Good Evening, Happy Monday
On 26th February 2023
@ Bengaluru
ರಾವ್ ಬಹದ್ದೂರ್ ಧರ್ಮಪ್ರವರ್ತ
ಧರ್ಮಸಂಸ್ಥೆ, ಬೆಂಗಳೂರು &
ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ
ವಿದ್ಯಾರ್ಥಿ ನಿಲಯದ ಹಿರಿಯ ವಿದ್ಯಾರ್ಥಿಗಳ ಬಳಗ -
ಇವರುಗಳ ಸಹಯೋಗದಲ್ಲಿ
ಧರ್ಮಸಂಸ್ಥೆಯ ಸಂಸ್ಥಾಪನಾ ದಿನಾಚರಣೆ
ಮತ್ತು ಹಿರಿಯ ವಿದ್ಯಾರ್ಥಿಗಳ ಸಮಾವೇಶದಲ್ಲಿ
ಹೇಳಿದ ಕೆಲವು ಮಾತುಗಳು:
1.
ಗುಬ್ಬಿ ತೋಟದಪ್ಪ ಛತ್ರ ಬೆಂಗಳೂರಿನಷ್ಟೇ
ಪ್ರಾಚೀನ ಇತಿಹಾಸವನ್ನು ಹೊಂದಿದೆ.
2.
ಗುಬ್ಬಿ ತೋಟದಪ್ಪ ಛತ್ರ ಬೆಂಗಳೂರಿನ
ಹೃದಯ ಭಾಗದಲ್ಲಿದೆ.
3.
ಗುಬ್ಬಿ ತೋಟದಪ್ಪ ಛತ್ರ
ಸಮಾಜಕ್ಕೆ ಒಂದು ಬಹುದೊಡ್ಡ ಕೊಡುಗೆ.
4.
ಒಂದು ಶತಮಾನಕ್ಕೂ ಹೆಚ್ಚು ವರುಷಗಳ
ಇತಿಹಾಸವನ್ನು ಹೊಂದಿದ
ಈ ಛತ್ರ ಮತ್ತು ವಿದ್ಯಾರ್ಥಿ ನಿಲಯ ಸಮಾಜವನ್ನು
ಕಟ್ಟುವಲ್ಲಿ ಮತ್ತು ಬೆಳೆಯಿಸುವಲ್ಲಿ
ತನ್ನದೇ ಆದ ಹಿರಿಮೆ, ಹೆಗ್ಗಳಿಕೆಯನ್ನು ಹೊಂದಿದೆ.
5.
ಗುಬ್ಬಿ ತೋಟದಪ್ಪ ಛತ್ರ ಈ ನಮ್ಮ ನಾಡಿಗೆ
ಧಾರ್ಮಿಕ ರಂಗದ ಪರಂಜ್ಯೋತಿಯಾದ
ಸಿದ್ಧಗಂಗೆಯ ಲಿಂಗ್ಯೆಕ್ಯ
ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳನ್ನು ಕೊಟ್ಟಿದೆ.
6.
ಗುಬ್ಬಿ ತೋಟದಪ್ಪ ಛತ್ರ ಮತ್ತು ವಿದ್ಯಾರ್ಥಿ ನಿಲಯ
ರಾಜಕೀಯ ರಂಗಕ್ಕೆ ಎಸ್. ನಿಜಲಿಂಗಪ್ಪನವರಂಥ
ಮಹಾನುಭಾವರನ್ನು ಕೊಡುಗೆಯಾಗಿ ನೀಡಿದೆ.
7.
ಧಾರ್ಮಿಕ ರಂಗದ ಉತ್ತುಂಗವಾದ
ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು
ಗುಬ್ಬಿ ತೋಟದಪ್ಪ ಛತ್ರದ ವಿದ್ಯಾರ್ಥಿ.
ರಾಜಕೀಯ ರಂಗದ ಹೆಮ್ಮೆ
ಮತ್ತು ಹಿಮಾಲಯವಾದ
ಎಸ್. ನಿಜಲಿಂಗಪ್ಪನವರು
ಗುಬ್ಬಿ ತೋಟದಪ್ಪ ಛತ್ರದ ವಿದ್ಯಾರ್ಥಿ.
8.
ಗುಬ್ಬಿ ತೋಟದಪ್ಪ ಮತ್ತು ಗೌರಮ್ಮ
ದಂಪತಿಗಳಿಗೆ ಸಂತಾನವಿರಲಿಲ್ಲ.
9.
ಗುಬ್ಬಿ ತೋಟದಪ್ಪನವರು ತಮ್ಮ ಆಸ್ತಿ
ಮತ್ತು ಸರ್ವಸ್ವವನ್ನೆಲ್ಲ
ಸಮಾಜಕ್ಕೆ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಗೆ
ಧಾರೆ ಎರೆದ ಕಾರಣದಿಂದಾಗಿ
ಅವರು ಬಹುಸಂತಾನ ಭಾಗ್ಯದ
ಹರಿಕಾರರಾದರು.
10.
1903, ಫೆಬ್ರವರಿ 11ರಂದು
ಗುಬ್ಬಿ ತೋಟದಪ್ಪನವರು
ಪ್ರವಾಸಿಗಳಿಗೆ ಧರ್ಮಛತ್ರ ಮತ್ತು ವಿದ್ಯಾರ್ಥಿಗಳಿಗೆ
ಉಚಿತ ವಸತಿ ನಿಲಯವನ್ನು ಪ್ರಾರಂಭಿಸುತ್ತಾರೆ.
11.
1897ರಲ್ಲಿ ಬೆಂಗಳೂರು ನಗರ ರೈಲ್ವೆ ನಿಲ್ದಾಣದ ಹತ್ತಿರ
2. 5 ಎಕರೆ ಜಾಗವನ್ನು ಅವರು
ಆಗಿನ ಮೈಸೂರು ಸರ್ಕಾರದ
ರೈಲ್ವೇ ಇಲಾಖೆಯಿಂದ ಖರೀದಿಸುತ್ತಾರೆ.
12.
ವಿದ್ಯಾರ್ಥಿಗಳ ಉಚಿತ ವಸತಿ ನಿಲಯವನ್ನು
ನಾಲ್ವಡಿ ಕೃಷ್ಣರಾಜ ಒಡೆಯರ್ ರವರು
ಅಧಿಕೃತವಾಗಿ ಉದ್ಘಾಟಿಸುತ್ತಾರೆ.
13.
1905ರಲ್ಲಿ ನಾಲ್ವಡಿ ಕೃಷ್ಣರಾಜ್ ಒಡೆಯರ್‌ರವರು
ಗುಬ್ಬಿ ತೋಟದಪ್ಪನವರಿಗೆ ``ಧರ್ಮಪ್ರವರ್ತ ''
ಎಂಬ ಬಿರುದನ್ನಿತ್ತು ಗೌರವಿಸುತ್ತಾರೆ.
14.
1910ರಲ್ಲಿ, ಬ್ರಿಟಿಷ್ ಚಕ್ರವರ್ತಿ
ಪಂಚಮ ಜಾರ್ಜ್ ಗುಬ್ಬಿ ತೋಟದಪ್ಪನವರಿಗೆ
"ರಾವ್ ಬಹದ್ದೂರ್" ಎಂಬ ಬಿರುದನ್ನು ನೀಡುತ್ತಾನೆ.
15.
ಗುಬ್ಬಿ ತೋಟದಪ್ಪನವರು
ಗೌರಿಬಿದನೂರು ತಾಲ್ಲೂಕಿನ
ಅಲಕಾಪುರದಲ್ಲಿ ಶ್ರೀ ಚೆನ್ನಸೋಮೆಶ್ವರ
ದೇವಾಲಯವನ್ನು ಕಟ್ಟಿಸುತ್ತಾರೆ.
16.
ಅವರು ಹಿಂದುಪೂರ ತಾಲೂಕಿನ
ಗೊಳ್ಳಾಪುರ ಗುರುಮಠದ
ಜೀರ್ಣೋದ್ದಾರ ಮಾಡುತ್ತಾರೆ.
17.
ಬೆಂಗಳೂರಿನಲ್ಲಿ ಮೊದಲ
ಸಂಸ್ಕೃತ ಪಾಠಶಾಲೆಯನ್ನು
ಸ್ಥಾಪಿಸಿದ ಕೀರ್ತಿ ಕೂಡ
ಗುಬ್ಬಿ ತೋಟದಪ್ಪನವರದು.
18.
ಎಲ್ಲರೂ ``ಮಾತೃದೇವೋ ಭವ''
``ಪಿತೃದೇವೋ ಭವ'', ``ಆಚಾರ್ಯ ದೇವೋ ಭವ''
ಎಂದುಕೊಂಡಿದ್ದರೆ
ಧರ್ಮಪ್ರವರ್ತ
ರಾವ್ ಬಹದ್ದೂರ್ ಗುಬ್ಬಿ ತೋಟದಪ್ಪನವರು
``ವಿದ್ಯಾರ್ಥಿ ದೇವೋ ಭವ'' ಎಂದುಕೊಂಡಿದ್ದರು.
19.
ಅವತ್ತಿನ ಕಾಲಘಟ್ಟದಲ್ಲಿ
ಗುಬ್ಬಿ ತೋಟದಪ್ಪ ಛತ್ರಕ್ಕೆ
ಪರ್ಯಾಯವೇ ಇರಲಿಲ್ಲ.
20.
ಛತ್ರವೆಂದರೆ
ಅದು ಗುಬ್ಬಿ ತೋಟದಪ್ಪ ಛತ್ರ ಅಷ್ಟೇ...!!
21.
ಒಬ್ಬ ವ್ಯಕ್ತಿ ತನ್ನೆಲ್ಲ ಆಸ್ತಿಯನ್ನು
ಮತ್ತು ತನ್ನ ಸರ್ವಸ್ವವನ್ನು
ಸಮಾಜಕ್ಕಾಗಿ, ಸಾರ್ವಜನಿಕ
ಹಿತಾಸಕ್ತಿಗಾಗಿ ಮತ್ತು ಲೋಕಕಲ್ಯಾಣಕ್ಕಾಗಿ
ತ್ಯಾಗಮಾಡಿದರೆ, ದಾನಮಾಡಿದರೆ,
ಆತ ರಾವ್ ಬಹದ್ದೂರ್‌ನಾಗುತ್ತಾನೆ.
ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ,
ತನ್ನ ಕುಟುಂಬ ಪರಿವಾರಕ್ಕಾಗಿ
ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು
``ಸ್ವಾಹಾ'' ಮಾಡಿದರೆ, ನುಂಗಿ ಹಾಕಿದರೆ
ಆತನನ್ನು ನಾಚಿಕೆ ಎಂಬ
ಮೂರಕ್ಷರವನ್ನು ತೊರೆದ
“ಬಹದ್ದೂರ್”, “ಬಹದ್ದೂರ್ ಶಿಖಾಮಣಿ”
ಎನ್ನಬಹುದೇನೋ?
22.
ಗುಬ್ಬಿ ತೋಟದಪ್ಪನವರಿಗೆ
ಮಕ್ಕಳಭಾಗ್ಯವೇನೋ ಇರಲಿಲ್ಲ.
ಆದರೆ ಅವರಿಗೆ
“ವಸುಧೈವಕುಟುಂಬಭಾಗ್ಯ” ದೊರಕಿದೆಯಲ್ಲ?
ಅದೇನು ಸಾಮಾನ್ಯ ಭಾಗ್ಯವೇ?
23.
ಗುಬ್ಬಿ ತೋಟದಪ್ಪನವರಂಥ
ಮಹಾನುಭಾವರಿಗೆ
ಒಂದೋ, ಎರಡೋ
ಮಕ್ಕಳಭಾಗ್ಯವಿರದಿದ್ದರೆ ಏನಂತೆ?
ಅವರಿಗೆ ಬಹುಸಂತಾನಭಾಗ್ಯವಿರುತ್ತದೆ.
24.
ಗುಬ್ಬಿ ತೋಟದಪ್ಪನವರ
ವಿದ್ಯಾರ್ಥಿ ನಿಲಯದಲ್ಲಿ ಓದಿದ ಪ್ರತಿಯೊಬ್ಬ
ವಿದ್ಯಾರ್ಥಿಯ ಹೃದಯದಲ್ಲಿ
ಗುಬ್ಬಿ ತೋಟದಪ್ಪನವರು
ಚಿರಾಯುವಾಗಿದ್ದಾರೆ
ಮತ್ತು ಚಿರಂಜೀವಿಯಾಗಿದ್ದಾರೆ.
Comments
Post a Comment