Good Morning, Happy Tuesday
31st January 2023
@ TapOvanam, Hiremath, Tumkur
ಗಾಂಧೀಜಿಗಿಂತ ನಾವು, ನೀವುಗಳು ಮಿಗಿಲು.
ಗಾಂಧೀಜಿ ಬರೀ ರಾಮರಾಜ್ಯದ ಕನಸು ಕಂಡರು.
ನಾವು, ನೀವುಗಳು ಆರಾಮ್ ರಾಜ್ಯದ
ಕನಸು ಕಾಣುತ್ತಲಿದ್ದೇವೆ.
ನಮ್ಮ ಸಮಕಾಲೀನ ರಾಜಕಾರಣಿಗಳು
ಗಾಂಧೀಜಿಗಿಂತ ನಾಲ್ಕು ಹೆಜ್ಜೆ ಮುಂದೆ ಹೋಗಿ
ನಮ್ಮಗಳಲ್ಲೆಲ್ಲ ಆರಾಮ್ ರಾಜ್ಯ
ಹಾಗೂ ಆಮಿಷ ರಾಜ್ಯದ ಕನಸು ಕಟ್ಟುತ್ತಿದ್ದಾರೆ.
ಊಟ ಫ್ರೀ, ಉಡುಗೆ ಫ್ರೀ, ವಸತಿ ಫ್ರೀ,
ದುಡ್ಡು ಫ್ರೀ, ದುಡಿಮೆ ಝೀರೋ,
ಏನೂ ಕೆಲಸ ಮಾಡದಿದ್ದರೂ
ನಮ್ಮಗಳ ಬ್ಯಾಂಕ್ ಅಕೌಂಟ್‌ಗೆ
“ಅಷ್ಟು ದುಡ್ಡು ಹಾಕುತ್ತೇವೆ,
ಇಷ್ಟು ದುಡ್ಡು ಹಾಕುತ್ತೇವೆ”
ಎಂಬ ಖಚಿತ ಭರವಸೆಗಳು,
ಆಸೆ, ಆಮಿಷಗಳ ವಿಧಾನಸೌಧ, ವಿಕಾಸಸೌಧಗಳು....ಇತ್ಯಾದಿ
ಇಷ್ಟೆಲ್ಲ ಮತ್ತು ಇವೆಲ್ಲ ಗಾಂಧೀಜಿ ಕಂಡ
ರಾಮರಾಜ್ಯದ ಕನಸಲ್ಲಿ ಇದೆಯಾ?
ಪಾಪ, ಗಾಂಧೀಜಿ
ಇಂಥ ಆರಾಮ್ ರಾಜ್ಯದ ಕನಸು ಕಾಣಲೇ ಇಲ್ಲ.
ಅವರು ವಚನಭ್ರಷ್ಟವಾಗದ
ರಾಮರಾಜ್ಯದ ಕನಸು ಕಂಡರು.
ಅವರು “ಕರೋ ಯಾ ಮರೋ” ಎಂದು ಹೇಳಿದರು.
ಅವರು “ಡು ಆರ್ ಡೈ” ಎಂದು ಹೇಳಿದರು.
ಅವರು “ದುಡಿ ಇಲ್ಲವೆ ಮಡಿ” ಎಂದು ಹೇಳಿದರು.
ಜನಗಳಲ್ಲಿ ಆಮಿಷಸಹಿತ
ಆರಾಮ್‌ರಾಜ್ಯದ ಕನಸು ಕಟ್ಟುತ್ತಿರುವ
ನಮ್ಮ ರಾಜಕಾರಣಿಗಳನ್ನು ಕಂಡು ಗಾಂಧೀಜಿಯ
ಆ ಆತ್ಮ ಅದೆಷ್ಟು ನೊಂದುಕೊಳ್ಳುತ್ತಿದೆಯೋ ಏನೋ?!!
ಅಯ್ಯೋ ಪಾಪ...!!
“ಕಾಯಕವೇ ಕೈಲಾಸ” ಎಂದು ಹೇಳಿದ
12ನೇ ಶತಮಾನದ
ಆ ನಮ್ಮ ಶಿವಶರಣರಂತೂ ಹಣೆ ಚಚ್ಚಿಕೊಳ್ಳುತ್ತಿರಬಹುದು;
ಹೂಬೇ ಹೂಬಾಗಿ ಅವರ
“ಕಾಯಕವೇ ಕೈಲಾಸ” ಫಿಲಾಸಫಿ ಸತ್ತುಹೋಗುತ್ತಿದೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment