Good Morning, Happy Tuesday
17th January 2023
@ TapOvanam, Hiremath, Tumkur
>>>>>>>>>>>>>>>>>
“ವಿರಾಟಪುರ ವಿರಾಗಿ” ಚಿತ್ರ
>>>>>>>>>>>>>>>>>
ಹಾನಗಲ್ ಕುಮಾರಸ್ವಾಮಿಗಳವರ
ದೇಹಾವಸಾನದ ನಂತರದ
ಸರಿಸುಮಾರು 90 ವರುಷಗಳ
ಸುದೀರ್ಘ ಕಾಲವನ್ನು
ನಾವುಗಳೆಲ್ಲ ದಾಟಿಕೊಂಡು ಬಂದಾಗಿದೆ.
ಇನ್ನೇನು, ಇನ್ನು ಹತ್ತು ವರುಷಗಳಲ್ಲಿ
ಸಾಮಾಜಿಕ ಹಾಗೂ ಶೈಕ್ಷಣಿಕ
ಚಿಂತನ-ಮಂಥನಗಳ ``ತಪೋಮೂರ್ತಿ''
ಪೂಜ್ಯ ಕುಮಾರಸ್ವಾಮಿಗಳು
ಲಿಂಗ್ಯೆಕ್ಯರಾಗಿ ಒಂದು ಶತಮಾನವೇ
ಕಳೆದುಹೋಗುತ್ತದೆ.
90 ವರುಷಗಳ ಈ ಕಾಲಘಟ್ಟದಲ್ಲಿ
ತುಂಬ ಬದಲಾವಣೆಗಳಾಗಿವೆ.
ಅದು ನಮಗೂ ಗೊತ್ತು.
ಅದು ನಿಮಗೂ ಗೊತ್ತು.
ಅದಕ್ಕೆ ನಾವೂ ಸಾಕ್ಷಿ.
ಅದಕ್ಕೆ ನೀವೂ ಸಾಕ್ಷಿ.
ಜನ ಬದಲಾಗಿದ್ದಾರೆ,
ಜನಗಳ ಮನಸ್ಥಿತಿ ಬದಲಾಗಿದೆ.
ಜಗತ್ತು ಬದಲಾಗಿದೆ,
ಜಗತ್ತಿನ ಮನಸ್ಥಿತಿ ಬದಲಾಗಿದೆ.
ಜನಗಳ ರುಚಿ, ಅಭಿರುಚಿಗಳು ಬದಲಾಗಿವೆ.
ದೈನಂದಿನ ಸೌಲಭ್ಯ, ಸೌಕರ್ಯಗಳು ಬದಲಾಗಿವೆ.
ಬಹುತೇಕರೆಲ್ಲರೂ ವಿಜ್ಞಾನದ ದಾಸರಾಗಿದ್ದಾರೆ.
ಜನಗಳು ವಿಜ್ಞಾನದ ಆವಿಷ್ಕಾರಗಳ
ಗುಲಾಮರಾಗಿದ್ದಾರೆ.
ಕಾಲಿನಿಂದ ನಡೆದುಕೊಂಡು ಹೋಗಿ
ಜಗತ್ತನ್ನು ನೋಡಿಬರುತ್ತಿದ್ದ
ಜನಗಳು ಈಗ ತಮ್ಮ ಕೈಯ್ಯಲ್ಲಿರುವ
ಮೊಬೈಲ್‌ನ ಮೇಲೆ ಕೈಬೆರಳುಗಳನ್ನಾಡಿಸಿ
ಪ್ರಪಂಚವನ್ನು ನೋಡಿಕೊಂಡು ಬರುತ್ತಿದ್ದಾರೆ.
ವೇಗವೇ ಇಲ್ಲದ ಆ ಕಾಲಘಟ್ಟದಿಂದ
“ಈಗಿರುವ ಈ ವೇಗ, ಇನ್ನೂ ಸಾಲದು,
ಈಗೆಲ್ಲ 4 GB, 5 G B, 6 G B. ಸಾಕಾಗಲ್ಲ;
ಇದಕ್ಕಿಂತಲೂ ವೇಗವಾಗಿ ಇರುವುದು ಬೇಕು” -
ಎಂದು ಹಪಹಪಿಸುವ ಕಾಲಘಟ್ಟದಲ್ಲಿ
ಈಗ ನಾವಿದ್ದೇವೆ.
ಆಗ ಆ ಕಾಲದಲ್ಲಿ
ಆ ಆಂಜನೇಯನೊಬ್ಬನೇ ಮನೋಜವ,
ಮಾರುತತುಲ್ಯವೇಗ ಮತ್ತು ವಾತಾತ್ಮಜ, ವಾಯುಪುತ್ರ!!
(ಮನೋಜವಂ ಮಾರುತತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಮ್|
ವಾತಾತ್ಮಜಂ ವಾನರಯೂಥಮುಖ್ಯಂ
ಶ್ರೀರಾಮದೂತಂ ಶರಣಂ ಪ್ರಪದ್ಯೇ||)
ಇವತ್ತಿನ ಕಾಲದಲ್ಲಿರುವ
ಬಹುತೇಕ ನಾವೆಲ್ಲರೂ ಹಾಗೇನೇ!!
ಅಂದರೆ ನಮ್ಮಗಳ ಮನಸ್ಥಿತಿ ಕೂಡ
ಮನೋಜವವಾಗಿದೆ;
ಅದು ಕೂಡ ಮಾರುತತುಲ್ಯವೇಗದಿಂದ ಕೂಡಿದೆ.
ಅದು ಕೂಡ ತನ್ನನ್ನು ತಾನು
ವಾತಾತ್ಮಜ, ವಾಯುಪುತ್ರ ಎಂದು
ಘೋಷಿಸಿಕೊಂಡಿರುವಂತಿದೆ.
ಈ ಕಾಲಘಟ್ಟದಲ್ಲಿ ವಿರಾಟಪುರ
ವಿರಾಗಿಯಂಥ ಯುಗಪುರುಷರ ಚಿತ್ರವು
(ಬಯೋಪಿಕ್ - Biopic)
“ಕಮರ್ಶಿಯಲ್” ಆಗಿ “ಸಕ್ಸೆಸ್”
Commercial Success
ಆಗುವುದು ತುಂಬ ಕಷ್ಟ.
ಇಂಥ ಚಿತ್ರಗಳನ್ನು
“ಕ್ಲಾಸಿಕಲ್ ಸಕ್ಸೆಸ್”
Classical Success ಪಟ್ಟಿಗೆ ಸೇರಿಸಬಹುದು.
ಇಂಥ ಚಿತ್ರಗಳನ್ನು
“ಕ್ಲಾಸ್” Class ಎಂದು ಹೇಳಿ
ಇವುಗಳಿಗೆ “ಕ್ಲಾಸ್” ಪಟ್ಟ ಕಟ್ಟಬಹುದು.
ಆದರೆ ಇಂಥ ಚಿತ್ರಗಳಿಗೆ “ಮಾಸ್”ನ್ನು (Mass)
ಹಿಡಿದುತರುವ ಶಕ್ತಿ ಇರುವುದಿಲ್ಲ.
ಏಕೆಂದರೆ ಇವತ್ತಿನ ಬಹುತೇಕ
“ಮಾಸ್” ಅದು ``ಗ್ಲಾಸ್ Glass & Glamorous
ಗ್ಲ್ಯಾಮರಸ್‌ಪ್ರಿಯ'';
ಅದು ಕ್ಲಾಸ್ & ಕ್ಲಾಸಿಕಲ್ ಪ್ರಿಯವಲ್ಲ.
ಜೊತೆ ಜೊತೆಯಲ್ಲಿ
ಇಂಥ ಚಿತ್ರಗಳನ್ನು ನೋಡಲು
ದೊಡ್ಡೊಂದು ತಾಳ್ಮೆಯ ಅವಶ್ಯಕತೆ ಇರುತ್ತದೆ.
ಅದು ಇವತ್ತಿನ ಬಹುತೇಕ ಜನಗಳಲ್ಲಿ ಇಲ್ಲ.
ಅರವತ್ತು ಸೆಕೆಂದು
ಮತ್ತು ಮೂವತ್ತು ಸೆಕೆಂದುಗಳ
“ರೀಲ್ಸ್” Reels ನೋಡುವಷ್ಟರಲ್ಲಿಯೇ
ಬೇಸರಿಸಿಕೊಳ್ಳುವ ಮನಸ್ಥಿತಿಯನ್ನು
ಇವತ್ತಿನ ಬಹುತೇಕ ಜನಗಳು ಹೊಂದಿದ್ದಾರೆ.
ಇನ್ನು 2 ಗಂಟೆ 50 ನಿಮಿಷಗಳಿಗೂ
ಹೆಚ್ಚು ಅವಧಿಯ ವಿರಾಟಪುರ ವಿರಾಗಿಯನ್ನು
ಭಕ್ತಿಯಿಂದ ನೋಡಬೇಕೇ ಹೊರತು,
ಇವತ್ತಿನ ಜನಗಳ ತಾಳ್ಮೆಯ ಶಕ್ತಿಯನ್ನು
ಗಮನದಲ್ಲಿಟ್ಟುಕೊಂಡು
ನೋಡುವುದಾದರೆ ಅದು ತುಂಬ ಕಷ್ಟವಾಗುತ್ತದೆ.
“ವಿರಾಟಪುರ ವಿರಾಗಿ” ಚಿತ್ರ ಚೆನ್ನಾಗಿಲ್ಲ
ಎಂದು ಹೇಳುವ ಹಾಗಿಲ್ಲ.
ಚಿತ್ರ ತುಂಬ ಚೆನ್ನಾಗಿದೆ.
ಆದರೆ ಇಂಥ ಚಿತ್ರಗಳನ್ನು
ನೋಡುವ ಮನಸ್ಥಿತಿಯಲ್ಲಿ ಜನಗಳಿಲ್ಲ.
“ಮಾಸ್” ಎಂದು ಗಣನೆಗೆ ತೆಗೆದುಕೊಳ್ಳುವ
ಜನವೆಲ್ಲ ಇಂಥ ಸದಭಿರುಚಿಯ
ಚಿತ್ರಗಳನ್ನು ನೋಡಲಾರರು.
ಅವರೀಗ “ಐಕಾನ್” Icon ಸಾಂಗ್‌ಗಳನ್ನು
ಕೇಳುವ ಮತ್ತು ನೋಡುವ ಮನಸ್ಥಿತಿಯಲ್ಲಿಲ್ಲ.
ಈಗ ಅವರ ಮನಸ್ಥಿತಿಯೇ ಬೇರೆ.
ಅವರೆಲ್ಲ ಈಗ “ಧಡಂ ಧಡಂ...,
ಧುಡುಂ ಧುಡುಂ” ಬೇಕು.
ವಿರಾಟಪುರದ ವಿರಾಗಿ ಚಿತ್ರದ
ಪೂರ್ವಾರ್ಧವೆಲ್ಲ ಹಾಲಯ್ಯನವರಿಗೆ
ಮೀಸಲಾದರೆ
ಕುಮಾರಪರ್ವವು ಶುರುವಾಗುವುದು
ವಿರಾಮದ ನಂತರದ ಉತ್ತರಾರ್ಧದಲ್ಲಿ!!
ಪೂರ್ವಾರ್ಧ ಬರೀ ಬುನಾದಿ ಮಾತ್ರ.
ಉತ್ತರಾರ್ಧವೇ ಚಿತ್ರದ ಜೀವ, ಜೀವಾಳ.
ಪೂರ್ವಾರ್ಧವೆಲ್ಲ ಹಾಲಯ್ಯನವರನ್ನು,
ಹಾಲಯ್ಯ ದೇಶಿಕರನ್ನು
ಹಾನಗಲ್ ಕುಮಾರಸ್ವಾಮಿಗಳನ್ನಾಗಿ
ರೂಪಿಸುವುದರಲ್ಲಿಯೇ ಮುಗಿದುಹೋಗುತ್ತದೆ.
ಪೂರ್ವಾರ್ಧವೆಲ್ಲ
ಹಾಲಯ್ಯನವರ ಬದುಕು, ಬಡತನ,
ಬಯಕೆ, ಅವರ ಕಷ್ಟ, ಸಂಕಷ್ಟ,
ಅವರ ವಿದ್ಯಾತುರ, ಅವರ ಅನ್ವೇಷಣೆ,
ಅಭೀಪ್ಸೆ, ಅಭಿಲಾಷೆಗಳ ಮೇಲೆ ಕೇಂದ್ರಿತವಾಗಿದೆ.
ಹಾಲಯ್ಯನವರ ಬದುಕು
ಸಂಘರ್ಷಮುಖಿಯಾದರೆ
ಹಾನಗಲ್ಲೇಶ್ವರರ ಬದುಕು ಸಮಾಜಮುಖಿ.
ಚಿತ್ರದಲ್ಲಿ ನಮ್ಮಗಳಿಗೆ ಹಾಲಯ್ಯನವರು
ವಿರಾಗಿಯಾಗಿ ಕಂಡರೆ
ಹಾನಗಲ್ ಕುಮಾರ ಶಿವಯೋಗಿಗಳು
ಸಮಾಜಾನುರಾಗಿಯಾಗಿ ಕಾಣುತ್ತಾರೆ.
ಹಾನಗಲ್ ಕುಮಾರೇಶ್ವರರ
ಸಮಾಜಮುಖಿ ಚಿಂತನಗಳನ್ನು
ಚರಿತ್ರೆಯ ರೂಪದಲ್ಲಿ
ನಿರ್ದೇಶಕರು ತುಂಬ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಚಿತ್ರದಲ್ಲಿ ನೆರಳು, ಬೆಳಕುಗಳ ಬಳಕೆ ಚೆನ್ನಾಗಿದೆ.
ಚಿತ್ರದ ಕೆಲವು ಫ್ರೇಮ್‌ಗಳು ಚೆನ್ನಾಗಿವೆ.
ನಿರ್ದೇಶಕರು ತುಂಬ ಸುಂದರವಾದ
ಲೋಕೇಶನ್ನುಗಳನ್ನು ಆಯ್ಕೆಮಾಡಿದ್ದಾರೆ.
ಅಷ್ಟು ಮಾತ್ರವಲ್ಲ,
ಅವರು ಉತ್ತರ ಕರ್ನಾಟಕದ ಜನಗಳನ್ನು
ಚೆನ್ನಾಗಿ ಬಳಸಿಕೊಂಡಿದ್ದಾರೆ.
2023ರ ಈ ಕಾಲಘಟ್ಟದಲ್ಲಿರುವ ನಮ್ಮಗಳನ್ನು
1867-1930ರ ಆ ಕಾಲಘಟ್ಟದ ಅವಧಿಗೆ
ಕರೆದುಕೊಂಡು ಹೋಗುವುದು
ಅಷ್ಟೊಂದು ಸುಲಭವಲ್ಲ.
ಆದರೆ ಚಿತ್ರದಲ್ಲಿ ಅದು ಸಾಧ್ಯವಾಗಿದೆ.
ಅದು ಸ್ತುತ್ಯ ಮತ್ತು ಅಭಿನಂದನೀಯ.
ಚಿತ್ರದಲ್ಲಿ ಸುಚೀಂದ್ರಪ್ರಸಾದ್
ಒಬ್ಬರನ್ನು ಹೊರತುಪಡಿಸಿ
“ಪ್ರೊಫೆಶನಲ್ ಆರ್ಟಿಸ್ಟ್ಸ್
”Professional Artists ಇಲ್ಲವೇ ಇಲ್ಲ;
ಇದ್ದರೂ ಸಹ ಅವರು
“ನ ಕೇ ಬರಾಬರ್” ಇದ್ದಾರೆ, ಅಷ್ಟೇ.
ನಿರ್ದೇಶಕರು ಸ್ಥಳೀಯರಿಗೆಲ್ಲ
ಅಭಿನಯಕ್ಕೆ ಒಂದು ಅವಕಾಶವನ್ನು
ಕಲ್ಪಿಸಿಕೊಟ್ಟಿದ್ದಾರೆ.
ಬಹುತೇಕ ಪಾತ್ರಗಳು ಕುಮಾರಸ್ವಾಮಿಗಳ
ಪಾತ್ರಕ್ಕೆ ಪೂರಕವಾಗಿ ಹಾಗೂ ಪೋಷಕವಾಗಿ
ಇರುವುದರಿಂದ ಚಿತ್ರಕ್ಕೆ
ಆ ಮಟ್ಟದ “ಪ್ರೊಫೆಶನಲ್”
ಪೋಷಕನಟ, ನಟಿಯರ ಅಗತ್ಯವೂ ಇಲ್ಲ.
ಸಾಮಾನ್ಯ, ಜನಸಾಮಾನ್ಯರೇ
ಆ ಕೆಲಸವನ್ನು ಚೆನ್ನಾಗಿ ಮಾಡಿದ್ದಾರೆ.
ಚಿತ್ರ ಸಂಗೀತ ಓಕೆ. OK.
ಸಂಭಾಷಣೆ ಜನರ ತಲೆಗೆ ಹೋಗುವುದು ಕಷ್ಟ.
ವೀರಶೈವ-ಲಿಂಗಾಯತವನ್ನು,
ವೀರಶೈವ-ಲಿಂಗಾಯತ ಪರಿಭಾಷೆಯಲ್ಲಿಯೇ
ವಿವರಿಸುವ ಪ್ರಯತ್ನಮಾಡಿರುವ ಕಾರಣ
ವೀರಶೈವೇತರರಿಗೆ ಮತ್ತು ಲಿಂಗಾಯತೇತರರಿಗೆ
ಅವು ತಿಳಿಯುವುದು ಕಷ್ಟ.
ಅಲ್ಪಸ್ವಲ್ಪವಾದರೂ ಸರಿ,
ವೀರಶೈವ, ಲಿಂಗಾಯತವನ್ನು
ಓದಿಕೊಂಡಿದ್ದರೆ ಮಾತ್ರ ಅವರಿಗೆ
ಸಂಭಾಷಣೆ ಅರ್ಥವಾಗಬಲ್ಲುದು.
ಇಲ್ಲದೆ ಹೋದರೆ ಕಿವಿಗಳು
ಆ ಸಂಭಾಷಣೆಗಳಿಗೆ
ಬಧಿರಸಾಕ್ಷಿಯಾಗಬೇಕಾಗುತ್ತದೆ.
ಕರ್ನಾಟಕದ ಆಚೆ ಮತ್ತು ಭಾರತದಾಚೆ
ಇರುವ ಜನಗಳಿಗೂ ಕೂಡ ಅರ್ಥವಾಗಲಿ
ಎಂದು ಶ್ರೀ ಹೆಚ್. ಎಸ್. ಶಿವಪ್ರಕಾಶ್‌ರವರ ಕಡೆಯಿಂದ ಚಿತ್ರಸಂಭಾಷಣೆಯನ್ನು ಆಂಗ್ಲಭಾಷೆಗೆ
ತರ್ಜುಮೆ ಮಾಡಿಸಲಾಗಿದೆ.
ಇದು ಕಾರಣ,
ಚಿತ್ರದ ಜೀವಭಾವ, ಹಾವಭಾವ
ಕನ್ನಡೇತರ ಭಾಷಾಭಾಷಿಗಳಿಗೂ ಕೂಡ
ಅರ್ಥವಾಗುತ್ತದೆ.
ಹಾಗೆ ಮಾಡಿದ್ದು ಒಳ್ಳೆಯದು.
ನಟ ಸುಚೀಂದ್ರಪ್ರಸಾದ್‌ರವರು
ಕುಮಾರೇಶ್ವರರನ್ನು
ತಮ್ಮಲ್ಲಿ ಆಹ್ವಾನಿಸಿಕೊಂಡು ನಟಿಸಿದ್ದಾರೆ.
ಅವರ ನಟನೆಯಲ್ಲಿ ನಟನೆಗಿಂತ
ಉತ್ಸಾಹ ಹೆಚ್ಚು ಕಂಡುಬರುತ್ತದೆ.
ಉತ್ತರಾರ್ಧದಲ್ಲಿ
ಬಹುತೇಕ ಕ್ಯಾಮರಾ
ಅವರ ಮೇಲೆಯೇ ಕೇಂದ್ರಿತವಾಗಿದೆ.
ಸುಚೀಂದ್ರಪ್ರಸಾದರು
ದಕ್ಷಿಣ ಕರ್ನಾಟಕದ ಧ್ವನಿಯಲ್ಲಿ
ಉತ್ತರ ಕರ್ನಾಟಕ ಮಾತುಗಳನ್ನು
ಮನಮುಟ್ಟುವಂತೆ ಮಾತನಾಡಿದ್ದಾರೆ.
ಚಿತ್ರದ ಒಂದು ಐಕಾನಿಕ್ “ಹೈಲೈಟ್” Highlight
ಎಂದರೆ ಶ್ರೀ ಪಂಚಾಕ್ಷರಿ ಗವಾಯಿಗಳು,
ಕುಮಾರಸ್ವಾಮಿಗಳನ್ನೇ ಮೊದಲು ಮಾಡಿಕೊಂಡು
ಎಲ್ಲ ಗಣ್ಯಮಾನ್ಯರ ಮುಂದೆ
ಪ್ರಸ್ತುತಪಡಿಸುವ
“ನೋಡಲಾಗದೆ ದೇವ,
ನೋಡಲಾಗದೇ ಕೂಡಿ
ನಿನ್ನ ದಿಟ್ಟಿ ಮೂರು...” ಹಾಡು
ಇಡೀ ಚಿತ್ರಮಂದಿರವನ್ನೇ
ಗಡಗಡ ಎನಿಸುತ್ತದೆ
ಮತ್ತು ಗದ್ಗದಿತವಾಗಿಸುತ್ತದೆ.
ಇದರಲ್ಲಿ ಎರಡು ಮಾತಿಲ್ಲ.
ಈ ಹಾಡು ಎಲ್ಲರ ತನು, ಮನವನ್ನು
ಸೆಳೆಯುತ್ತದೆ.
ಕೊನೆಯಲ್ಲೊಂದು ಮಾತು.
ಅವಸರದಲ್ಲಿರುವ ಜನಗಳಿಗೆ
ಚಿತ್ರವಿದು ಒಂದಷ್ಟು
ಎಳೆದಂತಿದೆ ಎನಿಸಬಹುದು.
ಆದರೆ ನಮ್ಮೊಳಗಣ ಅವಸರಕ್ಕೆ
ಒಂದಷ್ಟು ಕಡಿವಾಣಹಾಕಿಬಿಟ್ಟು
ಸಮಾಧಾನದಿಂದ ಕುಳಿತುಕೊಂಡು
ನೋಡಿದರೆ ಸಮಾಧಾನ ನಿರ್ಮಾಣಸಂಸ್ಥೆಯ
ಶ್ರಮ, ಪರಿಶ್ರಮ ನಿಜಕ್ಕೂ ಸಾರ್ಥಕವಾಗುತ್ತದೆ.
“ಹಾಗಾಗಲಿ ಮತ್ತು ಹಾಗೆಯೇ ಆಗಲಿ” ಎಂದು
ನಾವು ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ
ಹದುಳ ಹಾರೈಸುತ್ತೇವೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment