21st September 2023


 On 21st September 2023

@ TapOvanam, Hiremath, Tumkur 


>>>>>>>>>>>>>>>>>>>>>>>>>>


ಶ್ರೀ ಶಿವಾನಂದ ಮರಿಗುದ್ದಿಯವರ ನಿಧನಕ್ಕೆ

ತುಮಕೂರು ಹಿರೇಮಠದ ಶ್ರೀ ಶ್ರೀಗಳವರ 

ಭಾವಪೂರ್ಣ ಶ್ರದ್ಧಾಂಜಲಿ


>>>>>>>>>>>>>>>>>>>>>>>>>>

 

“ದೇವರಾಗಿದ್ದರೆ ನಾವು ಎಲ್ಲವನ್ನೂ 

ಸರಿ ಮಾಡುತ್ತೇವೆ” ಎಂದು ನಾವುಗಳು 

ಅಂದುಕೊಳ್ಳುತ್ತೇವೆ.

 

ಆದರೆ ಆ ದೇವರಾದವನು ಕೂಡ 

ಎಲ್ಲವನ್ನೂ ಸರಿಮಾಡುವುದಿಲ್ಲ 

ಮತ್ತು ಆತ ಮಾಡುವುದೆಲ್ಲವೂ 

ಸರಿ ಇರುವುದಿಲ್ಲ ಎಂಬ ವಿಚಾರವಿದು 

ಎಲ್ಲರಿಗೂ ಗೊತ್ತಿರುವ ವಿಷಯ. 


ದೇವರು ಒಮ್ಮೊಮ್ಮೆ ತುಂಬ 

ನಿರ್ದಯವಾಗಿ ನಡೆದುಕೊಳ್ಳುತ್ತಾನೆ. 


ಆತ ತುಂಬ ಅನ್ಯಾಯ ಮಾಡುತ್ತಾನೆ. 


ಆತ ತನಗಿರುವ ಕರ್ತುಂ, ಅಕರ್ತುಂ 

ಮತ್ತು ಅನ್ಯಥಾ ಕರ್ತುಂ ಶಕ್ತಿ, ಸಾಮರ್ಥ್ಯದ ದುರುಪಯೋಗಮಾಡಿಕೊಳ್ಳುತ್ತಾನೆ. 


ದೇವರಾದ ಮಾತ್ರಕ್ಕೆ ಏನೆಲ್ಲ ಮಾಡಿದರೂ 

ನಡೆಯುತ್ತದೆ ಎಂದು ತಿಳಿದುಕೊಂಡಿದ್ದರೆ 

ಅದು ಖಂಡಿತ ತಪ್ಪು. 


ದೇವರು ತನಗೆ ತಿಳಿದ ಹಾಗೆಲ್ಲ 

ಮಾಡುವುದಕ್ಕೆ ದೇವರಾಗಿಲ್ಲವೆಂದು 

ತಿಳಿದುಕೊಂಡರೆ ಸರಿ; 


ಇಲ್ಲವಾದರೆ ದೇವರ ನಡೆಯನ್ನು 

ನಾವು, ನೀವುಗಳು ನಿರ್ದಾಕ್ಷಿಣ್ಯವಾಗಿ 

ಖಂಡಿಸಬೇಕಾಗುತ್ತದೆ.   

 

ನಮಗೆ ದೇವರ ಮೇಲೆ ಇಷ್ಟೊಂದೆಲ್ಲ 

ಕೋಪ ಬರುವುದಕ್ಕೆ ಕಾರಣವಿದೆ.

 

ನಾವು ದೇವರನ್ನು ಹೀಗೆಲ್ಲ ಅನ್ನುವುದಕ್ಕೆ,

ಆಡುವುದಕ್ಕೆ ಕಾರಣವಿದೆ.


ನಮ್ಮ ಶ್ರೀ ಶಿವಾನಂದ ಮರಿಗುದ್ದಿಯವರ 

ಅಕಾಲಿಕ ನಿಧನವು ನಮಗೆ 

ದೇವರನ್ನು ಬಯ್ಯುವಂತೆ ಮಾಡಿದೆ. 


ದೇವರು ಇಲ್ಲವೆಂದು ವಾದಿಸುವವರ 

ಎದುರಿನಲ್ಲಿ ದೇವರು ಇದ್ದಾನೆ ಎಂದು 

ಸಮರ್ಥಿಸಿಕೊಳ್ಳುವ ನಾವೂ ಕೂಡ 

ದೇವರ ಇರುವಿಕೆಯ ಕುರಿತು 

ಸಂಶಯಪಡುವಂತಾಗಿದೆ. 


ಶಿವಾನಂದರ ಅಕಾಲಿಕ ಸಾವು 

ನಮ್ಮನ್ನು ಅಕ್ಷರಶಃ ವಿಚಲಿತರನ್ನಾಗಿಸಿದೆ. 


ಸಾಯುವುದಕ್ಕೂ ಒಂದು ವಯಸ್ಸು ಉಂಟು. 

ಆಗ ಸತ್ತರೆ ಏನೂ ಅನ್ನಿಸುವುದಿಲ್ಲ. 

ಆ ಸಾವನ್ನು ಸಹಜವಾಗಿ ಸ್ವೀಕರಿಸಬಹುದು. 

ಆದರೆ ಇಂಥ ಅಸಹಜ ಸಾವುಗಳು 

ನಮ್ಮಗಳನ್ನು ದಿಗ್ಭ್ರಾಂತರನ್ನಾಗಿಸುತ್ತವೆ. 


ಶ್ರೀ ಶಿವಾನಂದ ಮರಿಗುದ್ದಿಯವರದು 

ಇನ್ನೂ ಚಿಕ್ಕ ವಯಸ್ಸು. 


ಅವರದು ಸದೃಢ ಶರೀರ. 


ಶಿವಾನಂದ ಉತ್ಸಾಹದ ಚಿಲುಮೆ. 

ಅವರು ಯಾವಾಗಲೂ ನಗುನಗುತ್ತ 

ಇರುತ್ತಿದ್ದರು. 

ಅವರಿದ್ದಲ್ಲಿ ನಗೆಬುಗ್ಗೆಗಳು 

ಚಿಮ್ಮಿಕೊಳ್ಳುತ್ತಿದ್ದವು. 


ಅವರು ಎಲ್ಲೇ ಇದ್ದರೂ ಅಲ್ಲಿ 

ಉತ್ಸಾಹ, ಲವಲವಿಕೆಗಳು 

ಮನೆಮಾಡಿಕೊಂಡಿರುತ್ತಿದ್ದವು. 


ಶಿವಾನಂದ “ಹ್ಯಾಪಿ ಗೋ” (Happy Go) ಮನುಷ್ಯ. 


ಅವರದು “ಬಿಂದಾಸ್” ಸ್ವಭಾವ. 


ಮುಚ್ಚುಮರೆ ಇಲ್ಲ. 


ಕಂಡದ್ದನ್ನು ಕಂಡಂತೆಯೇ ಹೇಳಿಬಿಡುವ

ಮುಕ್ತಮುಕ್ತ ಮನಸ್ಥಿತಿ. 


“ಖುಷಿ ಖುಷಿಯಾಗಿರಬೇಕು” 

ಎಂಬುವುದೇ ಅವರ ಸಿದ್ಧಾಂತ.

  

ಸುಮಾರು 30 ವರುಷಗಳ ಹಿಂದೆ 

ಆಸ್ಟ್ರೇಲಿಯಾಕ್ಕೆ ಹೋಗಿ 

ಅಲ್ಲಿ ಬದುಕನ್ನು ಕಟ್ಟಿಕೊಂಡ 

ಶಿವಾನಂದ ಮರಿಗುದ್ದಿಯವರು 

ಸಾಂಸಾರಿಕ ದೃಷ್ಟಿಯಿಂದ ಸಂತೃಪ್ತರು. 


ಪತಿಯ ಹೆಜ್ಜೆ ಹೆಜ್ಜೆಯಲ್ಲಿ ಇಟ್ಟು ನಡೆವ 

ಅವರ ಸಹಧರ್ಮಿಣಿ, ಬಾಳಸಂಗಾತಿ ಗೀತಾರವರು 

ಪತಿಗೆ ತಕ್ಕ ಸತಿ. 


ಗೀತಾ ಅವರು ಕೂಡ ಸದಾ ಹಸನ್ಮುಖಿ. 

ಇಬ್ಬರೂ “ಮೇಡ್ ಫಾರ್ ಈಚ್ ಅದರ್”!! 

ಈ ದಂಪತಿಗಳಿಗೆ ಇಬ್ಬರು ಮಕ್ಕಳು. 


ಅನ್ಯೋನ್ಯ ದಾಂಪತ್ಯದೊಂದಿಗೆ 

ವಿಧೇಯ ಮಕ್ಕಳನ್ನು ಪಡೆದ ಶಿವಾನಂದ 

ಖುಷಿ ಖುಷಿಯಾಗಿ ಇರುತ್ತಿದ್ದರು. 


ಶಿವಾನಂದರು “ಬರೀ ತಾವಾಯಿತು; 

ತಮ್ಮ ಮನೆಯಾಯಿತು; 

ತಮ್ಮ ಹೆಂಡತಿ, ಮಕ್ಕಳಾಯಿತು” ಎಂದು 

ಮನೆಯಲ್ಲಿ ಕುಳಿತುಕೊಳ್ಳುವ ವ್ಯಕ್ತಿಯಲ್ಲ. 


ಶಿವಾನಂದರು ಅಪ್ಪಟ ಸಮಾಜಮುಖಿ. 

ಅವರದು ಸಮಾಜೋ-ಧಾರ್ಮಿಕರು.


ಆಸ್ಟ್ರೇಲಿಯಾದ   

“ವ್ಹಿ. ಎಸ್. ಎ. ಪಿ.”  V S A P 

ಸಮಾಜೋಧಾರ್ಮಿಕ ಸಂಸ್ಥೆಯ 

ಸಂಸ್ಥಾಪಕರಲ್ಲೊಬ್ಬರು ಅವರು. 

 

ನಮ್ಮ ವಿಜಯಕುಮಾರ ಹಲಗಲಿಮಠವರು,

 ಓಂಕಾರಮೂರ್ತಿಯವರು, 

ಶಿವಾನಂದ ಮರಿಗುದ್ದಿಯವರು 

ಹಾಗೂ ಇನ್ನೂ ಹಲವಾರು 

ಸಮಾನಮನಸ್ಕರು ಸೇರಿ 

ಆಸ್ಟ್ರೇಲಿಯಾದ   ಸಿಡ್ನಿಯಲ್ಲಿ 

ವೀರಶೈವ ಸಂಘ, ಸಂಸ್ಥೆಯನ್ನು ಕಟ್ಟಿದ್ದರು. 


ಅದಕ್ಕೆ “ವ್ಹಿ. ಎಸ್. ಎ. ಪಿ.” 

(ವೀರಶೈವ ಸಮಾಜ ಆಫ್ ಏಶಿಯನ್ ಪ್ಯಾಸಿಫಿಕ್)

Veerashaiva Samaj of Asian Pacific 

ಎಂದು ನಾಮಕರಣ ಮಾಡಿ ಅದನ್ನು ನೋಂದಾಯಿಸಿದ್ದರು. 


ಆ ಸಂಸ್ಥೆಯಿಂದ ಪ್ರತಿವರುಷವೂ 

ಒಂದು ಬೃಹತ್ ಪ್ರಮಾಣದ 

ವೀರಶೈವ ಸಮ್ಮೇಳನವನ್ನು ಮಾಡುತ್ತಿದ್ದರು. 


ಪ್ರತಿ ಬಾರಿಯೂ ಸಮ್ಮೇಳನಕ್ಕೆ 

ಕರ್ನಾಟಕದಿಂದ ಪ್ರತಿಭಾವಂತ 

ಸ್ವಾಮೀಜಿಗಳನ್ನು ಬರಮಾಡಿಕೊಳ್ಳುತ್ತಿದ್ದರು.  

 

ಶಿವಾನಂದರವರು 

“ವ್ಹಿ. ಎಸ್. ಎ. ಪಿ”ಯ ಜೊತೆಯಲ್ಲಿ 

ಸಿಡ್ನಿಯ ಕನ್ನಡ ಕೂಟದಲ್ಲೂ ಸಕ್ರಿಯವಾಗಿದ್ದರು.   

 

ಶಿವಾನಂದರವರಿಗೆ ಒಳ್ಳೆಯ ಜನಗಳ ಸಂಪರ್ಕವಿತ್ತು. 

ಶಿವಾನಂದರಿಗೆ ಜನಗಳ ಒಳ್ಳೆಯ ಸಂಪರ್ಕವಿತ್ತು. 


ಕರ್ನಾಟಕದಿಂದ ಸಿಡ್ನಿಗೆ ದಯಮಾಡಿಸಿದ 

ಸ್ವಾಮೀಜಿಗಳೆಲ್ಲರಿಗೂ ಶಿವಾನಂದರವರು 

ಒಳ್ಳೆಯ ಆತಿಥ್ಯಕೊಟ್ಟು 

ಚಿರಪರಿಚಿತರಂತೆ ಸೇವೆಮಾಡುತ್ತಿದ್ದರು. 


ಅವರು ನಮ್ಮನ್ನೆಲ್ಲ ಊರು ಸುತ್ತಿಸುತ್ತಿದ್ದರು. 


ಅವರು ನಮಗೆಲ್ಲ

 “ಸಿಡ್ನೀ ಮೇರೀ ಮುಟ್ಠೀ ಮೇ ಹೈ” ಎಂದು ಹೇಳುತ್ತಿದ್ದರು. 

 

ನಾವು 2013ರಲ್ಲಿ ಸಿಡ್ನಿಗೆ ಹೋದಾಗ 

ನಮ್ಮ ಸುತ್ತಮುತ್ತ ಎಲ್ಲೆಡೆ 

ಶಿವಾನಂದವರೇ ಇರುತ್ತಿದ್ದರು. 


ಸಿಡ್ನಿಗೆ ಯಾರೇ ಸ್ವಾಮೀಜಿಗಳು ಹೋದರೂ 

ಶಿವಾನಂದರವರದೇ ಸಾರಥ್ಯ. 


ನಾವುಗಳು ತಾಯ್ನಾಡಿಗೆ ವಾಪಾಸು 

ಬರುವವರೆಗೆ ನಮ್ಮಗಳೆಲ್ಲರ 

ಜವಾಬ್ದಾರಿ ಅವರದೇ. 


ಬೇರೆ ಸ್ವಾಮೀಜಿಗಳ ಹಾಗೆ 

ಶಿವಾನಂದರವರು ನಮ್ಮನ್ನು 

ಆದರಿಸುವುದರ ಜೊತೆಯಲ್ಲಿ, 

ಗೌರವಿಸುವುದರ ಜೊತೆ ಜೊತೆಯಲ್ಲಿ 

ನಮ್ಮ ವಿಷಯದಲ್ಲಿ ಇನ್ನಷ್ಟು ಮತ್ತಷ್ಟು 

ಅಭಿಮಾನವನ್ನು ಹೊಂದಿದ್ದರು. 


ಅವರು ನಿತ್ಯದಲ್ಲೂ ವಾಟ್ಸ್‌ಆಪ್ 

ಹಾಗೂ ಫೇಸ್‌ಬುಕ್‌ಗಳ ಮೂಲಕ 

ಹರಿದುಬರುವ ನಮ್ಮ ಮಾತು 

ಮತ್ತು ಸಂದೇಶಗಳನ್ನು ನೋಡುತ್ತಿದ್ದರು. 


ನಾವು ಕಳುಹಿಸಿಕೊಡುವ 

ಮೆಸ್ಸೇಜ್‌ಗಳನ್ನು ನೋಡಿ 

ಅದೆಷ್ಟು ಸಂತೋಷಪಡುತ್ತಿದ್ದರು 

ಎಂದರೆ ಅದನ್ನು ಶಬ್ದಿಸುವುದಕ್ಕೆ ಆಗುವುದಿಲ್ಲ. 


ತುಂಬ ಮೆಚ್ಚುಗೆಗೆ ಪಾತ್ರವಾದ ಮಾತು, 

ಸಂದೇಶಗಳ ಕುರಿತು ತುಂಬು ಕಂಠದಿಂದ 

ಪ್ರಶಂಸೆಮಾಡುತ್ತ ತಕ್ಷಣವೇ 

“ವಾಟ್ಸ್‌ಆಪ್” ಕರೆಮಾಡಿ 

ದಂಪತಿಗಳಿಬ್ಬರೂ ಮಾತನಾಡುತ್ತಿದ್ದರು. 


ನಮ್ಮ ತುಮಕೂರು ಹಿರೇಮಠ 

ಮತ್ತು ತಪೋವನದ ಸಂಯುಕ್ತ 

ಆಶ್ರಯದಲ್ಲಿ ನಡೆಯುವ 

“ಆನ್‌ಲೈನ್” ಕ್ಲಾಸುಗಳಲ್ಲಿ 

ದಂಪತಿಗಳಿಬ್ಬರೂ ತಪ್ಪದೇ 

ಭಾಗಿಯಾಗುತ್ತಿದ್ದರು. 


ಅವರ ಉಪಸ್ಥಿತಿ ಮತ್ತು ಭಾಗವಹಿಸುವಿಕೆಯನ್ನು 

ನಮ್ಮ ಆನ್‌ಲೈನ್ ಶಿಬಿರಾರ್ಥಿಗಳು ಕೂಡ 

ತುಂಬ ಮೆಚ್ಚಿಕೊಳ್ಳುತ್ತಿದ್ದರು.


ಶಿವಾನಂದವರು ಪರಮ ಮಾತೃಭಕ್ತ. 


ತಾಯಿಯ ಮೇಲಿರುವ ಅವರ ಭಕ್ತಿಯನ್ನು 

ವರ್ಣಿಸಲು ಸಾಧ್ಯವಿಲ್ಲ. 


ಶಿವಾನಂದವರು ಕುಟುಂಬಜೀವಿ. 

ಅವರ ಕುಟುಂಬಪ್ರೇಮ 

ಮೆಚ್ಚಿಕೊಳ್ಳುವಂಥದ್ದು. 


ಅವರೆಲ್ಲ ಅಣ್ಣ, ತಮ್ಮಂದಿರ 

ಮಧ್ಯದಲ್ಲಿರುವ ಹೊಂದಾಣಿಕೆ, 

ಪ್ರೀತಿ, ವಿಶ್ವಾಸ. ನಿಜಕ್ಕೂ ಪ್ರಶಂಸನಾರ್ಹ. 


ಶಿವಾನಂದ ಕ್ಷಣಕ್ಷಣಕ್ಕೂ 

ಬದುಕಿಗೆ ನ್ಯಾಯ ಒದಗಿಸಿಕೊಡುವ ವ್ಯಕ್ತಿ. 


ಅವರು ಇನ್ನಷ್ಟು ದಿನ 

ನಮ್ಮಗಳ ಮಧ್ಯದಲ್ಲಿ ಇರಬೇಕಿತ್ತು. 


ಅವರ ಅಭಾವ ನಮ್ಮನ್ನೆಲ್ಲ 

ತುಂಬ ದೊಡ್ಡ ಪ್ರಮಾಣದಲ್ಲಿ ಸತಾಯಿಸುತ್ತಲಿದೆ. 

 

ಶಿವಾನಂದರ ಭೌತಿಕ ದೇಹ ಅಳಿದಿರಬಹುದು. 

 

ಆದರೆ ಅವರು ನಮ್ಮೊಂದಿಗೆ 

ಬಿಟ್ಟುಹೋದ ನೆನಪುಗಳು ಮಾತ್ರ ಚಿರಸ್ಥಾಯಿ. 

ಅವು ಎಂದಿಗೂ ಅಳಿಯುವುದಿಲ್ಲ.

 

ಅವರ ನೆನಪುಗಳು ಚಿರಂತನ ಮತ್ತು ಚಿರಾಯು. 

 

ಶಿವಾನಂದರವರ ಆತ್ಮಕ್ಕೆ ದೇವರು 

ಶಾಂತಿಯನ್ನು ನೀಡಿ ಅವರಿಗೆ 

ಗಣಪದವಿಯನ್ನು ನೀಡುವ ಮೂಲಕ 

ತನ್ನೊಳಗೆ ಒಳಗುಮಾಡಿಕೊಳ್ಳಲಿ. 


ಶಿವಾನಂದರವರ ಅಕಾಲಿಕ ನಿಧನದಿಂದ 

ತೀವ್ರವಾಗಿ ನೊಂದ 

ಅವರ ದುಃಖತಪ್ತ ಕುಟುಂಬಕ್ಕೆ 

ಆ ದೇವರು ದುಃಖವನ್ನು 

ಭರಿಸುವ ಶಕ್ತಿಯನ್ನು ನೀಡಲಿ 

ಎಂದು ಭಗವಂತನಲ್ಲಿ ಪ್ರಾರ್ಧಿಸುತ್ತೇವೆ. 


ನಮ್ಮ ಆಶೀರ್ವಾದ ಮತ್ತು ಸದಾಶಯಗಳು 

ಶಿವಾನಂದ ಮರಿಗುದ್ದಿಯವರ 

ಕುಟುಂಬದ ಜೊತೆಯಲ್ಲಿ 

ಯಾವತ್ತೂ ಇರುತ್ತವೆ ಎಂದು ತಿಳಿಸುತ್ತ 

ಸಮಸ್ತ ಕುಟುಂಬಕ್ಕೆ 

ನಾವು ಹೃದಯಾಂತರಾಳದಿಂದ 

ಸಾಂತ್ವನವನ್ನು ಹೇಳುತ್ತಿದ್ದೇವೆ. 


ಡಾ. ಶಿವಾನಂದ ಶಿವಾಚಾರ್ಯರು

ಹಿರೇಮಠ, ತಪೋವನ, ತುಮಕೂರು

Comments

Popular posts from this blog