14th September 2023



 Good  Evening, Happy Thursday
14th September 2023
@ Hiremath, TapOvanam, Tumkur 

ಶ್ರಾವಣಮಾಸವು ಸಾಧನೆಗೆ ವೇದಿಕೆಯಾದರೆ 
ಭಾದ್ರಪದಮಾಸವು ಬೆನಕಾದಶಿಗೆ ವೇದಿಕೆ 
 
                                         ಡಾ. ಶಿವಾನಂದ ಶಿವಾಚಾರ್ಯರು
 ಹಿರೇಮಠ, ತಪೋವನ, ತುಮಕೂರು

>>>>>>>>>>>>>>>>>>>>>>>>>>>>>>>>>>>>>>

ತುಮಕೂರು 14: 
``ಶ್ರಾವಣದ ನಿರ್ಗಮನಕ್ಕೆ “ಜೈ ಹೋ”. 
ದ್ರಪದದ ಆಗಮನಕ್ಕೆ “ಜೈ ಹೋ”.

ಇವತ್ತು ಶ್ರಾವಣದ ನಿರ್ಗಮನ 
ಮತ್ತು ಭಾದ್ರಪದದ ಆಗಮನ.
 
ಇದುವರೆಗೂ ನಮ್ಮೊಡನಿದ್ದ ಶ್ರಾವಣ ಮಾಸವು 
ಇವತ್ತು “ವಿದಾಯ” ಹೇಳಿಕೊಂಡು ಹೊರಟುಹೋಗುತ್ತಿದೆ.
 
ಮತ್ತೆ ಈ ಶ್ರಾವಣಮಾಸ ಆಗಮಿಸುವುದು 
ಮುನ್ನೊಂದು, ಮತ್ತೊಂದು ಸಂವತ್ಸರದಲ್ಲಿಯೇ!!

ಭಾದ್ರಪದ ಮಾಸವು “ಹೆಲೋ, ಹಾಯ್” ಹೇಳಿಕೊಂಡು 
ನಮ್ಮ ಈ ಮಾಸದ ದೈನಂದಿನ ಗತಿ, ವಿಧಾನಗಳಿಗೆ, 
ಕ್ರಿಯಾಕಲಾಪಗಳಿಗೆ ಮತ್ತು ಕಾರ್ಯಚಟುವಟಿಕೆಗಳಿಗೆ 
ವೇದಿಕೆಯಾಗಲು ಆಗಮಿಸುತ್ತಿದೆ.
 
ಪ್ರತಿ ಅಮಾವಾಸ್ಯೆಯಿಂದ ಒಂದು ಮಾಸಕ್ಕೆ “ಕೊಕ್”; 
ಇನ್ನೊಂದು ಮಾಸಕ್ಕೆ “ಕಿಕ್”!! ಅಹುದು ತಾನೆ?

ಪ್ರತಿ ಅಮಾವಾಸ್ಯೆಯು ಒಂದು ಮಾಸಕ್ಕೆ 
“ಬೈ”, “ಹೋಗ್ಬಿಟ್ಟುಬನ್ನಿ” ಹೇಳಿಬಿಟ್ಟು, 
ಇನ್ನೊಂದು ಮಾಸಕ್ಕೆ “ಹಾಯ್”, “ಬನ್ನಿ”, ಎಂದು ಹೇಳುತ್ತ
 “ಕ್ಷೇಮವೇ?” ಎಂದು ಕೇಳುತ್ತ 
“ವೆಲ್‌ಕಮ್” ಮಾಡಿಕೊಂಡಿರುತ್ತದೆ.
 
ಇವತ್ತು ಬೆನಕನ ಅಮಾವಾಸ್ಯೆ.  
 
ಇಂದಿನಿಂದ ಭಾದ್ರಪದ ಮಾಸ ಶುರು. 

ಪ್ರತಿ ಮಾಸದಲ್ಲೂ ಏಕಾದಶಿ, 
ದ್ವಾದಶಿಗಳು ಬರುವ ಹಾಗೆ,
ಈ ನಮ್ಮ ಭಾದ್ರಪದ ಮಾಸದಲ್ಲಿ ಏಕಾದಶಿ, 
ದ್ವಾದಶಿಗಳ ಜೊತೆ ಜೊತೆಯಲ್ಲಿ 
ಬೆನಕನಿಗಾಗಿಯೇ ಮೀಸಲಾದ 
“ಬೆನಕಾದಶಿ” ಬರುತ್ತದೆ. 

“ಬೆನಕಾದಶಿ” - ಪದವಿದು, 
ಕೇಳುವುದಕ್ಕೆ ಚೆನ್ನಾಗಿದೆ ಅಲ್ಲವೆ?

ಪ್ರತಿ ಅಮಾವಾಸ್ಯೆಯೂ ಒಂದು ಮಾಸಕ್ಕೆ 
“ವಿದಾಯ” ಹೇಳುತ್ತ ಇನ್ನೊಂದು ಮಾಸಕ್ಕೆ 
ಸ್ವಾಗತವೇದಿಕೆಯಾಗುತ್ತದೆ. 

ಪ್ರತಿ ಅಮಾವಾಸ್ಯೆಯು ಮಾಸಗಳೆರಡರ 
ಆಗಮನ, ನಿರ್ಗಮನಗಳ ಸಂಕ್ರಾಂತಿ ಕಾಲ, ಸಂಧಿಕಾಲ; 
ಮತ್ತದು ಸಂಕ್ರಮಣ ಕಾಲ. 
ಮಕರ ಸಂಕ್ರಾಂತಿಯು ಉತ್ತರಾಯಣ ಕಾಲ, 
ದಕ್ಷಿಣಾಯನ ಕಾಲಗಳ ಸಂಧಿಕಾಲ, 
ಸಂಕ್ರಾಂತಿ ಕಾಲವಾದರೆ 
ಪ್ರತಿ ಅಮಾವಾಸ್ಯೆಯು ಮಾಸಗಳೆರಡರ 
ಸಂಕ್ರಾಂತಿ ಕಾಲ ಮತ್ತು ಸಂಧಿಕಾಲ. 

ಜಗತ್ತೇ ಹೀಗೆ. 

ಒಂದು ಆಗಮಿಸುತ್ತದೆ. ಇನ್ನೊಂದು ನಿರ್ಗಮಿಸುತ್ತದೆ.
ಒಂದರ ಆಗಮನ ಇನ್ನೊಂದರ ನಿರ್ಗಮನಕ್ಕೆ ಕಾರಣ.

ಆಗಮನ ಮತ್ತು ನಿರ್ಗಮನ - ಇದು ಜಗದ ನೀತಿ.
 
ಆಗಮನ ಮತ್ತು ನಿರ್ಗಮನ - ಇದು ಜೀವನದ ರೀತಿ ಕೂಡ ಅಹುದು. 
 
ಆಗಮನ, ನಿರ್ಗಮನ - ಇವೆರಡರಲ್ಲೂ ಗಮನಿಸಬೇಕಾದ 
ಒಂದು ಸಾಮಾನ್ಯಾಂಶವಿದೆ. 
 
ಅದು “ಗಮನ”. 
ಆಗಮನದಲ್ಲೂ ಗಮನವಿದೆ; 
ನಿರ್ಗಮನದಲ್ಲೂ ಗಮನವಿದೆ. 

ಆಗಮನ, ನಿರ್ಗಮನ - 
ಇವೆರಡರಲ್ಲೂ ಗಮನವಿದು “ಕಾಮನ್ ಫ್ಯಾಕ್ಟರ್”. 
 
ಇಲ್ಲಿ ಇನ್ನೊಂದು ಬಹುಮುಖ್ಯ ಅಂಶವೆಂದರೆ, 
ಎಲ್ಲಿ ಗಮನವಿದೆಯೋ ಅಲ್ಲಿ ಮನವಿದೆ. 
 
ಗಮನದಲ್ಲಿ ಮನವಿದೆ. 
ಗಮನದಲ್ಲಿ ಮನ ಇರಲೇಬೇಕಾಗುತ್ತದೆ. 
ಮನವಿದ್ದಾಗಲೇ ಅದು ಗಮನವಾಗುತ್ತದೆ. 
  
ಗಮನದಲ್ಲಿರುವ ಮನಕ್ಕೆ “ನಮಸ್ಕಾರ ದೀಕ್ಷೆ” 
ಅಥವಾ “ಶರಣು, ಶರಣಾರ್ಥಿ” ದೀಕ್ಷೆಯನ್ನು ಕೊಟ್ಟರೆ 
 
ಅದು ನಮನವಾಗುತ್ತದೆ. 
ಮನದ ಅಂತ್ಯಾಕ್ಷರ “ನ”. 

“ನ” ಮತ್ತೆ ಮನದ ಮೊದಲಕ್ಷರವಾಗಿ 
“ಬಡ್ತಿ” ಪಡೆದರೆ ಮನಕ್ಕೆ 
“ನಮನ ಭಾಗ್ಯ” ದೊರಕುತ್ತದೆ.

ಮನವಿದು ಬರೀ ಮನವಾಗಿ ಉಳಿಯದೆಯೇ 
ಅದು ನಮನವಾಗಿ ಬೆಳೆದರೆ 
ಅದಕ್ಕಿಂತ ಅಹೋಭಾಗ್ಯ ಇನ್ನೇನಿದೆ? 
 
ಈ ಬಾರಿಯ ನಮ್ಮ ಶ್ರಾವಣಮಾಸಕ್ಕೆ 
ಭರ್ಜರಿ ಭಾಗ್ಯ ದೊರಕಿದೆ; 
ಬಂಪರ್ ಬಹುಮಾನ ಸಿಕ್ಕಿದೆ.
 
ಭಾರತದ ಈ ಬಾರಿಯ ಶ್ರಾವಣ ಮಾಸವನ್ನು 
ಯಾರೂ ಮರೆಯುವ ಹಾಗಿಲ್ಲ. 
 
ಈ ಬಾರಿಯ ಶ್ರಾವಣಮಾಸ ಎರಡು 
ಅದ್ಭುತ, ಪರಮಾದ್ಭುತ 
ಮತ್ತು ಅವಿಸ್ಮರಣೀಯ ಘಟನೆಗಳಿಗೆ 
ವೇದಿಕೆಯಾಗಿದೆ. 
 
ಒಂದು, 
ಈ ಬಾರಿಯ ಶ್ರಾವಣಮಾಸದ 23ನೇ ತಾರೀಖು
ಅಂದರೆ 2023, ಆಗಸ್ಟ್ ಮಾಹೆಯ 23ನೇ ತಾರೀಖು, 
ಬುಧವಾರದಂದು ಭಾರತ ಜಗತ್ತೇ ಬೆರಗಾಗುವಂಥ 
ಅದ್ಭುತ ಸಾಧನೆಯನ್ನು ಮಾಡಿ ತೋರಿಸಿತು.
 
ಚಂದ್ರನಂಗಳದಲ್ಲಿ, ಅದೂ ಸಹ ಚಂದ್ರನ ದಕ್ಷಿಣ ಧ್ರುವದಲ್ಲಿ 
ನಮ್ಮ  ಇಸ್ರೋ ತಂಡ ವಿಕ್ರಮನ 
ಸಾಫ್ಟ್ ಲ್ಯಾಂಡಿಂಗ್‌ನ್ನು ಮಾಡಿತು. 

ಒಂದು ಚೂರು ಸಹ ಎಡವಟ್ಟಾಗದಂತೆ 
ಎಲ್ಲವನ್ನೂ ತಾನಂದುಕೊಂಡಂತೆಯೇ ಮಾಡಿಹಾಕಿತು 
ನಮ್ಮ ಇಸ್ರೋ ಮತ್ತು ಇಸ್ರೋನ ವಿಜ್ಞಾನಿಗಳ ತಂಡ. 
ಇಸ್ರೋಕ್ಕೆ “ನಾಸಾ” ಕೂಡ “ಜೈ ಹೋ” ಹೇಳಿತು.

ಇಸ್ರೋನ ಮುಂದೆ ನಾಸಾ ಕೂಡ 
ಬಾಗಿದ ತಲೆಯ ಮುಗಿದ ಕೈಯಾಗಿ ನಿಂತುಕೊಂಡಿತು.
  
ಈ ಘಟನೆ ನಡೆದದ್ದು, ಶ್ರಾವಣಮಾಸದಲ್ಲಿಯೇ!!
 
ಹಾಗೆಯೇ ಮೊನ್ನೆ ತಾನೆ 2023, 
ಸೆಪ್ಟೆಂಬರ್ 8, 9. 10ರಂದು 
ಭಾರತದ ರಾಜಧಾನಿ ದೆಹಲಿಯ 
ಭಾರತಮಂಡಪಮ್‌ನಲ್ಲಿ ನಡೆದ 

ಜಿ 20 ಸಮ್ಮೇಳನ (ಸಮ್ಮಿಟ್) G 20 Summit 

ಭಾರತದ ಆತಿಥ್ಯದಲ್ಲಿ ನಡೆದ 
ಅಭೂತಪೂರ್ವ ಸಮ್ಮೇಳನಕ್ಕೆ 
ನಮ್ಮ ಶ್ರಾವಣಮಾಸವು ವೇದಿಕೆಯಾಯಿತು. 
 
ಅಂತೂ ಇಂತೂ, 
ಈ ಶ್ರಾವಣಮಾಸದಲ್ಲಿ 
ಭಾರತಕ್ಕೆ ಜಾಕ್‌ಪಾಟೋ ಜಾಕ್‌ಪಾಟು!! Jackpot & Jackpot
 
ಶೋಭಕೃತ್ ನಾಮ ಸಂವತ್ಸರದ 
ಈ ಶ್ರಾವಣಮಾಸವನ್ನು ಯಾರೂ ಮರೆಯುವ ಹಾಗಿಲ್ಲ.
 
ಪ್ರತಿಯೊಬ್ಬ ಭಾರತೀಯನಿಗೂ 
ಇದು ಹೆಮ್ಮೆಯ ವಿಷಯ.
 
ಈ ಬಾರಿಯ ಶ್ರಾವಣಮಾಸವು 
ವೈಜ್ಞಾನಿಕವಾಗಿಯೂ ಸುದ್ದಿಮಾಡಿತು.

ಹಾಗೇನೇ ಈ ಬಾರಿಯ ಶ್ರಾವಣಮಾಸವು 
ಅಂತಾರ್ರಾಷ್ಟ್ರೀಯ ಬಂಧ-ಸಂಬಂಧಗಳ 
ಹೆಚ್ಚಳದ ದೃಷ್ಟಿಯಿಂದಲೂ ಸುದ್ದಿಮಾಡಿತು. 

ಭಾರತ ಈ ಬಾರಿ ಗ್ರಹಾಂತರದಲ್ಲೂ 
ದೊಡ್ಡ ಸುದ್ದಿಯಾಯಿತು. 

ದೇಶ, ದೇಶಗಳನ್ನು ಒಂದೆಡೆ ತರುವ 
ಅಂದರೆ ನಮ್ಮ ದೇಶದ  ರಾಷ್ಟ್ರರಾಜಧಾನಿಗೆ 
ಕರೆತರುವ ಮೂಲಕ ದೇಶ, ದೇಶಾಂತರದಲ್ಲೂ 
ದೊಡ್ಡ ಸುದ್ದಿಯಾಯಿತು.
 
ಭಾದ್ರಪದ ಮಾಸ ಆಗಮಿಸಿದೆ. 

ಇನ್ನೇನು ನಾಲ್ಕು ದಿನಗಳಲ್ಲಿ 
ಗಣಪತಿ ಬರುತ್ತಾನೆ. 

ಆತನ ಸ್ವಾಗತಕ್ಕೆ ನಾವೆಲ್ಲರೂ ಸಿದ್ಧರಾಗಬೇಕಿದೆ. 
ಗಣಪತಿಯನ್ನು ಸ್ವಾಗತಿಸಿ ಗಣಪತಿಗೆ
 “ಗಣಪತಿ ಬಪ್ಪಾ ಮೋರಯ್ಯ” ಹೇಳಬೇಕಿದೆ” -  ಎಂದು 

ಇವತ್ತು ತುಮಕೂರು ಹಿರೇಮಠದಲ್ಲಿ ನಡೆದ 
ಅಮಾವಾಸ್ಯಾ ಪೂಜಾ ಕಾರ್ಯಕ್ರಮದ 
ದಿವ್ಯಸಾನಿಧ್ಯವನ್ನು ವಹಿಸಿಕೊಂಡು 
ಆಶೀರ್ವಚನವನ್ನು ನೀಡುತ್ತ 
ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಾನಂದ 
ಶಿವಾಚಾರ್ಯ ಸ್ವಾಮೀಜಿಯವರು 
ಈ ಮೇಲಿನ ಮಾತುಗಳನ್ನು ಹೇಳಿದರು.

ಅಮಾವಾಸ್ಯಾ ಪೂಜೆಯಲ್ಲಿ ಭಾಗವಹಿಸಿದ 
ಎಲ್ಲ ಭಕ್ತಾದಿಗಳಿಗೂ ಶ್ರೀ ಶ್ರೀಗಳು 
ಪೂಜಾಪ್ರಸಾದವನ್ನು ನೀಡಿ ಆಶೀರ್ವದಿಸಿದರು. 
 
(ಇಂದ - ವ್ಯವಸ್ಥಾಪಕರು, ಪ್ರಬಂಧಕರು - 
ಹಿರೇಮಠ, ಚಿಕ್ಕಪೇಟೆ, ತುಮಕೂರು)

Comments

Popular posts from this blog

21st September 2023