Have a Great Day
31st January 2023
@ TapOvanam, Hiremath, Tumkur
ಬೇಂದ್ರೆ ಎಂದರೆ ಬರೀ ಕವಿಯಲ್ಲ;
ಬೇಂದ್ರೆ ಎಂದರೆ ಕವನ,
ಅವರು ನಾಕುತಂತಿಗಳ ತನನನಾS...
ಕವಿಯ ಜನ್ಮದಿನದಂದು
ಅವರ ನಾಕುತಂತಿಗಳ
ನಾದಮಾಧುರ್ಯಕ್ಕೆ ಕಿವಿಯಾಗುತ್ತ....
ನಾಕು ತಂತಿ
ಒಂದು (1)
೧)
ಆವು ಈವಿನ
ನಾವು ನೀವಿಗೆ
ಆನು ತಾನದ
ತನನನಾS
(೨)
ನಾನು ನೀನಿನ
ಈ ನಿನಾನಿಗೆ
ಬೇನೆ ಏನೋ?
ಜಾಣಿ ನಾS
(೩)
ಚಾರು ತಂತ್ರಿಯ
ಚರಣ ಚರಣದ
ಘನಘನಿತ ಚತು-
-ರಸ್ವನಾ
(೪)
ಹತವೊ ಹಿತವೋ
ಆ ಅನಾಹತಾ
ಮಿತಿಮಿತಿಗೆ ಇತಿ
ನನನನಾ
(೫)
ಬೆನ್ನಿನಾನಿಕೆ
ಜನನ ಜಾನಿಕೆ
ಮನನವೇ ಸಹಿ-
ತಸ್ತನಾ.
ಎರಡು (2)
(೧)
ಗೋವಿನ ಕೊಡುಗೆಯ
ಹಡಗದ ಹುಡುಗಿ
ಬೆಡಗಿಲೆ ಬಂದಳು
ನಡುನಡುಗಿ;
(೨)
ಸಲಿಗೆಯ ಸುಲಿಗೆಯ
ಬಯಕೆಯ ಒಲುಮೆ
ಬಯಲಿನ ನೆಯ್ಗೆಯ
ಸಿರಿಯುಡುಗಿ;
(೩)
ನಾಡಿಯ ನಡಿಗೆಯ
ನಲುವಿನ ನಾಲಿಗೆ
ನೆನೆದಿರೆ ಸೋಲುವ
ಸೊಲ್ಲಿನಲಿ;
(೪)
ಮುಟ್ಟದ ಮಾಟದ
ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ
ಸನಿಹ ಹನಿ;
(೫)
ಬೆಚ್ಚಿದ ವೆಚ್ಚವು
ಬಸರಿನ ಮೊಳಕೆ
ಬಚ್ಚಿದ್ದಾವುದೋ
ನಾ ತಿಳಿಯೆ.
(೬)
ಭೂತದ ಭಾವ
ಉದ್ಭವ ಜಾವ
ಮೊಲೆ ಊಡಿಸುವಳು
ಪ್ರತಿಭೆ ನವ.
ಮೂರು (3)
(೧)
’`ಚಿತ್ತೀಮಳಿ, ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ತಿSಯೊ ಮಗನS
ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು
ಕೂಡಿ’'
(೨)
’`ಈ ಜಗ, ಅಪ್ಪಾ, ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ
ಶ್ರೀ ಗುರುದತ್ತ ಅಂದ.’'
ನಾಕು (ನಾಲ್ಕು 4 )
``ನಾನು’' ``ನೀನು'', ``ಆನು'', ``ತಾನು'' ನಾಕೆ ನಾಕು ತಂತಿ,
ಸೊಲ್ಲಿಸಿದರು ನಿಲ್ಲಿಸಿದರು, ಓಂ ಓಂ ದಂತಿ!
ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ
ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ.
- ಅಂಬಿಕಾತನಯದತ್ತ (ದ.ರಾ.ಬೇಂದ್ರೆ)
ಕವಿಗೆ, ಕವಿತ್ವಕ್ಕೆ,
ಕವಿಯೊಳಗಿನ ದಾರ್ಶನಿಕನಿಗೆ
ನಮೋ ನಮಃ...
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment