ನಮ್ಮದು “ನಮೋ ಸಂಸ್ಕೃತಿ”...
ನಮ್ಮದು “ಬಸವಸಂಸ್ಕೃತಿ”.....
ಕೃಷ್ಣಸಂಧಾನ ವಿಫಲವಾಗುತ್ತದೆ. ಕುರುಕ್ಷೇತ್ರ ಯುದ್ಧದ ತಿಥಿ ನಿರ್ಧಾರವಾಗುತ್ತದೆ. ಕೌರವ, ಪಾಂಡವ ಎರಡೂ ಪಕ್ಷದಲ್ಲೂ ಯುದ್ಧದ ತಯ್ಯಾರಿ, ಮಾನಸಿಕ ತಯ್ಯಾರಿ ಶುರುವಾಗುತ್ತದೆ. ಸೈನ್ಯವನ್ನು ಜೋಡಿಸಿಯಾಯಿತು. ಚದುರಂಗ ಬಲವನ್ನು ಸಿದ್ಧಗೊಳಿಸಿಯಾಯಿತು. ಪರಸ್ಪರರು ಪರಸ್ಪರರನ್ನು ಸಂಧಿಸಿ ತಮ್ಮ ಬಲಸಂವರ್ಧನೆಯನ್ನು ಮಾಡಿಕೊಳ್ಳುವುದಕ್ಕೆ ತೊಡಗುತ್ತಾರೆ. ಈ ಮಧ್ಯದಲ್ಲಿ ಕೆಲವು ಪಕ್ಷಾಂತರಗಳಾಗುತ್ತವೆ.
ಕುರುಕ್ಷೇತ್ರ ಯುದ್ಧದ ತಯ್ಯಾರಿ ಕೆಲವು ಅನಿರೀಕ್ಷಿತ ತಯ್ಯಾರಿಗಳಿಗೆ ಸಾಕ್ಷಿಯಾಗುತ್ತದೆ.
ಕುರುಕ್ಷೇತ್ರ ಯುದ್ಧದ ಪೂರ್ವಭಾವಿ ತಯ್ಯಾರಿ ಕೆಲವು ಆಘಾತಕಾರಿ ಬದಲಾವಣೆಗೆ ಕಾರಣವಾಗುತ್ತದೆ.
ತಮ್ಮ ರಾಜ್ಯದಿಂದ ಪಾಂಡವರ ಪರವಾಗಿ ಯುದ್ಧಮಾಡಬೇಕೆಂದು ಸೈನ್ಯಸಹಿತ ಹೊರಟವರು ಮಾರ್ಗಮಧ್ಯದಲ್ಲಿಯೇ ತಮ್ಮ ತೀರ್ಮಾನವನ್ನು ಬದಲಾಯಿಸಿ ಕೌರವರ ಪರವಾಗಿ ಯುದ್ಧಮಾಡಬೇಕಾದ ಪರಿಸ್ಥಿತಿಗಳು ನಿರ್ಮಾಣವಾಗುತ್ತವೆ.
ಇದಕ್ಕೆ ಮದ್ರದೇಶದ ಶಲ್ಯನೇ ಬಹುದೊಡ್ಡ ಉದಾಹರಣೆ.
ಶಲ್ಯನಿಗೆ ತನ್ನ ತಂಗಿ ಮಾದ್ರಿಯ ಮಕ್ಕಳ ಜೊತೆಯಲ್ಲಿಯೇ ಯುದ್ಧಮಾಡಬೇಕಾಗಿ ಬರುತ್ತದೆ.
ಯಾವುದೋ ಒಂದು ಮುಲಾಜಿಗೆ ಬಿದ್ದು ಆತ ದುರ್ಯೋಧನನ ಪರವಾಗಿ ನಿಂತುಕೊಳ್ಳಬೇಕಾಗುತ್ತದೆ.
ಶಲ್ಯ ಮಹಾರಾಜ ದುರ್ಯೋಧನನ “ಆಪರೇಶನ್ ಆತಿಥ್ಯ”ದ (ಆಪರೇಶನ್ ಹಾಸ್ಪಿಟ್ಯಾಲಿಟಿ) ಮುಲಾಜಿಗೆ ಒಳಗಾಗಬೇಕಾಗುತ್ತದೆ.
೧೮ ಅಕ್ಷೆಹಿಣಿ ಸೈನ್ಯ ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಜಮಾಯಿಸತೊಡಗುತ್ತದೆ. ಎರಡೂ ಪಕ್ಷ ಮತ್ತು ಎರಡೂ ಸೇನಾಪಡೆಗಳಲ್ಲೂ ಇನ್ನು, ಮುನ್ನಿಲ್ಲದ ಹಾಗೆ ಯುದ್ಧೋತ್ಸಾಹ ತುಂಬಿಕೊಂಡಿದೆ.
ಈ ಮಧ್ಯದಲ್ಲಿ ಕೃಷ್ಣ ಧರ್ಮರಾಜನನ್ನು ಕರೆದುಹೇಳುತ್ತಾನೆ,
“ಯುದ್ಧಾರಂಭಕ್ಕೆ ಮೊದಲು ದೊಡ್ಡವರ ಬಳಿ ಹೋಗಿ ನಮಸ್ಕಾರಮಾಡಿ ಅವರ ಆಶೀರ್ವಾದವನ್ನು ಪಡೆದುಕೋ” ಎಂದು.
ಪಾಂಡವರಿಗೆ ಕೃಷ್ಣ ಹೇಳಿದ ಮೇಲೆ ಮುಗಿಯಿತು.
ಪಾಂಡವರು ಸೀಮೋಲ್ಲಂಘನ ಮಾಡಬಹುದು; ಆದರೆ ಅವರು ಕೃಷ್ಣವಾಕ್ಯೋಲ್ಲಂಘನವನ್ನು ಮಾಡಲಾರರು. ಅವರಿಗೆ ಚೆನ್ನಾಗಿ ಗೊತ್ತು, ಕೃಷ್ಣ ಅವರ ಆಪದ್ಬಾಂಧವನೆಂದು. ಕೃಷ್ಣ ಪಾಂಡವರ ಪಾಲಿಗೆ “ಟ್ರಬಲ್‌ಶೂಟರ್” ಆಗಿದ್ದ. ಕೃಷ್ಣನ ಆದೇಶಕ್ಕೆ ತಲೆಬಾಗಿ ಧರ್ಮರಾಜ ಯುಧಿಷ್ಠಿರ ದೊಡ್ಡವರ ಬಳಿ ಹೋಗುತ್ತಾನೆ.
ಯಾರು ದೊಡ್ಡವರು? ಭೀಷ್ಮಾಚಾರ್ಯರು, ದ್ರೋಣಾಚಾರ್ಯರು, ಕೃಪಾಚಾರ್ಯರು, ಧೃತರಾಷ್ಟ್ರ, ಗಾಂಧಾರಿ ಎಲ್ಲರೂ ದೊಡ್ಡವರೇ. ಆದರೆ ಅವರಾರೂ ಕೂಡ ಪಾಂಡವರ ಪರವಾಗಿಲ್ಲ. ಎಲ್ಲರೂ ದುರ್ಯೋಧನನ ಪರವಾಗಿದ್ದಾರೆ. ಭೀಷ್ಮ, ದ್ರೋಣಾದಿಗಳೆಲ್ಲ ದುರ್ಯೋಧನನ ಪರವಾಗಿ ಯುದ್ಧಭೂಮಿಗೆ ಇಳಿಯುತ್ತಿದ್ದಾರೆ.
ಧೃತರಾಷ್ಟ್ರ, ಗಾಂಧಾರಿಯರಂತೂ ಬಿಡಿ, ಪುತ್ರಪ್ರೇಮ ಮತ್ತು ಪುತ್ರವ್ಯಾಮೋಹದಿಂದ ಬಾಧಿತರಾಗಿದ್ದಾರೆ.
ಇದೆಲ್ಲವೂ ಗೊತ್ತಿದ್ದರೂ ಕೃಷ್ಣನ ಮಾತನ್ನು ಪಾಲಿಸುವುದಕ್ಕಾಗಿ ಯುಧಿಷ್ಠಿರ ಭೀಷ್ಮ, ದ್ರೋಣಾದಿಗಳ ಬಳಿಗೆ ಹೋಗುತ್ತಾನೆ. ಅವರ ಚರಣದಲ್ಲಿ ತಲೆ ಇರಿಸಿ ನಮಸ್ಕಾರಮಾಡಿ ಆಶೀರ್ವಾದವನ್ನು ಬೇಡುತ್ತಾನೆ.
ನಮಸ್ಕಾರಮಾಡಿದ ಯುಧಿಷ್ಠಿರನಿಗೆ ಅವರೇನೆಂದು ಆಶೀರ್ವಾದ ಮಾಡಬೇಕು?
ಈಗ ಸಮಸ್ಯೆ ಯುಧಿಷ್ಠಿರನದಲ್ಲ. ಈಗ ಸಮಸ್ಯೆ ಭೀಷ್ಮ, ದ್ರೋಣಾದಿ ದೊಡ್ಡವರದು!!
ತಲೆಬಾಗಿ ನಮಸ್ಕಾರ ಮಾಡಿದವನಿಗೆ ದೊಡ್ಡವರು ಏನು ಆಶೀರ್ವಾದಮಾಡುತ್ತಾರೆ?
“ಸೋಲು” ಎಂದು ಆಶೀರ್ವಾದ ಮಾಡುತ್ತಾರೆಯೆ?
“ಸಾಯಿ” ಎಂದು ಆಶೀರ್ವಾದ ಮಾಡಲಿಕ್ಕಾಗುತ್ತದೆಯೇ? ಇಲ್ಲ. ಅದು ಸಾಧ್ಯವೇ ಇಲ್ಲ.
ಏಕೆಂದರೆ ಅವರು ದೊಡ್ಡವರು!! ಚಿಕ್ಕವರು ಮತ್ತು ಬಾಲಿಶರು ಹಾಗೆ ಮಾಡಬಹುದು.
ದೊಡ್ಡವರು ಹಾಗೆ ಮಾಡುವುದಕ್ಕೆ ಆಗುವುದಿಲ್ಲ. ಅವರು ತಲೆಬಾಗಿ ನಮಸ್ಕಾರಮಾಡಿದವನಿಗೆ “ವಿಜಯೀ ಭವ” - ಜಯಶಾಲಿಯಾಗು; “ದೀರ್ಘಾಯುಃ ಭವ”, “ಆಯುಷ್ಮಾನ್ ಭವ” - “ದೀರ್ಘಾಯುವಾಗು, ಆಯುಷ್ಯವಂತನಾಗು” ಎಂದು ಆಶೀರ್ವಾದಮಾಡಲೇಬೇಕಾಗುತ್ತದೆ. ಅವರು ಅದನ್ನೇ ಮಾಡಿದರು!!
ಅವರಿಂದ ಹಾಗೆ ಆಶೀರ್ವಾದ ಸಿಕ್ಕುತ್ತಲೇ ಕೃಷ್ಣ ಧರ್ಮರಾಜನಿಗೆ ಹೇಳುತ್ತಾನೆ,
“ಇನ್ನು ನೀನು ಯುದ್ಧದಲ್ಲಿ ಗೆದ್ದ ಹಾಗೆಯೇ ಸರಿ. ದೊಡ್ಡವರು ಕೌರವರ ಪಕ್ಷದಲ್ಲಿ ನಿಂತುಕೊಂಡು ಯುದ್ಧಮಾಡಿದರೂ ಗೆಲ್ಲುವುದು ಮಾತ್ರ ನೀನೇ. ಏಕೆಂದರೆ ನಿನಗೆ ಅವರ ಆಶೀರ್ವಾದ ದೊರಕಿದೆ. ಆಶೀರ್ವಾದದ ಶ್ರೀರಕ್ಷೆಯ ಮುಂದೆ ಯಾವ ಅಸ್ತ್ರ, ಶಸ್ತ್ರದ ಆಟವೂ ನಡೆಯುವುದಿಲ್ಲ. ನಮಸ್ಕಾರವಿದು ಕೊಲ್ಲಲು ಬಂದವರನ್ನು “ಗೆಲ್ಲು” ಎಂದು ಆಶೀರ್ವಾದಮಾಡುವಂತೆ ಮಾಡುತ್ತದೆ” ಎಂದು.
ಕೃಷ್ಣನ ಪ್ರಕಾರ ದೊಡ್ಡವರ ಆಶೀರ್ವಾದವನ್ನು ಪಡೆಯುವುದರ ಮೂಲಕ ಯುಧಿಷ್ಠಿರ ಯುದ್ಧಾರಂಭಕ್ಕೆ ಮೊದಲೇ ಯುದ್ಧವನ್ನು ಗೆದ್ದುಬಿಟ್ಟ.
ಯುದ್ಧಭೂಮಿಯಲ್ಲಿ ಭೀಷ್ಮಾಚಾರ್ಯ, ದ್ರೋಣಾಚಾರ್ಯ..., ಇವರೇ ಮೊದಲಾದವರು ಕೌರವಸೇನೆಯ ನೇತೃತ್ವವನ್ನು ವಹಿಸಿಕೊಂಡು ಅಸ್ತ್ರ, ಶಸ್ತ್ರಧಾರಿಗಳಾಗಿ ದುರ್ಯೋಧನನ ಪರವಾಗಿ ಯುದ್ಧಮಾಡುತ್ತಿದ್ದರು. ಆದರೆ ಅವರ ಆಶೀರ್ವಾದ ಯುದ್ಧಭೂಮಿಯಲ್ಲಿ ಧರ್ಮರಾಜನ ಪರವಾಗಿ ಇದ್ದುಕೊಂಡು ಅದು ಪಾಂಡವರನ್ನು ರಕ್ಷಿಸಿಕೊಂಡಿತ್ತು.
ನಮಸ್ಕಾರದಲ್ಲಿ ದೊಡ್ಡ ಶಕ್ತಿ ಇದೆ.
ಮೃಕಂಡು ಮುನಿಯ ಮಗ ಮಾರ್ಕಂಡೇಯ ಅಲ್ಪಾಯುವಾಗಿದ್ದ. ಮಾರ್ಕಂಡೇಯನ ಸಾವು ಇನ್ನಾರು ತಿಂಗಳಿಗೆ ಇದೆ ಎನ್ನುವಾಗ ಮೃಕಂಡುಮುನಿ ತನ್ನ ಮಗನನ್ನು ಕರೆದು ಹೇಳುತ್ತಾನೆ,
“ನೀನು ಯಜ್ಞೋಪವೀತವನ್ನು ಧರಿಸಿಕೊಂಡು ಸಂಸ್ಕಾರವಂತನಾಗಿರುವೆ. ಇನ್ನಾರು ತಿಂಗಳವರೆಗೆ ನಿನಗೆ ಯಾರೇ ಗುರು, ಹಿರಿಯರು, ಮುನಿ, ದ್ವಿಜೋತ್ತಮರು ಕಂಡರೆ ಅವರಿಗೆ ನೀನು ನಮಸ್ಕಾರಮಾಡಿ ಅವರ ಆಶೀರ್ವಾದವನ್ನು ಪಡೆದುಕೋ” ಎಂದು.
ಮಾರ್ಕಂಡೇಯ ಪಿತೃವಾಕ್ಯವನ್ನು ಪಾಲಿಸತೊಡಗುತ್ತಾನೆ.
ಅದೊಂದು ಬಾರಿ, ಸಪ್ತರ್ಷಿಗಳು ಮೃಕಂಡುಮುನಿಯ ಆಶ್ರಮದ ಮಾರ್ಗವಾಗಿ ಹೊರಟಿರುತ್ತಾರೆ.
ಅವರನ್ನು ಕಾಣುತ್ತಲೇ ಮಾರ್ಕಂಡೇಯ ಅವರ ಬಳಿಗೆ ಹೋಗಿ ಅವರಿಗೆಲ್ಲ ದೀರ್ಘದಂಡ ನಮಸ್ಕಾರಮಾಡುತ್ತಾನೆ. ನಮಸ್ಕಾರಮಾಡಿದ ಬಾಲಕ ಮಾರ್ಕಂಡೇಯನನ್ನು ಕುರಿತು ಅವರೆಲ್ಲ “ದೀರ್ಘಾಮಾಯುಃ”, “ದೀರ್ಘಾಯುರ್ಭವ” ಎಂದು ಆಶೀರ್ವಾದಮಾಡುತ್ತಾರೆ.
ಮಾರ್ಕಂಡೇಯನಿಗೆ ಸಪ್ತರ್ಷಿಗಳ ಆಶೀರ್ವಾದ ದೊರಕುತ್ತದೆ. ಮೃಕಂಡುಮುನಿಗೆ ವಿಷಯ ತಿಳಿಯುತ್ತಲೇ ಮಗನ ಮರಣದ ಭೀತಿಯಲ್ಲಿದ್ದ ಮೃಕಂಡುಮುನಿ ನಿರಾಳನಾಗುತ್ತಾನೆ. “ಇನ್ನು ಆ ಮೃತ್ಯು ತನ್ನ ಮಗನಿಗೆ ಏನೂ ಮಾಡಲಾರದು. ತನ್ನ ಮಗ ದೀರ್ಘಾಯುವಾಗುತ್ತಾನೆ” - ಎಂದು ಆತ ಹರ್ಷಚಿತ್ತನಾಗುತ್ತಾನೆ.
ಮಾರ್ಕಂಡೇಯನಿಗೆ ಸಪ್ತರ್ಷಿಗಳು “ದೀರ್ಘಾಯುವಾಗು” ಎಂದು ಆಶೀರ್ವಾದಮಾಡಿದರೆ
ನಿರಂತರವಾಗಿ ತನ್ನ ಸ್ತುತಿ, ನುತಿಯಲ್ಲಿ ತೊಡಗಿಕೊಂಡ ಮಾರ್ಕಂಡೇಯನಿಗೆ ಕಾಲನನ್ನೇ ಹೆದರಿಸಿಬಿಟ್ಟು ಶಿವ “ಚಿರಂಜೀವಿಯಾಗು” ಎಂದು ಆಶೀರ್ವಾದಮಾಡುತ್ತಾನೆ.
ಇದು ಕಾರಣ, ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ, ಪರಶುರಾಮ
ಈ ಸಪ್ತಚಿರಂಜೀವಿಗಳ ಪಟ್ಟಿಯಲ್ಲಿ ಮಾರ್ಕಂಡೇಯನ ಹೆಸರು ಕೂಡ ಸೇರಿಕೊಳ್ಳುತ್ತದೆ.
ನಮಸ್ಕಾರ ಸಂಸ್ಕೃತಿಯನ್ನು ಅಳವಡಿಸಿಕೊಂಡರೆ ಮೃತ್ಯುಂಜಯರಾಗುತ್ತಾರೆ. ಇದರಲ್ಲಿ ಎರಡು ಮಾತಿಲ್ಲ.
ಇನ್ನು, ಇದಕ್ಕೆ ತದ್ವಿರುದ್ಧವಾಗಿ ತಿರಸ್ಕಾರ ಸಂಸ್ಕೃತಿಯನ್ನು ಅಳವಡಿಸಿಕೊಂಡರೆ ಅವರು ಯಶೋಹೀನರಾಗುತ್ತಾರೆ. ಅವರ ಚರಿತ್ರೆ, ಚಾರಿತ್ರ್ಯಗಳಿಗೆ ಕಪ್ಪುಚುಕ್ಕೆ ಅಂಟಿಕೊಳ್ಳುತ್ತದೆ. ಅವರು ಸುಖ, ಸೌಕರ್ಯ, ಸಂತಾನಗಳಿಂದ ವಂಚಿತರಾಗುತ್ತಾರೆ. ಇದಕ್ಕೆ ನಮ್ಮ ದಿಲೀಪ ಮಹಾರಾಜನೇ ನಿದರ್ಶನ.
ಅದೊಂದು ಬಾರಿ,
ದಿಲೀಪ ಮಹಾರಾಜ ಸ್ವರ್ಗಕ್ಕೆ ಹೋಗಿರುತ್ತಾನೆ. ಸ್ವರ್ಗದಿಂದ ವಾಪಾಸುಬರುವಾಗ ಆತನಿಗೆ ಸ್ವರ್ಗದ ಹಸು ಕಾಮಧೇನು ಕಾಣಿಸುತ್ತದೆ. ಕಾಮಧೇನು ಕಣ್ಣಿಗೆ ಕಂಡರೂ ದಿಲೀಪ ಮಹಾರಾಜ ಅದಕ್ಕೆ ನಮಸ್ಕಾರಮಾಡದೆ ಹಾಗೆಯೇ ಎದೆ ಎತ್ತಿಕೊಂಡು ಬಂದುಬಿಡುತ್ತಾನೆ.
ಎಲ್ಲರೂ ಕಾಮಧೇನುವನ್ನು ಪೂಜೆಮಾಡುತ್ತಾರೆ. ಆದರೆ ದಿಲೀಪ ಮಹಾರಾಜ ಕಾಮಧೇನುವಿಗೆ ಒಂದು ನಮಸ್ಕಾರ ಕೂಡ ಮಾಡುವುದಿಲ್ಲ. ಕಾಮಧೇನು ನೊಂದುಕೊಳ್ಳುತ್ತದೆ. ರಾಜ ತನಗೆ ನಮಸ್ಕಾರ ಮಾಡಲಿಲ್ಲ ಎಂಬುವುದು ಅದರ ನೋವಲ್ಲ. ಒಬ್ಬ ರಾಜನಾಗಿ ಗೋಬ್ರಾಹ್ಮಣರನ್ನು ಗೌರವಿಸುವ ಮನೋಭಾವ ರಾಜನಲ್ಲಿಲ್ಲವೆಂದು. ಕಾಮಧೇನುವಿನ ಆ ನೋವು ಶಾಪವಾಗಿ ಪರಿಣಮಿಸುತ್ತದೆ. ದಿಲೀಪ ಸಂತಾನಹೀನನಾಗುತ್ತಾನೆ. ಅದೇನೇ ಹೋಮ, ಹವನ, ಯಜ್ಞ, ಯಾಗ ಮಾಡಿದರೂ ಆತನಿಗೆ ಸಂತಾನಭಾಗ್ಯ ದೊರಕುವುದಿಲ್ಲ.
ಆಗ ಆತ ತನ್ನ ಕುಲಗುರುಗಳಾದ ವಶಿಷ್ಟರ ಬಳಿ ಹೋಗಿ ತನ್ನ ನೋವನ್ನು ಹೇಳಿಕೊಳ್ಳುತ್ತಾನೆ.
ವಶಿಷ್ಟರು ತಮ್ಮ ದಿವ್ಯದೃಷ್ಟಿಯಿಂದ ಎಲ್ಲ ವಿಷಯವನ್ನೂ ಅರಿತುಕೊಳ್ಳುತ್ತಾರೆ. ಅವರು ದಿಲೀಪ ಮಹಾರಾಜ ಮಾಡಿದ ತಪ್ಪನ್ನು ಆತನಿಗೆ ಹೇಳಿಬಿಟ್ಟು ಅದಕ್ಕೆ ಪರಿಹಾರವನ್ನು ಕೂಡ ಸೂಚಿಸುತ್ತಾರೆ. ದಿಲೀಪ ಮಹಾರಾಜನ ಶಾಪನಿವಾರಣೆಗಾಗಿ ವಶಿಷ್ಟರು ತಮ್ಮ ಆಶ್ರಮದಲ್ಲಿರುವ ಕಾಮಧೇನುವಿನ ಮಗಳಾದ ನಂದಿನಿಯನ್ನು ಪೂಜಿಸಲು ಹೇಳುತ್ತಾರೆ.
ದಿಲೀಪ ಮಹಾರಾಜ ಪತ್ನೀಸಮೇತನಾಗಿ ನಂದಿನಿಯ ಪೂಜೆ ಮತ್ತು ಸೇವೆ ಮಾಡುತ್ತಾನೆ.
ಇದರಿಂದ ಆತನ ಶಾಪ ಪರಿಹಾರವಾಗಿ ಆತನಿಗೆ ಸಲಕ್ಷಣಗಳಿಂದ ಕೂಡಿದ ಪುತ್ರಪ್ರಾಪ್ತಿಯಾಗುತ್ತದೆ.
೧೨ನೇ ಶತಮಾನದಲ್ಲಿ ಬಸವಣ್ಣನವರು ತಮಗೆ ಒಮ್ಮೆ ಶರಣೆಂದ ಹರಳಯ್ಯನವರಿಗೆ ಎರಡು ಬಾರಿ ಶರಣು ಶರಣಾರ್ಥಿ ಹೇಳುವ ಮೂಲಕ ಹರಳಯ್ಯನವರ ನಮಸ್ಕಾರದ ಋಣಸಂದಾಯ ಮಾಡುತ್ತಾರೆ.
ಬಸವಣ್ಣನವರ ಶರಣು ಶರಣಾರ್ಥಿಯ ಭಾರವನ್ನು ಕಳೆದುಕೊಳ್ಳುವುದಕ್ಕಾಗಿ ಹರಳಯ್ಯನವರು ತಮ್ಮ ಹಾಗೂ ತಮ್ಮ ಧರ್ಮಪತ್ನಿಯ ತೊಡೆಯ ಚರ್ಮವನ್ನು ಸುಲಿದುಬಿಟ್ಟು ಬಸವಣ್ಣನವರಿಗಾಗಿ ಚಮ್ಮಾವುಗೆಗಳನ್ನು ಮಾಡುತ್ತಾರೆ. ಬಸವಣ್ಣನವರು ಅವುಗಳನ್ನು ಧರಿಸಿಕೊಳ್ಳದೆ ಅವುಗಳನ್ನು ತಲೆಯ ಮೇಲೆ ಇರಿಸಿಕೊಳ್ಳುವ ಮೂಲಕ ಹರಳಯ್ಯನವರ ಭಕ್ತಿ ಮತ್ತು ಸೇವೆಯನ್ನು ಚರಿತ್ರೆಯಾಗಿಸುತ್ತಾರೆ.
ಬಸವಣ್ಣನವರು ಕೂಡ ಅಷ್ಟೊಂದು ದೊಡ್ಡ ಮಹಾತ್ಮರಾಗಿರುವುದು, ಅವರ “ಬಾಗಿದ ತಲೆ ಮತ್ತು ಮುಗಿದ ಕೈ” ಸಿದ್ಧಾಂತದಿಂದ.
ಸ್ಕಂದಪುರಾಣದಲ್ಲಿ ಒಂದು ಮಾತಿದೆ,
“ಅಭಿವಾದನಶೀಲಸ್ಯ ವೃದ್ಧಸೇವಾರತಸ್ಯ ಚ |
ಆಯುರ್ಯಶೋಬಲಂ ಬುದ್ಧಿಃ ವರ್ಧತೇ ಅಹರಹೋ ಅಧಿಕಮ್||”
- “ಯಾರು ವಯೋವೃದ್ಧರ ಸೇವೆಯನ್ನು ಮಾಡಿಕೊಂಡಿರುತ್ತಾರೋ, ಯಾರು ಗುರುಹಿರಿಯರಿಗೆ ನಮಸ್ಕಾರ ಮಾಡಿಕೊಂಡಿರುತ್ತಾರೋ ಅವರ ಆಯುಷ್ಯ, ಕೀರ್ತಿ, ಶಕ್ತಿಸಾಮರ್ಥ್ಯ ಮತ್ತು ಬುದ್ಧಿಬಲವು ದಿನೇ ದಿನೇ ಇನ್ನಷ್ಟು, ಮತ್ತಷ್ಟು ಹೆಚ್ಚುತ್ತ ಹೋಗುತ್ತದೆ” ಎಂದು.
ನೀತಿಶಾಸ್ತ್ರವು ಕೂಡ, “ದೇವಾ ಕುರ್ವಂತಿ ಸಾಹಾಯ್ಯಂ ಗುರುರ್ಯತ್ರ ಪ್ರಣಮ್ಯತೇ” -
“ಯಾರು ಗುರುಹಿರಿಯರಿಗೆ ನಮಸ್ಕಾರ ಮಾಡಿಕೊಂಡಿರುತ್ತಾರೋ ಅವರಿಗೆ ದೇವಾಧಿದೇವತೆಗಳು ಕೂಡ ಸಹಾಯ ಮಾಡುತ್ತಾರೆ ಮತ್ತು ಸಕಾಲಕ್ಕೆ ಬಳಿಬಂದು ನೆರವು ನೀಡುತ್ತಾರೆ” ಎಂದು ಹೇಳುತ್ತದೆ.
ನಮ್ಮದು ನಮೋ ಕಲ್ಚರು. ನಮ್ಮದು ಶರಣು ಶರಣಾರ್ಥಿ ಸಂಸ್ಕೃತಿ. ನಮ್ಮದು ಬಸವಸಂಸ್ಕೃತಿ.
ಒಮ್ಮೆ ಶರಣೆಂದವರಿಗೆ ಇಮ್ಮೆ ಶರಣೆನ್ನುವ ಸಂಸ್ಕೃತಿ ನಮ್ಮದು.
ನಮಸ್ಕಾರದಲ್ಲಿ ಬಹುದೊಡ್ಡ ಶಕ್ತಿ ಇದೆ. ನಮಸ್ಕಾರದಲ್ಲಿ ಚಮತ್ಕಾರವೂ ಇದೆ; ಪುರಸ್ಕಾರವೂ ಇದೆ.
ಒಂದೇ ಒಂದು ನಮಸ್ಕಾರ ಬಹುದೊಡ್ಡ ಪವಾಡವನ್ನು ಮಾಡುತ್ತದೆ ಎಂಬುವುದಕ್ಕೆ ನಮ್ಮ ಪುರಾಣೇತಿಹಾಸಗಳೇ ಸಾಕ್ಷಿ. “ನಮಸ್ಕಾರದ ಮಹಿಮೆ” ಬರೀ ಪುರಾಣೇತಿಹಾಸಗಳ ಕಾಲಕ್ಕೆ ಮಾತ್ರ ಸೀಮಿತವಾಗಿಲ್ಲ. ಈಗಲೂ ಸಹ ಒಂದೇ ಒಂದು ನಮ್ರ, ವಿನಮ್ರ ನಮಸ್ಕಾರ ಬಹುದೊಡ್ಡ ಚಮತ್ಕಾರವನ್ನು ಮಾಡುತ್ತದೆ ಎಂಬ ವಿಷಯಕ್ಕೆ ನಾವು, ನೀವೆಲ್ಲ ದಿನನಿತ್ಯದಲ್ಲೂ ಸಾಕ್ಷಿಯಾಗುತ್ತ ಇರುತ್ತೇವೆ.
ಇತ್ತೀಚೆಗೆ ಚಲಾವಣೆಗೆ ಬಂದ ಈ ಗ್ಯಾರಂಟಿಭಾಗ್ಯಕ್ಕಿಂತ ಋಷಿಮುನಿಗಳ ಪ್ರಾಚೀನ ಕಾಲದಿಂದಲೂ ಚಲಾವಣೆಯಲ್ಲಿರುವ ನಮಸ್ಕಾರಭಾಗ್ಯದ ತೂಕ ಮತ್ತು ಅದರೆ ಘನತೆ, ಗೌರವ ದೊಡ್ಡದು.
ಇದರಲ್ಲಿ ಎರಡು ಮಾತಿಲ್ಲ ಮತ್ತು ಇದರಲ್ಲಿ ಹಾಗೆ, ಹೀಗೆ ಎಂಬ ಅಪಸ್ವರವಿಲ್ಲ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment