Good Morning, Happy Monday9th January 2023@ TapOvnam, Hiremath, Tumkur
1.
ಕೆಲವರು ಅಸ್ಥಿವಿಸರ್ಜನದೊಂದಿಗೆಮುಗಿದುಹೋಗುತ್ತಾರೆ.
ಕೆಲವರು ಅಸ್ಥಿವಿಸರ್ಜನದೊಂದಿಗೆ ಶುರುವಾಗುತ್ತಾರೆ.
2.
ಜೀವನ ಎಂದರೆ ಇಲ್ಲದೊಂದಿಗೆ ಶುರುವಾಗಿ
ಇಲ್ಲದೊಂದಿಗೆ ಮುಗಿಯುವ ಒಂದು ಪಯಣ.
3.
ಮನುಷ್ಯ ಮೊದಲು``ಅದು ಬೇಕು, ಇದು ಬೇಕು'' ಎಂದು
ಎಲ್ಲವನ್ನೂ ತುಂಬಿಕೊಳ್ಳುತ್ತ ಹೋಗುತ್ತಾನೆ.
ನಂತರ ``ಅದು ಬೇಡ, ಇದು ಬೇಡ'' ಎಂದು
ಖಾಲಿಯಾಗುತ್ತ ಹೋಗುತ್ತಾನೆ.
4.
ಇರೋವರೆಗೆ ಜೀವನ ಜೋಕಾಲಿ.
ಇಲ್ಲವಾದ ಮೇಲೆ ಎಲ್ಲವೂ ಖಾಲಿ, ಖಾಲಿ!!
5.
ಜ್ಞಾನಿಗಳು ದೇಹವನ್ನು ``ತೂತಿನ ಚೀಲ''
ಮತ್ತು ``ತುತ್ತಿನ ಚೀಲ''ವೆಂದು ಕರೆಯುತ್ತಾರೆ.
ದೇಹದಲ್ಲಿ ಅಧಿಕೃತವಾಗಿ ನವರಂಧ್ರಗಳಿವೆ.
ಇನ್ನು ದೇಹದಲ್ಲಿ ಅನಧಿಕೃತವಾಗಿ
ರೋಮ ಒಂದೊಂದಕ್ಕೆ ಒಂದೊಂದು ರಂಧ್ರವಿದೆ.
ಆದ್ದರಿಂದಲೇ, ದೇಹವಿದು ತೂತಿನ ಚೀಲ.
ಇನ್ನು ದೇಹ ಬದುಕಬೇಕೆಂದರೆ
ಅದಕ್ಕೆ ತುತ್ತು, ತುತ್ತನ್ನ ಬೇಕು ಮತ್ತು ಬೇಕೇ ಬೇಕು.
ತುತ್ತು, ತುತ್ತನ್ನ = ಊಟ, ಅನ್ನ, ಆಹಾರ.
6.
ದೇಹ ಅನ್ನದಾಸೋಹವನ್ನು ಬಯಸುತ್ತದೆ.
ತಲೆ ಜ್ಞಾನದಾಸೋಹವನ್ನು ಬಯಸುತ್ತದೆ.
ದೇಹ ಅನ್ನದಾಸೋಹಾಕಾಂಕ್ಷಿ.
ತಲೆ ಜ್ಞಾನದಾಸೋಹಾಕಾಂಕ್ಷಿ.
7.
ಪರವರ್ತನೆ ಮತ್ತು ಪರವರ್ತನೆಗಳಿಗೆ
ನಾವುಗಳು ವೇದಿಕೆಯಾಗಬಾರದು.
ನಾವು ಪರಿವರ್ತನೆಗೆ ವೇದಿಕೆಯಾಗಬೇಕು.
8.
ಅಧಿಕಾರ ಸಿಕ್ಕೋವರೆಗೆ ಒಂದು ತರ.
ಅಧಿಕಾರ ಸಿಕ್ಕಾದ ಮೇಲೆ ಇನ್ನೊಂದು ತರ!!
ಅಧಿಕಾರ ಸಿಕ್ಕಾದ ಮೇಲೆ
ಇನ್ನೊಂದು ತೆರನಾದ ಅವತಾರ ಶುರುವಾಗುತ್ತದೆ.
ಅಧಿಕಾರ ಸಿಕ್ಕೋವರೆಗೆ ಎಲ್ಲರ ಕೈಗೂ ಸಿಕ್ಕುತ್ತಾರೆ;
ಎಲ್ಲರ ಮೊಬೈಲ್‌ಗೂ ಸಿಕ್ಕುತ್ತಾರೆ.
ಅಧಿಕಾರ ಸಿಕ್ಕಾದ ಮೇಲೂ ಯಾರ ಕೈಗೂ ಸಿಕ್ಕುವುದಿಲ್ಲ;
ಯಾರ ಮೊಬೈಲ್‌ಗೂ ಸಿಕ್ಕುವುದಿಲ್ಲ.
ಅವರುಗಳು ಆ ದೇವರ ಕೈಗೂ ಸಿಕ್ಕುವುದಿಲ್ಲ;
ದೇವರ ಮೊಬೈಲ್‌ಗೂ ಸಿಕ್ಕುವುದಿಲ್ಲ.
ಅವರು ಆ ದೇವರ ನೆಟ್‌ವರ್ಕ್‌ನಿಂದಲೂ ಆಚೆ ಬರುತ್ತಾರೆ.
ಒಂದೋ ಅವರು ಮೊಬೈಲ್ ನಂಬರ್ ಬದಲಾಯಿಸುತ್ತಾರೆ.
ಇಲ್ಲವೆ, ಮೊಬೈಲ್‌ನ್ನೇ ಬದಲಾಯಿಸುತ್ತಾರೆ.
ಇಲ್ಲವೆ “ಸ್ವಿಚ್ಡ್ ಆಫ್” Switched Off ಆಗಿಬಿಟ್ಟಿರುತ್ತಾರೆ.
ಇಲ್ಲವೆ, ``ಔಟ್ ಆಫ್ ನೆಟ್‌ವರ್ಕ್ ಏರಿಯಾ''
Out of Network Area ಆಗಿಬಿಡುತ್ತಾರೆ.
ಅಧಿಕಾರ ಸಿಕ್ಕೋವರೆಗೆ ಸುಗಮವಾಗಿದ್ದವರು,
ಅಧಿಕಾರ ಸಿಕ್ಕುತ್ತಲೇ ದುರ್ಗಮವಾಗಿಬಿಡುತ್ತಾರೆ.
ಇದು ಅವರ ತಪ್ಪು ಎಂದು ಅಂದರೆ
ನಾವು ಖಂಡಿತವಾಗಿ ಒಪ್ಪುವುದಿಲ್ಲ;
ನಾವು ``ಬಿಲ್‌ಕುಲ್' ಒಪ್ಪುವುದಿಲ್ಲ.
ಇದು ಅವರಿಗೆ ದೊರಕಿರೋ ಅಧಿಕಾರದ ತಪ್ಪು.
ಅಧಿಕಾರ ಮತ್ತು ಅಧಿಕಾರದ ಅವಧಿ
ಮುಗಿದುಹೋಗುತ್ತಲೇ ಅವರು ತಕ್ಷಣ
ಸುಗಮವಾಗುತ್ತಾರೆ, ಸುಲಭರಾಗುತ್ತಾರೆ.
“ಮಾಜಿ” ಅವರನ್ನು ಜನಗಳನ್ನು ಹತ್ತಿರಕ್ಕೆ ಕರೆತರುತ್ತದೆ.
“ಹಾಲಿ” ಅವರನ್ನು ಜನಗಳಿಂದ ದೂರ, ದೂರ ಕರೆದೊಯ್ಯುತ್ತದೆ.
ಎಲ್ಲ ಚಕ್ಕರ್‌ಗಳಲ್ಲೂ
ಈ ಹಾಲಿ, ಮಾಜಿಗಳ ಚಕ್ಕರ್ ಇದೆಯಲ್ಲ,
ಇದು ಎಲ್ಲರ ಬಾಳಲ್ಲೂ
ಅಹಂಭೂಮಿಕೆಯನ್ನು ವಹಿಸುತ್ತದೆ.
``ಎಲ್ಲರೂ ಹಾಗಲ್ಲ” ಎಂಬ ಮಾತನ್ನು
ನಮ್ಮ ಸಮಾಧಾನಕ್ಕೆ ಹೇಳಿಕೊಳ್ಳೋಣ.
ಆದರೆ ಬಹುತೇಕರು ಹಾಗೇನೇ ಎಂಬ ಕಹಿಸತ್ಯವನ್ನು
ಜೀರ್ಣಿಸಿಕೊಳ್ಳಲು ಸಿದ್ಧರಾಗೋಣ.
9.
ನಾವು ಸುಖಕ್ಕೊಂದೇ ಮಣೆಹಾಕಿಕೊಂಡಿರುತ್ತೇವೆ.
ಸುಖ ತಾನೊಂದೇ ಬರುವುದಿಲ್ಲ.
ಅದು ದುಃಖವನ್ನು ತನ್ನ ಜೊತೆಯಲ್ಲಿ ಕರೆದುಕೊಂಡುಬರುತ್ತದೆ.
ಸುಖ ತೆರೆಯ ಮೇಲೆ ಆಡಿಕೊಂಡಿರುವಾಗ,ಹಾಡಿಕೊಂಡಿರುವಾಗ,
ವಿಜೃಂಭಿಸಿಕೊಂಡಿರುವಾಗ ದುಃಖ ನೇಪಥ್ಯದಲ್ಲಿದ್ದುಕೊಂಡು
ತನ್ನ ಸರದಿಗಾಗಿ ಕಾದುಕೊಂಡಿರುತ್ತದೆ.
10.
ಆಸ್ತಿ ತಾತ್ಕಾಲಿಕ; ಅಸ್ಥಿ ಶರೀರವಿರುವ ತನಕ.
ಅಸ್ತಿತ್ವ ಜನಗಳು ಮರೆಯುವ ತನಕ.
ಎಲ್ಲಿಯವರೆಗೆ ಜನಗಳು ಅವರನ್ನು ನೆನಪಿಸಿಕೊಂಡಿರುತ್ತಾರೋ
ಅವರನ್ನು ಸ್ಮರಿಸಿಕೊಂಡಿರುತ್ತಾರೋ,
ಅಲ್ಲಿಯವರೆಗೆ ಅವರ “ಅಸ್ತಿತ್ವ” ಜಾರಿಯಲ್ಲಿರುತ್ತದೆ.
ಬುದ್ಧ, ಬಸವ, ಅಕ್ಕ, ಅಲ್ಲಮ....,
ಇತ್ಯಾದಿ ಮಹಾನುಭಾವರು ಇನ್ನೂ ಮಾಜಿಯಾಗಿಲ್ಲ.
ಅವರ ಅಸ್ತಿತ್ವ ಜಾರಿಯಲ್ಲಿದೆ.
ಏಕೆಂದರೆ ಜನರು ಅವರನ್ನುಇನ್ನೂ ನೆನಪಿಸಿಕೊಂಡಿದ್ದಾರೆ;
ಜನರು ಅವರನ್ನು ಇನ್ನೂ ಸ್ಮರಿಸಿಕೊಂಡಿದ್ದಾರೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment