On 23rd March 2023, Thursday
@ Hiremath, TapOvanam, Tumkur


>>>>>>>>>>>>>>>>>>>>
ಶಿವನಲ್ಲಿ ವಿಲೀನರಾದ
ಎನ್. ಆರ್. ಜಗದೀಶಾರಾಧ್ಯರಿಗೆ

ತುಮಕೂರು ಹಿರೇಮಠಾಧ್ಯಕ್ಷ
ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ
ಸ್ವಾಮೀಜಿಯವರ
ಭಾವಪೂರ್ಣ ನುಡಿ-ಶ್ರದ್ಧಾಂಜಲಿ
>>>>>>>>>>>>>>>>>>>>>>>>>

ಎನ್. ಆರ್. ಜಗದೀಶಾರಾಧ್ಯರು
ಶಿವನಲ್ಲಿ ವಿಲೀನವಾಗಿದ್ದಾರೆ.

ಅದೂ ಸಹ ಯುಗಾದಿಯ
ಪರ್ವದಿನದಂದು!!

ಹೊಸ ಸಂವತ್ಸರಕ್ಕೆ ಜಗದೀಶಾರಾಧ್ಯರನ್ನು
ಭರಿಸುವ ಶಕ್ತಿ ಇರಲಿಲ್ಲವೇನೋ?

ಏನೇ ಹೇಳಿ, ನಮ್ಮಗಳ ಲೈಫ್‌ನ
“ಆನ್” (ON) & “ಆಫ್” (OFF) ಬಟನ್‌ಗಳು
ದೇವರ ಕೈಯಲ್ಲಿವೆ.

ಅದೊಮ್ಮೆ ಆ ದೇವರು
ನಮ್ಮಗಳ ಲೈಫ್‌ನ “ಆನ್” ಬಟನ್‌ನನ್ನು ಒತ್ತಿ
ನಮ್ಮಗಳ “ಲೈಫು” ಶುರುಹಚ್ಚಿಕೊಳ್ಳುವ ಹಾಗೆ
ಮಾಡುತ್ತಾನೆ.
ಅದಕ್ಕಾಗಿ ಆತ ನಮ್ಮ ತಂದೆ, ತಾಯಿಗಳನ್ನು
ನಿಮಿತ್ತ ಕಾರಣವಾಗಿಸಿಕೊಳ್ಳುತ್ತಾನೆ.

ಮುಂದೆ,
ಅದೆಂದೋ ಒಂದು ದಿನ,
ಆ ದೇವರು ನಮ್ಮಗಳ ಅರಿವಿಗೆ ಬಾರದ ಹಾಗೆ
ತನಗೆ ತಿಳಿದಂದು
ಮತ್ತು ತನಗೆ ಸಾಕೆನಿಸಿದಾಗ
ಮತ್ತು ನಮಗೂ ಸಹ ಕಾಯಿಲೆ,
ಕಸಾಲೆಗಳ ಸಹವಾಸ ಸಾಕೆನಿಸಿ
ಬಿ. ಪಿ., ಶುಗರ್‌ಗಳ ಏರಿಳಿತಗಳ ಚೆಲ್ಲಾಟ,
ಆ ನೋವು, ಆ ಹಿಂಸೆ
“ಇನ್ನು ಸಾಕಪ್ಪಾ ಸಾಕು” ಎನಿಸಿದಾಗ
ನಮ್ಮಗಳ ಲೈಫ್‌ನ ಬಟನ್‌ನನ್ನು
“ಆಫ್” ಮಾಡಿಬಿಡುತ್ತಾನೆ.

ಎನ್. ಆರ್. ಜಗದೀಶಾರಾಧ್ಯರು
90 ವರುಷಗಳ ಸುದೀರ್ಘ ಬದುಕನ್ನು
ಬದುಕಿದ್ದಾರೆ.

ಅವರು ಮಕ್ಕಳು, ಮೊಮ್ಮಕ್ಕಳು,
ಮುಮ್ಮೊಕ್ಕಳನ್ನು ಕಂಡಿದ್ದಾರೆ.

ಅವರದು ತುಂಬು ಜೀವನ.
ಅವರದು ಪೂರ್ಣ ಜೀವನ.

ದೇವರು ಅವರಿಗೆ ದಯಪಾಲಿಸಿದ
ಪ್ರತಿಯೊಂದು ಕ್ಷಣವನ್ನೂ
ಅವರು ಸದುಪಯೋಗಪಡಿಸಿಕೊಂಡಿದ್ದಾರೆ.

ಅವರೊಂದು ಲೆಜೆಂಡ್ (Legend) ಆಗಿ,
ಒಂದು ಕಾಲಘಟ್ಟದ “ಲೆಗಸಿ” (Lagacy) ಆಗಿ
ಬೆಳೆದು ತೋರಿಸಿದ್ದಾರೆ.

ಸ್ವತಃ ದೇವರೇ ಅವರ ಬದುಕಿನ
ಬಗೆಯನ್ನು ಕಂಡು ಸಂತೋಷದಿಂದ
ಚಪ್ಪಾಳೆ ತಟ್ಟುವಂತೆ ಮಾಡಿದ್ದಾರೆ.

ಎನ್. ಆರ್. ಜಗದೀಶಾರಾಧ್ಯರು ಜನಿಸಿದ್ದು
1933, ನವ್ಹೆಂಬರ್ 12ರಂದು.

ಅವರು ಶಿವಾಧೀನರಾದದ್ದು
2023, ಮಾರ್ಚ್ 22ರಂದು.

ಜಗದೀಶಾರಾಧ್ಯರು ಅದೊಂದು ಕಾಲಘಟ್ಟದಲ್ಲಿ
“ನ ಭೂತೋ ನ ಭವಿಷ್ಯತಿ” ಎಂಬ ಮಾತಿಗೆ
ಅರ್ಥವಾಗಿ ಬದುಕಿದವರು.

ಅವರು “ನಡೆ ಮತ್ತು ನುಡಿ”
ಹಾಗೂ ನುಡಿ ಮತ್ತು ನಡೆಯಲ್ಲಿ ಭದ್ರರು.

“ನಡೆಯೊಂದು ತರ; ನುಡಿಯೊಂದು ತರ”;
“ನಡೆಯೊಂದು ಕಡೆ; ನುಡಿಯೊಂದು ಕಡೆ” -
ಎಂಬ ಮಾದರಿಗೆ ಅವರು ತದ್ವಿರುದ್ಧ.

ಅವರದು, “ಆಗುತ್ತದೆ ಎಂದರೆ ಆಗುತ್ತದೆ,
ಇಲ್ಲವೆಂದರೆ ಇಲ್ಲ” - ಎಂಬ
“ಏಕ್ ಮಾರ್ ದೋ ತುಕಡಾ” ಶೈಲಿ.

“ನೋಡುವಾ, ಮಾಡುವಾ,
ಈಗ ಬಾ, ಆಗ ಬಾ, ಹೋಗಿ ಬಾ” ಎಂದು
ವೃಥಾ ಮತ್ತು ಸುಖಾಸುಮ್ಮನೇ
ಸಹಾಯಕೋರಿ ಬಂದ ಜನಗಳನ್ನು
ಅಲೆಯಿಸುತ್ತಿರಲಿಲ್ಲ.

ಜಗದೀಶಾರಾಧ್ಯರು ಎಂದೂ ಸಹ
ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ
ಮಾತನಾಡುತ್ತಿರಲಿಲ್ಲ.

ಅವರದೇನಿದ್ದರೂ ನೇರಾನೇರ
ಮತ್ತು ಅವರದೇನಿದ್ದರೂ ನಿಷ್ಠುರ, ನಿಷ್ಠುರ.

ಈ ಕಾರಣಕ್ಕಾಗಿ,
ಅವರು ಕೆಲವು ಜನಗಳಿಗೆ
ಕಹಿಯಾಗಿರುವುದೂ ಉಂಟು.

“ನೋ ಕಾಂಪ್ರೋಮೈಜ್” No Compromise
ಮತ್ತು “ಫುಲ್ ಕಮಿಟ್‌ಮೆಂಟ್” - Full Commitment
ಇದು ಅವರ ಜೀವನಶೈಲಿ
ಮತ್ತು ಇವರು ಅವರ ಜೀವನ ಸಿದ್ಧಾಂತ.

“ಕಾಂಪ್ರೋಮೈಜ್” ಮಾಡಿಕೊಂಡಿರುವುದು
ಬಹುತೇಕ ಮತ್ತು ಬಹುಪಾಲು ಜನಗಳಿಗೆ
ಸುಲಭ ಎನಿಸಬಹುದು.

ಆದರೆ ಕೆಲವು ಜನರಿಗೆ
ಮತ್ತು ಕೆಲವೇ ಕೆಲವು ಜನರಿಗೆ ಮಾತ್ರ
ಅದು ತುಂಬ ಕಷ್ಟ.

ಅವರಿಗೆ ಅದು ಆಗುವುದೇ ಇಲ್ಲ.

“ಕಾಂಪ್ರೋಮೈಜ್” ಮಾಡಿಕೊಳ್ಳುವುದು
ಎಂದರೆ ಏನು?

ಸಮಯ, ಸಂದರ್ಭ ಬಂದಾಗ,
ಅಗತ್ಯ, ಅವಶ್ಯಕತೆ ಇರುವಾಗ

“ಎತ್ತನ್ನು ಕತ್ತೆ ಎನ್ನಬೇಕು;
ಕತ್ತೆಯನ್ನು ಎತ್ತು ಎನ್ನಬೇಕು” -
ಇದುವೇ “ಕಾಂಪ್ರೋಮೈಜ್”.

ನಮ್ಮೊಳಗೇನೇ ಒಂದಷ್ಟು “ತ್ರಾಹಿ, ತ್ರಾಹಿ” ಹೇಳಿಕೊಂಡು ಕತ್ತೆಯನ್ನೇನೋ “ಎತ್ತು” ಎಂದು ಹೇಳಬಹುದು.

ಆದರೆ ಹೂಬೇಹೂಬಾಗಿ
“ಎತ್ತನ್ನು ಕತ್ತೆ” ಎಂದು ಹೇಳುವುದಿದೆಯಲ್ಲ,
ಇದಂತೂ ಕೆಲವರಿಗೆ ತುಂಬ,
ತುಂಬಾನೇ ಕಷ್ಟವೆನಿಸುತ್ತದೆ.

ಇದು ಮೈ, ಮನಸ್ಸುಗಳಿಗೆ
ತೀರ ಮುಜುಗರವಾಗಿ
ಪೀಕಲಾಟಕ್ಕಿಟ್ಟುಕೊಳ್ಳುತ್ತದೆ.

ಗೆದ್ದೆತ್ತಿನ ಬಾಲ ಹಿಡಿಯುವುದು,
ಮಾತು ಹೊರಳಿಸುವುದು,
ನಾಲಿಗೆ ಬದಲಾಯಿಸುವುದು....ಇತ್ಯಾದಿ ಇವೆಲ್ಲ
ನಿಯತ್ತಿದ್ದವರಿಗೆ ಮತ್ತು ಇಚ್ಛೆ, ಕಚ್ಚೆಗಳ ಮೇಲೆ
ನಿಯಂತ್ರಣವಿದ್ದವರಿಗೆ ಕಷ್ಟವೆನಿಸುತ್ತದೆ.

ತಮ್ಮ ತಂದೆ ಧರ್ಮರತ್ನ
ಎನ್. ರುದ್ರಯ್ಯನವರ ಹಾಗೆ
ಜಗದೀಶಾರಾಧ್ಯರು ದಿಟ್ಟರು, ಧೀಮಂತರು
ಮತ್ತು ವರ್ಚಸ್ವಿಗಳು.

ತಮ್ಮ ತಾಯಿ ರುದ್ರಮ್ಮನವರ ಹಾಗೆ
ಜಗದೀಶಾರಾಧ್ಯರು ಗುರುಭಕ್ತಿ
ಮತ್ತು ದೈವಭಕ್ತಿಸಂಪನ್ನರು.

ಜಗದೀಶಾರಾಧ್ಯರ ತಂದೆ, ತಾಯಿಯ
ಕಾಲದಿಂದಲೂ ಜಗದೀಶಾರಾಧ್ಯರ
ಮನೆಯಲ್ಲಿ ನಿತ್ಯ ಶಿವಪೂಜೆ,
ಇಷ್ಟಲಿಂಗಪೂಜೆಯೊಂದಿಗೆ
ಒಂದಲ್ಲ, ಒಂದು ಪೂಜೆ, ಪುನಸ್ಕಾರಗಳು
ನಡೆದುಕೊಂಡಿರುತ್ತಿದ್ದವು
ಮತ್ತು ಈಗಲೂ ನಡೆದುಕೊಂಡಿವೆ.

ಜಗದೀಶಾರಾಧ್ಯರ ಮನೆಗೆ ಯಾವಾಗಲೂ
ಗುರು, ಜಗದ್ಗುರುಗಳು
ದಯಮಾಡಿಸುತ್ತಲೇ ಇರುತ್ತಾರೆ.

ಗುರು, ಜಗದ್ಗುರುಗಳು ರಾತ್ರಿ ಹನ್ನೆರಡು ಗಂಟೆಗೆ
ಜಗದೀಶಾರಾಧ್ಯರ ಮನೆಗೆ
ದಯಮಾಡಿಸಿದರೂ ಅವರಿಗೆ ತಕ್ಷಣಕ್ಕೆ
ಪೂಜೆ, ಪ್ರಸಾದದ ವ್ಯವಸ್ಥೆಯಾಗುತ್ತದೆ.

ಜಗದೀಶಾರಾಧ್ಯರ ಧರ್ಮಪತ್ನಿ
ಶ್ರೀಮತಿ ಪಾರ್ವತಮ್ಮನವರು
ಅವರ ಅತ್ತೆ ರುದ್ರಮ್ಮನವರ ಹಾಗೆ
ಅನ್ನಪೂರ್ಣೇಶ್ವರಿ.

ಅವರದು ದಾಸೋಹದ ಕೈ.

ಅವರ ಮನೆಗೆ ಬಂದ ಯಾರೂ ಸಹ
ಹಸಿದುಕೊಂಡುಹೋಗುವ ಹಾಗಿಲ್ಲ.

ಜಗದೀಶಾರಾಧ್ಯರ ಮನೆಯಲ್ಲಿ
ಎಲ್ಲರೂ ಹಾಗೇನೇ.

ಹೆಂಡತಿ, ಮಕ್ಕಳು, ಮೊಮ್ಮಕ್ಕಳು
ಎಲ್ಲರೂ ಹರಗುರುಪ್ರಿಯರು.

ಇದರಲ್ಲಿ ಅತಿಶಯೋಕ್ತಿ ಇಲ್ಲ.

ಇದು ವಾಸ್ತವ. ಇದು ವಾಸ್ತವಸತ್ಯ.

ಅದೊಂದು ಕಾಲಘಟ್ಟದಲ್ಲಿ,

ಇಡೀ ತುಮಕೂರು ಜಗದೀಶಾರಾಧ್ಯರ
ಮಾತನ್ನು ಕೇಳಿಕೊಂಡಿರುತ್ತಿತ್ತು.

ಬ್ಯಾಂಕು, ಇಂಡಸ್ಟ್ರಿ, ಸ್ಕೂಲು, ಕಾಲೇಜು,
ಸಮಾಜ, ಸಂಘ, ಸಂಸ್ಥೆಗಳು,
ಮಠಮಾನ್ಯಗಳು, ಗುಡಿ-ದೇವಸ್ಥಾನಗಳು,
ಸಾಮಾಜಿಕ ಕೆಲಸ, ಕಾರ್ಯಗಳು,
ಕಾರ್ಯಕ್ರಮಗಳು..... ಎಲ್ಲೆಲ್ಲೂ ಜಗದೀಶಾರಾಧ್ಯರು!!

ಜಗದೀಶಾರಾಧ್ಯರು ಇಡೀ ತುಮಕೂರನ್ನು
ವ್ಯಾಪಿಸಿಕೊಂಡಿದ್ದರು.

ಜಗದೀಶಾರಾಧ್ಯರು ಯಾವುದೇ
ಒಂದು ಕೆಲಸಕ್ಕೆ ಅಥವಾ ಯೋಚನೆ,
ಯೋಜನೆಗೆ ಕೈಹಾಕಲಿ,
ಅದನ್ನು ದಡಮುಟ್ಟಿಸುವವರೆಗೆ ಬಿಡುತ್ತಿರಲಿಲ್ಲ.

ಜಗದೀಶಾರಾಧ್ಯರು ಬದುಕಿಗೊಂದು
ಬದ್ಧತೆಯನ್ನು ಇಟ್ಟುಕೊಂಡು ಬದುಕಿದವರು.

ತುಮಕೂರಿನ ಶೈಕ್ಷಣಿಕ, ಸಾಮಾಜಿಕ,
ಸಾಂಸ್ಕೃತಿಕ, ಧಾರ್ಮಿಕ, ವ್ಯಾವಹಾರಿಕ,
ಸಾಮುದಾಯಿಕ, ಸಾರ್ವಜನಿಕ ಎಲ್ಲದರಲ್ಲೂ
ಜಗದೀಶಾರಾಧ್ಯರು ಇರಲೇಬೇಕಾದ
ಅನಿವಾರ್ಯತೆ ಇತ್ತು.

“ಆಡು ಮುಟ್ಟದ ಸೊಪ್ಪಿಲ್ಲ;
ಸರ್ವಜ್ಞ ಮುಟ್ಟದ ವಿಷಯವಿಲ್ಲ” ಎನ್ನುವ ಹಾಗೆ,

ತುಮಕೂರಲ್ಲಿ ಜಗದೀಶಾರಾಧ್ಯರು ಇಲ್ಲದ
ಸಂಘ, ಸಂಸ್ಥೆಗಳು, ಕಾರ್ಯ,
ಕಾರ್ಯಕ್ರಮಗಳು ಇಲ್ಲವೇ ಇಲ್ಲ ಎಂಬುವಂತಿತ್ತು.

ತೀರ ಇತ್ತೀಚಿನವರೆಗೂ
ಅದು ಹಾಗೆಯೇ ನಡೆದುಕೊಂಡುಬಂದಿತ್ತು.

ದೇವರು ಜಗದೀಶಾರಾಧ್ಯರಿಗೆ
ಅದಮ್ಯ ಇಚ್ಛಾಶಕ್ತಿ
ಮತ್ತು ಕ್ರಿಯಾಶಕ್ತಿಯನ್ನು ಕೊಟ್ಟಿದ್ದ.

ಅದರ ಜೊತೆಯಲ್ಲಿ ದೇವರು
ಅವರಿಗೆ ಬತ್ತದ, ಬಾಡದ, ಬಸವಳಿಯದ,
ಚೈತನ್ಯಶಕ್ತಿಯನ್ನು ಕೊಟ್ಟಿದ್ದ.

ಜಗದೀಶಾರಾಧ್ಯರು ರಾಜಕಾರಣವನ್ನು
ಮೈಗೂಡಿಸಿಕೊಂಡಿರಲಿಲ್ಲ.

ಅವರಿಗೆ ರಾಜಕಾರಣದೊಂದಿಗೆ
“ಎಷ್ಟೋ ಅಷ್ಟು ಮಾತ್ರ” ಎಂಬುವಂಥ
ಸಂಬಂಧವಿತ್ತು.

ರಾಜಕಾರಣ ಅವರಿಗೆ ಒಗ್ಗದ ವಿಷಯ.
ಅದು ಅವರಿಗೆ ಬೇಕಿರಲಿಲ್ಲ.

ಈ ರಾಜಕಾರಣವಿದೆಯಲ್ಲ, ಇದು ಹಾಗೇನೇ.

ರಾಜಕಾರಣದಲ್ಲಿ “ಸಮಝ್”
ಇಲ್ಲದಿದ್ದರೂ ನಡೆಯುತ್ತದೆ.
ಆದರೆ “ಸಮಝೋತಾ” ಇಲ್ಲದಿದ್ದರೆ
ನಡೆಯುವುದಿಲ್ಲ.

ಇದು ಕಾರಣ, “ಸಮಝ್” ಇರುವ
ಜಗದೀಶಾರಾಧ್ಯರಿಗೆ “ಸಮಝೋತಾ”
ಮಾಡಿಕೊಳ್ಳುವ ರಾಜಕಾರಣ
ಕೊನೆಯವರೆಗೆ ಒಲಿಯಲೇ ಇಲ್ಲ.

ಅದು ಒಳ್ಳೆಯದೇ ಆಯತು, ಬಿಡಿ.

ಇಂಥವರು ರಾಜಕಾರಣದ ಒಳಗೆ ಹೋಗಿದ್ದರೂ
ಬಹಳ ದಿನಗಳ ಕಾಲ ಅಲ್ಲಿ
ನಿಂತುಕೊಳ್ಳುವುದಕ್ಕೆ ಆಗುತ್ತಿರಲಿಲ್ಲ.

ಜಗದೀಶಾರಾಧ್ಯರು ತುಂಬ ಬುದ್ಧಿವಂತರು
ಮತ್ತು ವ್ಯವಹಾರಜ್ಞರು.

ಸಿದ್ಧಗಂಗೆಯ ಲಿಂಗ್ಯೆಕ್ಯ
ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ
ಜಗದೀಶಾರಾಧ್ಯರನ್ನು ಕಂಡರೆ
ತುಂಬ ಅಭಿಮಾನ ಮತ್ತು ಪ್ರೀತಿ.

ಪರಮಪೂಜ್ಯ ಸಿದ್ಧಗಂಗಾ ಶ್ರೀಗಳವರು
ಜಗದೀಶಾರಾಧ್ಯರ ಸಲಹೆ, ಸೂಚನಗೆಳಿಗೆ
ಕಿವಿಯಾಗುತ್ತಿದ್ದರು.

ಪರಮಪೂಜ್ಯರಿಗೆ ಜಗದೀಶಾರಾಧ್ಯರ
ವಿಷಯದಲ್ಲಿ ತುಂಬ ಭರವಸೆ ಇತ್ತು.

ಜಗದೀಶಾರಾಧ್ಯರಲ್ಲಿ
ಅದೆಷ್ಟು ಉತ್ಸಾಹ, ಅದೆಷ್ಟು ಧೈರ್ಯ,
ಅದೆಷ್ಟು ಕೆಚ್ಚು ಇತ್ತೆಂದರೆ,

“ಯಾವುದು ಹೇಗಿರಬೇಕೋ ಹಾಗಿದ್ದರೆ ಸರಿ,
ಇಲ್ಲದೆ ಹೋದರೆ ಪೀಠವನ್ನೇ ಬದಲಾಯತ್ತೇನೆ,
ಪೀಠಾಚಾರ್ಯರನ್ನೇ ಬದಲಾಯಿಸಿಬಿಡುತ್ತೇನೆ.
ಪಾಠವನ್ನೇ ಬದಲಾಯಿಸುತ್ತೇನೆ,
ಪಾಠಕ್ರಮವನ್ನೇ ಬದಲಾಯಿಸಿಬಿಡುತ್ತೇನೆ”
ಎಂದವರು ಹೇಳುತ್ತಿದ್ದರು.

ಅವರ ಈ ತೆರನಾದ ಧೈರ್ಯ,
ಸ್ಥೈರ್ಯಕ್ಕೆ ಯಾರಾದರೂ ಸರಿ,
“ಸೈ” ಎನ್ನಲೇಬೇಕು; “ಜೈ ಹೋ” ಹೇಳಲೇಬೇಕು.

ಜಗದೀಶಾರಾಧ್ಯರು ವೀರಶೈವ ಸಮಾಜದ ಪ್ರತಿಷ್ಠಿತ,
ಪ್ರಮುಖ ಹಾಗೂ ಗಣ್ಯಮಾನ್ಯ
ವ್ಯಕ್ತಿಯಾಗಿದ್ದರೂ ಸಹ
ಅವರನ್ನು ತುಮಕೂರಿನ ಎಲ್ಲ ಸಮಾಜದವರು
ಮತ್ತು ಎಲ್ಲ ಸಮಾಜದ ಗಣ್ಯರುಗಳು ಭಾವಿಸುತ್ತಿದ್ದರು.

ಜಗದೀಶಾರಾಧ್ಯರನ್ನು ಎಲ್ಲರೂ ಪ್ರೀತಿಸುತ್ತಿದ್ದರು
ಮತ್ತು ಎಲ್ಲರೂ ಭಾವಿಸುತ್ತಿದ್ದರು,
ಅಭಿಮಾನಿಸುತ್ತಿದ್ದರು.

ನಮ್ಮನ್ನು ತುಮಕೂರಿಗೆ ಕರೆತರುವಲ್ಲಿ
ಮತ್ತು ತುಮಕೂರಿನ ಜನಗಳಿಗೆ
ನಮ್ಮನ್ನು ಪರಿಚಯಿಸುವಲ್ಲಿ
ಜಗದೀಶಾರಾಧ್ಯರು ಪ್ರಧಾನಪಾತ್ರ ವಹಿಸಿದರು.

ಇತಿಹಾಸದ ಗರ್ಭವನ್ನು ಸೇರಿಹೋಗಿದ್ದ
ಹಿರೇಮಠವನ್ನು ಮತ್ತೆ ವರ್ತಮಾನಗೊಳಿಸುವ
ಪ್ರತಿಹೆಜ್ಜೆಯಲ್ಲೂ ಅವರು ನಮಗೆ “ಸಾಥ್” ನೀಡಿದರು.

ಪ್ರತಿಯೊಂದು ಹಬ್ಬಕ್ಕೂ ತಮ್ಮೆಲ್ಲ ಪರಿವಾರದೊಂದಿಗೆ
ಮತ್ತು ತಾಯಿ ಪಾರ್ವತಮ್ಮನವರೊಂದಿಗೆ
ಹಿರೇಮಠಕ್ಕೆ ಆಗಮಿಸಿ ಅವರು
ನಮ್ಮ ದರ್ಶನಾಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದರು.

ಜಗದೀಶಾರಾಧ್ಯರು ಸಂಕ್ರಾಂತಿ ಹಬ್ಬಕ್ಕೂ
ಹಿರೇಮಠಕ್ಕೆ ಬಂದಿದ್ದರು.

ಕಳೆದ ತಿಂಗಳು ಶಿವರಾತ್ರಿ ಫೆಬ್ರವರಿ
18ಕ್ಕೂ ಹಿರೇಮಠಕ್ಕೆ ಬಂದಿದ್ದರು.

ಪ್ರತಿವರುಷ ಯುಗಾದಿಗೆ ಅವರು
ಕುಟುಂಬಪರಿವಾರಸಹಿತ
ಹಿರೇಮಠಕ್ಕೆ ಬರುತ್ತಿದ್ದರು.

ನೋಡಿ, ನಿನ್ನೆ ಅವರು ಬರಲೇ ಇಲ್ಲ!!
ಅವರು ನಮ್ಮ ಬಳಿ ಬರಲಿಲ್ಲ.
ಅವರು ಶಿವನ ಬಳಿ ಹೋದರು.

ಜಗದೀಶಾರಾಧ್ಯರ ಕುಟುಂಬವು
ಪ್ರತಿ ಯುಗಾದಿಗೆ ಮಠಕ್ಕೆ ಬಂದು
ಬೇವು, ಬೆಲ್ಲ ಕೊಟ್ಟು,
ಮಠಕ್ಕೆ ಬರುವ ಭಕ್ತಾದಿಗಳಿಗೆ ಕೊಡಲು
ಬೇವು-ಬೆಲ್ಲವನ್ನು ಪುಡಿಮಾಡಿ
ಅದರ ಮಿಶ್ರಣವನ್ನು ತಂದುಕೊಡುತ್ತಿದ್ದರು.

ಯುಗಾದಿಯ ದಿನದಂದು
ಮಠಕ್ಕೆ ಬರುವ ಭಕ್ತಾದಿಗಳಿಗೆಲ್ಲ
ನಾವು ಅದನ್ನೇ ಪ್ರಸಾದವಾಗಿ
ಕೊಡುತ್ತಿದ್ದೆವು.

ನಿನ್ನೆ ಅದೆಲ್ಲ ಆಗಲಿಲ್ಲ.
ಏಕೆಂದರೆ ಜಗದೀಶಾರಾಧ್ಯರು ಇಲ್ಲ.

ಸದ್ಯ ನಾವು ಹೇಳುವ ತತ್ತ್ವ
ಮತ್ತು ತತ್ತ್ವಜ್ಞಾನ
ತಮಗೆಲ್ಲರಿಗೂ ಗೊತ್ತಿದೆ.

“ಯಾರೇ ಆದರೂ ಸರಿ, ಒಂದಲ್ಲ ಒಂದು ದಿನ
ಸಾವಿನ ಮನೆಯ ಬಾಗಿಲನ್ನು ತಟ್ಟಲೇಬೇಕು.

ಸಾವು ಯಾವಾಗಲೂ
ನಮ್ಮ ಜೊತೆ ಜೊತೆಯಲ್ಲಿಯೇ
ಹೆಜ್ಜೆಹಾಕಿಕೊಂಡಿರುತ್ತದೆ.

ಅದು ನಮ್ಮ ಬೆನ್ನಹಿಂದೆಯೇ ಇರುತ್ತದೆ.
ಆದರೆ ಅದು ಮುಂಚೂಣಿಗೆ ಬಂದಿರುವುದಿಲ್ಲ.

ಅದು ಯಾವಾಗ ಮುಂಚೂಣಿಗೆ ಬಂದು
ನಿಂತುಕೊಳ್ಳುತ್ತದೆಯೋ ಆಗ
ನಾವು, ನೀವುಗಳು ಇಲ್ಲ, ಇನ್ನಿಲ್ಲವಾಗುತ್ತೇವೆ” ಅಷ್ಟೇ.

ಜಗದೀಶಾರಾಧ್ಯರದು ತುಂಬು ಕುಟುಂಬ.

ಅವರಿಗೆ ಇಬ್ಬರು ಗಂಡುಮಕ್ಕಳು,

ರುದ್ರಪ್ರಕಾಶ್ ಮತ್ತು ಶಿವಕುಮಾರ್;

ಓರ್ವ ಹೆಣ್ಣುಮಗಳು, ವರುಣಾ -

ಎಲ್ಲರೂ ಸಹ ಸಂಸ್ಕಾರವಂತರು.

ಜಗದೀಶಾರಾಧ್ಯರು
ಮತ್ತು ಪಾರ್ವತಮ್ಮನವರ ಹಾಗೆ
ಎಲ್ಲರೂ ಗುರು, ಲಿಂಗ, ಜಂಗಮಪ್ರೇಮಿಗಳು.

ಇದರ ಜೊತೆಯಲ್ಲಿ ಅವರ ಸೊಸೆಯಂದಿರು,
ಅಳಿಯಂದಿರು, ಮೊಮ್ಮಕ್ಕಳು,
ಮುಮ್ಮೊಕ್ಕಳು, ಅಣ್ಣ, ತಮ್ಮಂದಿರು,
ಅಕ್ಕ, ತಂಗಿಯರು ಅಪಾರ ಬಂಧು, ಬಳಗ,
ಅಸಂಖ್ಯಾತ ಹಿತೈಷಿಗಳು ಎಲ್ಲರೂ ಸಹ

“ಗುರುದೇವೋ ಮಹಾದೇವೋ
ಗುರುದೇವಸ್ಸದಾಶಿವಃ,
ಗುರುಸ್ಸಾಕ್ಷಾತ್ ಪರಬ್ರಹ್ಮ” ಎಂದು
ಅಂದುಕೊಂಡಿರುವವರೇ.

ಈ “ಎಲ್ಲರನ್ನೂ” ಮತ್ತು ಈ “ಎಲ್ಲವನ್ನೂ”
ವಿಸರ್ಜಿಸಿಬಿಟ್ಟು ಜಗದೀಶಾರಾಧ್ಯರು
ಶಿವನಿಂದ ಆಹ್ವಾನಿತರಾಗಿದ್ದಾರೆ.

ಶಿವ ಜಗದೀಶಾರಾಧ್ಯರಿಗೆ
“ಶಿವಸಾಯುಜ್ಯ” ಪದವಿಯನ್ನು ಕೊಟ್ಟು
ಅವರನ್ನು ತನ್ನೊಳಗೆ ಐಕ್ಯಮಾಡಿಕೊಳ್ಳಲಿ;
ಶಿವ್ಯೆಕ್ಯಮಾಡಿಕೊಳ್ಳಲಿ -
ಎಂದು ಶಿವನ ಸನ್ನಿಧಾನದಲ್ಲಿ
ಪ್ರಾರ್ಥಿಸಿಕೊಳ್ಳುತ್ತೇವೆ.

ಹಾಗೆಯೇ ಜಗದೀಶಾರಾಧ್ಯರ ಅಗಲಿಕೆಯಿಂದ
ದುಃಖತಪ್ತವಾದ ಅವರ ಕುಟುಂಬಕ್ಕೆ
ಮತ್ತು ಜಗದೀಶಾರಾಧ್ಯರ ಅಪಾರ ಅಭಿಮಾನಿ,
ಹಿತೈಷಿಗಳಿಗೆ ಜಗದೀಶಾರಾಧ್ಯರ
ಅಗಲಿಕೆಯ ದುಃಖವನ್ನು ಭರಿಸುವ
ಶಕ್ತಿಯನ್ನು ಕೊಡಲಿ ಎಂದು ನಾವುಗಳು

ತುಮಕೂರು ಹಿರೇಮಠದ
ಕರ್ತೃ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಯ
ಸನ್ನಿಧಾನದಲ್ಲಿ ಅರಿಕೆಮಾಡಿಕೊಳ್ಳುತ್ತೇವೆ.

ಡಾ. ಶ್ರೀ ಶ್ರೀ ಶಿವಾನಂದ
ಶಿವಾಚಾರ್ಯ ಸ್ವಾಮೀಜಿಯವರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog

21st September 2023