.jpg)
ಇವತ್ತು ವೀರಭದ್ರ ಜಯಂತಿ. ಎಲ್ಲರೂ ವೀರಭದ್ರಸ್ವಾಮಿಯ ದೇವಸ್ಥಾನಗಳಿಗೆ ಹೋಗಿ ಭಕ್ತಿಸಮರ್ಪಣೆ ಮಾಡುತ್ತಲಿದ್ದಾರೆ. ಎಲ್ಲರೂ ಭದ್ರಕಾಳೀ ಸಮೇತನಾದ ವೀರಭದ್ರನ ಕೃಪಾವಾಂಛಿತರಾಗಿದ್ದಾರೆ. ಈ ಸಂದರ್ಭದಲ್ಲಿ, ಒಂದೆರಡು ಮಾತು. ವೀರಭದ್ರ ವೀರಗಾಸೆಯೂ ಅಹುದು. ಆತ ವೀರಗಾಥೆಯೂ ಅಹುದು. ವೀರಭದ್ರ ಸಾಹಸಗಾಥೆಯೂ ಅಹುದು. ಆತ ಸಾಧನಾಗೀತೆಯೂ ಅಹುದು. ವೀರಭದ್ರ ಕಲೆಯೂ ಅಹುದು; ಆತ ಕಾಲನೂ ಅಹುದು. ವೀರಭದ್ರ ಕುಣಿಯಲು ನಿಂತರೆ ಕಲೆ. ವೀರಭದ್ರ ಕುಣಿಸಲು ನಿಂತರೆ ಕಾಲ, ಸಾಕ್ಷಾತ್ ಪ್ರಳಯಕಾಲ. ತಾಳ, ಮೇಳ, ಹೆಜ್ಜೆ, ಗೆಜ್ಜೆ ಜೊತೆಯಾದರೆ ವೀರಭದ್ರ ಕಲಾಭಾರ್ಗವ. ತಾಳ, ಮೇಳ, ಹೆಜ್ಜೆ, ಗೆಜ್ಜೆ ತಪ್ಪಿದರೆ ವೀರಭದ್ರ ಕಾಲಭೈರವ. ವೀರಭದ್ರ ಮೀಸೆ ಕುಣಿಸಿದರೆ ಆತ ಮೀಸೆ ವೀರಭದ್ರ. ವೀರಭದ್ರ ಕಣ್ಣು ಕೆಂಪಾಗಿಸಿದರೆ ಆತ ಕೆಂಗಣ್ಣ ವೀರಭದ್ರ. ವೀರಭದ್ರ ಕಣ್ಣರಳಿಸಿದರೆ ಆತ ಕರುಣಾಳು ವೀರಭದ್ರ. ವೀರಭದ್ರ ಒಲಿದರೆ ಪ್ರಸನ್ನರುದ್ರ; ಮರೆತರೆ ಆತ ಪ್ರಳಯರುದ್ರ. ಅರಿತರೆ ವೀರಭದ್ರ ಆಪದ್ಬಾಂಧವ; ಮರೆತರೆ ವೀರಭದ್ರ ಆಪತ್ತಿಗೆ ಬಾಂಧವ. ಅರಿದೊಡೆ ಶರಣ, ಮರೆದೊಡೆ ಮಾನವ ಎಂಬ ಹಾಗೆ. ವೀರಭದ್ರನದು ಬರೀ “ಉತ್ತಿಷ್ಠ, ಜಾಗ್ರತ” ಎಂದು ಹೇಳಿ ಕುಳಿತುಕೊಳ್ಳುವ ಜಾಯಮಾನವಲ್ಲ. ಆತ ಸ್ವತಃ ತಾನು ಮೊದಲು ಎದ್ದು, ಎಚ್ಚತ್ತು ಎಲ್ಲರನ್ನೂ ಎಚ್ಚರಿಸುತ್ತಾನೆ. ಇದು ಕಾರಣ, ಆತ “ಭಲೆರೇ, ಭಲೇ ಭಲೇ.. ಭಲೆರೇ, ಭಲೇ ಭಲೇ” ...