16th September 2023
ಗಣಪತಿಯದು ಹಕ್ಕಿಗಾಗಿ ಹೋರಾಟ.... ಅಸುರರು ದೇವತೆಗಳ ವಿರುದ್ಧ ಯುದ್ಧಸಾರಿದ್ದಾರೆ. ಅಸುರರನ್ನು ಎದುರಿಸುವ ಶಕ್ತಿ ದೇವತೆಗಳಲ್ಲಿ ಇಲ್ಲ. ಏಕೆಂದರೆ ದೇವತೆಗಳು ಉಂಡುಟ್ಟುಕೊಂಡು ಸ್ವರ್ಗದಲ್ಲಿ ಸುಖವಾಗಿ ಇದ್ದಾರೆ. ಸ್ವರ್ಗದಲ್ಲಿರೋದರಿಂದ ದೇವತೆಗಳಿಗೆ ತೊಂದರೆ, ತಾಪತ್ರಯಗಳ ಅನುಭವವಿಲ್ಲ. ದೇವತೆಗಳು ಅಪಾಯ, ಆತಂಕಗಳನ್ನು ಎದುರಿಸುವ ಮನಸ್ಥಿತಿಯನ್ನು ಕಳೆದುಕೊಂಡಿದ್ದಾರೆ. ಭೂಮಿಯಲ್ಲಿರುವ ಮಾನವರಿಗೆ ಕಷ್ಟ, ಕಾರ್ಪಣ್ಯ, ತೊಂದರೆ, ತಾಪತ್ರಯಗಳ ಅನುಭವ ಉಂಟು. ಮಾನವರಿಗೆ ಕಷ್ಟ, ಸುಖಗಳ ಅನುಭವವಿದೆ. ಮಾನವರ ಎದೆ ದೇವತೆಗಳ ಎದೆಗಿಂತ ಗಟ್ಟಿ. ದೇವತೆಗಳಿಗಿಂತ ಮಾನವರು ಸಾಹಸಿಗಳು ಮತ್ತು ಹೆಚ್ಚು ಧೈರ್ಯವಂತರು. ಈ ಮೊದಲೆಲ್ಲ ದೇವಾಸುರರ ಮಧ್ಯದಲ್ಲಿ ಯುದ್ಧಗಳು ಜರುಗಿದಾಗ ಭೂಲೋಕದ ರಾಜ, ಮಹಾರಾಜರುಗಳೇ ಮುಂಚೂಣಿಯಲ್ಲಿ ನಿಂತುಕೊಂಡು ದೇವತೆಗಳ ಪರವಾಗಿ ಯುದ್ಧ ಮಾಡಿದುದು ಉಂಟು. ದೇವತೆಗಳಲ್ಲಿ ಮಾನವರ ಹಾಗೆ ಕಷ್ಟವನ್ನು ಸಹಿಸುವ ಶಕ್ತಿಯಾಗಲಿ, ಮತ್ತದನ್ನು ಭರಿಸುವ ಶಕ್ತಿಯಾಗಲಿ ಇಲ್ಲ. ಇದು ಕಾರಣ, ದೇವತೆಗಳು ಏನೇ ಕಷ್ಟಬಂದರೂ ಆ ಕೂಡಲೇ ತಮ್ಮ “ಹೈಕಮಾಂಡ್” ತ್ರಿಮೂರ್ತಿಗಳ ಬಳಿ ಹೋಗಿ ತಲೆ ಬಗ್ಗಿಸಿಕೊಂಡು ಕೈ ಮುಗಿದುಕೊಂಡು ನಿಲ್ಲುತ್ತಾರೆ. ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳೇ ದೇವತೆಗಳ “ಹೈಕಮಾಂಡು”....