ನು ಕ್ರಿಯಾಶೀಲವಾಗಿಸಿದರು.
ಅವರು ಯೌವನವನ್ನು ಚಲನ, ಸಂಚಲನವಾಗಿಸಿದರು.
ಅವರು ಯೌವನವನ್ನು ಧೈರ್ಯ, ಸ್ಥೈರ್ಯಗಳ ನಿಲ್ದಾಣವಾಗಿಸಿದರು.
ಅವರು ಯೌವನವನ್ನು ಆಲಸ್ಯ, ಆಕಳಿಕೆಗಳಿಂದ ಮತ್ತು ನಿದ್ರೆ, ತೂಕಡಿಕೆಗಳಿಂದ
ಮುಕ್ತಮುಕ್ತವಾಗಿಸಿದರು.
ವಿವೇಕಾನಂದರು ಗರ್ಜನೆಯಾಗಿ ಬದುಕಿದರು.
ಅವರು ಘೋಷಣೆಯಾಗಿ ಬದುಕಿದರು.
ಅವರು “ಸತ್ಯಮೇವ ಜಯತೇ" ಘೋಷವಾಕ್ಯವಾಗಿ ಬದುಕಿದರು.
ವಿವೇಕಾನಂದರು ಯೌವನವನ್ನು ಗತಿಶೀಲವಾಗಿಸಿದರು.
ಅವರು ಯೌವನವನ್ನು ಮತಿಶೀಲವಾಗಿಸಿದರು.
ಅವರು ಯೌವನವನ್ನು ಶೀಲ, ಚಾರುಶೀಲವಾಗಿಸಿದರು.
ಇದು ಕಾರಣ, ಅವರ ಜನ್ಮದಿನವಾದ ಜನೇವರಿ 12ಕ್ಕೆ (12, ಜನೇವರಿ 1863)
“ಯುವದಿನ”, “ಯೂಥ್ ಡೇ”, ‘ಯುವಾದಿವಸ್” ಎಂಬ ಗೌರವ ಸಂದಾಯವಾಗಿದೆ.
ಇಂದು ಜನೇವರಿ 12. ಇವತ್ತು ವಿವೇಕಾನಂದರ 160ನೇ ಜನ್ಮದಿನ.
ಎಲ್ಲರೂ ಒಮ್ಮನದಿಂದ ವಿವೇಕಾನಂದರನ್ನು ಸ್ಮರಿಸಿಕೊಳ್ಳೋಣ.
ಅವರಿಗೊಂದು ಅರ್ಥಪೂರ್ಣ ಗೌರವನಮನವನ್ನು ಸಲ್ಲಿಸೋಣ.
ಈ ಸಂದರ್ಭದಲ್ಲಿ ನಮ್ಮ ಯುವಕರಿಗೆ, ನಾವು ಒಂದು ಕಿವಿಮಾತನ್ನು
ಹೇಳಲುಬಯಸುತ್ತೇವೆ.
ನಮ್ಮ ಯುವಕರು ತಮ್ಮಬಾಳು, ಬದುಕಿಗೆ “ಅದು, ಇದು” ಎಂದು
ಮತ್ತು “ಇದು, ಅದು” ಎಂದು ಮತ್ತಾವ ದೀಕ್ಷೆಯನ್ನು
ಕೊಟ್ಟುಕೊಳ್ಳದಿದ್ದರೂ ಪರವಾ ಇಲ್ಲ;
ಅವರು ತಮ್ಮ ಬದುಕಿಗೆ ವಿವೇಕಾನಂದ ದೀಕ್ಷೆಯನ್ನು ಕೊಟ್ಟುಕೊಂಡರೆ ಸಾಕು.
ಅವರ ಯೌವನ ಸಾರ್ಥಕವಾಗುತ್ತದೆ. ಅವರ “ಯೌವನ ಕೃತಾರ್ಥೋSಹಂ” ಎನ್ನುತ್ತದೆ.
ಅಷ್ಟು ಮಾತ್ರವಲ್ಲ, ಆಗ
ನಮ್ಮ ಯುವಕರುಗಳ ಜನನೀ ಮತ್ತು ಜನ್ಮಭೂಮಿಗೆ “ಸ್ವರ್ಗಗೌರವ” ಮತ್ತು
“ಸ್ವರ್ಗಾದಪಿ ಗರೀಯಸೀ” ಗೌರವ ದೊರಕುತ್ತದೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment