16th September 2023


 Good Morning, Happy Saturday

16th September 2023

@ TapOvanam, Hiremath, Tumkur 


>>>>>>>>>>>>>>>>>>>>>>>>>>>


ಹಳೇ ನಿಜಗಲ್‌ನ 

ಎನ್. ಜಿ. ರುದ್ರಯ್ಯನವರ ನಿಧನಕ್ಕೆ


ತುಮಕೂರು ಹಿರೇಮಠದ

 ಶ್ರೀ ಶ್ರೀಗಳವರ ಭಾವಪೂರ್ಣ ಶ್ರದ್ಧಾಂಜಲಿ


>>>>>>>>>>>>>>>>>>>>>>>>>>>>>>>>>


ತುಂಬ ವಿಚಿತ್ರ ಅಲ್ವಾ, 

ಈ ಜಗತ್ತಿನ ರೀತಿ, ನೀತಿ, ಬದುಕು, ಬವಣೆ?


“ಇನ್ನಷ್ಟು ದಿನ ಇರಲಿ” 

ಎನ್ನುವವರು ಹೋಗಿಬಿಡುತ್ತಾರೆ.


“ಇನ್ನೆಷ್ಟು ದಿನ ಇರುತ್ತಾರೆ?” 

ಎನ್ನುವವರು ಉಳಿದುಕೊಂಡಿರುತ್ತಾರೆ.


ಹಳೇ ನಿಜಗಲ್‌ನ ನಮ್ಮ 

ಎನ್. ಜಿ. ರುದ್ರಯ್ಯನವರು 

ಇನ್ನೂ ಅರವತ್ತನ್ನು ತಲುಪಿರಲಿಲ್ಲ.


ದೇವರು ಅವರನ್ನು ತನ್ನ ಬಳಿಗೆ 

ಕರೆಯಿಸಿಕೊಂಡಿದ್ದಾನೆ.


ರುದ್ರಯ್ಯನವರು ಮೊನ್ನೆ 

ದಿನಾಂಕ 15. 09. 2023ರಂದು 

ಶಿವೈಕ್ಯರಾಗಿದ್ದಾರೆ.


ಅವರು ಇನ್ನಷ್ಟು ದಿನ ಇರಬೇಕಿತ್ತು. 


ತುಂಬ ಒಳ್ಳೆಯ ಮನುಷ್ಯ. 


ನಮಗಂತೂ ತುಂಬ ಆಪ್ತರು.


ರುದ್ರಯ್ಯನವರು ನಮ್ಮ ಹಿರೇಮಠ 

ಹಾಗೂ ತಪೋವನದ ಪರಮಾಪ್ತ ಹಿತೈಷಿ.


ರುದ್ರಯ್ಯನವರದು 

ಸಮಾಜಮುಖಿ ಧಾರ್ಮಿಕ ವ್ಯಕ್ತಿತ್ವ.


ರುದ್ರಯ್ಯನವರು

ಯಾವಾಗಲೂ ಒಂದಲ್ಲ ಒಂದು 

ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯ

ಮತ್ತು ಕಾರ್ಯಕ್ರಮವನ್ನು ಮಾಡಿಕೊಂಡಿರುತ್ತಿದ್ದರು.


ಅವರು ಮಠಮಾನ್ಯಗಳು, ಗುಡಿ, ದೇವಸ್ಥಾನಗಳು 

ಮತ್ತು ಸಂಘ, ಸಂಸ್ಥೆಗಳೊಂದಿಗೆ 

ತುಂಬ ಆಪ್ತವಾಗಿ ಗುರುತಿಸಿಕೊಂಡಿದ್ದರು. 


ಹಳೇ ನಿಜಗಲ್‌ನ ಉದ್ದಾನ 

ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ 

ಜೀರ್ಣೋದ್ಧಾರ ಸಮಿತಿಯಲ್ಲಿದ್ದ

ಅವರು ದೇವಸ್ಥಾನದ ಅಭಿವೃದ್ಧಿಗೆ 

ಹಗಲಿರುಳು ಶ್ರಮಿಸಿದರು.


ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದ 

ದಿವಂಗತ ಶಿವಾನಂದಪ್ಪನವರ 

ಬಲಗೈಯಂತಿದ್ದ ರುದ್ರಯ್ಯನವರು

ಯಾವಾಗಲೂ ದೇವಸ್ಥಾನದ 

ಅಕ್ಕಪಕ್ಕ ಮತ್ತು ಸುತ್ತಮುತ್ತ ಇರುತ್ತಿದ್ದರು. 


ಅಭಿವೃದ್ಧಿ ಸಮಿತಿಯವರು ಅವರಿಗೆ 

ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟಿದ್ದು 

ಅದನ್ನು ರುದ್ರಯ್ಯನವರು 

ಬರೀ ಹೆಗಲ ಮೇಲಲ್ಲ, ತಲೆಯ ಮೇಲೆ 

ಹೊತ್ತು ಮಾಡುತ್ತಿದ್ದರು. 


ನಾವು ತಪೋವನಕ್ಕಾಗಿ ಸ್ಥಳವನ್ನು 

ಹುಡುಕುತ್ತಿದ್ದಾಗ ಈಗ ಇರುವ 

ತಪೋವನದ ಸ್ಥಳವನ್ನು 

ಕೊಂಡುಕೊಳ್ಳುವುದಕ್ಕಾಗಿ ದೇವಸ್ಥಾನದ 

ಅಭಿವೃದ್ಧಿ ಸಮಿತಿಯವರ ಜೊತೆಯಲ್ಲಿ 

ರುದ್ರಯ್ಯನವರು ಕೂಡ 

ನಮ್ಮ ಜೊತೆ ಕೈಜೋಡಿಸಿದ್ದರು. 


ನಮ್ಮಲ್ಲಿ ತಪೋವನದ ಕುರಿತು 

ದೊಡ್ಡ ದೊಡ್ಡ ಕನಸುಗಳನ್ನು ಕಟ್ಟುವುದರಲ್ಲಿ 

ರುದ್ರಯ್ಯನವರ ಪಾತ್ರ ದೊಡ್ಡದು. 


“ನಮ್ಮನ್ನು ನುಗ್ಗಿ ಬುದ್ಧೀ, 

ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. 

ನಿಮ್ಮ ಜೊತೆ ನಾವು ಯಾವಾಗಲೂ ಇರುತ್ತೇವೆ” 

ಎಂದು ರುದ್ರಯ್ಯನವರು 

ನಮ್ಮನ್ನು ಭೇಟಿಯಾದಾಗಲೊಮ್ಮೆ 

ನಮ್ಮಲ್ಲಿ ಉತ್ಸಾಹವನ್ನು ತುಂಬುತ್ತಿದ್ದರು.


“ತಪೋವನದ ಉದ್ಘಾಟನೆಗೆ 

ಅವರನ್ನು ಕರೆಸೋಣ, ಇವರನ್ನು ಕರೆಸೋಣ” ಎಂದು 

ತುಂಬ ಉತ್ಸಾಹದಿಂದ ಹೇಳುತ್ತಿದ್ದರು. 


ಸರಕಾರಿ ಕಚೇರಿ ಕೆಲಸಗಳಲ್ಲಿ 

ತೊಂದರೆಯಾಗಬಾರದೆಂದು 

ನಮ್ಮ ವಾಹನಚಾಲಕ ಧರೆಪ್ಪನ ಜೊತೆಯಲ್ಲಿ 

ತಾವೂ ಸಹ ಕಚೇರಿಗಳಿಗೆ ಹೋಗಿ 

ಸಂಬಂಧಿಸಿದ ಅಧಿಕಾರಿಗಳ ಜೊತೆ 

ಮಾತನಾಡಿಬರುತ್ತಿದ್ದರು.


ತಪೋವನದ ಕಟ್ಟಡದ ಕೆಲಸ 

ಪ್ರಾರಂಭವಾದಾಗ ಪ್ರತಿಯೊಂದು 

ಕೆಲಸದಲ್ಲೂ ಮತ್ತು ಪ್ರತಿಯೊಂದು ಹಂತದಲ್ಲೂ 

ನಮ್ಮ ಜೊತೆಯಲ್ಲಿ ಬಂದು ನಿಲ್ಲುತ್ತಿದ್ದರು. 


ತುಮಕೂರು ಹಿರೇಮಠದಿಂದ ಇಲ್ಲಿಗೆ ಬರುವ 

ನಮಗೆ ಊಟೋಪಚಾರಕ್ಕೆ 

ತೊಂದರೆಯಾಗಬಾರದೆಂದು

ತಮ್ಮ ಮನೆಯವರಿಗೆ ಹೇಳಿ 

ನಮಗೆ ಪ್ರಸಾದವನ್ನು ತಂದುಕೊಡುತ್ತಿದ್ದರು.


ಅವರ ಮನೆಯವರೂ ಕೂಡ 

ನಮ್ಮ ಬಗ್ಗೆ ತುಂಬ ಪ್ರೀತಿ, ಗೌರವ 

ಇಟ್ಟುಕೊಂಡಿದ್ದಾರೆ.


ರುದ್ರಯ್ಯನವರು ಸ್ವಭಾವತಃ ದಿಟ್ಟ ವ್ಯಕ್ತಿ. 


ಅವರು ಹಟ ಮತ್ತು ಹೋರಾಟ - 

ಎರಡರಲ್ಲೂ ಮುಂದು.


ಅವರಿಗೆ ಸಾರ್ವಜನಿಕಾಗಿ ಒಳ್ಳೆಯ ಸಂಪರ್ಕ ಇತ್ತು. 


ಮಂತ್ರಿ, ಮುಖ್ಯಮಂತ್ರಿಗಳವರೆಗೆ ಹೋಗಿ 

ಎತ್ತರದ ಧ್ವನಿಯಲ್ಲಿ ಮಾತನಾಡಿ 

ಕೆಲಸ ಮಾಡಿಕೊಂಡು ಬರಬಲ್ಲೆ ಎಂಬ 

ಧೈರ್ಯ, ದಮ್ಮು ಅವರಲ್ಲಿತ್ತು.


ಸಾರ್ವಜನಿಕ ಮತ್ತು ಸಮಾಜಮುಖಿ ಕೆಲಸಗಳಲ್ಲಿ 

ರುದ್ರಯ್ಯನವರಿಗೆ ಎಲ್ಲಿಲ್ಲದ ಆಸಕ್ತಿ.


ಒಂದಷ್ಟು ದಿನಗಳ ಅನಾರೋಗ್ಯದಿಂದಾಗಿ 

ಅವರು ಕೆಲಕಾಲ ತೆರೆಯ ಮರೆಯಲ್ಲಿ 

ಇರಬೇಕಾಗಿ ಬಂತು. 


ಅವರ ಅನಾರೋಗ್ಯದಲ್ಲಿ 

ಅವರ ಮನೆಯವರು, ಅವರ ಮಕ್ಕಳು 

ಮತ್ತು ಅವರ ಬಂಧುಮಿತ್ರರು 

ಅವರನ್ನು ಚೆನ್ನಾಗಿ ನೋಡಿಕೊಂಡರು. 


ಸಾರ್ವಜನಿಕ ವ್ಯಕ್ತಿಗಳಿಗೆ ಮನೆಯಲ್ಲಿ 

ಸುಮ್ಮನೇ ಕೂಡುವುದು ಎಂದರೆ ಆಗುವುದೇ ಇಲ್ಲ. 

ಅದನ್ನು ಅವರು ಒಪ್ಪುವುದಿಲ್ಲ. 


ರುದ್ರಯ್ಯನವರು ಕೂಡ ಹಾಗೇನೇ. 


ದೇವರು ಅವರನ್ನು ತನ್ನ ಬಳಿಗೆ 

ಕರೆಯಿಸಿಕೊಂಡಿದ್ದಾನೆ. 


ರುದ್ರಯ್ಯನವರು “ದೇವಾನಾಂ” ಪ್ರಿಯರಾಗಿದ್ದಾರೆ. 


ದೇವರು ಅವರ ಆತ್ಮಕ್ಕೆ ಶಾಂತಿಯನ್ನು ನೀಡಿ 

ಅವರಿಗೆ ಅವರಿಗೆ ಗಣಪದವಿಯನ್ನು ನೀಡಿ 

ತನ್ನೊಳಗೆ ಒಳಗುಮಾಡಿಕೊಳ್ಳಲಿ. 


ರುದ್ರಯ್ಯನವರ ಅಕಾಲಿಕ ಅಗಲಿಕೆಯಿಂದ 

ನೊಂದ ಅವರ ದುಃಖತಪ್ತ ಕುಟುಂಬಕ್ಕೆ 

ದೇವರು ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ 

ಎಂದು ನಾವು ಭಗವಂತನಲ್ಲಿ ಪ್ರಾರ್ಧಿಸುತ್ತೇವೆ.


ನಮ್ಮ ಆಶೀರ್ವಾದ ಮತ್ತು ಸದಾಶಯಗಳು 

ರುದ್ರಯ್ಯನವರ ಕುಟುಂಬದ ಜೊತೆಯಲ್ಲಿ 

ಯಾವತ್ತೂ ಇರುತ್ತವೆ -

ಎಂದು ತಿಳಿಸುತ್ತ ಸಮಸ್ತ ಕುಟುಂಬಕ್ಕೆ 

ನಾವು ನಮ್ಮ ಹೃದಯಾಂತರಾಳದಿಂದ 

ಸಾಂತ್ವನವನ್ನು ಹೇಳುತ್ತೇವೆ. 


ಡಾ. ಶಿವಾನಂದ ಶಿವಾಚಾರ್ಯರು

ಹಿರೇಮಠ, ತಪೋವನ, ತುಮಕೂರು

Comments

Popular posts from this blog

21st September 2023