Good Morning, Happy Wednesday - 11th January 2023
Good Morning, Happy Wednesday 11th January 2023@ TapOvanam, Hiremath, Tumkur
ಇಷ್ಟಲಿಂಗವೆಂದರೇನು?
ಇಷ್ಟಲಿಂಗದ ಇತಿಮಿತಿಗಳೇನು?
ಉತ್ತರ ಇಲ್ಲಿದೆ ನೋಡಿ,
``ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ
ಕೂಡಲಸಂಗಮದೇವಯ್ಯಾ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ''
1.
ಅಪರಿಮಿತವನ್ನು ಪರಿಮಿತಿಯಲ್ಲಿ
ಹಿಡಿದಿಡುವ ಒಂದು ಪ್ರಯತ್ನ ಇಷ್ಟಲಿಂಗ.
2.
ಜಗದಗಲ ಮುಗಿಲಗಲ ಮಿಗೆಯಗಲವನ್ನು
ಕರಸ್ಥಳಕ್ಕೆ ತಂದು ಚುಳುಕಾಗಿಸುವ
ಒಂದು ಕ್ರಿಯೆ, ಪ್ರಕ್ರಿಯೆ ಇಷ್ಟಲಿಂಗ.
3.
ಅತಳ, ವಿತಳ, ಪಾತಾಳಗಳಿಂದಲೂ
ಆಚೆಗೆ ಇರುವ ದೈವವನ್ನು, ಆ ದೈವಶಕ್ತಿಯನ್ನು
ಅಂಗೈಯಲ್ಲಿ ಹಿಡಿದಿರಿಸುವ ಒಂದು ಪ್ರಕ್ರಿಯೆ ಇಷ್ಟಲಿಂಗ.
4.
``ಭೂರ್ಭುವಃ ಸ್ವಃ......ಗಳ ಆಚೆಗಿರುವ
ಮತ್ತು ಬ್ರಹ್ಮಾಂಡದ ಆಚೆಗೆ ಇರುವ’'ಎಂಬ ಗೌರವ
ಮತ್ತು ಹೆಗ್ಗಳಿಕೆಗೆ ಪಾತ್ರವಾದ ದೈವವನ್ನು,
ದೈವಶಕ್ತಿಯನ್ನು ಮುಂಗೈ ಮುಂದಿರುವ ಅಂಗೈನಲ್ಲಿ
ಹಿಡಿದಿಟ್ಟುಕೊಳ್ಳುವ ಒಂದು ಕ್ರಿಯೆ-ಪ್ರಕಿಯೆ ಇಷ್ಟಲಿಂಗ.
5.
ಅಗಮ್ಯವನ್ನು ಗಮ್ಯವಾಗಿಸುವ,
ಅಗೋಚರವನ್ನು ಗೋಚರವಾಗಿಸುವ,
ಅಪ್ರತಿಮವನ್ನು ಪ್ರತಿಮಾಕರಣಕ್ಕೆ
ವಸ್ತು-ವೇದಿಕೆಯಾಗಿಸುವ ಒಂದು
ಕಿರುಪ್ರಯತ್ನ, ಸಣ್ಣ ಪ್ರಯತ್ನ ಇಷ್ಟಲಿಂಗ.
6. ಸ್ಥಾವರವನ್ನು ಜಂಗಮವಾಗಿಸುತ್ತದೆ ಇಷ್ಟಲಿಂಗ.
7. ದೇಹವನ್ನು ದೇಗುಲವಾಗಿಸುತ್ತದೆ ಇಷ್ಟಲಿಂಗ.
8. ಸ್ಥಿರವನ್ನು ಚರವಾಗಿಸುತ್ತದೆ ಇಷ್ಟಲಿಂಗ.
9. ಅಮೇಧ್ಯದ ಹಡಿಕೆ, ಮೂತ್ರದ ಕುಡಿಕೆ ಎಂಬ ಅಗೌರವಕ್ಕೆ
ಪಾತ್ರವಾದ ಮತ್ತು ಅಸ್ಥಿ, ಮಾಂಸ, ಮಜ್ಜಗಳಿಂದ ಕೂಡಿದ ದೇಹಕ್ಕೆ
ಗುಡಿದೀಕ್ಷೆಯನ್ನು ಕೊಡುತ್ತದೆ ಇಷ್ಟಲಿಂಗ.
10. ದೇಹವನ್ನು ದೇಹಗುಡಿಯಾಗಿಸುತ್ತದೆ, ಇಷ್ಟಲಿಂಗ
11. ಪುರೋಹಿತಶಾಹಿಯನ್ನು ಪ್ರಶ್ನಿಸುತ್ತದೆ ಇಷ್ಟಲಿಂಗ.
ಅಷ್ಟು ಮಾತ್ರವಲ್ಲ,
ಜನಹಿತಶಾಹಿಗೆ ಮತ್ತು ವರಹಿತ
ಹಾಗೂ ಪರಹಿತಶಾಹಿಗೆ
ಬೆಂಬಲ, “ಕುಮ್ಮಕ್ಕು'' ಕೊಡುತ್ತದೆ ಇಷ್ಟಲಿಂಗ.
12. ದೈವವನ್ನು ವರ್ಗರಹಿತವಾಗಿಸುವ ,
ವರ್ಣರಹಿತವಾಗಿಸುವ , ವಯೋರಹಿತವಾಗಿಸುವ,
ಲಿಂಗರಹಿತವಾಗಿಸುವ, ತರತಮ, ತಾರತಮ್ಯರಹಿತವಾಗಿಸುವ,
ದ್ವೈತ-ಅದ್ವೈತರಹಿತವಾಗಿಸುವ
ಮತ್ತು ಧ್ಯಾನ, ಯೋಗ, ಶಿವಯೋಗ,
ಅನುಸಂಧಾನಸಹಿತವಾಗಿಸುವ
ಒಂದು ಸಶಕ್ತ ಮತ್ತು ಶಕ್ತಿಶಾಲಿ ಕ್ರಿಯೆ, ಪ್ರಕ್ರಿಯೆ ಇಷ್ಟಲಿಂಗ.
13.
ಇಷ್ಟಲಿಂಗವಿದು ಅನಿಷ್ಟಪರಿಹಾರಕ.
``ಇಷ್ಟಲಿಂಗಮಿದಂ ಸಾಕ್ಷಾದನಿಷ್ಟಪರಿಹಾರಕಮ್ '' -
ಎಂದು ಹೇಳುತ್ತದೆ ಸಿದ್ಧಾಂತ ಶಿಖಾಮಣಿ,
ಲಿಂಗಧಾರಣ ಸ್ಥಲದಲ್ಲಿ!!
ಇಷ್ಟಲಿಂಗವಿದು ಅನಿಷ್ಟಪರಿಹಾರಕ
ಅಹುದೋ, ಅಲ್ಲವೋ ಎಂಬುವುದನ್ನು
ಪರೀಕ್ಷಿಸಿ ನೋಡಬೇಕೆಂದರೆ,
ಇಷ್ಟಲಿಂಗವನ್ನು ಧರಿಸಿ ನೋಡಬೇಕು.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment