ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತತ್ತ್ವಜ್ಞಾನಗಳ ಚಾರುಸಂಗಮ
ನಮ್ಮ ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು...
ಅಂದು ಜನೇವರಿ 13. 01. 2013.
ಪರಮಪೂಜ್ಯ ಜಗದ್ಗುರು
ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು
ತಮ್ಮ ಐಹಿಕದ ಸೇವಾಯಾತ್ರೆಗೆ
ವಿದಾಯ ಹೇಳಿ ಭಗವಂತನ ಸನ್ನಿಧಾನವನ್ನು ಸೇರಿದ್ದಾರೆ.
ನಾಡಿನಾದ್ಯಂತದಿಂದ ಲಕ್ಷ ಲಕ್ಷ ಸಂಖ್ಯೆಯಲ್ಲಿ
ಜನಗಳು ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಆಗಮಿಸಿ
ಪರಮಪೂಜ್ಯರ ಅಂತಿಮ ದರ್ಶನವನ್ನು
ಪಡೆಯುತ್ತಿದ್ದಾರೆ.
ಎಲ್ಲಿ ನೋಡಿದರೂ ಮೈಲುದ್ದದ ಸಾಲುಗಳು.
ದಿನಪೂರ್ತಿ ಕಾದುನಿಂತು ಜನಗಳು
ಪರಮಪೂಜ್ಯ ಶ್ರೀಗಳವರ ಅಂತಿಮ ದರ್ಶನವನ್ನು ಮಾಡಿ
ಅವರಿಗೆ ತಲೆಬಾಗಿ ತಮ್ಮ ಗೌರವವನ್ನು ಸಲ್ಲಿಸುತ್ತಿದ್ದಾರೆ.
ಎಲ್ಲರ ಮುಖದಲ್ಲೂ ಹತಾಶೆ, ನಿರಾಸೆಗಳು
ಮನೆಮಾಡಿಕೊಂಡಿವೆ.
ಎಲ್ಲರೂ ಮ್ಲಾನವದನರಾಗಿದ್ದಾರೆ.
ಎಲ್ಲರೂ ಕುಸಿದ ಮನಸ್ಸಿನವರಾಗಿದ್ದಾರೆ.
ಶ್ರೀಕ್ಷೇತ್ರದ ತುಂಬೆಲ್ಲ
ಶೂನ್ಯ ಹಾಗೂ ಶೂನ್ಯಭಾವ ಆವರಿಸಿಕೊಂಡಿದೆ.
ಅಂದು ಆದಿಚುಂಚನಗಿರಿ ಕ್ಷೇತ್ರ,
ಕಾಳಿದಾಸನ ಚರಮಗೀತೆಯನ್ನು ಕೇಳಿಸಿಕೊಂಡು
ದೇಹಬಿಟ್ಟ ಭೋಜರಾಜನ ಧಾರಾನಗರಿಯಂತಾಗಿದೆ.
ಭೋಜರಾಜ ಕಾಳಿದಾಸನ ಮೇಲೆ
ಒತ್ತಡ ಹೇರಿ ತನ್ನ ಚರಮಗೀತೆಯನ್ನು
ಹಾಡಲೇಬೇಕೆಂದು ಹಟಮಾಡುತ್ತಾನೆ.
ಕಾಳಿದಾಸ ಅದೆಷ್ಟೇ “ಬೇಡ, ಬೇಡ” ಎಂದು
ಅಲವತ್ತುಕೊಂಡರೂ ಭೋಜರಾಜ ಕೇಳುವುದೇ ಇಲ್ಲ.
ಭೋಜನ ಹಟಕ್ಕೆ ಮಣಿದು ಕಾಳಿದಾಸ
ಚರಮಗೀತೆಯನ್ನು ಹಾಡುತ್ತಾನೆ,
“ಅದ್ಯ ಧಾರಾ ನಿರಾಧಾರಾ ನಿರಾಲಂಬಾ ಸರಸ್ವತೀ |
ಪಂಡಿತಾಃ ಖಂಡಿತಾಃ ಸರ್ವೇ ಭೋಜರಾಜೇ ದಿವಂ ಗತೇ ||” ಎಂದು.
ಈ ಚರಮಗೀತೆಯನ್ನು ಕೇಳಿಸಿಕೊಳ್ಳುತ್ತಲೇ
ಭೋಜರಾಜ ತನ್ನ ದೇಹವನ್ನು ವಿಸರ್ಜಿಸಿಬಿಟ್ಟು
ದಿವಂಗತನಾಗುತ್ತಾನೆ.
ಭೋಜನ ಅಂತಃಪುರ ಶೋಕಪುರವಾಗುತ್ತದೆ.
ಭೋಜನ ಇಡೀ ರಾಜ್ಯ ಗೋಳಿಡುತ್ತದೆ.
ಪ್ರಜೆಗಳ ಕಣ್ಣುಗಳಲ್ಲಿ ಧಾರಾಕಾರವಾಗಿ
ಕಣ್ಣೀರು ಹರಿಯುತ್ತದೆ.
ಪ್ರಜಾವತ್ಸಲನನ್ನು ಕಳೆದುಕೊಂಡ
ಪ್ರಜೆಗಳ ಕಣ್ಣುಗಳು ಕಣ್ಣೀರ ಕೋಡಿಗಳಾಗುತ್ತವೆ.
ಪ್ರಜೆಗಳ ಆ ಶೋಕ, ಆತಂಕ, ಆ ರೋದನ,
ಆ ಆಕ್ರಂದನ, ಆ ವಿಲಾಪವನ್ನು ನೋಡಲಾಗದೆ
ಕಾಳಿದಾಸ ಚರಮಗೀತೆಗೆ
ಅಮರದೀಕ್ಷೆಯನ್ನಿತ್ತು
ಅದನ್ನು ಅಮರಗೀತೆಯನ್ನಾಗಿಸುತ್ತಾನೆ.
ಕಾಳಿದಾಸ ಭೋಜರಾಜನಲ್ಲಿ
ಮತ್ತೆ ಜೀವತುಂಬುತ್ತ ಹೇಳುತ್ತಾನೆ,
“ಅದ್ಯ ಧಾರಾ ಸದಾಧಾರಾ ಸದಾಲಂಬಾ ಸರಸ್ವತೀ |
ಪಂಡಿತಾಃ ಮಂಡಿತಾಃ ಸರ್ವೇ ಭೋಜರಾಜೇ ಭುವೇ ಸ್ಥಿತೇ ||” ಎಂದು.
ಈ ಶ್ಲೋಕವನ್ನು ಹೇಳುತ್ತಲೇ
ಭೋಜರಾಜನಿಗೆ ಮತ್ತೆ ಜೀವಬರುತ್ತದೆ.
ಆತ ನಿದ್ರೆಮಾಡಿ ಏಳುವಂತೆ
ಮೃತ್ಯುಶಯ್ಯೆಯಿಂದ ಎದ್ದು ಹೊರಬರುತ್ತಾನೆ.
ದಿವಂಗತನಾದ ಭೋಜರಾಜ
ಮತ್ತೆ ಭುವಿಸ್ಥಿತನಾಗುತ್ತಾನೆ.
ಪ್ರಜೆಗಳ ಹರ್ಷೋದ್ಗಾರ ಮುಗಿಲು ಮುಟ್ಟುತ್ತದೆ.
ಎಲ್ಲವೂ ಸುಖಾಂತವಾಗುತ್ತದೆ.
ಈ ಸಂದರ್ಭದಲ್ಲಿ
ಈ ಶ್ಲೋಕ ಮತ್ತು ಇದೆಲ್ಲವೂ
ನಮ್ಮ ಜ್ಞಾಪಕಕ್ಕೆ ಬರಲು ಕಾರಣವಿದೆ.
ಅಂದು ಪರಮಪೂಜ್ಯ
ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು
ದಿವಂಗತರಾದಾಗ ಆದಿಚುಂಚನಗಿರಿ
ಶ್ರೀಕ್ಷೇತ್ರದ ಪರಿಸ್ಥಿತಿಯೂ
ಭೋಜರಾಜನಿಲ್ಲದ ಧಾರಾನಗರಿಯಂತಾಗಿತ್ತು.
ಅವತ್ತಿನ ದಿನ, ಆದಿಚುಂಚನಗಿರಿ
ಸುಕ್ಷೇತ್ರವು ಶ್ರೀಕ್ಷೇತ್ರವು ಅಕ್ಷರಶಃ,
“ನಿರಾಧಾರಾ ನಿರಾಲಂಬಾ ಸರಸ್ವತೀ,
ಪಂಡಿತಾಃ ಖಂಡಿತಾಃ ಸರ್ವೇ,
ಪೂಜ್ಯ ಬಾಲಗಂಗಾಧರಸ್ವಾಮೀಜಿ ದಿವಂ ಗತೇ” ಎಂಬ ಹಾಗಿತ್ತು.
ಪರಮಪೂಜ್ಯ ಡಾ. ನಿರ್ಮಲಾನಂದನಾಥ
ಮಹಾಸ್ವಾಮಿಗಳು ಪೀಠಾರೋಹಣವನ್ನು ಮಾಡುತ್ತಲೇ ಆದಿಚುಂಚನಗಿರಿ ಶ್ರೀಕ್ಷೇತ್ರವು ಮತ್ತೆ
“ಸದಾಧಾರಾ ಸದಾಲಂಬಾ ಸರಸ್ವತೀ,
ಪಂಡಿತಾಃ ಮಂಡಿತಾಃ ಸರ್ವೇ
ಪೂಜ್ಯ ನಿರ್ಮಲಾನಂದನಾಥಸ್ವಾಮೀಜಿ ಕ್ಷೇತ್ರೇ ಸ್ಥಿತೇ” ಎಂದು ಹಾಡಿಕೊಂಡಿತು.
ಇದರಲ್ಲಿ ಅತಿಶಯೋಕ್ತಿ ಇಲ್ಲ.
ಇದು ವಾಸ್ತವ ಮತ್ತು ವಸ್ತುಸ್ಥಿತಿ.
ಕೆಲವರು ಕಾವಿಯನ್ನು ಕುರಿತು
ಕೇವಲವಾಗಿ ಮಾತನಾಡುತ್ತಾರೆ.
ಇತ್ತೀಚೆಗೆ ಕಾವಿಯ ಕುರಿತು ಹಗುರವಾಗಿ
ಮಾತನಾಡುವುದು ಕೆಲವರಿಗೆ ಅಭ್ಯಾಸವಾಗಿಬಿಟ್ಟಿದೆ.
ಅದನ್ನು ಕೆಲವರು ತಮ್ಮ ದೈನಂದಿನಿ ಮತ್ತು ದಿನಚರಿಯನ್ನಾಗಿಸಿಕೊಂಡುಬಿಟ್ಟಿದ್ದಾರೆ.
ಕೆಲವರಿಗಂತೂ ಕಾವಿಗೆ ಮತ್ತು ಕಾವಿಧಾರಿಗಳಿಗೆ
ಒಂದಷ್ಟು ಅನ್ನದೆ, ಆಡದೆ ಇದ್ದರೆ
ಅವರುಂಡ ಅನ್ನ ಕರಗುವುದೇ ಇಲ್ಲ.
ಕಾವಿಯನ್ನು ಅಂದುಕೊಂಡಿರುವುದು,
ಆಡಿಕೊಂಡಿರುವುದು
ಇತ್ತೀಚಿನ ಹೊಸ ಫ್ಯಾಶನ್‌ಗಳಲ್ಲಿ ಒಂದು.
ಕಾವಿಗೆ ಅನ್ನುವುದು, ಆಡುವುದು,
ಕಾವಿಯನ್ನು ಅಲ್ಲಗಳೆಯುವುದು
ಮತ್ತು ಕಾವಿಯ ಕುರಿತು ಅಣಕವಾಡುವುದು
ಕೆಲವರ ಹುಟ್ಟುಗುಣ ಮತ್ತು ಸ್ವಭಾವವಾಗಿಬಿಟ್ಟಿದೆ.
``ಸ್ವಭಾವೋ ದುರತಿಕ್ರಮಃ!!'' ಏನು ಮಾಡುವುದು?
ಸನ್ಯಾಸಕ್ಕೆ ಅದೆಂಥ ತಾಕತ್ತಿದೆ
ಮತ್ತು ಕಾವಿಗೆ ಅದೆಂಥ ಆಕರ್ಷಣೆ ಇದೆ ಎಂಬುವುದನ್ನು ತೋರಿಸಿಕೊಟ್ಟವರಲ್ಲಿ
ನಮ್ಮ ನಿರ್ಮಲಾನಂದನಾಥ
ಸ್ವಾಮೀಜಿ ಕೂಡ ಒಬ್ಬರು.
ಪೂಜ್ಯ ನಿರ್ಮಲಾನಂದನಾಥ
ಮಹಾಸ್ವಾಮಿಗಳು ಎಮ್. ಟೆಕ್. ಪದವೀಧರರು.
ಅದೂ ಕೂಡ ಅವರು ಸುಖಾಸುಮ್ಮನೇ
ಪದವಿ ಪಡೆದವರಲ್ಲ.
ಅವರು ರ‍್ಯಾಂಕು ಮತ್ತು ಚಿನ್ನದ ಪದಕಗಳೊಂದಿಗೆ
ಎಮ್. ಟೆಕ್. ಪದವಿಯನ್ನು ಪಡೆದವರು.
ಸ್ವಭಾವತಃ ವಿಜ್ಞಾನಮನಸ್ಕರಾದ
ಅವರಿಗೆ ವಿದ್ವತ್‌ಲೋಕ ಮತ್ತು ವಿಜ್ಞಾನಲೋಕ -
ಇವೆರಡೂ ಕೈಮಾಡಿ ಕರೆದುಕೊಂಡಿದ್ದವು.
ಅದೊಂದು ವೇಳೆ, ಸನ್ಯಾಸ ಮತ್ತು ಕಾವಿ
ನಿರ್ಮಲಾನಂದನಾಥರನ್ನು
ಆಕರ್ಷಿಸದೆ ಹೋಗಿದ್ದರೆ,
ಅವರು ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ
ಮಹಾಸ್ವಾಮಿಗಳವರ ಗುರುಕಕ್ಷ್ಯೆ
ಮತ್ತು ಗುರುರಕ್ಷೆಯ ಕ್ಷಿತಿಜದೊಳಗೆ ಬರುತ್ತಲೇ ಇರಲಿಲ್ಲ.
ಪ್ರತಿಭಾವಂತರಾದ ಮತ್ತು ಅರ್ಹತಾಸಂಪನ್ನರಾದ
ಅವರು ಎಲ್ಲೋ ಒಂದು ಪ್ರತಿಷ್ಠಿತ
ತಾಂತ್ರಿಕ ಕಾಲೇಜಿನಲ್ಲೋ,
ಭಾರತದ ಯಾವುದೋ ಒಂದು,
ಐ ಐ ಟಿ...ಯಲ್ಲೋ, ವಿಶ್ವವಿದ್ಯಾಲಯದಲ್ಲೋ
ಅಥವಾ ದೇಶದಾಚೆಗೆ ಹೋಗಿ
ಆಕ್ಸಫರ್ಡ್, ಕೇಂಬ್ರಿಜ್ ಇತ್ಯಾದಿ
ವಿಶ್ವವಿದ್ಯಾಲಯಗಳಲ್ಲಿ
ಪಾಠಮಾಡಿಕೊಂಡಿರಬಹುದಾಗಿತ್ತು.
ಅಥವಾ ಸೈನ್ಸ್ ಮತ್ತು ಟೆಕ್ನಾಲಜಿ ಕ್ಷೇತ್ರದಲ್ಲಿ
ಅಪರಿಮಿತ ಆಸಕ್ತಿ ಇರುವ
ಅವರು ಓರ್ವ “ಸೈಂಟಿಸ್ಟ್” ಆಗಿರಬಹುದಿತ್ತು.
ಆದರೆ ಸನ್ಯಾಸದ ತಾಕತ್ತು,
ಕಾವಿಯ ತಾಕತ್ತು ಅವರನ್ನು
ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ
ಮಹಾಸ್ವಾಮಿಗಳವರ
ಸನ್ನಿಧಾನಕ್ಕೆ ಕರೆತಂದಿತು.
ನಿರ್ಮಲಾನಂದ ಶ್ರೀಗಳು
ಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳನ್ನು ಗುರುವಾಗಿ
ಸ್ವೀಕರಿಸಿದರು.
ಪೂಜ್ಯ ಬಾಲಗಂಗಾಧರನಾಥ ಮಹಾಸ್ವಾಮಿಗಳು
ನಿರ್ಮಲಾನಂದರನ್ನು
ತಮ್ಮ ಶಿಷ್ಯನನ್ನಾಗಿ ಅಂಗೀಕರಿಸಿದರು.
ಪರಮಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳು ಒಬ್ಬ ವಿಜ್ಞಾನಿಯನ್ನು
ಜ್ಞಾನಿಯನ್ನಾಗಿಸಿದರು;
ಓರ್ವ ತಂತ್ರಜ್ಞರನ್ನು ಅವರು
ತತ್ತ್ವಜ್ಞಾನಿಯನ್ನಾಗಿಸಿದರು.
ವಿಶ್ವವಿದ್ಯಾಲಯದಲ್ಲಿ
ಪಾಠಮಾಡಿಕೊಂಡಿರಬೇಕಿದ್ದ
ನಿರ್ಮಲಾನಂದನಾಥರಿಗೆ ``ವಿಶ್ವದೀಕ್ಷೆ''
ಮತ್ತು ``ವಸುಧೈವ'' ದೀಕ್ಷೆಯನ್ನು ನೀಡಿ
ನಿರ್ಮಲಾನಂದನಾಥರನ್ನು
ವಿಶ್ವವಿದ್ಯಾಲಯವಾಗಿಸಿದರು.
ಶ್ರೀಕ್ಷೇತ್ರ ಆದಿಚುಂಚನಗಿರಿ
ವಿಶ್ವವಿದ್ಯಾಲಯವನ್ನು
ಬೆಳಗುವ ಬೆಳಕಿನ ಸ್ತಂಭವಾಗಿಸಿದರು.
ಓರ್ವ ಯೋಗಿಯ ಕನಸಿಗೆ,
ಓರ್ವ ಸನ್ಯಾಸಿಯ ಕನಸಿಗೆ,
ಓರ್ವ ಕಾವಿಧಾರಿಯ ಸತ್ಯಶುದ್ಧ ಸಂಕಲ್ಪಕ್ಕೆ
ಎಂಥ ತಾಕತ್ತು, ಎಂಥ ಬಲ,
ಎಂಥ ದೃಢತೆ ಇರುತ್ತದೆ ಎಂಬುವುದನ್ನು
ಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳು ತೋರಿಸಿಕೊಟ್ಟರು.
ಸನ್ಯಾಸದ ಬಲವೇ ಅಂಥದ್ದು.
ಅದು ಅಣೋರಣೀಯಾನ್;
ಅದು ಮಹತೋ ಮಹೀಯಾನ್...!!
ಪರಮಪೂಜ್ಯ ಡಾ. ನಿರ್ಮಲಾನಂದನಾಥ
ಮಹಾಸ್ವಾಮಿಗಳು ಪೀಠಾರೋಹಣವನ್ನು ಮಾಡಿ
ಇವತ್ತು ಅಂದರೆ 20, ಫೆಬ್ರವರಿ 2023ಕ್ಕೆ
ಒಂದು ದಶಮಾನವಾಗುತ್ತದೆ.
ಈ ಒಂದು ದಶಮಾನದ ಅವಧಿಯಲ್ಲಿ
ಪೂಜ್ಯರು ಆದಿಚುಂಚನಗಿರಿ ಶ್ರೀಕ್ಷೇತ್ರವನ್ನು
ಇಮ್ಮಡಿ, ಮುಮ್ಮಡಿ, ನಾಲ್ಮಡಿಯಾಗಿ ಬೆಳೆಸಿದ್ದಾರೆ.
ತಮ್ಮ ಗುರುದೇವರು ಕಂಡ ಕನಸುಗಳಿಗೆಲ್ಲ
ಪೂಜ್ಯ ನಿರ್ಮಲಾನಂದ ಸ್ವಾಮೀಜಿಯವರು
ನನಸಿನ ದೀಕ್ಷೆಯನ್ನು ಕೊಟ್ಟಿದ್ದಾರೆ.
ಪೂಜ್ಯರು ಆದಿಚುಂಚನಗಿರಿ ಕ್ಷೇತ್ರದ
ಬಲ ಮತ್ತು ಬಾಹುಬಲ - ಎರಡನ್ನೂ
ಹೆಚ್ಚಿಸಿದ್ದಾರೆ.
ಪೂಜ್ಯರು ಶ್ರೀಕ್ಷೇತ್ರವನ್ನು
ಸರ್ವಾಂಗಸುಂದರವಾಗಿಸುವುದರ
ಜೊತೆ ಜೊತೆಯಲ್ಲಿ ಸಮೃದ್ಧವಾಗಿಸಿದ್ದಾರೆ.
ಅವರ ಕಾಲಘಟ್ಟದ
ಈ ಒಂದು ದಶಮಾನದಲ್ಲಿ
ನೂರಕ್ಕೂ ಹೆಚ್ಚು ಹೊಸ ಹೊಸ
ಸಂಸ್ಥೆ, ಶಿಕ್ಷಣಸಂಸ್ಥೆಗಳು ಬೆಳೆದುನಿಂತಿವೆ.
ಶ್ರೀಗಳವರ ಪೂಜ್ಯ ಗುರುಗಳು ಗುಡಿ ಕಟ್ಟಿದ್ದರು.
ಗುರುಗಳು ಕಟ್ಟಿದ ಗುಡಿಗೆ
ಪೂಜ್ಯ ನಿರ್ಮಲಾನಂದ ಸ್ವಾಮಿಗಳು
ಗೋಪುರವನ್ನು ಕಟ್ಟುವುದಷ್ಟೇ ಅಲ್ಲ,
ಅದರ ಮೇಲೆ ಒಂದೊಂದಾಗಿ
ಕೀರ್ತಿಕಳಸಗಳನ್ನು ಇಡುತ್ತಿದ್ದಾರೆ.
ಭೈರವೈಕ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ
ಮಹಾಸ್ವಾಮಿಗಳಿಗೆ ಖುಷಿಯೋ ಖುಷಿ!!
ನಿಜವಾದ ಗುರುಗಳು ತಮ್ಮ ಶಿಷ್ಯ
ತಮಗಿಂತಲೂ ಹೆಚ್ಚು ಸಾಧನೆ ಮಾಡಬೇಕು.
ತಮ್ಮಕ್ಕಿಂತಲೂ ಹೆಚ್ಚು
ಕೀರ್ತಿಶಾಲಿಯಾಗಬೇಕೆಂದು ಬಯಸುತ್ತಾರೆ.
ಯಾರಿಗಾದರೂ ಸರಿ,
ಯೋಗ್ಯ ಗುರುಗಳು ಸಿಕ್ಕುವುದಕ್ಕೆ
ಅದೃಷ್ಟವಿರಬೇಕು.
ಹಾಗೆಯೇ ಯೋಗ್ಯ ಶಿಷ್ಯರು ಕೂಡ
ಸಿಕ್ಕಬೇಕೆಂದರೆ ಗುರುಗಳೂ ಕೂಡ
ಪುಣ್ಯಮಾಡಿರಬೇಕು.
ಅವರಿಗೂ ಕೂಡ ಅದೃಷ್ಟವಿರಬೇಕು.
ಗುರುವನ್ನು ಮೀರಿಸುವ ಶಿಷ್ಯರು
ದೊರೆತಾಗಲೇ ಗುರುಗಳ ಆತ್ಮ
ತೃಪ್ತಿಯಿಂದ ತಣಿಯುತ್ತದೆ.
ಯೋಗ್ಯ ಶಿಷ್ಯರು, ಅರ್ಹ ಉತ್ತರಾಧಿಕಾರಿಗಳು
ಸಿಕ್ಕದೆ ಹೋದರೆ ಗುರುಗಳ
ಆತ್ಮವದು ಮೋಕ್ಷವಂಚಿತವಾಗಿ
ಅಲ್ಲಿ ಇಲ್ಲಿ ಅಲೆಯುತ್ತ ದಣಿದುಕೊಂಡಿರುತ್ತದೆ.
ಪೂಜ್ಯ ನಿರ್ಮಲಾನಂದನಾಥ
ಸ್ವಾಮೀಜಿಯವರು
ಸ್ವಭಾವತಃ ಚಾರುಶೀಲರು
ಮತ್ತು ಚಾರುಮತಿಗಳು.
ಪೂಜ್ಯರು ಸುಸಂಸ್ಕೃತಮನಸ್ಕರು.
ಹಾಗೆಯೇ ಅವರು
ಜ್ಞಾನ, ಧ್ಯಾನ, ವಿಜ್ಞಾನಮನಸ್ಕರು.
ಅವರ ಪೀಠಾರೋಹಣದ ನಂತರದ
ಈ ಹತ್ತು ವರುಷಗಳ ಅವಧಿಯಲ್ಲಿ
ಅವರು ತಮ್ಮ ಗುಣ, ಶೀಲ, ಸ್ವಭಾವಗಳಿಂದ
ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.
ಪರಮಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳವರ ಸಮಕಾಲೀನರು ಕೂಡ
ಪೂಜ್ಯ ನಿರ್ಮಲಾನಂದನಾಥರನ್ನು
ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದಾರೆ.
ಪೂಜ್ಯರ ಸಾಧನೆ, ಸಂಯಮ, ಸಾಹಸ
ಹಾಗೂ ಸಂವೇದನಾಶೀಲ ಮನಸ್ಥಿತಿಗೆ
ಅವರೆಲ್ಲ ತಲೆಬಾಗಿಕೊಂಡಿದ್ದಾರೆ.
ಪೂಜ್ಯ ನಿರ್ಮಲಾನಂದನಾಥ ಸ್ವಾಮಿಗಳು
ಒಕ್ಕಲಿಗ ಸಮುದಾಯದ ಗುರುಪೀಠದ
ಪ್ರಾತಿನಿಧಿಕ ಧ್ವನಿಯಾಗಿದ್ದರೂ
ಅವರು ತಮ್ಮ ವ್ಯಕ್ತಿತ್ವವನ್ನು
ಸರ್ವಜನಾಂಗದ ತೋಟವಾಗಿಸಿದ್ದಾರೆ.
ಜಾತ್ಯತೀತವಾಗಿ ಅವರು
ಎಲ್ಲರನ್ನೂ ಪ್ರೀತಿಸುತ್ತಾರೆ
ಮತ್ತು ಎಲ್ಲರನ್ನೂ ಗೌರವಿಸುತ್ತಾರೆ.
ಪೂಜ್ಯರು ತಮ್ಮ ಕಾರ್ಯಕ್ಷೇತ್ರವನ್ನು
ಮತ್ತು ಕರ್ತೃತ್ವ ಶಕ್ತಿಯನ್ನು
ಬರೀ ಸಮುದಾಯಮುಖಿಯಾಗಿಸದೆ
ಅದನ್ನು ಸಮಾಜಮುಖಿಯಾಗಿಸಿದ್ದಾರೆ.
ಪೂಜ್ಯರು ತಮ್ಮ ವ್ಯಕ್ತಿತ್ವಕ್ಕೆ
“ಬಹುಜನ ಹಿತಾಯ, ಬಹುಜನ ಸುಖಾಯ”
ದೀಕ್ಷೆಯನ್ನು ಕೊಟ್ಟುಕೊಂಡಿದ್ದಾರೆ.
ಆದಿಚುಂಚನಗಿರಿ ಕ್ಷೇತ್ರವು
ಬಸವಣ್ಣನವರು ಹೇಳಿದ ಹಾಗೆ
“ಇವನಾರವ, ಇವನಾರವ ಎಂದೆನ್ನದೆ
ಎಲ್ಲರನ್ನೂ ಇವ ನಮ್ಮವ, ಇವ ನಮ್ಮವ” ಎಂದು
ಅಂದುಕೊಂಡು ಎಲ್ಲರನ್ನೂ ಅಪ್ಪಿಕೊಂಡು,
ಒಪ್ಪಿಕೊಂಡು ಅನುದಿನವೂ,
ಅನುಕ್ಷಣವೂ ಮುಂದೆ ಮುಂದೆ ಸಾಗುತ್ತಿದೆ.
ಅರ್ಹರ ವಿಷಯದಲ್ಲಿ
ಮತ್ತು ಸತ್ಪಾತ್ರರ ವಿಷಯದಲ್ಲಿ
ಶ್ರೀಕ್ಷೇತ್ರಕ್ಕೆ “ಸಾಫ್ಟ್ ಕಾರ್ನರ್” ಇದೆ.
ವಿದ್ಯಾವಂತರು, ಬುದ್ಧಿವಂತರು
ತನ್ನ ಸನ್ನಿಧಾನಕ್ಕೆ ಬಂದಾಗ
ಶ್ರೀಕ್ಷೇತ್ರವು ಅವರ ವಿಷಯದಲ್ಲಿ
ಮುಖ ತಿರುಗಿಸುವುದಿಲ್ಲ.
ಶ್ರೀ ಕ್ಷೇತ್ರದಲ್ಲಿ ವಿದ್ಯೆಗೆ ಬೆಲೆ ಇದೆ, ಬುದ್ಧಿಗೆ ಬೆಲೆ ಇದೆ.
ಶ್ರೀಕ್ಷೇತ್ರವು ವಿದ್ಯೆ, ಬುದ್ಧಿಗಳಿಗೆ
ಮೊದಲ ಆದ್ಯತೆಯನ್ನು ಕೊಟ್ಟುಕೊಂಡಿದೆ.
ಶ್ರೀಕ್ಷೇತ್ರದಲ್ಲಿ ನಂತರ, ಅನಂತರದ
ಸ್ಥಾನ ಹುದ್ದೆಗೆ!!
ಪೂಜ್ಯ ನಿರ್ಮಲಾನಂದನಾಥ ಸ್ವಾಮಿಗಳು
ವಿದ್ಯಾ, ಬುದ್ಧಿಗಳ ವಿಷಯದಲ್ಲಿ
ತುಂಬ ಅಚ್ಚುಕಟ್ಟು ಮತ್ತು ಕಟ್ಟುನಿಟ್ಟು.
ಇದು ಕಾರಣ, ಸದ್ಯ ಆದಿಚುಂಚನಗಿರಿ
ಶ್ರೀಕ್ಷೇತ್ರದ ದಿವ್ಯ ಶ್ರೀರಕ್ಷೆಯಲ್ಲಿ
500ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳಿದ್ದು
ಸುಮಾರು 1 ಲಕ್ಷ 5೦,೦೦೦ಕ್ಕೂ ಹೆಚ್ಚು ಜನ
ವಿದ್ಯಾರ್ಥಿಗಳು
ವಿದ್ಯಾರ್ಜನೆ ಮಾಡುತ್ತಿದ್ದಾರೆ.
1 ಲಕ್ಷ, 5೦,೦೦೦ ಇದೇನು ಸಾಮಾನ್ಯದ ಸಂಖ್ಯೆಯೇ?
ಇದೇನು ಸಾಮಾನ್ಯದ ಸಾಧನೆಯೇ?
ಶ್ರೀಕ್ಷೇತ್ರ ಮತ್ತು ಶ್ರೀಕ್ಷೇತ್ರದ ಶಿಕ್ಷಣ ಸಂಸ್ಥೆಗಳಲ್ಲಿ
17000 ಕ್ಕೂ ಹೆಚ್ಚು ಜನ ತಮ್ಮ ತಮ್ಮ ಅರ್ಹತೆ,
ವಿದ್ಯೆ, ಬುದ್ಧಿಗಳಿಗೆ ಅನುಗುಣವಾಗಿ
ವಿವಿಧ ಕೆಲಸ, ಕಾರ್ಯಗಳನ್ನು ಮಾಡುತ್ತ
ಸಂತೃಪ್ತ ಮನಸ್ಥಿತಿಯಿಂದ
ಇದ್ದಾರೆಂದರೆ,
ಇದು ನಿಜಕ್ಕೂ ಅಭಿನಂದನೀಯ
ಮತ್ತು ಇದು ನಿಜಕ್ಕೂ ಶ್ಲಾಘನೀಯ.
ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ
ಕ್ಷೇತ್ರದಲ್ಲಿ ಮತ್ತು ಕ್ಷೇತ್ರದ ಸಂಸ್ಥೆಗಳಲ್ಲಿ
ಉದ್ಯೋಗಾರ್ಥಿಗಳು ಮತ್ತು
ಸೇವಾರ್ಥಿಗಳು ಇದ್ದಾರೆಂದು
ಊಹಿಸುವುದು ಕೂಡ ಕಷ್ಟ.
ಅಂಥೊಂದು ಅನೂಹನೀಯ
ಸತ್ಯವನ್ನು ಶ್ರೀಕೇತ್ರವು ಸತ್ಯ ಸತ್ಯವಾಗಿಸಿದೆ.
ಶ್ರೀಕ್ಷೇತ್ರ ಮತ್ತು ಅದರ ಶಾಖೋಪಶಾಖೆಗಳು
ಸಹಸ್ರ ಸಹಸ್ರ ಕುಟುಂಬಗಳಿಗೆ
ಬದುಕು ಕೊಟ್ಟಿವೆ.
ಶ್ರೀಕ್ಷೇತ್ರವು ಸಹಸ್ರಾರು ಕುಟುಂಬಗಳಿಗೆ
ಅನ್ನಭಾಗ್ಯ, ಜಲಭಾಗ್ಯ, ವಸತಿಭಾಗ್ಯ,
ವಿದ್ಯಾಭಾಗ್ಯ, ಉದ್ಯೋಗಭಾಗ್ಯವನ್ನು
ಒದಗಿಸಿಕೊಟ್ಟಿದೆ.
ಆದಿಚುಂಚನಗಿರಿ ಶ್ರೀಕ್ಷೇತ್ರವು
ಪರ್ಯಾಯ ಸರಕಾರವಾಗಿ
ಕೆಲಸಮಾಡುತ್ತಿದೆ.
ಅಂದು ಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳು ನೆಲ ಅಗಿದು
ಬೀಜವನ್ನಿರಿಸಿದ ಪುಟ್ಟ ಮರ
ಇಂದು ಹೆಮ್ಮರವಾಗಿದೆ.
ಅಷ್ಟು ಮಾತ್ರವಲ್ಲ,
ಇಂದು ಅದು ಕಲ್ಪತರು, ಕಲ್ಪವೃಕ್ಷವಾಗಿ
ತನ್ನ ಹಿರಿಮೆ, ಗರಿಮೆಗಳನ್ನು ವಿಸ್ತರಿಸುತ್ತಲಿದೆ.
ಇತ್ತೀಚೆಗೆ ಮಾಧ್ಯಮಗಳಲ್ಲಿ
ಮತ್ತು ವಿಧಾನಸಭೆಯಲ್ಲಿ ಕೆಲವು
ಮಹಾನುಭಾವರು ಸ್ವಾಮೀಜಿಗಳಿಗೆ
ಜೇಬು ಇರಬಾರದೆಂಬ ವಿಷಯದ ಕುರಿತು
ಮಾತನಾಡುವುದನ್ನು
ನಾವು ಕೇಳಿಸಿಕೊಂಡಿದ್ದೇವೆ.
“ಜೇಬು ಇದ್ದವರು ಅನುಮಾನಾಸ್ಪದರು”
ಎಂಬ ಹಾಗೆ ಕಿಚಾಯಿಸಿ ಮಾತನಾಡುವುದನ್ನು
ಕೇಳಿಸಿಕೊಂಡಾಗ ನಮಗೆ
ಅವರ ಪರಿಮಿತಜ್ಞಾನದ
ಇತಿಮಿತಿಯನ್ನು ಕಂಡು “ಅಯ್ಯೋ” ಎನಿಸಿತು.
ಒಂದರ್ಥದಲ್ಲಿ ನಾವೂ ಒಪ್ಪುತ್ತೇವೆ,
ಸ್ವಾಮಿಗಳಿಗೆ ಜೇಬು ಇರಬಾರದೆಂದು!!
ಆದರೆ, ಈ ವಿಷಯದಲ್ಲಿ
ಒಂದಷ್ಟು ಮುಂದುವರಿದು ಹೇಳಬಯಸುತ್ತೇವೆ,
“ಸ್ವಾಮಿಗಳಿಗೆ ಜೇಬು ಇರಬಾರದು,
ಸ್ವಾಮಿಗಳ ಬಳಿ ಜೋಳಿಗೆ ಇರಬೇಕು” ಎಂದು.
ಜೇಬಿದ್ದರೆ ಏನು ಪ್ರಯೋಜನ?
ಜೇಬು ವೈಯಕ್ತಿಕ. ಜೋಳಿಗೆ ಸಾರ್ವತ್ರಿಕ!!
ಅದೊಂದು ಕಾಲಘಟ್ಟದಲ್ಲಿ
ಸ್ವಾಮೀಜಿಗಳು ಜೋಳಿಗೆ ಹಿಡಿಯದೆ
ಹೋಗಿದ್ದರೆ ಕರ್ನಾಟಕದಲ್ಲಿ
ಸಾಕ್ಷರರ ಸಂಖ್ಯೆ ಬೆಳೆಯುತ್ತಲೇ ಇರಲಿಲ್ಲ.
ಸರಕಾರದ ಅನುದಾನ ಇತ್ತೀಚೆಗೆ ಶುರುವಾಗಿದೆ.
ಆ ಅನುದಾನವೂ ಸಹ,
ಆಯಾ ಸರಕಾರಾವಲಂಬಿ.
ಅವತ್ತಿನ ಕಾಲಘಟ್ಟದಲ್ಲಿ ಅಂದರೆ
ಸರಕಾರಗಳು ಅನುದಾನ ಕೊಡುವ
ಪರಂಪರೆಗೆ ಶ್ರೀಕಾರ ಹೇಳುವುದಕ್ಕೆ ಮೊದಲು
ಸ್ವಾಮೀಜಿಗಳು ಜೋಳಿಗೆ ಹಿಡಿದು
ಮನೆ ಮನೆಗೆ ಹೋಗಿ “ಭವತೀ ಭಿಕ್ಷಾಂ ದೇಹಿ” ಎಂದು
ಅನ್ನದೆ ಹೋಗಿದ್ದರೆ ನಮ್ಮ ಕರ್ನಾಟಕಕ್ಕೆ
ಅಕ್ಷರಭಾಗ್ಯವೇ ದೊರಕುತ್ತಿರಲಿಲ್ಲ.
ಕರ್ನಾಟಕದ ಜನಗಳು
ಅಕ್ಷರವಂಚಿತರಾಗುತ್ತಿದ್ದರು.
ಜನಗಳಿಗೆ ಅಕ್ಷರಭಾಗ್ಯ ದೊರಕದೆ
ಹೋಗಿದ್ದರೆ ನಮ್ಮ ಕರ್ನಾಟಕದ ಜನಗಳು
ಅನ್ನಭಾಗ್ಯಕ್ಕಾಗಿ ಪರದಾಡಿಕೊಂಡಿರಬೇಕಿತ್ತು.
ಅವತ್ತು ದಕ್ಷಿಣ ಕರ್ನಾಟಕದಲ್ಲಿ
ಸಿದ್ಧಗಂಗಾ ಸ್ವಾಮೀಜಿಗಳು,
ಸುತ್ತೂರು ಜಗದ್ಗುರುಗಳು,
ಬಾಲಗಂಗಾಧರನಾಥ ಮಹಾಸ್ವಾಮಿಗಳು
ಮತ್ತು ಉತ್ತರ ಕರ್ನಾಟಕದಲ್ಲಿ
ಧಾರವಾಡದ ಮೃತ್ಯುಂಜಯ ಅಪ್ಪಗಳು,
ಮಹಾಂತ ಅಪ್ಪಗಳು,
ಬೆಳಗಾವಿಯ ಶ್ರೀ ಶಿವಬಸವ ಮಹಾಸ್ವಾಮಿಗಳು
ಜೋಳಿಗೆ ಹಿಡಿಯದೆ ಹೋಗಿದ್ದರೆ
ಕರ್ನಾಟಕವಿದು
ಅಕ್ಷರಮಿತ್ರವಾಗುತ್ತಲೇ ಇರಲಿಲ್ಲ.
ಕರ್ನಾಟಕವಿದು ಇದುವರೆಗೂ
ಅಕ್ಷರಶತ್ರುವಾಗಿಯೇ
ಉಳಿದುಕೊಂಡಿರಬೇಕಾಗುತ್ತಿತ್ತು.
ಆ ಎಲ್ಲ ಪುಣ್ಯಾತ್ಮರು,
ಆ ಮಹಾನುಭಾವರು ತಮ್ಮ ಸ್ವಾಭಿಮಾನ,
ಸ್ವಪ್ರತಿಷ್ಠೆಗಳನ್ನು ತೊರೆದು
ಕೈಯಲ್ಲಿ ಜೋಳಿಗೆ ಹಿಡಿದುಕೊಂಡು
ಮನೆ ಮನೆಗೆ ಹೋಗಿ ಪಾದಯಾತ್ರೆ ಮಾಡಿ
ತಮ್ಮ ಮಠಮಾನ್ಯಗಳಲ್ಲಿ
ಲಕ್ಷಾಂತರ ಮಕ್ಕಳಿಗೆ
ತ್ರಿವಿಧ ದಾಸೋಹ ಮಾಡಿದ ಕಾರಣದಿಂದಾಗಿ
ಇವತ್ತು ನಮ್ಮ ಅಖಂಡ
ಕರ್ನಾಟಕಮಂಡಲ ಸಾಕ್ಷರವಾಗಿದೆ,
ಸಮೃದ್ಧವಾಗಿದೆ
ಮತ್ತು ಚಂದನದ ಗುಡಿಯಾಗಿದೆ.
ಅವರೆಲ್ಲ ಅಂದು ಕೈಯಲ್ಲಿ
ಜೋಳಿಗೆ ಹಿಡಿಯದೆ ಹೋಗಿದ್ದರೆ
ನಮ್ಮ ಜನಗಳು ಮತಾಸುರರ ಆಮಿಷಕ್ಕೆ ಒಳಗಾಗಿ
ಅವರೆಸೆಯುವ ಭಿಕ್ಷೆಗೆ ಕೈಯೊಡ್ಡಿಕೊಂಡು
ಇರಬೇಕಾಗುತ್ತಿತ್ತು.
ಪುಣ್ಯಕ್ಕೆ ಹಾಗಾಗಲಿಲ್ಲ.
ಅದು ಆ ಮಹಾನುಭಾವರ ಆಶೀರ್ವಾದ.
ಅದನ್ನು ನಾವುಗಳಾರೂ ಮರೆಯುವಂತಿಲ್ಲ
ಮತ್ತು ಅದನ್ನು ಗಮನಬಾಹಿರವಾಗಿಸುವಂತಿಲ್ಲ.
ಯಾರೇ ಆಗಲಿ, ಒಬ್ಬರನ್ನು ಹೊಗಳುವ ಭರಾಟೆಯಲ್ಲಿ
ಇನ್ನೊಬ್ಬರನ್ನು ಬಯ್ಯಬಾರದು.
ಅವರವರ ಲೆಕ್ಕ ಅವರವರದು.
ಅವರರವರ ಭಾವ ಅವರವರದು.
ಅವರವರ ಭಕುತಿ ಅವರವರದು.
“ಅವರವರ ಭಾವಕ್ಕೆ, ಅವರವರ ಭಕುತಿಗೆ
ತಕ್ಕಂತೆ ಇರುತಿಹನು ಶಿವನು”
ಎಂದಿಲ್ಲವೆ ಕವಿವಾಣಿ?
ಬರೀ ಶಿವನು ಮಾತ್ರವಲ್ಲ,
ಶಿವಯೋಗಿಯೂ ಕೂಡ ಹಾಗೇನೇ.
ಪೂಜ್ಯ ನಿರ್ಮಲಾನಂದನಾಥ ಮಹಾಸ್ವಾಮಿಗಳು
ತಮ್ಮ ಪೀಠಾರೋಹಣ ಸಮಾರಂಭದ
ವಾರ್ಷಿಕಕ್ಕೆ ಜ್ಞಾನ, ವಿಜ್ಞಾನ,
ತಂತ್ರಜ್ಞಾನದ ದೀಕ್ಷೆ ನೀಡಿದ್ದಾರೆ.
ಪೂಜ್ಯರಲ್ಲಿರುವ ಓರ್ವ ಜ್ಞಾನಿ, ವಿಜ್ಞಾನಿ,
ತಂತ್ರಜ್ಞಾನಿ ಮತ್ತು ತತ್ತ್ವಜ್ಞಾನಿ
ಪೀಠಾರೋಹಣ ವಾರ್ಷಿಕೋತ್ಸವವನ್ನು
ಬರೀ ಒಂದು ಜಾತ್ರೆಯಾಗಿಸುವುದಕ್ಕೆ
ಮತ್ತು ಜನತಾ ಸಮಾವೇಶವಾಗಿಸುವುದಕ್ಕೆ ಬಿಟ್ಟಿಲ್ಲ.
ಪೂಜ್ಯರು ತಮ್ಮ ಪೀಠಾರೋಹಣದ
ವಾರ್ಷಿಕ ಸಮಾರಂಭವನ್ನು ಭೌತಿಕವಾಗಿಸದೆ
ಅದನ್ನು ಬೌದ್ಧಿಕವಾಗಿಸಿದ್ದಾರೆ.
ತನ್ಮೂಲಕ ಅವರು ಜ್ಞಾನ, ವಿಜ್ಞಾನ,
ತಂತ್ರಜ್ಞಾನ ಲೋಕದ ಪ್ರತಿಭೆಗಳ
ಪ್ರತಿಭಾ ಅನಾವರಣಕ್ಕೆ ಮತ್ತು ಪ್ರತಿಭಾ ಪ್ರದರ್ಶನಕ್ಕೆ
ಭೂರಿ ಭೂರಿ ಅವಕಾಶವನ್ನು
ಕಲ್ಪಿಸಿಕೊಟ್ಟಿದ್ದಾರೆ.
ಅಷ್ಟು ಮಾತ್ರವಲ್ಲ, ತನ್ಮೂಲಕ
ಜ್ಞಾನ, ವಿಜ್ಞಾನ, ತಂತ್ರಜ್ಞಾನ ಲೋಕದ
ಪ್ರತಿಭೆಗಳ ಪಲಾಯನವಾದಕ್ಕೆ
ಅವರು ತಡೆಯೊಡ್ಡಿ “ಬ್ಯಾರಿಕೇಡ್” ಹಾಕಿದ್ದಾರೆ.
ಪೂಜ್ಯರು ಅರ್ಹ ಪ್ರತಿಭೆಗಳನ್ನು ಗುರುತಿಸಿ
ಆ ಪ್ರತಿಭೆಗಳು ಸಂಶೋಧನಾ
ಕ್ಷೇತ್ರದ ಅಖಾಡಕ್ಕೆ ಇಳಿಯುವ ಹಾಗೆ
ಮಾಡುತ್ತಿದ್ದಾರೆ.
ಪೂಜ್ಯರು ತಮ್ಮ ಪೀಠಾರೋಹಣ
ಮಹೋತ್ಸವವನ್ನು ಜ್ಞಾನ, ವಿಜ್ಞಾನ,
ತಂತ್ರಜ್ಞಾನದ ಕುಂಭಮೇಳವಾಗಿಸಿದ್ದಾರೆ.
ಹಾಗೆಯೇ ಪೂಜ್ಯರು ತಮ್ಮ ಪೀಠಾರೋಹಣ
ಮಹೋತ್ಸವ ಸಂದರ್ಭದಲ್ಲಿ,
ಜ್ಞಾನ, ವಿಜ್ಞಾನ, ತಂತ್ರಜ್ಞಾನವನ್ನೇ
ಬದುಕಾಗಿಸಿಕೊಂಡು ಭಾರತದ
ಸಾಧನಾಕ್ಷೇತ್ರದಲ್ಲಿ ಮಿಂಚಿನ ಸಂಚಾರ
ಮಾಡುವ ಮೂಲಕ ಭಾರತದ ಇತಿಹಾಸ
ಹಾಗೂ ವರ್ತಮಾನವನ್ನು
ಶ್ರೀಮಂತಿಸುತ್ತಿರುವ ಭವ್ಯ, ದಿವ್ಯ
ಮತ್ತು ವಿದ್ವತ್ಪೂರ್ಣ ಚೇತನಗಳಿಗೆ
“ವಿಜ್ಞಾತಮ್” ಪ್ರಶಸ್ತಿಯನ್ನು
ನೀಡುವ ಮೂಲಕ ಅವರುಗಳ
ಸಾಧನಾಮಯ ಬದುಕನ್ನು
ಅಭಿನಂದಿಸುತ್ತಿದ್ದಾರೆ.
ವಿಜ್ಞಾತಮ್ - “ವಿ” ಎಂದರೆ ವಿಜ್ಞಾನ.
“ತ” ಎಂದರೆ ತಂತ್ರಜ್ಞಾನ.
“ವಿ” ಮತ್ತು “ತ”
ಈ ಎರಡು ಅಕ್ಕರಗಳ ಮಧ್ಯದಲ್ಲಿ
“ಜ್ಞಾ” ಇದೆ. “ಜ್ಞಾ” ಎಂದರೆ ಜ್ಞಾನ.
ವಿಜ್ಞಾನಕ್ಕೂ ಜ್ಞಾನ ಬೇಕು.
ತಂತ್ರಜ್ಞಾನಕ್ಕೂ ಜ್ಞಾನ ಬೇಕು.
ಜ್ಞಾನವಿಲ್ಲದ ವಿಜ್ಞಾನಕ್ಕಾಗಲಿ,
ತಂತ್ರಜ್ಞಾನಕ್ಕಾಗಲಿ ಏನೂ ಅರ್ಥವಿಲ್ಲ.
ಅವೆರಡರ ಮೇಲೂ ಜ್ಞಾನದ
ಕೃಪಾಕಟಾಕ್ಷವಿರಲೇ ಬೇಕು.
ಜ್ಞಾನದ ಕಣ್ಗಾವಲು, ಶ್ರೀರಕ್ಷೆ ತಪ್ಪಿದರೆ
ವಿಜ್ಞಾನ, ತಂತ್ರಜ್ಞಾನಗಳೆರಡೂ
ಅಪಾಯಕಾರಿಯಾಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ ಜ್ಞಾನವಿದು
ಮಧ್ಯದಲ್ಲಿದ್ದುಕೊಂಡು
ವಿಜ್ಞಾನ ಮತ್ತು ತಂತ್ರಜ್ಞಾನಗಳೆರಡನ್ನೂ
ನಿಗಾಮಾಡಿಕೊಂಡಿರಬೇಕು.
“ಜ್ಯೋತಿಯ ಬಲದಿಂದ ತಮಂಧದ ಕೇಡು.
ಜ್ಞಾನದ ಬಲದಿಂದ ಅಜ್ಞಾನದ ಕೇಡು” ಎಂದು
ಶರಣರು ಹೇಳಿದ್ದಾರೆ.
“ವಿ” ಮತ್ತು “ತ”ಗಳ ಮಧ್ಯದಲ್ಲಿ
“ಜ್ಞಾ”ವು ಅಂದರೆ ಜ್ಞಾನವು
ಮಧ್ಯವರ್ತಿಯಾಗಿದ್ದುಕೊಂಡು
ಎರಡನ್ನೂ ಸುಧಾರಿಸಿಕೊಂಡಿರಲಿ - ಎಂಬುವ
ಕಾರಣಕ್ಕಾಗಿ ಸಾಧನಾಕ್ಷೇತ್ರದ
ದಿಗ್ಗಜರಿಗೆ ಕೊಡುವ ಪ್ರಶಸ್ತಿಗೆ “ವಿಜ್ಞಾತಮ್” ಎಂದು
ಪೂಜ್ಯರು ನಾಮಕರಣ ಮಾಡಿದ್ದಾರೆ.
ಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿಯವರು
ಉತ್ಸಾಹದ ಚಿಲುಮೆ. ಅವರು ಸದಾ ಹಸನ್ಮುಖಿಗಳು.
ಅವರು ಯಾವಾಗಲೂ ಲವಲವಿಕೆಯಿಂದ ಇರುತ್ತಾರೆ.
ಎಲ್ಲರನ್ನೂ ಮಾತನಾಡಿಸಿಕೊಂಡು,
ಎಲ್ಲರನ್ನೂ ಉತ್ಸಾಹಿಸಿಕೊಂಡು
ಅವರು ಮಾನ್ಯರ ಮಧ್ಯದಲ್ಲಿ ಮಾನ್ಯರ ಹಾಗೆ,
ಸಾಮಾನ್ಯರ ಮಧ್ಯದಲ್ಲಿ
ಸಾಮಾನ್ಯರ ಹಾಗೆ ಇರುತ್ತಾರೆ.
ಮಾನ್ಯ, ಸಾಮಾನ್ಯ -
ಈರ್ವರೂ ಅವರ ದೃಷ್ಟಿಯಲ್ಲಿ ಮಾನ್ಯರು.
ಅವರು ಓರ್ವ ದೊಡ್ಡ ಪೀಠಾಧಿಪತಿಯಾಗಿದ್ದರೂ
ಅವರಲ್ಲಿ ಹಮ್ಮು, ಬಿಮ್ಮುಗಳಿಲ್ಲ.
ಆದರೆ ಅವರಲ್ಲಿ ಪೀಠಾಧಿಪತಿಗೆ ತಕ್ಕನಾದ
ಘನತೆ, ಗೌರವ, ಗಾಂಭೀರ್ಯವಿದೆ.
ಆದಿಚುಂಚನಗಿರಿ ಶ್ರೀಕ್ಷೇತ್ರದ
ಮತ್ತು ಶ್ರೀಕ್ಷೇತ್ರದ ಶಿಕ್ಷಣಸಂಸ್ಥೆಗಳ ಬಲ್ಮೆಗಾಗಿ,
ಏಳಿಗೆಗಾಗಿ ಅವರು ತಮ್ಮೊಂದಿಗೆ
ಹೆಗಲುಕೊಟ್ಟುಕೊಂಡು ದುಡಿಯುತ್ತಿರುವ
ತಮ್ಮ ಗುರುಬಂಧಗಳೆಲ್ಲರ ಜೊತೆಯಲ್ಲೂ
ಪೂಜ್ಯರು ಆತ್ಮೀಯವಾಗಿ
ಬೆರೆತುಕೊಂಡಿರುತ್ತಾರೆ.
ತಮ್ಮೆಲ್ಲ ಗುರುಬಂಧಗಳ ವಿಷಯದಲ್ಲಿ
ಮತ್ತು ಸಮಕಾಲೀನರಲ್ಲಿ
ಅವರಿಗೆ ಅಪಾರ ಗೌರವವಿದೆ.
ಎಲ್ಲಕ್ಕೂ ಮಿಗಿಲಾಗಿ ಅವರಲ್ಲಿ
ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು
ಹೋಗುವ ದೊಡ್ಡ ಗುಣವಿದೆ.
ಪೂಜ್ಯ ನಿರ್ಮಲಾನಂದನಾಥರು
ಜ್ಞಾನ, ವಿಜ್ಞಾನ, ತಂತ್ರಜ್ಞಾನ ವಿಷಯದಲ್ಲಿ
ಅಪಾರ ಆಸಕ್ತಿಯನ್ನು ಹೊಂದಿದ್ದರೂ
ಭಕ್ತಿ, ಶ್ರದ್ಧೆಗಳ ವಿಷಯದಲ್ಲಿ
ಅವರು ಯಾವುದೇ ಕಾರಣಕ್ಕೂ
ರಾಜಿಯಾಗುವುದಿಲ್ಲ.
ಶ್ರೀಕ್ಷೇತ್ರದಲ್ಲಿ ಅವರು ಕಾಲಭೈರವೇಶ್ವರನನ್ನೇ
ಮೊದಲುಮಾಡಿಕೊಂಡು
ಪಂಚಲಿಂಗೇಶ್ವರರನ್ನು
ಮತ್ತು ಶ್ರೀಕ್ಷೇತ್ರದ ಸ್ತಂಭಮಾತೆಯನ್ನು
ತುಂಬ ಶ್ರದ್ಧೆ ಮತ್ತು ಭಕ್ತಿಯಿಂದ ಪೂಜಿಸುತ್ತಾರೆ.
ಪೂಜೆಯ ವಿಷಯದಲ್ಲಿ ಮತ್ತು ದೇವರ ವಿಷಯದಲ್ಲಿ
ಅವರು ಯಾವುದೇ ಕಾರಣಕ್ಕೂ
“ಕಾಂಪ್ರೋಮೈಜ್” ಆಗುವುದಿಲ್ಲ.
ಭಕ್ತಿಯ ಸ್ಥಾನ ಭಕ್ತಿಯದು;
ಶಕ್ತಿಯ ಸ್ಥಾನ ಶಕ್ತಿಯದು.
ಅಲ್ಲಿ ಪರಸ್ಪರ ಹಸ್ತಕ್ಷೇಪ ಕೂಡದು
ಎಂಬ ಭಾವನೆ ಪೂಜ್ಯರದು.
ಈ ಸಂದರ್ಭದಲ್ಲಿ
ಇನ್ನೊಂದು ಮಾತನ್ನು ಹೇಳಲೇಬೇಕು.
ಕೆಲವರು ಹಣದಲ್ಲಷ್ಟೇ ಸಾರ್ವಭೌಮರಾಗಿರುತ್ತಾರೆ.
ಗುಣದಲ್ಲೂ
ಸಾರ್ವಭೌಮರಾಗಿರುವವರು
ತುಂಬ ಅಪರೂಪ.
ಪೂಜ್ಯರು ತಮ್ಮ ಪೀಠಾರೋಹಣದ
ದಶಮಾನೋತ್ಸವ ಸಮಾರಂಭಕ್ಕೆ
ನಮ್ಮನ್ನು ಅತ್ಯಂತ ಪ್ರೀತಿಯಿಂದ
ಆಹ್ವಾನಿಸಿ ನಮ್ಮನ್ನು ಆ ಸಮಾರಂಭದ
ಅವಿಭಾಜ್ಯ ಅಂಗವಾಗಿಸಿಕೊಂಡಿದುದು
ನಮಗೆ ಅತೀವ ಸಂತೋಷವಾಯಿತು.
ಪೂಜ್ಯ ನಿರ್ಮಲಾನಂದನಾಥ
ಮಹಾಸ್ವಾಮಿಗಳಿಗೆ ನಮ್ಮ ಬಗ್ಗೆ
ತುಂಬ ಪ್ರೀತಿ, ಗೌರವ ಮತ್ತು ಅಭಿಮಾನ.
“ಸ್ವಾಮಿ ವಿವೇಕಾನಂದರ ಘನತೆ, ಗೌರವ,
ವಿದ್ವತ್ತನ್ನು ಸಾಣೆಹಿಡಿದು ಅಮೇರಿಕಾ
ಸ್ವಾಮಿ ವಿವೇಕಾನಂದರನ್ನು
ಅಮೇರಿಕಾ ಇಂಡಿಯಾಕ್ಕೆ ಪರಿಚಯಿಸಿತು.
ಅಮೇರಿಕಾದಿಂದ ಆಗಮಿಸಿದ
ವಿವೇಕಾನಂದರನ್ನು ಸಾರೋಟಿನಲ್ಲಿ
ಕುಳ್ಳಿರಿಸಿ, ಜನಗಳು ವಿವೇಕಾನಂದರನ್ನು
ಉತ್ಸವಿಸಿ ಸಂಭ್ರಮಿಸಿದರು.
ಅಮೇರಿಕಾ ಭಾರತಕ್ಕೆ
ಸ್ವಾಮಿ ವಿವೇಕಾನಂದರನ್ನು
ಪರಿಚಯಿಸಿದ ಹಾಗೇನೇ
ಡಾ. ಶಿವಾನಂದ ಶಿವಾಚಾರ್ಯರನ್ನು ಕೂಡ
ಅಮೇರಿಕಾವೇ ನನಗೆ ಪರಿಚಯಿಸಿತು.
ನನಗೆ ಶಿವಾನಂದರ ಪರಿಚಯವಾದದ್ದು
ಅಮೇರಿಕಾದ ಚಿಕ್ಯಾಗೋದಲ್ಲಿ”- ಎಂದು ಪೂಜ್ಯರು
ನಮ್ಮ ತಪೋವನದ ಉದ್ಘಾಟನೆಗೆ ದಯಮಾಡಿಸಿದ
ಸಂದರ್ಭದಲ್ಲಿ ಹೇಳಿದ್ದರು.
ಇದೇ ಮಾತನ್ನು ಮತ್ತೆ ಪರಮಪೂಜ್ಯರು
ತಮ್ಮ ಪೀಠಾರೋಹಣದ
ದಶಮಾನೋತ್ಸವ ಸಮಾರಂಭದ
ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮೇಳದ
ಉದ್ಘಾಟನಾ ಸಮಾರಂಭದಲ್ಲಿ
ಹೇಳಿದ್ದನ್ನು ಕೇಳಿ ನಾವು ಮೂಕವಿಸ್ಮಿತರಾದೆವು.
ಅವರ ಹೃದಯವೈಶಾಲ್ಯ
ಮತ್ತು ವಿದ್ವತ್ಪ್ರೇಮ
ಮತ್ತು ವಿದ್ವತ್ವಾತ್ಸಲ್ಯವದು ಶಬ್ದಾತೀತ!!
ಪೂಜ್ಯರು ತಮ್ಮ ಪೀಠಾರೋಹಣದ
ಈ ಹತ್ತು ವರುಷಗಳ ಅವಧಿಯಲ್ಲಿ
ನಮ್ಮನ್ನು ಹಲವಾರು ಬಾರಿ
ಶ್ರೀಕ್ಷೇತ್ರಕ್ಕೆ ಬರಮಾಡಿಕೊಂಡಿದ್ದಾರೆ.
ಪ್ರತಿಬಾರಿಯೂ ಅವರು ನಮ್ಮ ಮೇಲೆ
ಪ್ರೀತಿ, ಅಭಿಮಾನ, ಗೌರವದ ಧಾರೆ ಎರೆದಿದ್ದಾರೆ.
ಪೂಜ್ಯರ ಅವ್ಯಾಹತ ಪ್ರೀತಿ
ಮತ್ತು ಅಸ್ಖಲಿತ ವಿಶ್ವಾಸಕ್ಕೆ
ನಾವು ಮಾರುಹೋಗಿದ್ದೇವೆ.
ನಮ್ಮಂಥ ನಾಜೂಕುಮತಿಗಳಿಗೆ
ಒಂದಿಷ್ಟೂ ಕ್ಲೇಶವಾಗಬಾರದೆಂದು
ಊಟೋಪಚಾರದಿಂದ ಮೊದಲುಮಾಡಿಕೊಂಡು
ಪ್ರತಿವಿಷಯದಲ್ಲೂ ಅವರು ವಹಿಸುವ
ಆ ಕಾಳಜಿ, ಆ ಶ್ರದ್ಧೆ ಆ ಪ್ರೇಮ,
ಆ ವಾತ್ಸಲ್ಯವನ್ನು ಶಬ್ದಿಸಲು
ನಾವೂ ಸಹ ಶಬ್ದಗಳಿಗೆ ತಡಕಾಡುವಂತಾಗುತ್ತದೆ.
ಪರಮಪೂಜ್ಯ ಬಾಲಗಂಗಾಧರನಾಥ
ಮಹಾಸ್ವಾಮಿಗಳವರ ಕಾಲಘಟ್ಟದಲ್ಲಿ
ರಾಷ್ಟ್ರೀಯಗೊಂಡಿದ್ದ
ಆದಿಚುಂಚನಗಿರಿ ಶ್ರೀಕ್ಷೇತ್ರವು
ಪರಮಪೂಜ್ಯ ನಿರ್ಮಲಾನಂದನಾಥ
ಮಹಾಸ್ವಾಮಿಗಳ ಕಾಲಘಟ್ಟದಲ್ಲಿ ಅಂತರ್ರಾಷ್ಟ್ರೀಯಗೊಳ್ಳುತ್ತಿರುವುದಕ್ಕೆ
ಬರೀ ಆ ಪೀಠದ ಹಣಬಲ,
ಜನಬಲ ಮಾತ್ರ ಕಾರಣವಲ್ಲ,
ಪೂಜ್ಯ ನಿರ್ಮಲಾನಂದನಾಥ
ಮಹಾಸ್ವಾಮೀಜಿಯವರ
ಗುಣಬಲವೂ ಅದಕ್ಕೆ ಕಾರಣ.
“ಎಲ್ಲರೊಳಗೊಂದಾಗು” -
ಇದು ಅವರ ಜೀವನಸೂತ್ರ.
ಪರಮಪೂಜ್ಯರ ಪೀಠಾರೋಹಣದ
ದಶಮಾನೋತ್ಸವದ
ಈ ಪರ್ವ ಸಂದರ್ಭದಲ್ಲಿ,
ಪರಮಪೂಜ್ಯ ಡಾ. ನಿರ್ಮಲಾನಂದನಾಥ
ಮಹಾಸ್ವಾಮಿಗಳವರಿಗೆ ಆ ಭಗವಂತ
ಯಥೇಚ್ಛ ಆಯುಷ್ಯ, ಸಮೃದ್ಧ ಆರೋಗ್ಯ,
ಅದಮ್ಯ ಇಚ್ಛಾಶಕ್ತಿ ಮತ್ತು
ಅಕ್ಷಯ ಕರ್ತೃತ್ವಶಕ್ತಿಯನ್ನು ಕೊಡಲಿ
ಎಂದು ನಾವು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
ಹಾಗೆಯೇ ಅವರ ಕಾಲಘಟ್ಟದಲ್ಲಿ
ಆದಿಚುಂಚನಗಿರಿ ಶ್ರೀಕ್ಷೇತ್ರದ ಚಾರುಕೀರ್ತಿಯು
ದಿನೇ ದಿನೇ ಇತೋSಪ್ಯತಿಶಯ
ವರ್ಧಿಸಲಿ, ಸಂವರ್ಧಿಸಲಿ ಎಂದು
ತುಂಬು ಹೃದಯದಿಂದ ಹದುಳ ಹಾರೈಸುತ್ತೇವೆ.
ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ
ಹಿರೇಮಠ, ತಪೋವನಮ್, ತುಮಕೂರು
Comments
Post a Comment