Yajnya Yaaga
Good Morning, Happy Friday
15th September 2023
@ Hiremath, TapOvanam, Tumkur
ಪ್ರತಿಯೊಂದು ಯಜ್ಞ, ಯಾಗವು ನಮಗೆ
“ಇದಂ ನ ಮಮ” ದೀಕ್ಷೆಯನ್ನು ಕೊಟ್ಟುಕೊಂಡಿರುತ್ತದೆ;
ಮತ್ತು “ಇದಂ ನ ಮಮ” ಪಾಠವನ್ನು ಮಾಡಿಕೊಂಡಿರುತ್ತದೆ.
“ಇದಂ ನ ಮಮ” ಎಂದರೆ “ಇದು ನನ್ನದಲ್ಲ"
``ಇಟ್ಸ್ ನಾಟ್ ಮೈನ್ '' It's not Mine ಎಂದರ್ಥ.
“ಇದಂ ನ ಮಮ” - “ಇದು ನನ್ನದಲ್ಲ” - ಎಂಬ
ಈ ತತ್ತ್ವಜ್ಞಾನಕ್ಕಿಂತ ಇನ್ನೇನು ದೊಡ್ಡದಿದೆ?
ಈ ಬದುಕು, ಬಾಳು, ಈ ಜೀವನ, ಈ ಜಗತ್ತು
ನಮಗೆ ಕಲಿಸುವ ಬಹುದೊಡ್ಡ ಪಾಠ - “ಇದಂ ನ ಮಮ”
ಇದು ಅಕ್ಷರಶಃ ಸತ್ಯ ಕೂಡ ಅಹುದು.
ಈ ಜಗತ್ತಿನಲ್ಲಿ ಯಾವುದು ನಮ್ಮದು ಹೇಳಿ?
ಇವತ್ತು ನಮ್ಮದಾಗಿರುವುದು ಇನ್ನೊಂದು ದಿನ ಇನ್ನಾರದೋ?
ಆದ್ದರಿಂದ ನಾವು, ನೀವುಗಳು ನಮ್ಮೊಳಗೆ,
ನಮ್ಮ ಮನಸ್ಸಿನೊಳಗೆ ಮತ್ತು ನಮ್ಮ ಮನಸ್ಸಿಗೆ
“ಇದಂ ನ ಮಮ” ಹೇಳಿಕೊಂಡಿರಬೇಕು.
“ಇದಂ ನ ಮಮ” ಅನ್ನೋದು ವಾಸ್ತವ.
“ಇದಂ ಮಮ” ಅನ್ನೋದು ಭ್ರಮೆ.
ಆದ್ದರಿಂದಲೇ,
ಯಜ್ಞ, ಯಾಗಾದಿಗಳು ನಮ್ಮಗಳಿಗೆ
“ಇದಂ ನ ಮಮ” ಪಾಠಮಾಡಿಕೊಂಡಿರುತ್ತವೆ.
“ಸ್ವಾಹಾ, ಸ್ವಧಾ” ಎಂದು ನುಗ್ಗಿಕೊಂಡು
ಮೈಮೇಲೆ ಏರಿಬರುವವರ ಎದುರಿನಲ್ಲಿ
“ಇದಂ ನ ಮಮ” ಎಂದು ಹೇಳಿಕೊಂಡು
ಅಲ್ಲಿಂದ ಕೈತೊಳೆದುಕೊಂಡು
ಹೊರಟುಬರುವುದೇ ಒಳ್ಳೆಯದು.
“ನನ್ನದಲ್ಲ” ಎನ್ನುವುದರಲ್ಲಿ ಇರುವ
ಸುಖ, ಸಂತೋಷ, ನೆಮ್ಮದಿ
“ನನ್ನದು”, “ಇದು ನನ್ನದು”, “ಅದು ನನ್ನದು” ಎನ್ನುವುದರಲ್ಲಿ ಇಲ್ಲ.
ನಮ್ಮಗಳ ಮಧ್ಯದಲ್ಲಿ ಎಲ್ಲಕ್ಕೂ “ಸ್ವಾಹಾ” ಎಂದು ಹೇಳುತ್ತ
ಎಲ್ಲವನ್ನೂ ಆಪೋಶನ ಮಾಡುವ
ಹಲವಾರು ಜನಗಳಿರುತ್ತಾರೆ.
ಅವರು ಊಟಕ್ಕೂ ಮೊದಲೇ
ಅಂಗೈನಿಂದ ನೀರನ್ನು ಹೀರುತ್ತಾರೆ.
“ಸ್ವಾಹಾ, ಸ್ವಧಾ” ಎಂದಂದುಕೊಂಡಿರುವ
ಈ ಸ್ವಾಹಾಸುರರು
ಆ ಭಸ್ಮಾಸುರನಿಗಿಂತ ಭಯಂಕರ.
ಭಸ್ಮಾಸುರ, ಕೊನೆಗಾದರೂ ಸರಿ,
ತನ್ನ ತಲೆಯ ಮೇಲೆ ತಾನೇ ಕೈ ಇಟ್ಟುಕೊಳ್ಳುತ್ತಾನೆ.
ಸ್ವಾಹಾಸುರರು ಹಾಗಲ್ಲ.
ಸ್ವಾಹಾಸುರರು ಯಾವಾಗಲೂ
ಬೇರೆಯವರ ತಲೆಯ ಮೇಲೆ
ಮತ್ತು ಬೇರೆಯವರ ಜೇಬಿನಲ್ಲಿ
ಕೈ ಇಟ್ಟುಕೊಂಡಿರುತ್ತಾರೆ.
ಭಸ್ಮಾಸುರನನ್ನು ಅದು ಹೇಗೋ
ಭಸ್ಮಮಾಡಿಹಾಕಬಹುದು.
ಸ್ವಾಹಾಸುರರನ್ನು “ಸ್ವಾಹಾ”
ಮಾಡಿಹಾಕುವುದಕ್ಕೆ ಆಗುವುದಿಲ್ಲ.
ಅವರು ಯಾವುದಕ್ಕೂ ಜಗ್ಗುವುದಿಲ್ಲ;
ಮತ್ತವರು ಯಾವುದಕ್ಕೂ ಬಗ್ಗುವುದಿಲ್ಲ.
ನೀತಿ:
ಬರೀ ಯಜ್ಞ, ಯಾಗಾದಿಗಳನ್ನು
ಬಯ್ದುಕೊಂಡಿರುವುದರಿಂದ
ಏನೂ ಪ್ರಯೋಜನವಿಲ್ಲ.
ಅವುಗಳಿಂದಲೂ ಕಲಿಯವುದು ಬಹಳಷ್ಟಿದೆ.
ಎಲ್ಲವನ್ನೂ ಕಾಮಾಲೆ ಕಣ್ಣುಗಳಿಂದ
ಮತ್ತು ಸಿನಿಕ ದೃಷ್ಟಿಯಿಂದ ನೋಡುವುದು ಸರಿಯಲ್ಲ.
“ಇದಂ ನ ಮಮ” ಎಂಬ
ಈ ಪಾಠ ಚಿಕ್ಕದೇನಲ್ಲ.
ಇದು ವಿರಕ್ತಿ, ವೈರಾಗ್ಯದ ಮೊದಲ ಪಾಠ.
ಇದು ನೀರಿಗಂಟದ ನೀರಜಪತ್ರದ ಹಾಗೆ
ನೀರಿನೊಳಗಿದ್ದರೂ ನೀರನ್ನು ಮೈಗೆ
ಅಂಟಿಸಿಕೊಳ್ಳದೆ ಬದುಕುವ ರೀತಿಗೆ
ಮಾರ್ಗಸೂಚಿಯಾಗಿ ನಿಲ್ಲುವ ಪಾಠ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment