Samskaara Bodha @ TapOvanam

 


















>>>>>>>>>>>>>>>>>>>>>>>>>>>>>>>>>>>>>>>>>>>>

ತಪೋವನದಲ್ಲಿ ಜರುಗಿದ ಸಂಸ್ಕಾರಬೋಧ ಶಿಬಿರದ ವರದಿ..

>>>>>>>>>>>>>>>>>>>>>>>>>>>>>>>>>>>>>>>>>>>>>

>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>

ವಿದ್ಯಾರ್ಥಿ, ಉದ್ಯೋಗಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಯಾಗಿದೆ.

  ಸಂಸ್ಕಾರಾರ್ಥಿ, ಸಂಯಮಾರ್ಥಿ, ಸತ್ಸಂಗಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ.

                                          ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ

>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>

ತಪೋವನ 31; 

“ಈಗಾಗಲೇ ನಮ್ಮಗಳ ಮಧ್ಯದಲ್ಲಿ ವಿದ್ಯಾರ್ಥಿ, ಉದ್ಯೋಗಾರ್ಥಿ, 

ಆದಾಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಯಾಗಿದೆ. ಈಗ ಸಂಸ್ಕಾರಾರ್ಥಿ, ಸಂಯಮಾರ್ಥಿ, ಸತ್ಸಂಗಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ. ನಮ್ಮಗಳ ಮಧ್ಯದಲ್ಲಿ ಪಿತ್ರಾರ್ಜಿತಾರ್ಥಿ, ಮಾತ್ರಾರ್ಜಿತಾರ್ಥಿ, ಭಾರ್ಯಾರ್ಜಿತಾರ್ಥಿಗಳು ಸಾಕಷ್ಟು ಜನ ಇದ್ದಾರೆ. ನಾವೀಗ ಸ್ವಯಾರ್ಜಿತಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ.

  “ವಿದ್ಯೆ ಬೇಕು” ಎನ್ನುವಾತ ವಿದ್ಯಾರ್ಥಿ. 

“ಉದ್ಯೋಗ ಬೇಕು” ಎನ್ನುವವ ಉದ್ಯೋಗಾರ್ಥಿ. 

“ತಂದೆ, ತಾತ ಗಳಿಸಿದ್ದೆಲ್ಲ ತನಗೇ ಬೇಕು” ಎನ್ನುವವ ಪಿತ್ರಾರ್ಜಿತಾರ್ಥಿ. 

“ತಾಯಿಯ ಸಂಪಾದನೆಯೆಲ್ಲ ತನಗೇ ಬೇಕು” ಎನ್ನುವವ ಮಾತ್ರಾರ್ಜಿತಾರ್ಥಿ. 

ಹಾಗೇನೇ “ಸಂಸ್ಕಾರ ಬೇಕು” ಎನ್ನುವವ ಸಂಸ್ಕಾರಾರ್ಥಿ. “ಸತ್ಸಂಗ ಬೇಕು” ಎನ್ನುವವ ಸತ್ಸಂಗಾರ್ಥಿ.

ಶಾಲೆಯಲ್ಲಿ ನಮ್ಮ ಮಕ್ಕಳು ವಿಜ್ಞಾನ, ಸಮಾಜವಿಜ್ಞಾನ, ಆಂಗ್ಲ, ಕನ್ನಡ ಭಾಷೆ, ಕಲೆ, ಕಾಮರ್ಸ್‌ಗಳಲ್ಲಿ ಕುಶಲರಾಗುತ್ತಾರೆ. ಆದರೆ ಸಂಸ್ಕಾರದಲ್ಲಿ  ಮಾತ್ರ ಅವರು “ಝೀರೋ” ಆಗುತ್ತಾರೆ. ನಮ್ಮ ಸ್ಕೂಲು, ಕಾಲೇಜುಗಳು ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿಕೊಡುತ್ತಿಲ್ಲ. ನಮ್ಮ ಸ್ಕೂಲು, ಕಾಲೇಜುಗಳು ಮಕ್ಕಳಿಗೆ ಅಂಕ ಗಳಿಸುವುದನ್ನು ಹೇಳಿಕೊಡುತ್ತಿವೆ. ಆದರೆ ಅವರು ಕಲಂಕರಹಿತರಾಗಿ ಬಾಳುವುದನ್ನು ಮತ್ತು ನಿಷ್ಕಳಂಕರಾಗಿ ಬದುಕುವುದನ್ನು ಹೇಳಿಕೊಡುತ್ತಿಲ್ಲ. 

ಸಿನೇಮಾ ಹೀರೋ ಆಗುವುದು, ಬೇರೆ ಅಂಥ, ಇಂಥವಿಷಯಗಳಲ್ಲಿ “ಹೀರೋ” ಆಗುವುದು ತುಂಬ ಸುಲಭ. ಆದರೆ ತನು, ಮನ, ಧನಗಳಲ್ಲಿ ಸಂಸ್ಕಾರವನ್ನು ತುಂಬಿಕೊಂಡು “ಹೀರೋ” ಆಗುವುದಿದೆಯಲ್ಲ, 

ಅದು ತುಂಬ ಮುಖ್ಯ.

ನಮ್ಮ ಮಕ್ಕಳು ಜ್ಞಾನ, ವಿಜ್ಞಾನಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದರೆ “ಹೀರೋ” ಆಗುತ್ತಾರೆ. 

ಅದೇ ಮಕ್ಕಳು ತಮ್ಮ ಬದುಕು, ಬಾಳಿನಲ್ಲಿ ಸಂಸ್ಕಾರವನ್ನು ಅಳವಡಿಸಿಕೊಂಡದ್ದೇ ಆದರೆ ಅವರು “ಹೀರಾ” ಆಗುತ್ತಾರೆ. ಅವರು ಅಮೂಲ್ಯರಾಗುತ್ತಾರೆ. ಮತ್ತವರು ಮೌಲ್ಯಾಧಾರಿತ ಸಂಸ್ಕೃತಿಯ ಹರಿಕಾರರಾಗುತ್ತಾರೆ”  - ಎಂದು ಪರಮಪೂಜ್ಯ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು 

ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಯ ಗಡಿಗಂಟಿಕೊಂಡಿರುವ ನೆಲಮಂಗಲ ತಾಲ್ಲೂಕಿನ ಸೋಮಪುರ ಹೋಬಳಿಗೆ ಸೇರಿದ ಹಳೇ ನಿಜಗಲ್ ಗ್ರಾಮದ ಬಳಿ ಇರುವ ಶ್ರೀ ಉದ್ದಾನ ವೀರಭದ್ರಸ್ವಾಮಿ ದೇವಸ್ಥಾನದ ಹತ್ತಿರವಿರುವ ತಪೋವನದಲ್ಲಿ 

ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ “ಸಂಸ್ಕಾರಬೋಧ” ಒಂದು ದಿನದ ಶಿಬಿರ ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ “ರಸಪ್ರಶ್ನೆ” (ಕ್ವಿಜ್) ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿಕೊಂಡು ಆಶೀರ್ವಚನವನ್ನು ನೀಡುತ್ತ ಈ ಮೇಲಿನ ಮಾತುಗಳನ್ನು ಹೇಳಿದರು. 

“ಸಂಸ್ಕಾರಬೋಧ” ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿದ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಸಿದ್ಧಪ್ಪರವರು ಮಾತನಾಡುತ್ತ, 

“ಮಕ್ಕಳು ಜ್ಞಾನ-ವಿಜ್ಞಾನಗಳ ಕೂಡಲಸಂಗಮವಾಗಬೇಕು. 

ವಿಜ್ಞಾನ ಇವತ್ತು ವಿಶ್ವದಲ್ಲಿಯೇ ನಮ್ಮನ್ನು ಪ್ರಥಮರನ್ನಾಗಿಸಿದೆ. 

ಚಂದ್ರಯಾನ - ೩ರ ಸಾಧನೆ ಸಾಮಾನ್ಯದ್ದಲ್ಲ. ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರಗಳು ಮಾಡಲಾಗದ ಸಾಧನೆಯನ್ನು ಭಾರತ ಮಾಡಿತೋರಿಸಿದೆ. ಭಾರತವನ್ನು ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಹೆಚ್ಚು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ವಿದ್ಯಾರ್ಥಿಗಳಾದ ನಿಮ್ಮ ಮೇಲಿದೆ. 

ಭಾರತ ಬಾಹ್ಯಾಕಾಶದ ಕಿಂಗ್ ಆಗಬೇಕು; ಅದು ಬಾಹ್ಯಾಕಾಶದ ಪ್ರಭುವಾಗಬೇಕು. 

ಆರ್ಯಭಟನೆಂಬ ನಮ್ಮ ದೇಶದ ವಿಜ್ಞಾನಿ ವಿಜ್ಞಾನಕ್ಷೇತ್ರದ ಹತ್ತು ಹಲವು ಮೊದಲುಗಳಿಗೆ ನಾಂದಿಹಾಡಿದ್ದಾನೆ. ಆರ್ಯಭಟನನ್ನು ಪ್ರೇರಣೆಯಾಗಿಸಿಕೊಂಡು ನೀವೆಲ್ಲ ವಿಜ್ಞಾನಕ್ಷೇತ್ರದಲ್ಲಿ ಮುಂದುವರಿಯಬೇಕು” ಎಂದು ಹೇಳಿದರು. 

ಉದ್ಯಮಿ ಶ್ರೀ ಚಿದಾನಂದರವರು ಮಾತನಾಡುತ್ತ,

“ಭಾರತದ ಸಂಸ್ಕತಿ ಬಹುದೊಡ್ಡದು. ಭಾರತ ಬಹುಸಂಸ್ಕೃತಿಯ ನಾಡು. 

ಬೇರೆ ದೇಶದ ಜನಗಳು ಇನ್ನೂ ಕಣ್ಣುಬಿಡದ ಕಾಲಘಟ್ಟದಲ್ಲಿ ನಾವು ಅತ್ಯಾಧುನಿಕ ನಾಗರಿಕ ಸಮಾಜವನ್ನು ಕಟ್ಟಿಕೊಂಡಿದ್ದೆವು. ಬೇರೆ ದೇಶಗಳು ಕಣ್ಣುಬಿಡದ ಕಾಲದಲ್ಲಿ ನಾವು ಪ್ರಪಂಚದ ಆಗುಹೋಗುಗಳಿಗೆ ಕಣ್ಣಾಗಿದ್ದೆವು.

ಭಾರತ ಜ್ಞಾನ, ವಿಜ್ಞಾನ, ತತ್ತ್ವಜ್ಞಾನ, ಈ ಎಲ್ಲ ಕ್ಷೇತ್ರಗಳಲ್ಲೂ ತನ್ನ ಮೊದಲ ಪದಚಿಹ್ನೆಗಳನ್ನು ಮೂಡಿಸಿದೆ.

ನಮ್ಮ ವಿಜ್ಞಾನಿಗಳು ಅಂಗೈಯಲ್ಲಿ ಅರಮನೆಯನ್ನು ತೋರಿಸುತ್ತಾರೆ. ನಮ್ಮ ದೇಶದಲ್ಲಿನ ಜ್ಞಾನಿಗಳು ಕಾಸಿಲ್ಲದೇನೇ ಕೈಲಾಸ ತೋರಿಸಿದರೆ ನಮ್ಮ ವಿಜ್ಞಾನಿಗಳು ಕಡಿಮೆ ಕಾಸಿನಲ್ಲಿ ಚಂದ್ರನಂಗಳ ಮತ್ತು ಮಂಗಳನಂಗಳದಲ್ಲಿ ಭಾರತದ ಬಾವುಟವನ್ನು ಹಾರಿಸಿಬರುತ್ತಾರೆ” ಎಂದು ಹೇಳಿದರು.

ಮೊದಲ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ನಿಖಿಲ ಶರ್ಮಾರವರು ಮಾತನಾಡುತ್ತ,

“ಭಾರತ ಧರ್ಮಭೂಮಿ, ಕರ್ಮಭೂಮಿ ಅಷ್ಟೇ ಅಲ್ಲ, ಭಾರತ ತ್ಯಾಗಭೂಮಿ, ಭಾರತ ವೀರಭೂಮಿ ಕೂಡ ಅಹುದು. ಭಾರತ ತ್ಯಾಗ-ಭೋಗಗಳ ಮಹಾಸಂಗಮ. ಭಾರತಕ್ಕೆ ಬಹುದೊಡ್ಡ ಪರಂಪರೆ ಇದೆ. 

ಭಾರತ ಹಲವು ಕ್ಷೇತ್ರಗಳಲ್ಲಿ ಮರೆಯಲಾಗದ ಮಾಣಿಕ್ಯಗಳನ್ನು ಅಪ್ರತಿಮ ದೇಶಭಕ್ತರನ್ನು ಹೊಂದಿದ್ದ 

ಈ ದೇಶದಲ್ಲಿ ನಮ್ಮ ಮುಂದಿನ ತರುಣಪೀಳಿಗೆಯು ಕೂಡ ದೇಶಭಕ್ತಿಯನ್ನು ಬೆಳೆಯಿಸಿಕೊಂಡು ದೇಶಭಕ್ತರಾಗಿ ಬೆಳೆಯಬೇಕಾಗಿದೆ ಮತ್ತು ದೇಶಭಕ್ತರಾಗಿ ಉಳಿಯಬೇಕಾಗಿದೆ. ಅದೇನಿದ್ದರೂ ದೇಶ ಮೊದಲು. ಉದ್ದೇಶ, ಉಪದೇಶ ನಂತರ” ಎಂದು ಹೇಳಿದರು. 

ದ್ವಿತೀಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಾಗಡಿಯ 

ಪ್ರೊ. ರಾಜಣ್ಣನವರು ಮಾತನಾಡುತ್ತ,

``ಗುರುಹಿರಿಯರನ್ನು ಗೌರವಿಸಿ. ತಂದೆ, ತಾಯಿಗಳಿಗೆ ನಿತ್ಯದಲ್ಲೂ ನಮಸ್ಕಾರಮಾಡಿ. ವೇಷಭೂಷಣಗಳಲ್ಲಿ ಭಾರತೀಯತೆ ತುಂಬಿಕೊಂಡಿರಲಿ. 

ಭಾರತೀಯ ಸಂಸ್ಕೃತಿಯ “ಅ ಬ ಕ” ಮತ್ತು 

“ಅ ಆ ಇ ಈ”...ಗಳನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬೇಡಿ. ಆಧುನಿಕತೆಯ ಭರಾಟೆಯಲ್ಲಿ ದೇಶದ ಘನತೆ, ಗೌರವಕ್ಕೆ ಚ್ಯುತಿತರುವುದು ಬೇಡ. ನಮ್ಮ ನಡೆ, ನುಡಿಗಳಿಂದ ನಮ್ಮ ಸಂಸ್ಕೃತಿಯನ್ನು ಶ್ರೀಮಂತಿಸಬೇಕಾಗಿದೆ.

ಮೊಬೈಲ್‌ನ್ನು ಎಷ್ಟು ಸಾಧ್ಯವೋ ಅಷ್ಟು ಹಿತಮಿತವಾಗಿ ಬಳಸಿ. ತೀರ ಇತ್ತೀಚಿಗಷ್ಟೇ ಪರಿಚಯವಾದ  ಮೊಬೈಲ್ ಮತ್ತು ಸ್ಮಾರ್ಟ್ ಫೋನ್‌ಗಳು ನಮ್ಮ ಸಮಯ, ಸಂಯಮ ಮತ್ತು ಹಳೆಯ ಸಂಬಂಧಗಳನ್ನು ತಿಂದುಹಾಕಿದೆ. ಈ ಮೊದಲು “ಅಲ್ಪರ ಸಂಗ; ಅಭಿಮಾನಭಂಗ” ಎಂದು ಹೇಳುತ್ತಿದ್ದರು. ಈಗ “ಮೊಬೈಲ್‌ಸಂಗ ಮರ್ಯಾದಾಭಂಗ” ಎಂದು ಹೇಳುವಂತಾಗಿದೆ. ಗುರು ಮತ್ತು ಗುರಿ ಎರಡನ್ನೂ ದೇವರೆಂದು ಭಾವಿಸಿ ಮುನ್ನಡೆಯುತ್ತಿರಿ” ಎಂದು ಹೇಳಿದರು. 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ “ತನುಜ” ವಿನೂತನ ಚಲನಚಿತ್ರದ ತರುಣ ನಿರ್ದೇಶಕರಾದ 

ಶ್ರೀ ಹರೀಶ್‌ಕುಮಾರ್‌ರವರು ಮಾತನಾಡುತ್ತ,

“ದೇವರು ಪ್ರತಿಭಾವಂತರ ಕೈಬಿಡುವುದಿಲ್ಲ. ಕಷ್ಟಗಳು ಬರಬಹುದು. ಎಡರು, ತೊಡರುಗಳು ಉಂಟಾಗಬಹುದು. ಆದರೂ ಧೈರ್ಯ ಕಳೆದುಕೊಳ್ಳದೆ ಮುನ್ನುಗ್ಗಬೇಕು. ನಮ್ಮಲ್ಲಿ ದೃಢತೆ ಮತ್ತು ತೀವ್ರವಾದ ಇಚ್ಛಾಶಕ್ತಿ ಇದ್ದರೆ ನಾವು ನಂಬಿದ ದೇವರೇ ಮನುಷ್ಯರೂಪ ತಳೆದು ನಮ್ಮ ಸಹಾಯಕ್ಕೆ ಬರುತ್ತಾನೆ. ನಮಗಾಗ “ದೈವಂ ಮಾನುಷರೂಪೇಣ” ಎಂಬ ಮಾತು ಅನುಭವಕ್ಕೆ ಬರುತ್ತದೆ” ಎಂದು ಹೇಳಿದರು.

ಬೆಂಗಳೂರಿನ ಸಂಯಮ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀಯುತ ಡಾ. ಧನ್ವಂತರಿ ಒಡೆಯರ್‌ರವರು,

“ಯೋಗಾಯೋಗವನ್ನು ಅವಲಂಬಿಸಿಕೊಂಡಿರುವುದಕ್ಕಿಂತ ಯೋಗಜೀವನವನ್ನು ಅವಲಂಬಿಸಿಕೊಂಡಿರುವುದು 

ಶ್ರೇಯಸ್ಕರ. ಯೋಗ ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ವಸ್ಥರನ್ನಾಗಿ ಇಡುತ್ತದೆ. ಯೋಗಮಾಡುವುದನ್ನು ನಿಮ್ಮ ದೈನಂದಿನ ದಿನಚರಿಯನ್ನಾಗಿಸಿಕೊಳ್ಳಬೇಕು” ಎಂದು ಹೇಳಿದರು. 

ಹೋಟಲ್ ಉದ್ಯಮಿ ಮತ್ತು ಸಿ. ವಿ. ಎಮ್. ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ಸಿ. ವಿ. ಮಹದೇವಯ್ಯನವರು,

“ಇಚ್ಛಾಶಕ್ತಿಯೊಂದಿದ್ದರೆ ಏನೆಲ್ಲ ಸಾಧಿಸಬಹುದು. ನಮ್ಮ ವಿಷಯದಲ್ಲಿ ಬೇರೆಯವರು ಅದೆಷ್ಟೇ ನಿರಾಶೆಯಿಂದ ಮಾತನಾಡಿದರೂ ನಾವು ನಮ್ಮ ವಿಷಯದಲ್ಲಿ ನಿರಾಶೆಗೆ ಒಳಗಾಗಬಾರದು. ನಾವು ಏನೇ ಕಳೆದುಕೊಂಡರೂ ಸಹ ಆತ್ಮವಿಶ್ವಾಸವೊಂದಿದ್ದರೆ ಮತ್ತೆ ನಮ್ಮನ್ನು ನಾವು ಕಟ್ಟಿಕೊಳ್ಳಬಹುದು” ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ, 

ಸ್ವಾಮೀಜಿಯವರು ಮುಖ್ಯ ಅತಿಥಿಗಳನ್ನು ಹಾಗೂ ಶಿಬಿರದ ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಿ ಚಿತ್ರನಿರ್ದೇಶಕ ಶ್ರೀ ಹರೀಶ್‌ಕುಮಾರ್, ಸಂಯಮ ಟ್ರಸ್ಟ್ ಅಧ್ಯಕ್ಷ ಡಾ. ಧನ್ವಂತರಿ ಒಡೆಯರ್‌ರವರನ್ನು ಅಭಿನಂದಿಸಿ ಸತ್ಕರಿಸಿದರು. 

ಸಮಾರಂಭಕ್ಕೆ ಮೊದಲು ಶ್ರೀಮಠದ ವಿದ್ಯಾರ್ಥಿ ಸಚ್ಚಿದಾನಂದ ವೇದಘೋಷವನ್ನು ಮಾಡಿದರು.

ಕುಮಾರಿ ಅನ್ವಿತಾ ಮತ್ತು ಶ್ರೀಮತಿ ಶಾಂತಲಾ ಉಮೇಶ್‌ರವರು ಪ್ರಾರ್ಥನಾಗೀತೆಗಳನ್ನು ಹೇಳಿದರು. 

ರಸಪ್ರಶ್ನಾ ಕಾರ್ಯಕ್ರಮದ ರೂವಾರಿ ಮತ್ತು ಮುನ್ನೆಲೆಯಲ್ಲಿ ನಿಂತು ಎಲ್ಲ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದ ಶ್ರೀ ಆರ್. ಎಸ್. ಉಮೇಶ್‌ರವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. 

ಶ್ರೀ ವೀರೇಶ್ ಮಠಪತಿಯವರು ವಂದನಾರ್ಪಣೆಯನ್ನು ಮಾಡಿದರು.

ತಪೋವನದಲ್ಲಿ ೧೦ನೇ ತರಗತಿಯ ಮಕ್ಕಳಿಗಾಗಿ ಏರ್ಪಡಿಸಿದ 

“ರಸಪ್ರಶ್ನಾ” ಸ್ಪರ್ಧಾ ಕಾರ್ಯಕ್ರಮದಲ್ಲಿ ತುಮಕೂರಿನ ಚೇತನಾ ವಿದ್ಯಾಮಂದಿರ ವಿದ್ಯಾರ್ಥಿ 

ರೋಹಿತ್ ಸಿ. ಎಮ್. ಮತ್ತು ಈಶ್ವರ್ ಕೆ ಅಯ್ಯರ್ ಪ್ರಥಮ ಸ್ಥಾನವನ್ನು ಪಡೆದರೆ 

ತುಮಕೂರಿನ ಅತ್ತಿಮಬ್ಬೆ ವಿದ್ಯಾಮಂದಿರದ ವಿದ್ಯಾರ್ಥಿ ಅನೂಪ್ ಜೈನ್ ಮತ್ತು ಮಾನ್ಯ. ಬಿ. ದ್ವಿತೀಯ ಸ್ಥಾನವನ್ನು ಹಾಗೂ ಪ್ರುಡೆನ್ಸ್ ಇಂಟರ್‌ನ್ಯಾಶನಲ್ ಶಾಲೆಯ ವಿದ್ಯಾರ್ಥಿ ಯಶಸ್ ಮತ್ತು ಪ್ರಗತಿ
ಹೆಚ್. ಪಿ. ತೃತೀಯ ಸ್ಥಾನವನ್ನು ಪಡೆಯುವ ಮೂಲಕ ತಮ್ಮ ಶಾಲೆಗಳಿಗೆ ಪ್ರಥಮ, ದ್ವಿತೀಯ,
ತೃತೀಯ ಶೀಲ್ಡ್‌ಗಳನ್ನು ದೊರಕಿಸಿಕೊಟ್ಟರು. 

ಹಾಗೆಯೇ ವೈಯಕ್ತಿಕವಾಗಿ ಅವರು ತುಮಕೂರು ಹಿರೇಮಠ ಮತ್ತು ತಪೋವನ ಹಾಗೂ ಕಾರ್ಯಕ್ರಮದ ಪ್ರಾಯೋಜಕರಿಂದ ಪ್ರಶಸ್ತಿಪತ್ರ, ಬಹುಮಾನ, ಬುಕ್ಸ್ ಮತ್ತು ಕ್ವಿಜ್‌ಗಿಫ್ಟ್‌ಗಳನ್ನು ಪಡೆದುಕೊಂಡರು.

ರಸಪ್ರಶ್ನಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರ ಮತ್ತು ಸಮಾಧಾನಕರ ಬಹುಮಾನಗಳನ್ನು ಕೊಡಲಾಯಿತು. 

ಹಿರೇಹಳ್ಳಿಯ ಸುಮತಿ ಇಂಗ್ಲೀಷ್ ಶಾಲೆಯಿಂದ ಆಗಮಿಸಿದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಡಾಬಸ್‌ಪೇಟೆಯ ವಿದ್ಯಾಸ್ಫೂರ್ತಿ ಶಾಲೆಯಿಂದ ಆಗಮಿಸಿದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದು ದಿನದ ಸಂಸ್ಕಾರಬೋಧ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

೨೦೦ ಶಾಲಾ ವಿದ್ಯಾರ್ಥಿಗಳು ಹಾಗೂ ರಸಪ್ರಶ್ನಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು, ಆಯಾ ಶಾಲೆಯ ಅಧ್ಯಾಪಕರುಗಳು ಹಾಗೂ ಮುಖ್ಯ ಅತಿಥಿ, ಆಹ್ವಾನಿತರು ಮತ್ತು ಹಿರೇಮಠದ ಭಕ್ತಾದಿಗಳು, ಇವರೆಲ್ಲ ಸೇರಿ ಸುಮಾರು ೩೨೫ಕ್ಕೂ ಹೆಚ್ಚು ಜನಗಳು ಒಂದು ದಿನದ “ಸಂಸ್ಕಾರಬೋಧ” ಶಿಬಿರದಲ್ಲಿ ಪಾಲ್ಗೊಂಡರು.

ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ, ಅತಿಥಿ, ಅಭ್ಯಾಗತ, ಅಧ್ಯಾಪಕರುಗಳಿಗೆ ಮತ್ತು ಭಕ್ತಾದಿಗಳಿಗೆ ಉದ್ಯಮಿ ಶ್ರೀ ತುರುವೆಕೆರೆ ಚಿದಾನಂದರವರು ಪುದೀನಾರಸ ಹಾಗೂ ಪ್ರಸಾದದ ದಾಸೋಹ ವ್ಯವಸ್ಥೆಯನ್ನು ಮಾಡಿದ್ದರು.

ಶ್ರೀ ನಂಜುಂಡೇಶ್ವರ ಹೋಟಲ್ ಮತ್ತು ಬೇಕರಿಯಿಂದ ಶ್ರೀ ಸಿ. ವಿ. ಮಹದೇವಯ್ಯನವರು ನೀಡಿದ

ಬನ್‌ಜಾಮ್‌ನ್ನು ವಿದ್ಯಾರ್ಥಿಗಳಿಗೆ ಹಾಗೂ ಎಲ್ಲ ಆಗಮಿಸಿದ ಎಲ್ಲ 350 ಜನಕ್ಕೂ ವಿತರಿಸಲಾಯಿತು.  

ಶ್ರೀ ವೀರೇಶ್ ಮಠಪತಿಯವರು ಮತ್ತು ಅವರ ಸ್ನೇಹಿತರು ರಕ್ಷಾಬಂಧನ ಕಾರ್ಯಕ್ರಮದ ಅಡಿಯಲ್ಲಿ ಎಲ್ಲರಿಗೂ 325ಕ್ಕೂ ಹೆಚ್ಚು ರಕ್ಷಾನೂಲುಗಳನ್ನು ನೀಡಿ ಪರಸ್ಪರರು ಪರಸ್ಪರರಿಗೆ
ರಾಖಿ ಕಟ್ಟುವುದಕ್ಕೆ ಅವಕಾಶವನ್ನು ಮಾಡಿಕೊಡುವ ಮೂಲಕ ರಕ್ಷಾಬಂಧನ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು. 


Comments

Popular posts from this blog