16th September 2023


 ಗಣಪತಿಯದು ಹಕ್ಕಿಗಾಗಿ ಹೋರಾಟ....

ಅಸುರರು ದೇವತೆಗಳ ವಿರುದ್ಧ ಯುದ್ಧಸಾರಿದ್ದಾರೆ. 
ಅಸುರರನ್ನು ಎದುರಿಸುವ ಶಕ್ತಿ ದೇವತೆಗಳಲ್ಲಿ ಇಲ್ಲ.

ಏಕೆಂದರೆ ದೇವತೆಗಳು ಉಂಡುಟ್ಟುಕೊಂಡು 
ಸ್ವರ್ಗದಲ್ಲಿ ಸುಖವಾಗಿ ಇದ್ದಾರೆ. 

ಸ್ವರ್ಗದಲ್ಲಿರೋದರಿಂದ ದೇವತೆಗಳಿಗೆ 
ತೊಂದರೆ, ತಾಪತ್ರಯಗಳ ಅನುಭವವಿಲ್ಲ.
 ದೇವತೆಗಳು ಅಪಾಯ, ಆತಂಕಗಳನ್ನು 
ಎದುರಿಸುವ ಮನಸ್ಥಿತಿಯನ್ನು ಕಳೆದುಕೊಂಡಿದ್ದಾರೆ. 


ಭೂಮಿಯಲ್ಲಿರುವ ಮಾನವರಿಗೆ ಕಷ್ಟ, ಕಾರ್ಪಣ್ಯ, 
ತೊಂದರೆ, ತಾಪತ್ರಯಗಳ ಅನುಭವ ಉಂಟು. 

ಮಾನವರಿಗೆ ಕಷ್ಟ, ಸುಖಗಳ ಅನುಭವವಿದೆ. 

ಮಾನವರ ಎದೆ ದೇವತೆಗಳ ಎದೆಗಿಂತ ಗಟ್ಟಿ. 

ದೇವತೆಗಳಿಗಿಂತ ಮಾನವರು ಸಾಹಸಿಗಳು 
ಮತ್ತು ಹೆಚ್ಚು ಧೈರ್ಯವಂತರು. 

ಈ ಮೊದಲೆಲ್ಲ ದೇವಾಸುರರ ಮಧ್ಯದಲ್ಲಿ ಯುದ್ಧಗಳು  ಜರುಗಿದಾಗ ಭೂಲೋಕದ ರಾಜ, ಮಹಾರಾಜರುಗಳೇ ಮುಂಚೂಣಿಯಲ್ಲಿ ನಿಂತುಕೊಂಡು ದೇವತೆಗಳ ಪರವಾಗಿ ಯುದ್ಧ ಮಾಡಿದುದು ಉಂಟು. 
ದೇವತೆಗಳಲ್ಲಿ ಮಾನವರ ಹಾಗೆ ಕಷ್ಟವನ್ನು ಸಹಿಸುವ ಶಕ್ತಿಯಾಗಲಿ, ಮತ್ತದನ್ನು ಭರಿಸುವ ಶಕ್ತಿಯಾಗಲಿ ಇಲ್ಲ. ಇದು ಕಾರಣ, ದೇವತೆಗಳು ಏನೇ ಕಷ್ಟಬಂದರೂ ಆ ಕೂಡಲೇ ತಮ್ಮ “ಹೈಕಮಾಂಡ್” ತ್ರಿಮೂರ್ತಿಗಳ ಬಳಿ ಹೋಗಿ ತಲೆ ಬಗ್ಗಿಸಿಕೊಂಡು ಕೈ ಮುಗಿದುಕೊಂಡು ನಿಲ್ಲುತ್ತಾರೆ. 
ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳೇ ದೇವತೆಗಳ “ಹೈಕಮಾಂಡು”. 
ಈ ಹೈಕಮಾಂಡಿಗೆ ಅದೇನು ಕಾರಣವೋ ಗೊತ್ತಿಲ್ಲ, ದೇವತೆಗಳ ವಿಷಯದಲ್ಲಿ ಹೆಚ್ಚು ಪ್ರೀತಿ ಮತ್ತು ಹೆಚ್ಚು ವಾತ್ಸಲ್ಯ. ದಾನವರು, ಮಾನವರು ಅದೆಷ್ಟೇ ತಪಸ್ಸು ಮಾಡಿದರೂ, ಶತಾಯ ಗತಾಯ ಮಾಡಿದರೂ ಒಲಿಯದ “ಹೈಕಮಾಂಡು” ದೇವತೆಗಳ ವಿಷಯದಲ್ಲಿ ಮಾತ್ರ ಹೆಚ್ಚು ಬೇಗನೇ ದ್ರವಿತರಾಗುತ್ತಾರೆ.   
ಅಸುರರಿಂದ ದಿಢೀರನೇ ಯುದ್ಧಭೀತಿ ಆವರಿಸುತ್ತಲೇ ದೇವತೆಗಳು ಶಿವನಿಗೆ ಶರಣುಹೋಗುತ್ತಾರೆ. 
ಶಿವನ ಮುಂದೆ “ಅಯ್ಯಾ, ದಯ್ಯಾ” ಎನ್ನುತ್ತಲೇ ಕರುಣಾಳುವಾದ ಶಿವ ಕೂಡಲೇ ಆರ್ದ್ರನಾಗುತ್ತಾನೆ.
ಆತ ದೇವತೆಗಳ ಪರವಾಗಿ ಯುದ್ಧಮಾಡುವುದಕ್ಕೆ ಸಿದ್ಧನಾಗುತ್ತಾನೆ. 
ಶಿವನಾಣತಿಯಂತೆ ಸೇನೆ ಸಿದ್ಧವಾಗುತ್ತದೆ. ಎಲ್ಲರೂ ರಣೋತ್ಸಾಹದಿಂದ ಯುದ್ಧಕ್ಕೆ ಹೊರಡುತ್ತಾರೆ. 
ಮಾರ್ಗಮಧ್ಯದಲ್ಲಿ ವಿಘ್ನಗಳೋ ವಿಘ್ನಗಳು!! ದಾರಿ ಸಾಗುತ್ತಲೇ ಇಲ್ಲ. ಮುನ್ನುಗ್ಗಿ ಹೋಗುವುದಕ್ಕೆ ಆಗುತ್ತಲೇ ಇಲ್ಲ. ಏನಾದರೂ ಒಂದು ತೊಂದರೆ, ಎಡವಟ್ಟು ಆಗುತ್ತಲೇ ಇದೆ. ಅದೇನೇ ಹರಸಾಹಸ ಮಾಡಿದರೂ ಯುದ್ಧಭೂಮಿಯನ್ನು ತಲುಪುವುದಕ್ಕೆ ಆಗುತ್ತಿಲ್ಲ. ಅಷ್ಟು ಮಾತ್ರವಲ್ಲ, ಸ್ವತಃ ಶಿವನ ಯುದ್ಧರಥದ ಗಾಲಿಗಳು ಕೂಡ ಉರುಳುತ್ತಿಲ್ಲ. ಅವು ಪದೇ ಪದೇ ಹಾನಿಗೊಳಗಾಗುತ್ತಿವೆ. ಎಲ್ಲರಿಗೂ ಯೋಚನೆ ಶುರುವಾಯಿತು. 
ಶಿವನೂ ಸಹ “ಅದೇಕೆ ಹೀಗೆ?” ಎಂದು ಯೋಚಿಸತೊಡಗುತ್ತಾನೆ. 
ಅಷ್ಟರಲ್ಲಿ ನಾರದರ ಆಗಮನವಾಗುತ್ತದೆ. ನಾರದರಿಗೆ ಪರಿಸ್ಥಿತಿಯ ಅರಿವಾಗುತ್ತದೆ. 
ಅವರು ಶಿವನ ಬಳಿಗೆ ಬಂದು ಅರಿಕೆ ಮಾಡಿಕೊಳ್ಳುತ್ತಾರೆ, 
“ಪರಮೇಶ್ವರಾ, ತಾವು ಯುದ್ಧಕ್ಕೆ ಹೊರಡುವ ಮೊದಲು ಗಣಪತಿಯನ್ನು ಪೂಜಿಸಿದ್ದೀರಾ?” ಎಂದು. 
ಶಿವ ಇಲ್ಲವೆಂದು ತಲೆಯಲ್ಲಾಡಿಸುತ್ತಾನೆ. 
ಆಗ ನಾರದರು, 
“ಮಹೇಶ್ವರಾ, ತಾವು ಗಣಪತಿಯನ್ನು ಪೂಜಿಸದೆ ಯುದ್ಧಕ್ಕೆ ಹೊರಟಿರುವುದರಿಂದಲೇ ತಮಗೆ ಇಷ್ಟೊಂದೆಲ್ಲ ವಿಘ್ನಗಳು ಎದುರಾಗುತ್ತಿವೆ. ತಾವು ಗಣಪತಿಯನ್ನು ಪೂಜಿಸಿ ಯುದ್ಧಕ್ಕೆ ಹೊರಡಬೇಕಿತ್ತು. ಯಾವುದೇ ಕೆಲಸ, ಕಾರ್ಯ ಮಾಡಬೇಕಾದರೂ ಗಣಪತಿಯನ್ನು ಪೂಜಿಸಿಯೇ ಪ್ರಾರಂಭಮಾಡಬೇಕು ಎಂದು ತಾವೇ ಆದೇಶವನ್ನು ಹೊರಡಿಸಿರುವಿರಿ. ತಮ್ಮ ಆದೇಶವನ್ನು ತಾವೇ ಮರೆತಂತಿದೆ” ಎಂದು ಶಿವನಿಗೆ ಶಿವನಾದೇಶದ ಕುರಿತು ಎಚ್ಚರಿಸುತ್ತಾರೆ.
ಪರಮೇಶ್ವರನಿಗೆ ತನ್ನ ಆದೇಶದ ನೆನಪಾಗುತ್ತದೆ. ಶಿವನಿಗೆ ಮುಜುಗರವಾಗುತ್ತದೆ. 
ಆ ಕೂಡಲೇ ಶಿವನು ತನ್ನ ಸೇನೆಗೆ ಗಣಪತಿಯನ್ನು ಪೂಜಿಸಲು ಆದೇಶ ನೀಡುತ್ತಾನೆ. ಸ್ವತಃ ಶಿವನು ತಾನೇ ಮುಂಚೂಣಿಯಲ್ಲಿ ನಿಂತುಕೊಂಡು ಗಣಪತಿಯ ಪೂಜೆಮಾಡುತ್ತಾನೆ. ಗಣಪತಿಯು ಪ್ರಸನ್ನನಾಗುತ್ತಾನೆ. 
ಆತ ತನ್ನ ತಂದೆ ಶಿವನ ಮುಂದೆ ಪ್ರತ್ಯಕ್ಷನಾಗುತ್ತಾನೆ. 
ಗಣಪತಿ ತಂದೆಗೆ ಹೇಳುತ್ತಾನೆ,
“ಅಪ್ಪಾಜಿ, ತಾವೇ ನನಗೆ ಆದಿವಂದಿತನಾಗು. ಆದಿಪೂಜಿತನಾಗು ಎಂದು ಆಶೀರ್ವಾದ ಮಾಡಿರುವಿರಿ. ದೇವ, ದಾನವ, ಮಾನವ ಯಾರೇ ಆಗಲಿ, ನನ್ನನ್ನು ಪೂಜಿಸಿಯೇ ಕೆಲಸವನ್ನು ಪ್ರಾರಂಭಿಸಬೇಕು ಎಂದು ನನಗೆ ತಾವು ವರವನ್ನು ನೀಡಿರುವಿರಿ. ಇದಕ್ಕೆ ಅಮ್ಮನೇ ಸಾಕ್ಷಿ. 
ನನ್ನ ತಾಯಿ ಪಟ್ಟುಹಿಡಿದು ನನಗೆ ಗಣಪದವಿಯನ್ನು ಕೊಡಿಸುವುದರ ಜೊತೆಯಲ್ಲಿ ನನಗೆ ಪ್ರಥಮಪೂಜೆಯ ಗೌರವ ಸಂದಾಯವಾಗುವಂತೆ ಮಾಡಿದ್ದಾಳೆ. ನಾನು ಸಮಸ್ತ ಲೋಕಗಳಲ್ಲಿ ಪ್ರಥಮಪೂಜಿತನಾಗಬೇಕು, ಪ್ರಥಮವಂದಿತನಾಗಬೇಕು - ಎಂಬುವುದು ನನ್ನ ತಾಯಿಯ ಇಚ್ಛೆ; ಅದು ಅವಳ ಬಯಕೆ. 
ನಾನು ಮಾತೃಭಕ್ತ. ತಾಯಿಯ ಮಾತು ನನಗೆ ವೇದವಾಕ್ಯ ಮಾತ್ರವಲ್ಲ; ಅದು ನನಗೆ ವೇದಕ್ಕಿಂತಲೂ ಮುಖ್ಯ. ನನ್ನ ತಾಯಿಗೆ ನೋವಾಗಬಾರದೆಂಬ ಉದ್ದೇಶದಿಂದ ತಾವು ದೇವಲೋಕ, ಮರ್ತ್ಯಲೋಕ, ಪಾತಾಳಲೋಕಗಳಲ್ಲಿ ಯಾವುದೇ ಕೆಲಸ, ಕಾರ್ಯವನ್ನು ಮಾಡುವುದಕ್ಕೆ ಮೊದಲು ಗಣೇಶನನ್ನು ಪೂಜಿಸಬೇಕೆಂದು ಸುತ್ತೋಲೆ ಹೊರಡಿಸಿದ್ದೀರಿ. 
ಮೂರು ಲೋಕಗಳಲ್ಲಿ ಅದೇ ರೀತಿ ನಡೆದುಕೊಂಡುಬರುತ್ತಿದೆ. 
ಎಲ್ಲರೂ ತಮ್ಮ ಆದೇಶವನ್ನು ಶಿರೋಧಾರ್ಯವಾಗಿಸಿಕೊಂಡು ಪಾಲಿಸಿಕೊಂಡು ಬರುತ್ತಿದ್ದಾರೆ. 
ಪ್ರಥಮಪೂಜೆ ನನ್ನ ಹಕ್ಕು. ಆ ರೀತಿ ಶಾಸನವನ್ನು ಮಾಡಿದವರು ತಾವೇ!! ತಾವೇ ತಮ್ಮ ಶಾಸನವನ್ನು ಉಲ್ಲಂಘಿಸಿದರೆ ಹೇಗೆ? ಶಾಸನವನ್ನು ಮಾಡಿದವರೇ ಶಾಸನವನ್ನು ಉಲ್ಲಂಘಿಸತೊಡಗಿದರೆ ಲೋಕಕ್ಕೆ ಒಂದು ಕೆಟ್ಟ ಸಂದೇಶವನ್ನು ರವಾನೆ ಮಾಡಿದಂತಾಗುವುದಿಲ್ಲವೆ? ತಮ್ಮಿಂದಲೇ ತಮ್ಮ ಆದೇಶದ ಉಲ್ಲಂಘನೆ ಆಗಬಾರದೆಂಬ ಕಾರಣದಿಂದ ನಾನು ಯುದ್ಧಮಾರ್ಗದಲ್ಲಿ ವಿಘ್ನಗಳನ್ನುಂಟುಮಾಡಬೇಕಾಯಿತು. 
ನಾನು ನನ್ನ ಹಕ್ಕಿಗಾಗಿ ಹೋರಾಟಮಾಡುತ್ತಿದ್ದೇನೆ. ನಾನು ನನ್ನ ಹಕ್ಕನ್ನು ತಮಗೆ ಜ್ಞಾಪಿಸುತ್ತಲಿದ್ದೇನೆ.
ಶಿವಸಂವಿಧಾನವನ್ನು ಶಿವನೇ ಉಲ್ಲಂಘಿಸಬಾರದು ಅಲ್ಲವೆ? ನನ್ನ ಮಾತೃವಾಕ್ಯವನ್ನು ತಾವು ಉಲ್ಲಂಘಿಸಬಾರದು. 
ನನ್ನ ಅಮ್ಮ, ನಿಮಗೆ ಗೊತ್ತಲ್ಲ? ಅವಳು “ಒಲಿದರೆ ನಾರಿ, ಮುನಿದರೆ ಮಾರಿ”. ಅವಳು “ಒಲಿದರೆ ಗೌರಿ. ಮುನಿದರೆ ಭದ್ರಕಾಳಿ” ಪರಸ್ಪರ ತಮ್ಮಿಬ್ಬರ ಸಂಬಂಧ ಕೂಡ ಕೆಡಬಾರದು. ಅದೂ ಕೂಡ ನನ್ನ ಕಾಳಜಿ. ಜಗತ್ತಿನ ಮಾತಾಪಿತೃಗಳಾದ ತಮ್ಮಲ್ಲಿಯೇ ವೈಮನಸ್ಯ ಬಂದರೆ ಲೋಕದ ಗತಿ ಏನು? 
ಅದಕ್ಕಾಗಿ ನಾನು ಒಂದಷ್ಟು ಈ ರೀತಿ ತಮ್ಮ ಮಾರ್ಗಮಧ್ಯದಲ್ಲಿ ಅಡೆತಡೆಗಳನ್ನುಂಟುಮಾಡುವ ಮೂಲಕ ತಮಗೆ ಪ್ರತಿಭಟನೆಯ ಬಿಸಿಯನ್ನು ಮುಟ್ಟಿಸಬೇಕಾಯಿತು. ಅನ್ಯಥಾ ತಮಗೆ ತೊಂದರೆ ಮಾಡಬೇಕೆಂಬ ಉದ್ದೇಶ ನನ್ನದಾಗಿರಲಿಲ್ಲ. ನನ್ನ ಧಾರ್ಷ್ಟ್ಯಕ್ಕೆ ಕ್ಷಮೆ ಇರಲಿ” ಎಂದು. 
ಗಣಪತಿಯ ಮಾತುಗಳನ್ನು ಕೇಳಿ ಶಿವನ ಹೃದಯ ತುಂಬಿ ಬಂತು. 
ಶಿವ ಗಣಪತಿಯನ್ನು ಪ್ರೀತಿಯಿಂದ ಆಲಂಗಿಸಿಕೊಳ್ಳುತ್ತಾನೆ. 
ಸುಪ್ರಸನ್ನನಾದ ಶಿವ ಹೇಳುತ್ತಾನೆ,
“ಗಣಪತಿ, ನೀನು ಸರಿಯಾದುದನ್ನೇ ಮಾಡಿರುವೆ. ನಿನ್ನ ಕುರಿತು ನನಗೇನೂ ಬೇಸರವಿಲ್ಲ. ಅಹುದು, ಶಾಸನವನ್ನು (ಕಾನೂನು) ಮಾಡಿದ ನಾವುಗಳೇ ಶಾಸನವನ್ನು ಉಲ್ಲಂಘಿಸಿದರೆ ಜನ ಹಾಗೂ ಜಗತ್ತು ಇನ್ನಷ್ಟು ಅಡ್ಡದಾರಿ ಹಿಡಿಯುತ್ತದೆ. ನಮ್ಮ ಮಾತುಗಳಿಗೆ ಮತ್ತು ನಾವು ಮಾಡಿದ ಶಾಸನಗಳಿಗೆ ಮೊದಲು ನಾವು ಬದ್ಧರಾಗಿರಬೇಕು. ನಾವು ದೊಡ್ಡವರು ಏನು ಮಾಡುತ್ತೇವೆಯೋ ಅದನ್ನು ನೋಡಿಬಿಟ್ಟು ಬೇರೆಯವರು ಅದನ್ನು ಅನುಸರಿಸುತ್ತಾರೆ. ದೊಡ್ಡವರು ಹೋದದ್ದೇ ದಾರಿ ಎಂದು ಎಲ್ಲರೂ ಭಾವಿಸುತ್ತಾರೆ. ನಾವುಗಳು ಮಾದರಿಯಾಗಬೇಕು. ಕಾನೂನು ಮಾಡಿದವರು ಮೊದಲು ಕಾನೂನನ್ನು ಪಾಲಿಸಬೇಕು. ಅಹುದು, ನೀನು ಹೇಳಿದ ಹಾಗೆ ನಾನೇ ನನ್ನ ಆದೇಶವನ್ನು ಮರೆತುಬಿಟ್ಟಿದ್ದೆ.
  ನೀನು ಸಕಾಲಕ್ಕೆ ನನ್ನನ್ನು ಎಚ್ಚರಿಸಿದೆ. ಮಗನಾದ ಮಾತ್ರಕ್ಕೆ ತಂದೆ ತಪ್ಪಿದರೆ ತಿದ್ದಬಾರದು ಎಂದೇನಿಲ್ಲ. ಲೋಕದ ಮೊದಲ ತಂದೆ ಮಾಡಿದ ತಪ್ಪನ್ನು ತಿದ್ದಿದ ಮೊದಲ ಮಗ ನೀನು!! ಅಂಥ ಒಂದು ಗೌರವ ಕೂಡ ನಿನಗೆ ಸಂದಾಯವಾಗಲಿ. ನನಗೆ ನಿನ್ನ ಮೇಲಿನ ಪ್ರೀತಿ ಇನ್ನಷ್ಟು, ಮತ್ತಷ್ಟು ಹೆಚ್ಚಿದೆ. ಇನ್ನು ಮುಂದಿನ ದಿನಗಳಲ್ಲಿ ಯಾರೂ ಸಹ ನಿನಗೆ ಮೊದಲಪೂಜೆ ಸಲ್ಲಿಸುವುದನ್ನು ತಪ್ಪಿಸುವುದಿಲ್ಲ” ಎಂದು. 
ಗಣಪತಿ ಅಲಕ್ ನಿರಂಜನ ದೇವತೆ. ಆತ ಯಾರ ಮರ್ಜಿ, ಮುತುವರ್ಜಿಗಳಿಗೆ ಒಳಗಾಗುವುದಿಲ್ಲ.
ಯಾರೇ ತಪ್ಪಿರಲಿ ಅವರನ್ನು ಆತ ದಂಡಿಸುತ್ತಾನೆ. ತಪ್ಪಿದವರು ತಂದೆಯಾದರೂ ಸರಿ, ತಾತನಾದರೂ ಸರಿ, ಅವರಿಗೆ ಗಣಪತಿ ಬುದ್ಧಿ ಕಲಿಸುತ್ತಾನೆ. ಗಣಪತಿ ತಂದೆ ತಪ್ಪಿದರೆ ತಂದೆಗೂ ಪಾಠ ಕಲಿಸುತ್ತಾನೆ; ತಾತ ತಪ್ಪಿದರೆ ತಾತನಿಗೂ ಪಾಠಕಲಿಸುತ್ತಾನೆ. ಆತ ದೇವತೆಗಳು ತಪ್ಪಿದರೆ ದೇವತೆಗಳಿಗೂ ಪಾಠಕಲಿಸುತ್ತಾನೆ. 
ದಾನವರು ತಪ್ಪಿದರೆ ದಾನವರಿಗೂ, ಮಾನವರು ತಪ್ಪಿದರೆ ಮಾನವರಿಗೂ ಪಾಠಕಲಿಸುತ್ತಾನೆ. 
ಅದೊಮ್ಮೆ ಕುಬೇರನಿಗೆ ಸಂಪತ್ತಿನ ಉನ್ಮಾದ ಶುರುವಾಯಿತು. 
ಆತ ಎಲ್ಲರನ್ನೂ ದುಡ್ಡಿನಿಂದ ಕೊಂಡುಕೊಳ್ಳಬಲ್ಲೆ ಎಂದು ಅಂದುಕೊಂಡ. ಅನ್ನಪೂರ್ಣೆ ಇರುವ ಶಿವಪರಿವಾರಕ್ಕೇನೇ ಔತಣಕ್ಕೆ ಆಹ್ವಾನ ನೀಡುತ್ತಾನೆ. ಕುಬೇರನ ಔದ್ಧತ್ಯ ಶಿವನಿಗೆ ಇಷ್ಟವಾಗಲಿಲ್ಲ. ಆತ ಕುಬೇರನ ಔತಣಕ್ಕೆ ಗಣಪತಿಯನ್ನು ಕಳುಹಿಸಿಕೊಡುತ್ತಾನೆ. ಗಣಪತಿ ಕುಬೇರ ಮಾಡಿದ ಅಡುಗೆಯನ್ನೆಲ್ಲ ತಿಂದುಹಾಕುತ್ತಾನೆ. ಅಡುಗೆಪಾತ್ರೆಗಳನ್ನು ಮೊದಲುಮಾಡಿಕೊಂಡು ಇನ್ನೊಂದು, ಮತ್ತೊಂದು ಎಲ್ಲವನ್ನೂ ಗಣಪತಿ ತಿಂದುಹಾಕುತ್ತಾನೆ. ಇನ್ನು ಕುಬೇರನನ್ನು ತಿಂದುಹಾಕುವುದೊಂದೇ ಉಳಿದಿರೋದು!! 
ಕುಬೇರ ಶರಣಾಗತನಾಗುತ್ತಾನೆ. ಗಣಪತಿ ಆತನಿಗೆ ಪಾಠಕಲಿಸುವ ಮೂಲಕ ಆತನ “ಸಿರಿಮದ” ಇಳಿದುಹೋಗುವಂತೆ ಮಾಡುತ್ತಾನೆ. 
ರಾವಣ ಶಿವನ ಆತ್ಮಲಿಂಗವನ್ನು ಕೊಂಡೊಯ್ಯುತ್ತಿರುವಾಗ ಗಣಪತಿ ಮಧ್ಯಪ್ರವೇಶ ಮಾಡಿ ಆತನ ತಪೋಮದವನ್ನು ಇಳಿಸುತ್ತಾನೆ. ರಾವಣನಿಗೆ “ಯಾವುದನ್ನು ಕೇಳಬೇಕು, ಯಾವುದನ್ನು ಕೇಳಬಾರದು” - ಎಂಬ ಕುರಿತು ಪಾಠಮಾಡುತ್ತಾನೆ.  
ಎಡವಿಬಿದ್ದ ತನ್ನನ್ನು ನೋಡಿ ನಕ್ಕ ಚಂದ್ರನಿಗೆ ಗಣಪತಿ ತಕ್ಷಣವೇ ಪಾಠಕಲಿಸುತ್ತಾನೆ. 
ಚಂದ್ರನಿಗೆ ವೃದ್ಧಿಕ್ಷಯದ ಶಾಪಕೊಡುತ್ತಾನೆ. “ಯಾರೇ ಆಗಲಿ ಬಿದ್ದಾಗ ನಗುವುದು ತಪ್ಪು” ಎಂದು ಚಂದ್ರನಿಗೆ ತಿಳುವಳಿಕೆ ಹೇಳಿ ಅರಿವು ಮೂಡಿಸುತ್ತಾನೆ. ಯಾರೇ ಆಗಲಿ ಬಿದ್ದಾಗ ಎತ್ತುವುದು ಧರ್ಮ.
ಯಾರೇ ಆಗಲಿ ಬಿದ್ದಾಗ ನಗುವುದು ಅಧರ್ಮ ಮತ್ತು ಅದು ಅಸಹ್ಯ ಕೂಡ. 
ತಪ್ಪಿದವರಿಗೆ ಪಾಠಕಲಿಸುವುದು ಗಣಪತಿಯ ಹುಟ್ಟುಗುಣ. ಅದನ್ನು ಆತ ಚಾಚೂತಪ್ಪದಂತೆ ಮಾಡುತ್ತಾನೆ.
ನಮ್ಮ ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಗಣಪತಿ ಒಂದು ಕಿವಿಮಾತನ್ನು ಹೇಳುತ್ತಾನೆ.
ಅದೇನೆಂದರೆ, ವಿದ್ಯಾರ್ಥಿಗಳು ಒಮ್ಮೆ ಓದಲು, ಬರೆಯಲು ಕುಳಿತರೆ ಮಧ್ಯದಲ್ಲಿ ಎದ್ದು ಹೋಗಬಾರದು. 
ಮತ್ತೆ ಮತ್ತೆ ಎದ್ದೆದ್ದು ಅಲ್ಲಿ ಇಲ್ಲಿ ಅಡ್ಡಾಡಬಾರದು. ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿಚಲಿತರಾಗಬಾರದು. 
ಇದಕ್ಕೆ ಗಣಪತಿ ತನ್ನನ್ನೇ ತಾನು ಸಾಕ್ಷಿಯಾಗಿಸಿಕೊಂಡು ಪಾಠಮಾಡಿದ್ದಾನೆ.
ವ್ಯಾಸರು ಮಹಾಭಾರತವನ್ನು ಹೇಳುತ್ತಿರುವಾಗ ಗಣಪತಿಯೇ ಅದನ್ನು ಬರೆಯುತ್ತಿರುತ್ತಾನೆ. ಬರೆಯುವ ಮಧ್ಯದಲ್ಲಿ ಲೆಕ್ಕಣಿಕೆ ಕೈಕೊಟ್ಟಾಗ ಗಣಪತಿ ಎದ್ದೇಳದೆ ತನ್ನೊಂದು ದಂತವನ್ನು ಕಿತ್ತುಕೊಂಡು ಅದನ್ನೇ ಲೆಕ್ಕಣಿಕೆಯನ್ನಾಗಿಸಿಕೊಂಡು ಬರೆಯತೊಡಗುತ್ತಾನೆ. ಇದು ಗಣಪತಿಯ ಏಕಾಗ್ರತೆ ಮತ್ತು ದೃಢತೆ. 
ಗಣಪತಿಯ ಈ ತೆರನಾದ ಏಕಾಗ್ರತೆ ಮತ್ತು ದೃಢತೆಗೆ ಸ್ವತಃ ವ್ಯಾಸರೇ ಮಾರುಹೋಗುತ್ತಾರೆ. 
ನಮ್ಮ ಮಕ್ಕಳು ಕೂಡ ಗಣಪತಿಯ ಹಾಗೆ ತಮ್ಮ ಓದು, ಬರಹಗಳಲ್ಲಿ ಏಕಾಗ್ರತೆಯನ್ನು ಸಾಧಿಸಲಿ ಎಂಬ ಉದ್ದೇಶದಿಂದಲೇ ನಮ್ಮೆಲ್ಲ ತಂದೆ, ತಾಯಂದಿರು ತಮ್ಮ ಮಕ್ಕಳ ವಿದ್ಯಾರಂಭಕ್ಕೆ ಮೊದಲು ಗಣಪತಿಯ ಸ್ತುತಿ ಮಾಡಿಸುತ್ತಾರೆ. 
“ಗಜಾನನಂ ಭೂತಗಣಾಧಿಸೇವಿತಂ ಕಪಿತ್ಥ ಜಂಬೂಫಲಸಾರಭಕ್ಷಿತಂ, ಉಮಾಸುತಂ ಶೋಕವಿನಾಶಕಾರಣಂ ನಮಾಮಿ ವಿಘ್ನೇಶ್ವರ ತವಪಾದಪಂಕಜಮ್” ಎಂಬ ಶ್ಲೋಕದಿಂದಲೇ ಬಹುತೇಕ ಎಲ್ಲ ಮಕ್ಕಳು ವಿದ್ಯಾರಂಭಕ್ಕೆ  ಚಾಲನೆಯನ್ನು ಕೊಡಲಾಗುತ್ತದೆ. 
ಭಾರತೀಯರಿಗೆ ಗಣಪತಿ ಉತ್ಸವ ಮತ್ತು ಉತ್ಸಾಹದ ಪ್ರತೀಕ. ಗಣಪತಿ ಭಾರತೀಯ ಸಂಸ್ಕೃತಿಯ ಅಹಮ್ಮು ಮತ್ತು ಅಸ್ಮಿತೆ. ಗಣಪತಿ ಭಾರತೀಯ ಸಂಸ್ಕೃತಿಯೊಂದಿಗೆ ಓತಪ್ರೋತ. ಗಣಪತಿಯನ್ನು ಯಾರೂ ಸಹ ಗೌಣವಾಗಿಸುವ ಹಾಗಿಲ್ಲ. ಏಕೆಂದರೆ, ನಮ್ಮನ್ನು ಇಕ್ಕಟ್ಟು, ಬಿಕ್ಕಟ್ಟುಗಳಿಂದ ಪಾರುಮಾಡುವವನೇ ಗಣೇಶ.
ಗಣಪತಿ “ಮಾತೃದೇವೋ ಭವ” - ಸಿದ್ಧಾಂತದ ಹರಿಕಾರ. 
ನಮ್ಮ ಗಜಮುಖ ಗಣಪತಿ, ಬಹುಮುಖ ಪ್ರತಿಭೆಯ ಮಹಾಸಂಗಮ.
ಗಣಪತಿ ಮತ್ತು ಶಿವ - ಇವರಿಬ್ಬರೂ “ಆದಿರಂತ್ಯೇನಸಹೇತಾ” ಎಂಬ ಪಾಣಿನಿಯ ಸೂತ್ರ ಇದ್ದ ಹಾಗೆ.
ಗಣಪತಿ ಎಲ್ಲಕ್ಕೂ ಮೊದಲು ಹಾಡಿದರೆ ಶಿವ ಎಲ್ಲಕ್ಕೂ ಅಂತ್ಯ ಹಾಡುತ್ತಾನೆ. 
ಗಣಪತಿ ಅಥಶ್ರೀ. ಶಿವ ಇತಿಶ್ರೀ. ಗಣಪತಿ ನಾಂದಿಪದ್ಯ. ಶಿವ ಮಹಾಮಂಗಳಾರತಿ..!!! 


ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು

Comments

Popular posts from this blog

21st September 2023