Good Morning, Happy Wednesday
25th January 2023
@ TapOvanam, Hiremath, Tumkur


ಗುರುಗಳಲ್ಲಿ ಮತ್ತು ದೇವರಲ್ಲಿ
ನಾವು, ನೀವುಗಳು

“ಅಸತೋ ಮಾ ಸದ್ಗಮಯ;
ತಮಸೋ ಮಾ ಜ್ಯೋತಿರ್ಗಮಯ
ಮೃತ್ಯೋರ್ಮಾಂ ಅಮೃತಂ ಗಮಯ” -
ಎಂದು ಪ್ರಾರ್ಥಿಸುತ್ತೇವೆ.

ಗುರುಗಳು ಮತ್ತು ದೇವರು ನಮ್ಮ ಪ್ರಾರ್ಥನೆಗೆ ಓಗೊಟ್ಟು,
ನಮ್ಮ ಮನವಿಯನ್ನು ಮನ್ನಿಸಿಬಿಟ್ಟು,

ನಮ್ಮನ್ನು ಅಸತ್‌ನಿಂದ ಸತ್ ಕಡೆಗೆ
ಕರೆದುಕೊಂಡು ಹೋಗಿ ನಿಲ್ಲಿಸುತ್ತಾರೆ.

ಅವರು ನಮ್ಮನ್ನು ಕತ್ತಲೆಯಿಂದ
ಬೆಳಕಿನೆಡೆಗೆ ಕರೆದುಕೊಂಡು ನಿಲ್ಲಿಸುತ್ತಾರೆ.

ನಮ್ಮನ್ನು ಮೃತ್ಯುಲೋಕದಿಂದ
ಅಮೃತಲೋಕದತ್ತ ಕರೆದೊಯ್ಯುತ್ತಾರೆ.

ಅವರೇನೋ ಓಕೆ. ಅವರದೇನೋ ಓಕೆ!!

ನಾವು ಕೇಳಿಕೊಂಡ ಹಾಗೆ
ನಮ್ಮನ್ನು ಈ ದಡದಿಂದ ಕರೆದುಕೊಂಡು ಹೋಗಿ
ಅವರು ನಮ್ಮನ್ನು ಆ ದಡದಲ್ಲಿ ನಿಲಿಸುತ್ತಾರೆ.

ಒಮ್ಮೆ ಅಲ್ಲಿ ಹೋಗಿಯಾದ ಮೇಲೆ
ನಾವು ಅಲ್ಲಿ ಸ್ಥಿರವಾಗಿ ನಿಲ್ಲಬೇಕಲ್ಲ?

ನಾವು ಅಲ್ಲಿ ಅಂದರೆ ಸತ್‌ವಲಯದಲ್ಲಿ,
ಜ್ಯೋತಿರ್ವಲಯದಲ್ಲಿ, ಅಮೃತಲೋಕದಲ್ಲಿ
ತಳ ಊರಿಕೊಂಡು ಗಟ್ಟಿಯಾಗಿ ನಿಲ್ಲಬೇಕಲ್ಲ?
ಅದು ತುಂಬ ಮುಖ್ಯ.

ಅಲ್ಲಿ ಹೋಗಿಯಾದ ಮೇಲೆ
ಮತ್ತೆ ಮನೆ, ಮಠಗಳತ್ತ ಬರುತ್ತೇವೆ ಎಂದು
ಮನೆ, ಮಠಗಳತ್ತ ಮುಖಮಾಡಿಕೊಂಡು,
ಮಂಡಿ ಊರಿಕೊಂಡು ಕುಳಿತುಕೊಂಡರೆ
ದೇವರು ಮತ್ತು ಗುರುಗಳೇನು ಮಾಡಬೇಕು?

ಅವರು ನಾವು ಹೇಳಿದ್ದನ್ನು ಮಾಡಿದ್ದಾರೆ.
ನಾವು ಕೇಳಿದ್ದನ್ನು ಅವರು ಕೊಟ್ಟುಕೊಂಡಿದ್ದಾರೆ.

ನಾವು ಮಕ್ಕಳನ್ನು ಸ್ಕೂಲ್‌ವರೆಗೆ
ಕೈಹಿಡಿದು ಕರೆದುಕೊಂಡು ಹೋಗುತ್ತೇವೆ.

ಅವರನ್ನು ಸ್ಕೂಲಲ್ಲಿ ಬಿಟ್ಟು ಬರುತ್ತೇವೆ.

ಸಂಜೆ 04.00 ಗಂಟೆಯವರೆಗೆ ಸ್ಕೂಲಲ್ಲಿ ಇದ್ದುಕೊಂಡು
ಪಾಠ, ಪ್ರವಚನಗಳಿಗೆ ಕಿವಿಯಾಗುವುದು,
ಸ್ಕೂಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಿ
ಸ್ಕೂಲ್‌ನ್ನು ಆನಂದಿಸುವುದು ಮಕ್ಕಳ ಕೆಲಸ ತಾನೆ?

ಸ್ಕೂಲ್‌ಗೆ ಹೋದ ಮೇಲೆ ಮನೆಯತ್ತ ಮುಖಮಾಡಿ
“ಮನೆಗೆ ಹೋಗುತ್ತೇನೆ” ಎಂದು
ರಚ್ಚೆಹಿಡಿದು ಕುಳಿತುಕೊಂಡರೆ
ಸ್ಕೂಲ್ ಏನು ಮಾಡಬೇಕು?;
ಸ್ಕೂಲ್‌ನಲ್ಲಿನ ಮೇಷ್ಟ್ರು,
ಪ್ರಾಧ್ಯಾಪಕರುಗಳೇನು ಮಾಡಬೇಕು?

ಹಾಗೆಯೇ ಗುರುಗಳು ಮತ್ತು ದೇವರು
ನಮ್ಮನ್ನು ಅದೊಮ್ಮೆ
ಸತ್‌ವಲಯ, ಜ್ಯೋತಿರ್ವಲಯ,
ಅಮೃತನಿಲಯಕ್ಕೆ ಕರೆದುಕೊಂಡು
ಹೋಗಿಯಾದ ಮೇಲೆ
ಅಲ್ಲಿ ನಿಂತುಕೊಂಡು ಅವುಗಳನ್ನು ಅನುಭವಿಸುವುದು;
ಮತ್ತವುಗಳನ್ನು ಆನಂದಿಸುವುದು ನಮ್ಮ ಕೆಲಸ;
ಅದು ನಮ್ಮ ಜವಾಬ್ದಾರಿ.

ಅಲ್ಲಿ ಹೋಗಿಯಾದ ಮೇಲೆ
ಸತ್, ಚಿತ್, ಆನಂದಗಳನ್ನು ಆನಂದಿಸದೆ,
ಜ್ಯೋತಿತತ್ತ್ವ ಮತ್ತು ಅಮೃತತ್ವಗಳನ್ನು
ಅನುಭವಕ್ಕೆ ತಂದುಕೊಳ್ಳದೆ

ಮತ್ತೆ ಮನೆಗೆ ಹೋಗುತ್ತೇನೆ
ಎಂದರೆ ಗುರುಗಳಾದರೂ ಸರಿ;
ದೇವರಾದರೂ ಸರಿ ಏನನ್ನೂ ಮಾಡಲಿಕ್ಕೆ ಆಗುವುದಿಲ್ಲ.

ಗುರುಕೃಪೆ ಮತ್ತು ದೇವರ ಕೃಪೆಯಿಂದ
ಒಮ್ಮೆಆ ಸ್ಥಿತಿ ಮತ್ತು ಆ ಅವಸ್ಥೆಯನ್ನು
ತಲುಪಿಯಾದ ಮೇಲೆ

ಮತ್ತೆ “ಘರ್‌ವಾಪಸೀ” ಮಂತ್ರವನ್ನು
ಜಪಿಸಿಕೊಂಡಿದ್ದರೆ
ಅದು ನಮ್ಮ ಕರ್ಮ, ಅಷ್ಟೇ...!!


ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog