Good Morning, Happy Sunday
17th September 2023
@ TapOvanam, Hiremath, Tumkur
ಈ ಗೌರೀ ಗಣೇಶ ಹಬ್ಬದ ಸಂದರ್ಭದಲ್ಲಿ
ನಾವು ನಿಮಗೆ ಹೇಳಲೇಬೇಕೆಂದಿರುವ
ಕೆಲವು ಮಾತುಗಳಿವೆ
ಅವುಗಳನ್ನು ನಾವು ನಿಮಗೆ ಹೇಳಲೇಬೇಕು.
ಈ ಎಲ್ಲ ಮಾತುಗಳು ನಮ್ಮ, ನಿಮ್ಮಗಳ
ದೈನಂದಿನ ಜೀವನಕ್ಕೆ ನೇರವಾಗಿ ಸಂಬಂಧಿಸಿವೆ.
ನಾವು ಹೇಳುವ ಈ ಮಾತುಗಳು ನೇರವಾಗಿವೆ.
ಆದ್ದರಿಂದ ಇವುಗಳಲ್ಲಿ
ಒಂದಷ್ಟು “ಕಾರ” ಮತ್ತು “ಖಾರ”
ಇವೆರಡರ ಪ್ರಮಾಣ ಹೆಚ್ಚು.
ಸಾಮಾನ್ಯವಾಗಿ ನೇರವಾದ ಮಾತುಗಳು
ಮತ್ತು ವಿಷಯಗಳು ಕಾರವಾಗಿರುತ್ತವೆ
ಮತ್ತು ಖಾರವಾಗಿರುತ್ತವೆ.
“ಕಾರ” ಎಂದರೆ ಸ್ವಲ್ಪ ಕಾರ;
“ಖಾರ” ಎಂದರೆ ಹೆಚ್ಚು ಕಾರ - ಎಂದರ್ಥ.
ಈ ಮಾತುಗಳು ಖಾರವಾಗಿದ್ದರೂ,
ಕರ್ಣಮಧುರವಾಗಿಲ್ಲದೆ ಇದ್ದರೂ
ನಿಮಗೆ ಹೇಳಲೇಬೇಕಾಗಿದೆ.
ಮಾತುಗಳಿವು,
ಅಧರಕ್ಕೆ ಕಹಿಯಾದರೂ ಉದರಕ್ಕೆ ಸಿಹಿ.
ಈ ಮಾತುಗಳು ಕೇಳುವುದಕ್ಕೆ ಕರ್ಕಶ.
ಪರಿಣಾಮದಲ್ಲಿ ಮಾತ್ರ ಒಳಿತಿನ ಸ್ಪರ್ಶವಿದೆ.
ಈಗ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೆ
ಸಿದ್ಧರಾಗುವ ಮುನ್ನ
ಇನ್ನೊಂದು ಮಾತು.
ಇವತ್ತು ನಮ್ಮ ದೇಶದ ಪ್ರಧಾನಿ
ನರೇಂದ್ರ ಮೋದಿಯವರ ಜನ್ಮದಿನ
ಮೊದಲು ಅವರಿಗೊಂದು
ಶುಭಾಶಯ ಹೇಳುವಾ.
ಇಂಥ ಪ್ರಧಾನಿಗಳ ಸಂತತಿ ಸಾವಿರವಾಗಲಿ
ಎಂದು ಮನದುಂಬಿ ಹರಸುವಾ.
ನಮ್ಮ ದೇಶಕ್ಕೆ ಫಕೀರ ಪ್ರಧಾನಿಗಳ
ಅವಶ್ಯಕತೆ ಇದೆ.
ಗಾಂಧೀಜಿ, ಲಾಲ್ ಬಹದ್ದೂರ್
ಶಾಸ್ತ್ರೀಜಿಗಳಂಥ ಮಹಾನುಭಾವರ
ಒಂದೈವತ್ತು, ಅರವತ್ತು ವರುಷಗಳ
ಆ ಹಿಂದಿನ ಕಾಲಘಟ್ಟದಲ್ಲಿ
ರಾಜಕಾರಣಿಗಳಿಗೆ ಮತ್ತು ದೇಶದ
ಅತ್ಯುನ್ನತ ಪದದಲ್ಲಿರುವವರಿಗೆ
ಹೆಂಡತಿ, ಮಕ್ಕಳು ಇದ್ದಾರೆ ಎಂದರೆ
ಅದನ್ನಷ್ಟು ಗಂಭೀರವಾಗಿ
ತೆಗೆದುಕೊಳ್ಳುವ ಹಾಗಿರಲಿಲ್ಲ.
ಅವತ್ತಿನ ರಾಜಕಾರಣಿಗಳಿಗೆ, ಪ್ರಧಾನಿ,
ಮಂತ್ರಿ, ಮುಖ್ಯಮಂತ್ರಿಗಳಿಗೆ
ಹೆಂಡತಿ, ಮಕ್ಕಳಿದ್ದರೂ ಸಹ ಅವರುಗಳು
ಹೆಂಡತಿ, ಮಕ್ಕಳ ವಿಷಯದಲ್ಲಿ
ಅಲಕ್ ನಿರಂಜನರಂತಿರುತ್ತಿದ್ದರು.
ಅವರು ಮನೆ, ಮಠ, ಹೆಂಡತಿ,
ಮಕ್ಕಳ ವಿಷಯದಲ್ಲಿ ಅಷ್ಟೊಂದು
ಮೋಹ, ವ್ಯಾಮೋಹ, ದಾಹ,
ದಂದುಗಗಳನ್ನು ಬೆಳೆಸಿಕೊಂಡಿರುತ್ತಿರಲಿಲ್ಲ.
ಹೆಂಡತಿ, ಮಕ್ಕಳನ್ನು ಮತ್ತವರ ಭವಿಷ್ಯವನ್ನು
ಅವರುಗಳು ಅಷ್ಟೊಂದು
ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ.
ಅವರು ತಮ್ಮ ಹೆಂಡತಿ, ಮಕ್ಕಳ
ಭವಿಷ್ಯದಲ್ಲಿ ನಿರಾತಂಕವಾಗಿದ್ದರು.
ತಮ್ಮ ನಂತರ ತಮ್ಮ ಮಕ್ಕಳು, ಮರಿಗಳೇ
ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬೇಕೆಂಬ
ಈ ವಿಪರೀತದ ದಾಹ, ಮೋಹಗಳು ಅವರಲ್ಲಿರಲಿಲ್ಲ.
ಏನಿದ್ದರೂ ಅವರಿಗೆ ದೇಶ ಮತ್ತು ದೇಶದ ಹಿತ
ಮತ್ತು ದೇಶದ ಜನ ಮುಖ್ಯವಾಗಿತ್ತು.
ಅಷ್ಟು ಮಾತ್ರವಲ್ಲ, ಅವರು ತಮ್ಮ
ಆಯ, ಆದಾಯಗಳನ್ನು ನೋಡಿಕೊಂಡು
ಖರ್ಚುಮಾಡುತ್ತಿದ್ದರು.
ಅವರು ಬೇರೆ ದೇಶಗಳಿಂದ ಸಾಲ ಮಾಡಲು
ಹಿಂದೇಟು ಹಾಕುತ್ತಿದ್ದರು.
ಅವರು ತಮ್ಮ ಸ್ವ ಇಚ್ಛೆಗಾಗಿ
ಮತ್ತು ಸ್ವೇಚ್ಛೆಗಾಗಿ ದೇಶವನ್ನು
ಸಾಲದ ಹೊರೆಯಿಂದ ಬಳಲಿಸುತ್ತಿರಲಿಲ್ಲ.
ಅವರದು “ಲಿವಿಂಗೂ ಸಿಂಪಲ್ಲು” -
ಹಾಗೇನೇ ಅವರ “ಥಿಂಕಿಂಗು ಗ್ರೇಟು”
ಅದು ಕಾರಣವಾಗಿಯೇ,
ಅವರು ನಮ್ಮ, ನಿಮ್ಮಗಳಿಗೆ
ಇದುವರೆಗೆ ಮಾದರಿಯಾಗಿ
ಮತ್ತು ಸ್ಯಾಂಪಲ್ಲಾಗಿ ಉಳಿದುಕೊಂಡಿದ್ದಾರೆ.
ಈಗ ಈ ಮೊದಲೇ ಹೇಳಿದಂತೆ,
ಮಾತುಗಳ ವಿಷಯಕ್ಕೆ ಬರೋಣ.
1. ಅಂದಿನ ಮಾತೃಭಕ್ತರಿಗೆ, ಪಿತೃಭಕ್ತರಿಗೆ ಲಂಕೇಶ್ವರನ ಕಾಟ!!
ಇಂದಿನ ಮಾತೃಭಕ್ತರಿಗೆ, ಪಿತೃಭಕ್ತರಿಗೆ ಅಂಕೇಶ್ವರನ ಕಾಟ!!
ತ್ರೇತಾಯುಗದಲ್ಲಿ ರಾಮ, ಲಕ್ಷ್ಮಣರಂಥ
ಮಾತೃಭಕ್ತ, ಪಿತೃಭಕ್ತರಿಗೆ ಲಂಕೇಶ್ವರನ ಕಾಟವಿತ್ತು.
ಇವತ್ತಿನ ಮಾತೃಭಕ್ತ, ಪಿತೃಭಕ್ತರಿಗೆ
ಅಂಕೇಶ್ವರನ ಕಾಟವಿದೆ.
ಇವತ್ತಿನ ಬಹುತೇಕ ತಂದೆ, ತಾಯಿಗಳು
ತಮ್ಮ ಮಕ್ಕಳಿಗೆ ಇಷ್ಟು, ಇಂತಿಷ್ಟು ಅಂಕಗಳನ್ನು
ತೆಗೆಯಲೇಬೇಕು ಎಂದು ಕಾಡಿಕೊಂಡಿರುತ್ತಾರೆ.
ಮಕ್ಕಳು ಮುಕ್ತ, ಮುಕ್ತವಾಗಿ,
ಓದುವ ಹಾಗೇ ಇಲ್ಲ.
ಎಲ್ಲ ಮಕ್ಕಳು ಈಗ ಒತ್ತಡದ ಮಧ್ಯದಲ್ಲಿಯೇ
ಓದುತ್ತಲಿದ್ದಾರೆ.
ಮಕ್ಕಳೀಗ 96%, 98%, 99% ತೆಗೆಯಲೇಬೇಕು.
ಅಕಸ್ಮಾತ್ ಮಕ್ಕಳು ಹೆಚ್ಚು ಅಂಕ ತೆಗೆಯದೆ ಹೋದರೆ
ತಂದೆ, ತಾಯಿ ದಶಕಂಠರಾಗಿಬಿಡುತ್ತಾರೆ.
2 . ವಾಕ್‌ಸ್ವಾತಂತ್ರ್ಯವೆಂದರೆ
ಈಗ ಬಾಯಿಗೆ ಬಂದಂತೆ ಮಾತನಾಡೋದು!
ಅದು ಸಭೆ, ಸಮಾರಂಭಗಳಲ್ಲಾದರೂ ಸರಿ,
ಮೀಡಿಯಾ, ಸೋಶಿಯಲ್ ಮೀಡಿಯಾಗಳಲ್ಲಾದರೂ ಸರಿ.
ಆವಾಗ ವಾಕ್‌ಸ್ವಾತಂತ್ರ್ಯವೆಂದರೆ
“ಮರ್ಯಾದಾಪುರುಷೋತ್ತಮ”
ಈಗ ವಾಕ್‌ಸ್ವಾತಂತ್ರ್ಯವೆಂದರೆ
“ಮರ್ಯಾದಾ ಉಲ್ಲಂಘನ”
3. ಪ್ರಜಾಪ್ರಭುತ್ವವೆಂದರೆ
ಈಗ ರಾಗ, ದ್ವೇಷವನ್ನು ಕಕ್ಕೋದು.
ದೇಶದ ವಿಷಯದಲ್ಲಿ ಹಗುರವಾಗಿ
ಮಾತನಾಡೋದು.
ದೇಶದ ಸೈನಿಕರನ್ನು ಮತ್ತು
ಸೈನ್ಯ ವ್ಯವಸ್ಥೆಯನ್ನು ಸಂಶಯಿಸೋದು
ದೇಶದ ಪ್ರಧಾನಿ ಹುದ್ದೆಗೂ ಕೂಡ
ಬೆಲೆಕೊಡದ ಹಾಗೆ ಇರೋದು ಎಂದಾಗಿದೆ.
ಇವೆಲ್ಲ ಪ್ರಜಾಪ್ರಭುತ್ವದ
ಹೊಸ ವ್ಯಾಖ್ಯೆ ಮತ್ತು ವ್ಯಾಖ್ಯಾನವಾಗಿ ಪರಿಣಮಿಸಿವೆ.
4. ಇತ್ತೀಚಿನ ದಿನಗಳಲ್ಲಿ ಜನಗಳಲ್ಲಿ
ಬುದ್ಧಿ ಜಾಸ್ತಿಯಾಗಿದೆ.
ಬುದ್ಧಿ ಜಾಸ್ತಿಯಾದಾಗಲೆಲ್ಲ
ಬಹುತೇಕ ಜನಗಳು ಅಡ್ಡಾದಿಡ್ಡಿಯಾಗಿ
ಮಾತನಾಡಿಕೊಂಡಿರುತ್ತಾರೆ.
5. ನಮಗೆ ಅನುಕೂಲಸಿಂಧುವಾಗಿದ್ದರೆ
ಕಸಕ್ಕೂ ಸೈ, ವಿಷಕ್ಕೂ ಸೈ ಎನ್ನುತ್ತೇವೆ.
ನಮಗೆ ಅನುಕೂಲಸಿಂಧುವಾಗಿಲ್ಲದೆ ಹೋದರೆ
ಕಸಕ್ಕೂ ಧಿಕ್ಕಾರ, ವಿಷಕ್ಕೂ ಧಿಕ್ಕಾರ, ರಸಕ್ಕೂ ಧಿಕ್ಕಾರ.
6. ಮೊದಲು “ಮ್ಯಾರೇಜ್” ಎಂದರೆ -
“ಕರೆಕ್ಶನ್” ಮತ್ತು “ರಿ-ಕನೆಕ್ಶನ್” ಎಂಬರ್ಥವಿತ್ತು.
Correction & Re connection.
ಈಗ “ಮ್ಯಾರೇಜ್” ಎಂದರೆ
“ಡ್ಯಾಮೇಜ್” ಮತ್ತು “ಡಿವೋರ‍್ಸ್” ಎಂದಾಗಿಬಿಟ್ಟಿದೆ.
“ಮ್ಯಾರೇಜ್” ಎಂದರೆ ಈಗ ಬಹುತೇಕರು
ಅದು “ಡಿವೋರ‍್ಸ್‌ನ ಮುನ್ನುಡಿ”
ಎಂದು ಹೇಳುತ್ತಿದ್ದಾರೆ.
7. ನಮ್ಮ ದೇಶದ ಕೆಲವು ಜನಗಳು
ಸೈನಿಕರ ತ್ಯಾಗ, ಬಲಿದಾನಗಳನ್ನು
ತುಂಬ ಲಘುವಾಗಿ ತೆಗೆದುಕೊಳ್ಳುತ್ತಾರೆ.
ಸೈನಿಕರ ಸಾಹಸ, ಶೌರ್ಯಗಳನ್ನು ಸಂಶಯಿಸುತ್ತಾರೆ.
ದೇಶದ ಸೈನಿಕರ ಕುರಿತು ಅಣಕವಾಡುತ್ತಾರೆ.
ಸೈನಿಕರು ಈ ದೇಶದ ಕವಚವಿದ್ದ ಹಾಗೆ.
ಇತ್ತೀಚಿನ ದಿನಗಳಲ್ಲಿ ಕೆಲವರು
ಸೈನಿಕರ ಕಾರ್ಯಾಚರಣೆಗಳನ್ನು ಕೂಡ
ಸಂಶಯಿಸುವಂಥ ಕೆಟ್ಟ ಮತ್ತು ಅತಿಕೆಟ್ಟ
ಮಾನಸಿಕತೆಯನ್ನು ಬೆಳೆಯಿಸಿಕೊಂಡಿದ್ದಾರೆ.
ಇದು ಸಲ್ಲದು ಮತ್ತು ಇದು ಸರ್ವಥಾ ಕೂಡದು.
8. ದೇಶಭಕ್ತಿಯ ಜೊತೆ ಜೊತೆಯಲ್ಲಿ
ದ್ವೇಷಮುಕ್ತಿ ಕೂಡ ಅಷ್ಟೇ ಮುಖ್ಯ.
ನಾವುಗಳು ದೇಶಭಕ್ತಿ ಹಾಗೂ ದ್ವೇಷಮುಕ್ತಿ
ಎರಡಕ್ಕೂ ಆದ್ಯತೆಯನ್ನು
ಕೊಟ್ಟುಕೊಂಡಿರಬೇಕು.
ನಾವೆಲ್ಲರೂ ದೇಶಭಕ್ತರಾಗುವ ಮೊದಲು
ದ್ವೇಷಮುಕ್ತರಾಗಬೇಕಿದೆ.
ದ್ವೇಷಮುಕ್ತಿಯಿಂದ ದೇಶಭಕ್ತಿಯ
ಸತ್ತ್ವ ಮತ್ತು ಶಕ್ತಿ ಹೆಚ್ಚುತ್ತದೆ.
ದೇಶದ ಭದ್ರತೆ
ಮತ್ತು ಭಾವನೆಗಳ ಕುರಿತು ಸಿನಿಕತೆ ಬೇಡ.
8. ಗಣಪತಿಯ ವಿಷಯದಲ್ಲಿ
ನಮಗೆ ಗ್ರಹಿಕೆ ಇದೆ, ಗ್ರಹಣ ಇಲ್ಲ.
ಮನುಷ್ಯ ತಲೆಗೊಂದು ಪರ್ಯಾಯವಿದೆ
ಎಂದು ಮೊತ್ತ ಮೊದಲ ಬಾರಿಗೆ
ಸಾರಿ ಸಾರಿ ಹೇಳಿದ ಮೊದಲ ದೇವತೆ ಗಣಪತಿ.
ತಲೆ ಯಾವುದಾದರೇನು?
ಅದು ಮನುಷ್ಯನದಾದರೇನು,
ಅದು ಆನೆಯದಾದರೇನು?
ಒಟ್ಟಿನಲ್ಲಿ ತಲೆ ಚೆನ್ನಾಗಿರಬೇಕು
ಮತ್ತು ತಲೆ ಒಳ್ಳೆಯದನ್ನು
ಯೋಚಿಸಿಕೊಂಡಿರಬೇಕು.
ತಲೆ ಒಳ್ಳೆಯದನ್ನು,
ಒಳಿತನ್ನು ಯೋಚಿಸಿಕೊಂಡಿದ್ದರೆ
ಅದು ಮನುಷ್ಯನದಾದರೂ ಸರಿ,
ಆನೆಯದಾದರೂ ಸರಿ,
ಅದು ಎಲ್ಲರಿಂದಲೂ ಪೂಜೆಗೊಳ್ಳುತ್ತದೆ ಎಂಬ
ಸಾರ್ವಕಾಲಿಕ ಸತ್ಯದ ಮೇಲೆ
ಗಣಪತಿ ಬೆಳಕು ಚೆಲ್ಲುತ್ತಾನೆ.
ಕೊನೆಯಲ್ಲೊಂದು ಮಾತು...,
ನಾವು ಕಲಿಯುವ ವ್ಯಾಕರಣದಲ್ಲಿ
ದೋಷವಿದ್ದರೆ ಅದೇನೇನೋ
ಎಡವಟ್ಟು ಮತ್ತು ಅಧ್ವಾನ ಆಗಿಹೋಗುತ್ತದೆ.
ಇನ್ನು ನಮ್ಮ, ನಿಮ್ಮಗಳ ಬದುಕಿನ ವ್ಯಾಕರಣದಲ್ಲಿ
ಎಡವಟ್ಟಾದರೆ ಅದೇನಾಗಬಹುದೋ?
ಅದನ್ನು ಊಹಿಸುವುದಕ್ಕೆ ಕೂಡ ಸಾಧ್ಯವಿಲ್ಲ.
ಅದೇನೇ ಓದಿಕೊಂಡಿರಲಿ,
ಅದೆಷ್ಟೇ ಓದಿಕೊಂಡಿರಲಿ
ಓದು, ಬರಹಗಳಲ್ಲಿ
ವ್ಯಾಕರಣ ತುಂಬ ಮುಖ್ಯ.
ಪುಸ್ತಕಪಠಣ, ಪುಸ್ತಕಪಾರಾಯಣ,
ಗ್ರಂಥಪಠಣ, ಗ್ರಂಥಪಾರಾಯಣಗಳಿಗಿಂತ
ವ್ಯಾಕರಣವಿದು ಓದು, ಬರಹ, ಅಧ್ಯಯನ,
ಅಧ್ಯಾಪನಗಳಲ್ಲಿ ತುಂಬ ತುಂಬಾನೇ ಮುಖ್ಯ -
ಎಂದು ಹೇಳುವ ಶ್ಲೋಕವೊಂದು
ಸಂಸ್ಕೃತದಲ್ಲಿದೆ.
“ಯದ್ಯಪಿ ಬಹು ನಾಧೀಷೇ ಗ್ರಂಥಾನ್
ತಥಾಪಿ ಪಠ ಪುತ್ರ, ವ್ಯಾಕರಣಮ್ |
ಸಕಲಃ ಶಕಲೋ ಮಾ ಭೂತ್
ಸ್ವಜನಃ ಶ್ವಜನಃ ಸಕೃತ್ ಶಕೃತ್ ||”
1. ಸಕಲಃ ಶಕಲೋ ಮಾ ಭೂತ್
2. ಸ್ವಜನಃ ಶ್ವಜನಃ ಮಾ ಭೂತ್
3. ಸಕೃತ್ ಶಕೃತ್ ಮಾ ಭೂತ್.... ಎಂದು.
ಸಕಲವಿದು ಶಕಲವಾಗಬಾರದು.
ಸ್ವಜನ ಶ್ವಜನವಾಗಬಾರದು;
ಸಕೃತ್ ಇದು ಶಕೃತ್ ಆಗಬಾರದು.
(ಶಕಲ = ಕಲ್ಲುಚೂರುಗಳು, ಪಾಷಾಣಖಂಡಗಳು;
ಶ್ವಜನ = ಎಲ್ಲ ವಿಷಯಗಳಲ್ಲೂ
ಕೆಟ್ಟದ್ದಾಗಿ ಮತ್ತು ಕೀಳುತನದಿಂದ ಯೋಚಿಸುವ ಜನಗಳು
ಶಕೃತ್ = ಗೊಬ್ಬರ, ಗಂಜಲು, ಕಸ)
ವ್ಯಾಕರಣದ ದೃಷ್ಟಿಯಲ್ಲಿ,
ಒಂದೇ ಒಂದು ಅಕ್ಷರದ ತಪ್ಪುಚ್ಚಾರ
ಅದೇನೇನೋ ಎಡವಟ್ಟು, ಬವಣೆ,
ಬದಲಾವಣೆಯನ್ನು ಮಾಡಿಬಿಡುತ್ತದೆ.
ಇನ್ನು ಜೀವನದ ವ್ಯಾಕರಣ
ತಪ್ಪಿದರೆ ಅದೇನು ಗತಿ?
ಆದ್ದರಿಂದ ಜೀವನದ ವ್ಯಾಕರಣ
ಮತ್ತು ಜೀವನದಲ್ಲಿ ವ್ಯಾಕರಣ
ತಪ್ಪದಂತೆ ನೋಡಿಕೊಳ್ಳಬೇಕು.
ಜೀವನದ ವ್ಯಾಕರಣ ಮತ್ತು ಜೀವನದಲ್ಲಿ
ವ್ಯಾಕರಣ ತಪ್ಪಬಾರದು ಎಂದರೆ
ಒಳ್ಳೆಯ ಜನಗಳ ಅನುಕರಣ
ಮಾಡಿಕೊಂಡಿರಬೇಕು.
ಮತ್ತು ಮಹಾಜನಗಳು ನಡೆದುಹೋಗಿರುವ
(ಮಹಾಜನಾಃ ಯೇನ ಗತಾಃ)
ದಾರಿಯಲ್ಲಿ ನಡೆದುಕೊಂಡಿರಬೇಕು.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Good Morning, Happy Monday 2nd October 2023 @ TapOvanam, Hiremath, Tumkur ಸೆಪ್ಟೆಂಬರ್ ಮಾಹೆಯಲ್ಲಿ ಗೌರೀ ಗಣೇಶಜಿ. ಅಕ್ಟೋಬರ್ ಮಾಹೆಯಲ್ಲಿ ಗಾಂಧೀಜಿ, ಶಾಸ್ತ್ರೀಜಿ. ಈ ವರುಷದ ಸೆಪ್ಟೆಂಬರ್ ತಿಂಗಳಿನಲ್ಲಿ ಗೌರೀ ಗಣೇಶ ಹಬ್ಬ ಅಕ್ಟೋಬರ್ ತಿಂಗಳಿನಲ್ಲಿ ಗಾಂಧೀಜಿ, ಶಾಸ್ತ್ರೀಜಿ ಜಯಂತಿ, ಹುಟ್ಟುಹಬ್ಬ. ಗೌರೀ, ಗಣೇಶ ಹಬ್ಬ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ. ಗಾಂಧೀಜಿ, ಶಾಸ್ತ್ರೀಜಿ ಜಯಂತಿ ಸಾರ್ವಜನಿಕ ಹಾಗೂ ದೇಶಭಕ್ತಿ ಪ್ರೇರಕ. ಗಣೇಶ ವಿನಾಯಕ, ಗಣನಾಯಕ, ಗಾಂಧೀಜಿ, ಶಾಸ್ತ್ರೀಜಿ ನಾಯಕರು, ರಾಷ್ಟ್ರನಾಯಕರು. ಗಣೇಶ ವಿಘ್ನನಾಶಕ, ವಿಘ್ನವಿನಾಶಕ ಮತ್ತು ಮುಕ್ತಿದಾಯಕ. ಗಾಂಧೀಜಿ, ಶಾಸ್ತ್ರೀಜಿ ದಾಸ್ಯನಾಶಕರು ಮತ್ತು ಸ್ವಾತಂತ್ರ್ಯದಾಯಕರು. ಗೌರೀ, ಗಣೇಶರ ಆಗಮನದಿಂದ ಲೋಕೋದ್ಧಾರ. ಗಾಂಧೀಜಿ, ಶಾಸ್ತ್ರೀಜಿಯವರ ಆಗಮನದಿಂದ ದೇಶೋದ್ಧಾರ. ಗೌರೀ ಗಣೇಶರು ಕೈಲಾಸದಿಂದ ಭೂಮಿಗೆ ಬಂದವರು. ಗಾಂಧೀಜಿ, ಶಾಸ್ತ್ರೀಜಿಗಳು ತ್ಯಾಗ, ಬಲಿದಾನಗಳಿಂದ ಭೂಮಿಯಿಂದ ಕೈಲಾಸದೆತ್ತರಕ್ಕೆ ಬೆಳೆದವರು. ಗೌರೀ ಗಣೇಶ ಭಕ್ತವತ್ಸಲರು. ಗಾಂಧೀಜಿ, ಶಾಸ್ತ್ರೀಜಿ ದೇಶವತ್ಸಲರು. ಗೌರೀ ಗಣೇಶರದು ಅಮ್ಮ, ಮಗನ ಸಂಬಂಧ. ಗಾಂಧೀಜಿ, ಶಾಸ್ತ್ರೀಜಿಗಳದು ತತ್ತ್ವ, ಸಿದ್ಧಾಂತದ ಸಂಬಂಧ. ಗೌರೀ ಗಣೇಶರು ಜನಗಳಿಗೆ ಭಕ್ತಿಯ ಪಾಠಮಾಡುತ್ತಾರೆ. ಗಾಂಧೀಜಿ, ಶಾಸ್ತ್ರೀಜಿ ಜನಗಳಿಗೆ ದೇಶಭಕ್ತಿಯ ಪಾಠಮಾಡುತ್ತಾರೆ. ಗೌರೀ, ಗಣೇಶರ ಹಬ್ಬದಿಂದ ಜನಗಳ ಮೈ, ಮನಸ್ಸುಗಳಲ್ಲಿ ಪುಳಕ ಗಾ...
Comments
Post a Comment